ಸಾಮಾನ್ಯವಾಗಿ 58- ೬೦ ವರ್ಷದ ವೇಳೆಗೆ ಜನತೆ ಉದ್ಯೋಗದಿಂದ ನಿವೃತ್ತರಾಗುತ್ತಾರೆ. ಆದರೆ ಎಷ್ಟೋ ಮಂದಿ ನಿವೃತ್ತರಾದ ಬಳಿಕ ಎರಡನೇ ಹುದ್ದೆಯ ಇನಿಂಗ್ಸ್ ಆರಂಭಿಸುತ್ತಾರೆ. (ವಿಸ್ತಾರ Money Guide) ಸಾಮಾನ್ಯವಾಗಿ ಮೊದಲು ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿಯೇ ಕನ್ಸಲ್ಟೆಂಟ್ ಆಗಿಯೋ, ಅಥವಾ ಸಂಪೂರ್ಣ ಭಿನ್ನವಾದ ಕ್ಷೇತ್ರದಲ್ಲಿಯೋ ಎರಡನೇ ಇನಿಂಗ್ಸ್ ಶುರು ಮಾಡಬಹುದು. ಒಟ್ಟಿನಲ್ಲಿ ಇದರಿಂದ ಒಂದು ಪ್ರಯೋಜನ ಇದೆ.ಅದು ಏನೆಂದರೆ ನಿವೃತ್ತಿಯ ಕಾಲದ ಉಳಿತಾಯವನ್ನು ಇದು ಹೆಚ್ಚಿಸುತ್ತದೆ. ನಿವೃತ್ತಿಯಾದ ಬಳಿಕ ಎಲ್ಲರಿಗೂ ಸಮಾನ ರೀತಿಯಲ್ಲಿ ಆದಾಯ ಸಿಗದು. ಪೂರ್ಣಕಾಲಿಕ ಉದ್ಯೋಗಿಯಾಗಿದ್ದಾಗ ಸಿಗುವಷ್ಟು ಸಂಬಳ ಸಿಗದಿದ್ದರೂ, ಬಹುತೇಕ ಮಂದಿ ೫೦-೭೦% ಆದಾಯ ಗಳಿಸುತ್ತಿದ್ದಾರೆ.
ಅರ್ಧದಷ್ಟು ವೇತನ ಸಿಕ್ಕಿದರೂ ಲಾಭ: ಒಬ್ಬ ವ್ಯಕ್ತಿ ನಿವೃತ್ತನಾದ ಬಳಿಕ ಮತ್ತೊಂದು ಕೆಲಸಕ್ಕೆ ಸೇರಿದಾಗ ಆತ ಈ ಹಿಂದೆ ಪಡೆಯುತ್ತಿದ್ದ ಕೊನೆಯ ಸಂಬಳದ ಅರ್ಧದಷ್ಟು (೫೦-೭೦%) ಪಡೆದರೂ, ಅದರಿಂದ ನಿವೃತ್ತಿಯ ಹಣಕಾಸು ವ್ಯವಸ್ಥೆ ಗಣನೀಯ ಸುಧಾರಿಸುತ್ತದೆ. ಹಾಗಾದರೆ ನಿರ್ದಿಷ್ಟ ಉದಾಹರಣೆಯೊಂದಿಗೆ ೬೦ ವರ್ಷದ ಬಳಿಕ ದುಡಿಮೆಯಿಂದ ನಿವೃತ್ತಿಯ ನಿಧಿಯನ್ನು ಹೆಚ್ಚಿಸುವುದು ಹೇಗೆ ಎಂದು ತಿಳಿಯೋಣ.
ಉದಾಹರಣೆಗೆ ನಿಮ್ಮ ಕೊನೆಯ ವೇತನ ಮಾಸಿಕ ೨ ಲಕ್ಷ ರೂ. ಎಂದಿಟ್ಟುಕೊಳ್ಳಿ. ನಿವೃತ್ತಿಯ ೬೦ನೇ ವರ್ಷಕ್ಕೆ ಸಂಗ್ರಹವಾದ ನಿಧಿ: ೬೦ ಲಕ್ಷ (೮೦% ಬಂಡವಾಳ ೮% ಬಡ್ಡಿ ಪಡೆದಿರುತ್ತದೆ. ೨೦% ಬಂಡವಾಳಕ್ಕೆ ೧೦% ಬಡ್ಡಿ ) ಪ್ರತಿ ವರ್ಷ ೧೦ ಲಕ್ಷ ರೂ.ಗಳಂತೆ ಹಿಂತೆಗೆದುಕೊಂಡರೆ ೬೯ನೇ ವರ್ಷದ ತನಕ ಸಾಕಾಗುತ್ತದೆ. ಈಗ ಒಂದು ವೇಳೆ ನಿವೃತ್ತಿಯ ಬಳಿಕ ಮತ್ತೆ ಉದ್ಯೋಗ ಶುರು ಮಾಡಿದರೆ, ಕೊನೆಯ ಸಂಬಳದ ೫೦% ಆದಾಯ ಗಳಿಸಿದರೆ…
- ನಿವೃತ್ತಿಯ ನಂತರ ಎರಡನೇ ಉದ್ಯೋಗದಿಂದ ಹಳೆ ಸಂಬಳದ ೫೦% ಆದಾಯ: ಮಾಸಿಕ ೧ ಲಕ್ಷ ರೂ.
- ನಿವೃತ್ತಿಯ ಬಳಿಕ ಮಾಸಿಕ ವೆಚ್ಚ: ೬೦,೦೦೦ ರೂ.
- ೮% ಬಡ್ಡಿಯಲ್ಲಿ ಹೂಡಿಕೆ: ೪೦,೦೦೦ ರೂ.
