ದೀಪಾವಳಿಯ ಸಂದರ್ಭ ಎಲ್ಲರೂ ಬಗೆಬಗೆಯ ಉಡುಗೊರೆಗಳನ್ನು ನೀಡುತ್ತಾರೆ. ನಗದು, ಸಿಹಿ, ಬಟ್ಟೆಬರೆಗಳು, ಚಿನ್ನದ ಆಭರಣಗಳನ್ನು ನೀಡುತ್ತಾರೆ. ಮತ್ತೆ ಕೆಲವರು ದುಬಾರಿ ಪ್ರಾಪರ್ಟಿಗಳನ್ನೂ ಕೊಡುತ್ತಾರೆ. ದೀಪಾವಳಿ ಸಂದರ್ಭ ದುಬಾರಿ ಕೊಡುಗೆಗಳನ್ನು ಕೊಡುವುದೂ ಒಳ್ಳೆಯದು ಎಂಬ ನಂಬಿಕೆ ಇದೆ. (ವಿಸ್ತಾರ Money Guide) ಉದ್ಯೋಗಿಗಳಿಗೂ ದೀಪಾವಳಿಯ ಬೋನಸ್ ಸಿಗುತ್ತದೆ.
ಹೀಗಿದ್ದರೂ, ದುಬಾರಿ ಉಡುಗೊರೆಗಳನ್ನು ನೀಡುವಾಗ ಅವುಗಳ ಮೇಲೆ ತರಿಗೆ ಅನ್ವಯವಾಗುತ್ತದೆ. ಇದನ್ನು ಅರಿತುಕೊಳ್ಳದಿದ್ದರೆ ಆದಾಯ ತೆರಿಗೆ ಇಲಾಖೆಯ ಕಣ್ಣಿಗೆ ಬೀಳುವ ಸಾಧ್ಯತೆಯೂ ಇರುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 56 (2) ಪ್ರಕಾರ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದಾಗ ಇತರ ಮೂಲಗಳ ಆದಾಯ ಎಂದು ಪರಿಗಣನೆಯಾಗುತ್ತದೆ.
ಯಾವುದಕ್ಕೆ ತೆರಿಗೆ? ನಗದು, ಚಿನ್ನ ಮತ್ತು ಪ್ರಾಪರ್ಟಿಯನ್ನು ದೀಪಾವಳಿ ಕೊಡುಗೆಯಾಗಿ ನೀಡಿದಾಗ ತೆರಿಗೆ ಅನ್ವಯಿಸಬಹುದು. ಆದಾಯ ತೆರಿಗೆ ಕಾಯಿದೆ – 1961ರ ಸೆಕ್ಷನ್ 56 (2) (x) ಅಡಿಯಲ್ಲಿ ತೆರಿಗೆ ನಿಯಮಗಳು ಅನ್ವಯವಾಗುತ್ತದೆ ಎನ್ನುತ್ತಾರೆ ಆರ್‌ಎಸ್‌ಎಂ ಇಂಡಿಯಾದ ಸ್ಥಾಪಕ ಡಾ.ಸುರೇಶ್ ಸುರಾನಾ.
ಆದಾಯ ತೆರಿಗೆ ಕಾಯಿದೆಯ ಪ್ರಕಾರ ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನ ಹಣ ಅಥವಾ ಮೌಲ್ಯದ ಆಸ್ತಿಯನ್ನು (ಪ್ರಾಪರ್ಟಿ) ಉಡುಗೊರೆ ನೀಡಿದಾಗ, ಇರ ಮೂಲದ ಆದಾಯ ಎಂದು ತೆರಿಗೆ ಲೆಕ್ಕಾಚಾರಕ್ಕೆ ಬರುತ್ತದೆ. ಕೆಳಕಂಡ ಮಿತಿಯ ಬಳಿಕ ತೆರಿಗೆ ಅನ್ವಯಿಸುತ್ತದೆ.
ನಗದು: ವಾರ್ಷಿಕ 50,000 ರೂ.ಗಿಂತ ಹೆಚ್ಚು ಮೌಲ್ಯದ ನಗದನ್ನು ಉಡುಗೊರೆಯಾಗಿ ನೀಡಿದರೆ ತೆರಿಗೆ ಅನ್ವಯಿಸುತ್ತದೆ.
ಚರಾಸ್ತಿ: ವಾರ್ಷಿಕ 50,000 ರೂ.ಗಿಂತ ಮೇಲ್ಪಟ್ಟ ಚರಾಸ್ತಿಯನ್ನು ನೀಡಿದರೆ ತೆರಿಗೆ ಅನ್ವಯ.
ಸ್ಥಿರಾಸ್ತಿ: ವಾರ್ಷಿಕ 50,000 ರೂ. ಮೇಲ್ಪಟ್ಟರೆ ತೆರಿಗೆ ವ್ಯಾಪ್ತಿಗೆ ಬರುತ್ತದೆ.
ಕಾರು ಗಿಫ್ಟ್ ಆದರೆ ತೆರಿಗೆ ಇಲ್ಲ: ಉಡುಗೊರೆಯಾಗಿ ಕಾರನ್ನು ನೀಡಿದರೆ ಅದರ ಮೇಲೆ ತೆರಿಗೆ ಅನ್ವಯವಾಗಲಾರದು. ಕಾರನ್ನು ಪ್ರಾಪರ್ಟಿ ಎಂದು ಪರಿಗಣಿಸದಿರುವುದು ಇದಕ್ಕೆ ಕಾರಣವಾಗಿದೆ.
ಹತ್ತಿರದ ಸಂಬಂಧಿಕರಿಂದ ಕೊಡುಗೆ: ಹೆತ್ತವರು, ಸಂಗಾತಿ, ಸೋದರ, ಸೋದರಿ, ಮಕ್ಕಳಿಂದ ಉಡುಗೊರೆ ಪಡೆದರೆ, ಆದಾಯ ತೆರಿಗೆಯಿಂದ ವಿನಾಯಿತಿ ಇದೆ.