ಭಾರತದ ಬಹುತೇಕ ಮನೆಗಳಲ್ಲಿ ಸುದೀರ್ಘ ಕಾಲದಿಂದಲೂ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡಿಪಾಸಿಟ್‌ಗಳೇ ಸಾಂಪ್ರದಾಯಿಕ ಹೂಡಿಕೆಯ ಸಾಧನವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಿಶ್ಚಿತ ಠೇವಣಿಗಳು ಆಕರ್ಷಣೆ ಕಳೆದುಕೊಂಡಿವೆ. ಏಕೆಂದರೆ ಇವುಗಳಲ್ಲಿ ಸಿಗುವ ಬಡ್ಡಿ ಆದಾಯ ಕಡಿಮೆ. ಜತೆಗೆ ಇದಕ್ಕೆ ಹೋಲಿಸಿದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಿನ ಸಿಗುತ್ತದೆ. (ವಿಸ್ತಾರ Money Guide) ಈಗ ನೀವು ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಠೇವಣಿ ಇಟ್ಟರೆ ಇಮ್ಮಡಿಯಾಗಲು 124 ತಿಂಗಳುಗಳೇ ಕಾಯಬೇಕು. ಅಂದರೆ 10 ವರ್ಷ ನಾಲ್ಕು ತಿಂಗಳು ಕಾಯಬೇಕು. ಹೀಗಾಗಿ ಇತ್ತೀಚಿನ ದಶಕಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಭಾರತದಲ್ಲಿ ಮೊದಲ ಬಾರಿಗೆ ಮ್ಯೂಚುವಲ್ ಫಂಡ್ ಅಸ್ತಿತ್ವಕ್ಕೆ ಬಂದಿದ್ದು 1963ರಲ್ಲಿ. ಯುನಿಟ್ ಟ್ರಸ್ಟ್ ಆಫ್ ಇಂಡಿಯಾದ ಸ್ಥಾಪನೆಯೊಂದಿಗೆ ಮ್ಯೂಚುವಲ್ ಫಂಡ್ ಯೋಜನೆ ಆರಂಭವಾದರೂ, ಕಳೆದ 20-25 ವರ್ಷಗಳಿಂದ ಮಾತ್ರ ಜನಪ್ರಿಯತೆ ಗಳಿಸಿದೆ.
ಈಗಲೂ ಭಾರತದ ಗೃಹ ವಲಯದ ಉಳಿತಾಯದಲ್ಲಿ ಕೇವಲ 7% ಮಾತ್ರ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಇದೆ. ಅಂದರೆ ಭಾರತದಲ್ಲಿ ಮ್ಯೂಚುವಲ್ ಫಂಡ್ ಯೋಜನೆಗಳಿಗೆ ಬೆಳವಣಿಗೆಗೆ ಎಷ್ಟು ದೊಡ್ಡ ಅವಕಾಶ ಸೃಷ್ಟಿಯಾಗಿದೆ ಎಂಬುದನ್ನು ಇದು ಬಿಂಬಿಸುತ್ತದೆ. ಹಾಗಾದರೆ ನಿಶ್ಚಿತ ಠೇವಣಿಗಳು ಮತ್ತು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಯಾವುದು ಸೂಕ್ತ ಎಂಬುದನ್ನು ನೋಡೋಣ.
ಏನಿದು ನಿಶ್ಚಿತ ಠೇವಣಿ?