ನಿವೃತ್ತಿಯ ಬಳಿಕ ೫ ವರ್ಷ ದುಡಿದರೆ:
೫ ವರ್ಷಗಳ ಬಳಿಕ ಒಟ್ಟು ಬಂಡವಾಳ: ೧.೮೨ ಕೋಟಿ ರೂ.
ವರ್ಷಕ್ಕೆ ೧೦% ಅಥವಾ ೧೦ ಲಕ್ಷ ರೂ. ಹಿಂತೆಗೆದುಕೊಳ್ಳುತ್ತಿದ್ದರೆ, ೧೧೧ನೇ ವರ್ಷದ ತನಕ ಸಾಕು. ನೀವು ೧೦ ವರ್ಷ ದುಡಿದರೆ ಒಟ್ಟು ಬಂಡವಾಳ ೫.೮೫ ಕೋಟಿ ರೂ. ಆಗುತ್ತದೆ. ವಾರ್ಷಿಕ ೧೦% ಹಿಂತೆಗೆದುಕೊಳ್ಳುತ್ತಿದ್ದರೆ, ೧೫೦ ವರ್ಷದ ತನಕ ಸಾಕು.
೬೦ ವರ್ಷದ ಬಳಿಕ ಮತ್ತೊಂದು ಉದ್ಯೋಗ ಏಕೆ?
- ನಿವೃತ್ತಿಯ ನಂತರದ ಸಾಮಾಜಿಕ ಭದ್ರತೆಯ ಯೋಜನೆಗಳು ಜನರ ಎಲ್ಲ ಹಣಕಾಸು ಖರ್ಚು ವೆಚ್ಚಗಳಿಗೆ ಸಾಕಾಗುವುದಿಲ್ಲ. ಅದರಲ್ಲೂ ಖಾಸಗಿ ವಲಯದಲ್ಲಿ ದುಡಿಯುವ ಮಂದಿಗೆ ಇಪಿಎಫ್ಒ ಅಡಿಯಲ್ಲಿ ಸಿಗುವ ಪಿಂಚಣಿ ಅತ್ಯಲ್ಪ. ಹೀಗಾಗಿ ನಿವೃತ್ತಿಯ ಬದುಕಿಗೆ ಹೆಚ್ಚುವರಿ ಆದಾಯ ಇದ್ದರೆ ಅನುಕೂಲಕರ. ಆದ್ದರಿಂದ ಅನೇಕ ಮಂದಿ ೬೦ ವರ್ಷದ ಬಳಿಕವೂ ಮತ್ತೊಂದು ಉದ್ಯೋಗ ಮಾಡಲು ಬಯಸುತ್ತಾರೆ.
- ವೈದ್ಯಕೀಯ, ಆರೋಗ್ಯ ವಲಯದ ಸುಧಾರಣೆಗಳ ಪರಿಣಾಮ ೬೦ ವರ್ಷ ಆದರೂ, ದುಡಿಯುವ ಶಕ್ತಿ, ಆರೋಗ್ಯ ಇರುವವರು ಇದ್ದಾರೆ. ಅವರಿಗೆ ಹೆಚ್ಚುವರಿ ಆದಾಯಕ್ಕೆ ಹೊಸ ಉದ್ಯೋಗ ಬೇಕು ಎಂಬ ಅಪೇಕ್ಷೆ ಉಂಟಾಗಬಹುದು.
- ಈಗ ನಿವೃತ್ತಿಯ ಬಳಿಕವೂ ದುಡಿಮೆ ಮತ್ತು ಗಳಿಕೆಗೆ ಅವಕಾಶಗಳು ಹಿಂದಿಗಿಂತ ಹೆಚ್ಚು ಸೃಷ್ಟಿಯಾಗಿವೆ. ಆನ್ಲೈನ್ ತಂತ್ರಜ್ಞಾನ ಅಭಿವೃದ್ಧಿಯಾಗಿರುವುದರಿಂದ ಎಷ್ಟೋ ಮಂದಿ ಟೆಕ್ನಾಲಜಿ ಆಧಾರಿತ ಸೇವೆಗಳನ್ನು ನೀಡುತ್ತಾರೆ. ಕನ್ಸಲ್ಟೆಂಟ್ ಆಗಿ ಗಳಿಸುತ್ತಾರೆ. ಆನ್ಲೈನ್ ತರಬೇತಿಗಳನ್ನೂ ನೀಡುತ್ತಾರೆ. ಇದೆಲ್ಲವೂ ಮತ್ತೊಂದು ಆದಾಯಕ್ಕೆ ಮೂಲವಾಗುತ್ತದೆ.
- ಕಾರ್ಪೊರೇಟ್ ವಲಯದ ದೊಡ್ಡ ಕಂಪನಿಗಳ ಮ್ಯಾನೇಜ್ಮೆಂಟ್ ಮಟ್ಟದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಲ್ಲಿ ಸಹಜವಾಗಿ ವೃತ್ತಿ ಅನುಭವ, ನೈಪುಣ್ಯತೆ ಇರುತ್ತದೆ. ತಮ್ಮ ಜ್ಞಾನ ಮತ್ತು ಅನುಭವವನ್ನು ಆಧರಿಸಿ ಸ್ಟಾರ್ಟಪ್ಗಳಿಗೆ ಕನ್ಸಲ್ಟೆಂಟ್ ಆಗಿ ಅವರು ದುಡಿಯಬಲ್ಲರು.
- ನಿವೃತ್ತಿಯ ಬಳಿಕ ದುಡಿಯುವುದು ಎಂದರೆ ಹಲವು ರೀತಿಯಲ್ಲಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಯೋಜನಗಳಿವೆ.