Site icon Vistara News

ವಿಸ್ತಾರ Money Guide: Share Market : ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆಗೆ 10 ನಿಮಿಷದಲ್ಲೇ ಡಿಮ್ಯಾಟ್‌ ಖಾತೆ ತೆರೆಯುವುದು ಹೇಗೆ?

demat account

ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೀರಾ? ನಿಮ್ಮ ಸ್ನೇಹಿತರು ಸ್ಟಾಕ್‌ ಮಾರ್ಕೆಟ್‌ನಲ್ಲಿ ಸದ್ದಿಲ್ಲದೆ ಹೂಡಿಕೆ ಮಾಡಿ ದುಡ್ಡು ಗಳಿಸುತ್ತಿರುವುದನ್ನು ಕಂಡು, ನಿಮಗೂ ನಾನೇಕೆ ಇನ್ವೆಸ್ಟ್‌ ಮಾಡಬಾರದು ಎನ್ನಿಸಿದೆಯೇ? ಹಾಗೆ ಅನ್ನಿಸಿದ್ದರೂ, ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದೀರಾ? ಹಾಗಾದರೆ ಈ ಲೇಖನವನ್ನು ಮಿಸ್‌ ಮಾಡದೆ ಓದಿ, ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Share Market) ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಹೂಡಿಕೆ ಮಾಡಬಹುದು. ಹಾಗಾದರೆ ಎಲ್ಲಿಂದ ಆರಂಭಿಸುವುದು ಎನ್ನುತ್ತೀರಾ? ಅದಕ್ಕೆ ಉತ್ತರ ಡಿಮ್ಯಾಟ್‌ ಅಕೌಂಟ್ ಮತ್ತು ಟ್ರೇಡಿಂಗ್‌ ಅಕೌಂಟ್.‌‌ ಷೇರು, ಬಾಂಡ್‌, ಮ್ಯೂಚುವಲ್‌ ಫಂಡ್‌, ಇಟಿಎಫ್‌, ಆನ್‌ಲೈನ್‌ ಇನ್ಷೂರೆನ್ಸ್‌ಗಳನ್ನು ಹೊಂದಲು ಮತ್ತು ನಿರ್ವಹಿಸಲು ಡಿಮ್ಯಾಟ್‌ ಖಾತೆ ಅನುಕೂಲಕರ. ಡಿಮ್ಯಾಟ್‌ ಅಕೌಂಟ್‌ ನಂಬರ್‌ನಲ್ಲಿ 16 ಅಂಕಿಗಳು ಇರುತ್ತವೆ.

ಒಂದಕ್ಕಿಂತ ಹೆಚ್ಚು ಡಿಮ್ಯಾಟ್‌ ತೆರೆಯಬಹುದೆ?

ಡಿಮ್ಯಾಟ್‌ ಖಾತೆ ತೆರೆಯಲು ವಯೋಮಿತಿ ಇರುವುದಿಲ್ಲ. ಅಪ್ರಾಪ್ತರೂ ಪೋಷಕರ ನೆರವಿನೊಂದಿಗೆ ಡಿಮ್ಯಾಟ್‌ ಖಾತೆ ತೆರೆಯಬಹುದು. ಒಂದಕ್ಕಿಂತ ಹೆಚ್ಚು ಡಿಮ್ಯಾಟ್‌ ಖಾತೆಯನ್ನು ತೆರೆಯಬಹುದು. ಬೇರೆ ಬೇರೆ ಡಿಮ್ಯಾಟ್‌ ಖಾತೆಯಲ್ಲಿ ಒಂದೇ ಕಂಪನಿಯ ಷೇರುಗಳನ್ನೂ ಖರೀದಿಸಬಹುದು. ಆದರೆ ಒಂದೇ ಬ್ರೋಕರೇಜ್‌ನಲ್ಲಿ ಒಬ್ಬ ವ್ಯಕ್ತಿ ಒಂದೇ ಖಾತೆಯನ್ನು ತೆರೆಯಬಹುದು.

ಡಿಮ್ಯಾಟ್‌ ಖಾತೆಯನ್ನು ಪಡೆಯುವುದು ಹೇಗೆ?

ಡಿಮ್ಯಾಟ್‌ ಖಾತೆಯನ್ನು ನ್ಯಾಶನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ (NSDL), ಸೆಂಟ್ರಲ್‌ ಡಿಪಾಸಿಟರಿ ಸರ್ವೀಸ್‌ ಲಿಮಿಟೆಡ್‌ (CSDL) ಮೂಲಕ ಪಡೆಯಬೇಕು. ಈ ಸೆಂಟ್ರಲ್‌ ಡಿಪಾಸಿಟರಿಗಳು ಏಜೆಂಟ್‌ಗಳನ್ನು ಹೊಂದಿರುತ್ತವೆ. ಅವುಗಳನ್ನು ಡಿಪಾಸಿಟರಿ ಪಾರ್ಟಿಸಿಪೆಂಟ್‌ (Depository participants) ಎನ್ನುತ್ತಾರೆ. ಅವುಗಳು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಜೆರೋಧಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ ಇತ್ಯಾದಿಗಳು ಡಿಪಾಸಿಟರಿ ಪಾರ್ಟಿಸಿಪೆಂಟ್‌ ಆಗಿ ಡಿಮ್ಯಾಟ್‌ ಸೇವೆಯನ್ನು ಒದಗಿಸುತ್ತವೆ. ಅವುಗಳ ಮೂಲಕ ಡಿಮ್ಯಾಟ್‌ ಖಾತೆಯನ್ನು ಹೊಂದಬಹುದು.