ನಿಶ್ಚಿತ ಠೇವಣಿಗಳಲ್ಲಿ (Fixed Deposit) ಹೂಡಿಕೆದಾರರಿಗೆ ನಿಶ್ಚಿತ ಅವಧಿಗೆ ನಿಗದಿತ ಬಡ್ಡಿ ಆದಾಯ ಸಿಗುತ್ತದೆ. ಇವುಗಳ ಅವಧಿ 7 ದಿನಗಳಿಂದ 10 ವರ್ಷದ ತನಕ ಸಾಮಾನ್ಯವಾಗಿ ಇರುತ್ತವೆ. ಹೀಗಿದ್ದರೂ ಕಳೆದ 25 ವರ್ಷಗಳಿಂದ ಎಫ್‌ಡಿಗಳ ಬಡ್ಡಿ ದರ ಇಳಿದಿರುವುದರಿಂದ ಹಿರಿಯ ನಾಗರಿಕರಿಗೆ ಸಮಸ್ಯೆಯಾಗಿದೆ. ಅವರ ಆದಾಯಕ್ಕೆ ಹೊಡೆತ ಬಿದ್ದಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಆರ್‌ಬಿಐ ರೆಪೊ ದರ ಕಡಿತಗೊಳಿಸಿದ್ದರಿಂದ ಎಫ್ ಡಿ ದರಗಳೂ ತಗ್ಗಿತ್ತು. ಇತ್ತೀಚೆಗೆ ರೆಪೊ ದರ ಏರಿಕೆಯ ಬಳಿಕ ಬ್ಯಾಂಕ್‌ಗಳು ಅಲ್ಪ ಪ್ರಮಾಣದಲ್ಲಿ ಎಫ್‌ಡಿ ದರವನ್ನು ಏರಿಸಿದ್ದರೂ, ಸಾಲದ ಬಡ್ಡಿ ದರ ಹೆಚ್ಚಳವಾದ ಮಾದರಿಯಲ್ಲಿ ಎಫ್‌ಡಿ ದರ ಹೆಚ್ಚಳವಾಗಿಲ್ಲ.
ಇದನ್ನೂ ಓದಿ:ವಿಸ್ತಾರ Money Guide | ಠೇವಣಿಗಿಂತ ಸಾಲದ ಬಡ್ಡಿ ದರ ಹೆಚ್ಚಳ, ಮಧ್ಯಮ ವರ್ಗದ ಜನ ಏನು ಮಾಡಬಹುದು?
ಏನಿದು ಮ್ಯೂಚುವಲ್ ಫಂಡ್?
ಮ್ಯೂಚುವಲ್ ಫಂಡ್ ಎಂದರೆ ಅನೇಕ ಮಂದಿ ಹೂಡಿಕೆದಾರರು ತಮ್ಮ ಹಣವನ್ನು ಹೆಚ್ಚಿನ ಆದಾಯ ಗಳಿಸುವ ಸಲುವಾಗಿ ಒಂದು ಹೂಡಿಕೆಯ ಸಾಧನದಲ್ಲಿ ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡುವುದು. ಈ ಮ್ಯೂಚುವಲ್ ಫಂಡ್ ಹೂಡಿಕೆಯ ಯೋಜನೆಗಳನ್ನು ನುರಿತ, ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ. ಮ್ಯೂಚುವಲ್ ಫಂಡ್‌ಗಳಲ್ಲೂ ಹಲವು ವಿಧಗಳಿರುತ್ತವೆ. ಹೂಡಿಕೆದಾರರು ತಮ್ಮ ಅಗತ್ಯಗಳಿಗೆ ಅನುಸಾರ ಹೂಡಿಕೆ ಮಾಡಬಹುದು. ಮಾಸಿಕ ಕೇವಲ 100 ರೂ.ಗಳ ಕನಿಷ್ಠ ಹೂಡಿಕೆಯಿಂದಲೂ ಆರಂಭಿಸಬಹುದು ಎಂಬುದು ಇದರ ಮತ್ತೊಂದು ವಿಶೇಷತೆ.
ನಿಶ್ಚಿತ ಠೇವಣಿಗೂ ಮ್ಯೂಚುವಲ್ ಫಂಡ್‌ಗೂ ವ್ಯತ್ಯಾಸವೇನು?
