ಎಲ್ಲ ತೆರಿಗೆದಾರರೇ ಗಮನಿಸಿ. ಈವರೆಗೂ ನೀವು ಆದಾಯ ತೆರಿಗೆ ರಿಟರ್ನ್ (Income Tax Returns) ಫೈಲ್ ಮಾಡದೇ ಇದ್ದರೆ ದಂಡ (fine) ಕಟ್ಟಬೇಕಾಗಬಹುದು. ಹೀಗಾಗಿ ಕೂಡಲೇ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿ. ಯಾಕೆಂದರೆ 2023- 24 ಹಣಕಾಸು ವರ್ಷಕ್ಕೆ (financial year) ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನ ಜುಲೈ 31.
ಈಗಾಗಲೇ ಅನೇಕ ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಸಿದ್ದಾರೆ. ಆದರೂ ನೀವು ಸಲ್ಲಿಸಿರುವ ಐಟಿಆರ್ ಸರಿಯಾಗಿದೆಯೇ ಎನ್ನುವುದನ್ನು ಮರು ಪರಿಶೀಲನೆ ಮಾಡುವುದು ಒಳ್ಳೆಯದು. ಐಟಿಆರ್ ಸಲ್ಲಿಸುವಾಗ ಸರಿಯಾದ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯು ಏಳು ವಿಧದ ಅರ್ಜಿ ನಮೂನೆಗಳನ್ನು ನೀಡುತ್ತದೆ. ಪ್ರತಿಯೊಂದೂ ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತದೆ. ಮೊದಲ ಬಾರಿಗೆ ಐಟಿಆರ್ ಅನ್ನು ಸಲ್ಲಿಸುತ್ತಿದ್ದರೆ ಯಾವ ಫಾರ್ಮ್ ಅನ್ನು ಭರ್ತಿ ಮಾಡಬೇಕೆಂದು ನಿರ್ಧರಿಸಲು ಸಹಾಯ ಮಾಡುವ ಮಾಹಿತಿ ಇಲ್ಲಿದೆ.
ಐಟಿಆರ್ ಫಾರ್ಮ್ 1
ವಾರ್ಷಿಕ ಆದಾಯ 50 ಲಕ್ಷ ರೂ. ವರೆಗಿನ ಸಂಬಳ ಪಡೆಯುವ ವ್ಯಕ್ತಿಗಳು ರಿಟರ್ನ್ಸ್ ಸಲ್ಲಿಸಲು ಈ ಫಾರ್ಮ್ ಅನ್ನು ಬಳಸುತ್ತಾರೆ. 50 ಲಕ್ಷ ರೂ. ವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. 5,000 ರೂ. ವರೆಗಿನ ಕೃಷಿ ಆದಾಯವೂ ಸೇರಿದೆ.
ಕಂಪೆನಿಯ ನಿರ್ದೇಶಕರಾಗಿದ್ದರೆ, ಪಟ್ಟಿ ಮಾಡದ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರೆ, ಬಂಡವಾಳದಿಂದ ಲಾಭ ಗಳಿಸಿದರೆ, ಒಂದಕ್ಕಿಂತ ಹೆಚ್ಚು ಮನೆ ಆಸ್ತಿಯಿಂದ ಆದಾಯವನ್ನು ಹೊಂದಿದ್ದರೆ ಅಥವಾ ವ್ಯಾಪಾರದಿಂದ ಗಳಿಸಿದರೆ ಈ ಫಾರ್ಮ್ ಅನ್ನು ಬಳಸಲಾಗುವುದಿಲ್ಲ.