10 ನಿಮಿಷದಲ್ಲೇ ಡಿಮ್ಯಾಟ್‌ ಖಾತೆ ನಿಮಗೆ ಲಭ್ಯ

ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆಗೆ ಡಿಮ್ಯಾಟ್‌ ಖಾತೆ ಕಡ್ಡಾಯ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ತೀರ ವಿಳಂಬವಾಯಿತು ಎನ್ನುವ ಕಾಲವೇ ಇಲ್ಲ. ಡಿಮ್ಯಾಟ್‌ ಖಾತೆಯನ್ನು ಹೊಂದುವುದು ಈಗ ಬಹಳ ಸುಲಭ. ಆನ್‌ಲೈನ್‌ನಲ್ಲಿ ಕೇವಲ 10 ನಿಮಿಷದೊಳಗೆ ಪಡೆಯಬಹುದು. 15 ನಿಮಿಷದೊಳಗೆ ಡಿಮ್ಯಾಟ್‌ ಮತ್ತು ಟ್ರೇಡಿಂಗ್‌ ಅಕೌಂಟ್‌ ಅನ್ನು ನೀವು ತೆರೆಯಬಹುದು ಎನ್ನುತ್ತದೆ ಎಸ್‌ಬಿಐ ಸೆಕ್ಯುರಿಟೀಸ್.‌ ಡಿಮ್ಯಾಟ್‌ ಖಾತೆಯಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿ ಇರುವುದರಿಂದ ಭೌತಿಕವಾಗಿ ಕಾಗದಪತ್ರಗಳ ಅವಶ್ಯತೆ ಇರುವುದಿಲ್ಲ. ಕಾಗದಪತ್ರಗಳಾದರೆ ಕಾಣೆಯಾಗುವ, ಕಳ್ಳತನವಾಗುವ ಅಪಾಯ ಕೂಡ ಇರುತ್ತದೆ. ಆದರೆ ಡಿಮ್ಯಾಟ್‌ನಲ್ಲಿ ಅಂಥ ಅಪಾಯ ಇರುವುದಿಲ್ಲ. ಹೀಗಾಗಿ ಅದು ಸಂಪೂರ್ಣ ಸುರಕ್ಷಿತ. ನೀವು ನಿಶ್ಚಿಂತೆಯಿಂದ ಡಿಮ್ಯಾಟ್‌ ಅಕೌಂಟ್‌ ತೆರೆಯಬಹುದು.

ತ್ರೀ-ಇನ್‌ ಒನ್‌ ಡಿಮ್ಯಾಟ್‌ ಅಕೌಂಟ್ ಅನುಕೂಲಕರ: ಡಿಮ್ಯಾಟ್‌ ಅಕೌಂಟ್‌, ಟ್ರೇಡಿಂಗ್‌ ಅಕೌಂಟ್‌ ಮತ್ತು ಬ್ಯಾಂಕ್‌ ಅಕೌಂಟ್‌ -ಇವು ಮೂರನ್ನೂ ಒಟ್ಟಿಗೆ ಒದಗಿಸುವ ತ್ರೀ-ಇನ್‌ ಒನ್‌ ಡಿಮ್ಯಾಟ್‌ ಅಕೌಂಟ್‌ಗಳನ್ನು ಒದಗಿಸುವ ಬ್ಯಾಂಕ್‌ಗಳು ಇವೆ. ಡಿಮ್ಯಾಟ್‌ ಖಾತೆಯನ್ನು ಮಾತ್ರ ನೀಡುವ ಖಾತೆಗಳಿವೆ. ಇವುಗಳ ಪ್ರಯೋಜನ ಏನೆಂದರೆ ಷೇರುಗಳನ್ನು ಇಡಲು ಡಿಮ್ಯಾಟ್‌ ಖಾತೆ, ಷೇರುಗಳನ್ನು ಕೊಳ್ಳಲು ಮತ್ತು ಮಾರಲು ಟ್ರೇಡಿಂಗ್‌ ಅಕೌಂಟ್‌ ಹಾಗೂ ಬ್ಯಾಂಕ್‌ ಉಳಿತಾಯ ಖಾತೆ ಒಟ್ಟಿಗೆ ಇರುತ್ತದೆ. ಮೂರೂ ಖಾತೆಗಳು ಒಟ್ಟಿಗೆ ಇರುವುದು ಅನುಕೂಲಕರ.