ಮಾನದಂಡ | ಎಫ್‌ಡಿ | ಮ್ಯೂಚುವಲ್ ಫಂಡ್ |
ಸುರಕ್ಷತೆ | ಸುರಕ್ಷಿತ ( ಹೀಗಿದ್ದರೂ ಬ್ಯಾಂಕ್‌ಗಳ ಬಲವನ್ನು ಆಧರಿಸಿದೆ) | ಮಾರುಕಟ್ಟೆಯ ಏರಿಳಿತವನ್ನು ಆಧರಿಸಿದೆ. ಭಿನ್ನ ಯೋಜನೆಗಳಿಗೆ ಭಿನ್ನ ರಿಸ್ಕ್ ಇರುತ್ತದೆ. |
ಲಿಕ್ವಿಡಿಟಿ | ಅವಧಿಗೆ ಮುನ್ನ ಹಿಂತೆಗೆತಕ್ಕೆ ದಂಡ ಅನ್ವಯವಾಗುತ್ತದೆ. | ಓಪನ್ ಎಂಡೆಡ್ ಫಂಡ್‌ಗಳಲ್ಲಿ ಲಿಕ್ವಿಡಿಟಿ ಹೆಚ್ಚು. ಅವಧಿಗೆ ಮುನ್ನ ಹಿಂತೆಗೆತಕ್ಕೆ ದಂಡ ಇಲ್ಲ |
ಆದಾಯ | ನಿಗದಿತ ಆದಾಯ | ಮಾರುಕಟ್ಟೆ ಆಧಾರಿತ. ಆದರೆ ಇತಿಹಾಸ ಗಮನಿಸಿದರೆ ಎಫ್‌ಡಿಗಿಂತ ಹೆಚ್ಚು ಆದಾಯ ಕೊಟ್ಟಿದೆ. |
ತೆರಿಗೆ | ಹೂಡಿಕೆದಾರರ ತೆರಿಗೆ ಶ್ರೇಣಿ ಅನ್ವಯ | ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಅನುಕೂಲ. ಹೂಡಿಕೆದಾರರಿಗೆ ತೆರಿಗೆ ದೃಷ್ಟಿಯಿಂದ ಲಾಭದಾಯಕ |
ಹೂಡಿಕೆದಾರರ ಹಿತರಕ್ಷಣೆ | ಆರ್‌ಬಿಐ ನಿಯಂತ್ರಿತ | ಸೆಬಿ ನಿಯಂತ್ರಿತ |
1 ಲಕ್ಷ ರೂ.ಗಳನ್ನು 10 ವರ್ಷಗಳ ಅವಧಿಗೆ ಹೂಡಿದರೆ ಯಾವುದರಲ್ಲಿ ಲಾಭ ಹೆಚ್ಚು?
ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್ ಎಫ್‌ಡಿ ಹಾಗೂ ಮ್ಯೂಚುವಲ್ ಫಂಡ್ ಯೋಜನೆಗಳ ಆದಾಯವನ್ನು ಹೋಲಿಸಿದರೆ ನಿಸ್ಸಂದೇಹವಾಗಿ ಮ್ಯೂಚುವಲ್ ಫಂಡ್ ಯೋಜನೆಗಳೇ ಉತ್ತಮ ಆಯ್ಕೆ ಮತ್ತು 10 ವರ್ಷಗಳ ಅವಧಿಯಲ್ಲಿ 1 ಲಕ್ಷ ರೂ. ಹೂಡಿಕೆಗೆ ಹೆಚ್ಚು ಆದಾಯವನ್ನು ನೀಡಬಹುದು. ಈ ಲೆಕ್ಕಾಚಾರ ನೋಡೋಣ.
ಬ್ಯಾಂಕ್‌ಗಳ ನಿಶ್ಚಿತ ಠೇವಣಿಯಲ್ಲಿ (ಎಫ್‌ಡಿ) 10 ವರ್ಷಗಳ ಅವಧಿಗೆ 1 ಲಕ್ಷ ರೂ. ಹೂಡಿದರೆ ಆದಾಯ:
ಒಟ್ಟು ಹೂಡಿಕೆ | 1,00000 ರೂ. |
ವಾರ್ಷಿಕ ಬಡ್ಡಿ ದರ | 6.5% |
ಅವಧಿ | 10 ವರ್ಷಗಳು |
ಹೂಡಿಕೆಯ ಮೊತ್ತ | 1,00000 ರೂ. |
ಅಂದಾಜು ಆದಾಯ | 38,042 ರೂ. |
ಒಟ್ಟು ಮೌಲ್ಯ | 1,38,042 ರೂ. |
ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಇಡಿಯಾಗಿ 1 ಲಕ್ಷ ರೂ. ಹೂಡಿಕೆಗೆ 10 ವರ್ಷಗಳಲ್ಲಿ ಆದಾಯ
ಒಟ್ಟು ಹೂಡಿಕೆ | 1,00,000 ರೂ. |
ನಿರೀಕ್ಷಿತ ಆದಾಯ | 12% |
ಅವಧಿ | 10 ವರ್ಷಗಳು |
ಹೂಡಿಕೆಯ ಮೊತ್ತ | 1,00,000 ರೂ. |
ಅಂದಾಜು ಆದಾಯ | 2,10,585 ರೂ. |
ಒಟ್ಟು ಮೌಲ್ಯ | 3,10,585 ರೂ. |
ಇದನ್ನೂ ಓದಿ: ವಿಸ್ತಾರ Money Guide | ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಹಣ 48,000 ಕೋಟಿ ರೂ!