ಐಟಿಆರ್ ಫಾರ್ಮ್ 2
ಆದಾಯವು 50 ಲಕ್ಷ ರೂ. ಗಿಂತ ಹೆಚ್ಚಿದ್ದರೆ ಫಾರ್ಮ್ 2 ಬಳಸಿ. ಈ ನಮೂನೆಯು ಒಂದಕ್ಕಿಂತ ಹೆಚ್ಚು ವಸತಿ ಆಸ್ತಿಯಿಂದ ಬರುವ ಆದಾಯ, ಹೂಡಿಕೆಯ ಮೇಲಿನ ಬಂಡವಾಳ ಲಾಭಗಳು ಅಥವಾ ನಷ್ಟಗಳು, 10 ಲಕ್ಷ ರೂ. ಗಿಂತ ಹೆಚ್ಚಿನ ಲಾಭಾಂಶ ಆದಾಯ ಮತ್ತು 5000 ರೂ. ಗಿಂತ ಹೆಚ್ಚಿನ ಕೃಷಿ ಆದಾಯವನ್ನು ಒಳಗೊಂಡಿರುತ್ತದೆ. ಪಿಎಫ್ ಮೇಲಿನ ಬಡ್ಡಿಯಿಂದ ಆದಾಯವನ್ನು ಹೊಂದಿದ್ದರೆ ಈ ಫಾರ್ಮ್ ಸಹ ಅನ್ವಯಿಸುತ್ತದೆ.
ಐಟಿಆರ್ ಫಾರ್ಮ್ 3
ಫಾರ್ಮ್ 3 ವ್ಯಾಪಾರ ಮಾಲೀಕರು, ಪಟ್ಟಿ ಮಾಡದ ಈಕ್ವಿಟಿ ಷೇರುಗಳಲ್ಲಿನ ಹೂಡಿಕೆದಾರರು ಅಥವಾ ಸಂಸ್ಥೆಯಲ್ಲಿ ಪಾಲುದಾರರಾಗಿ ಗಳಿಸುವವರಿಗೆ, ಬಡ್ಡಿ, ಸಂಬಳ, ಬೋನಸ್, ಬಂಡವಾಳ ಲಾಭಗಳು, ಕುದುರೆ ರೇಸಿಂಗ್, ಲಾಟರಿ ಅಥವಾ ಬಹು ಆಸ್ತಿಗಳಿಂದ ಬಾಡಿಗೆಯಿಂದ ಆದಾಯವನ್ನು ಹೊಂದಿದ್ದರೆ ಇದು ಅನ್ವಯಿಸುತ್ತದೆ. ಸ್ವತಂತ್ರೋದ್ಯೋಗಿಗಳು ಸಹ ಈ ಫಾರ್ಮ್ ಅನ್ನು ಬಳಸಬೇಕು.
ಐಟಿಆರ್ ಫಾರ್ಮ್ 4
ಈ ನಮೂನೆಯು 50 ಲಕ್ಷ ರೂ. ನಿಂದ 2 ಕೋಟಿ ರೂಪಾಯಿಗಳ ನಡುವಿನ ಆದಾಯವಿರುವ ವ್ಯವಹಾರಗಳು, ವೈದ್ಯರು ಅಥವಾ ವಕೀಲರಿಗಾಗಿ ಆಗಿದೆ. 50 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಸ್ವತಂತ್ರೋದ್ಯೋಗಿಗಳು ಸಹ ಈ ಫಾರ್ಮ್ ಅನ್ನು ಬಳಸಬೇಕು.
ಇದನ್ನೂ ಓದಿ: Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ
ಐಟಿಆರ್ ಫಾರ್ಮ್ 5
ಫಾರ್ಮ್ 5 ಸಂಸ್ಥೆಗಳು, ಎಲ್‌ಎಲ್‌ಪಿಗಳು, ಎಒಪಿಗಳು ಅಥವಾ ಬಿಒಐಗಳಾಗಿ ನೋಂದಾಯಿಸಲಾದ ಘಟಕಗಳಿಗೆ ಆಗಿದೆ. ಇದನ್ನು ಸಂಘಸಂಸ್ಥೆಗಳಿಗೂ ಬಳಸಲಾಗುತ್ತದೆ.
ಐಟಿಆರ್ ಫಾರ್ಮ್ 6 ಮತ್ತು 7
ಫಾರ್ಮ್ 6 ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ವಿನಾಯಿತಿ ಪಡೆಯದ ಕಂಪೆನಿಗಳಿಗೆ. ಫಾರ್ಮ್ 7 ಕಂಪೆನಿಗಳು ಮತ್ತು ವ್ಯಕ್ತಿಗಳಿಗೆ 139(4A), 139(4B), 139(4C), ಅಥವಾ 139(4D) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸಲು ಅಗತ್ಯವಿದೆ.