ಡಿಮ್ಯಾಟ್‌ ಖಾತೆ ಸೌಲಭ್ಯ ನೀಡುವ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು:

ಜೆರೋಧಾ

ಐಸಿಐಸಿಐ ಡೈರೆಕ್ಟ್‌ (ಐಸಿಐಸಿಐ ಬ್ಯಾಂಕ್)‌

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ (ಎಚ್‌ಡಿಎಫ್‌ಸಿ ಬ್ಯಾಂಕ್)‌

ಎಸ್‌ಬಿಐ ಕ್ಯಾಪ್‌ ಸೆಕ್ಯುರಿಟೀಸ್‌ (ಎಸ್‌ಬಿಐ ಬ್ಯಾಂಕ್)‌

ಎಕ್ಸಿಸ್‌ ಡೈರೆಕ್ಟ್‌ (ಎಕ್ಸಿಸ್‌ ಬ್ಯಾಂಕ್)‌

ಕೋಟಕ್‌ ಸೆಕ್ಯುರಿಟೀಸ್‌ (ಕೋಟಕ್‌ ಬ್ಯಾಂಕ್)

ಡಿಮ್ಯಾಟ್‌ ಖಾತೆ ತೆರೆಯುವ ಸುಲಭ ವಿಧಾನ: ಎಸ್‌ಬಿಐ ಸೆಕ್ಯುರಿಟೀಸ್‌, ಜೆರೋಧಾ, ಐಸಿಐಸಿಐ ಸೆಕ್ಯುರಿಟೀಸ್‌ ಮೊದಲಾದ ಸಂಸ್ಥೆಗಳ ವೆಬ್‌ಸೈಟ್‌ಗಳ ಮೂಲಕ ಲಾಗಿನ್‌ ಆಗಿ ಡಿಮ್ಯಾಟ್‌ ಖಾತೆಯನ್ನು ನೀವು ತೆರೆಯಬಹುದು. 10-15 ನಿಮಿಷಗಳಲ್ಲಿ ಇದು ಲಭ್ಯ.

ಸಾಮಾನ್ಯವಾಗಿ ಖಾತೆ ತೆರೆಯುವ ಹಂತಗಳು ಇಂತಿವೆ: ಸೈನ್‌ ಅಪ್‌, ಆಡ್‌ ಬ್ಯಾಂಕ್‌, ಅಪ್‌ಲೋಡ್‌ ಡಾಕ್ಯುಮೆಂಟ್ಸ್‌, ಇ-ಸೈನ್.‌

೧. ಸೈನ್‌ ಅಪ್‌ನಲ್ಲಿ ನಿಮ್ಮ ಆಯ್ಕೆಯ ಡಿಪಿಯನ್ನು ( ಡಿಪಾಸಿಟರಿ ಪಾರ್ಟಿಸಿಪೆಂಟ್‌) ಆಯ್ಕೆ ಮಾಡಿಕೊಳ್ಳಿ.

2. ಆಡ್‌ ಬ್ಯಾಂಕ್‌ನಲ್ಲಿ ಬ್ಯಾಂಕ್‌ ಖಾತೆ ವಿವರಗಳನ್ನು ಸಲ್ಲಿಸಿ. (ಜೆರೋಧಾ, ಎಸ್‌ಬಿಐ ಸೆಕ್ಯುರಿಟೀಸ್‌ ಇತ್ಯಾದಿ).

3. ಪ್ಯಾನ್‌ ಸಂಖ್ಯೆ, ವಿಳಾಸ ವಿವರವನ್ನು ಒಳಗೊಂಡ ಶಾರ್ಟ್‌ ವಿಡಿಯೊವನ್ನು ಸಲ್ಲಿಸಿ.

೪. ಆಧಾರ್‌ ಜತೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆ ಬಳಸಿ ಇ-ಸೈನ್‌ ಪ್ರಕ್ರಿಯೆ ಪೂರ್ಣಗೊಳಿಸಿ. ಈ ಹಂತಗಳು ಪೂರ್ಣವಾದ ಬಳಿಕ ನಿಮಗೆ ಡಿಮ್ಯಾಟ್‌ ಖಾತೆ ಸಂಖ್ಯೆ, ಲಾಗಿನ್‌ ವಿವರಗಳು ಸಿಗುತ್ತವೆ.

ಅಗತ್ಯವಿರುವ ದಾಖಲೆಗಳು: ಪ್ಯಾನ್‌ ಕಾರ್ಡ್‌, ವಿಳಾಸದ ದಾಖಲೆಗಳು- ಡ್ರೈವಿಂಗ್‌ ಲೈಸೆನ್ಸ್‌, ಆಧಾರ್‌, ಓಟರ್‌ ಐಡಿ, ಪಾಸ್‌ಪೋರ್ಟ್‌ ಇತ್ಯಾದಿಗಳಲ್ಲಿ ಯಾವುದಾದರೂ ಒಂದು. ಕ್ಯಾನ್ಸಲ್ಡ್‌ ಚೆಕ್. ಖಾಲಿ ಪೇಪರ್‌ನಲ್ಲಿ ಸಹಿ ಹಾಕಿ ಕ್ಲಿಕ್ಕಿಸಿ ಇಟ್ಟುಕೊಳ್ಳಿ. ಬಳಿಕ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡಿ.

Exit mobile version