ಹಣದುಬ್ಬರವನ್ನು ಹತ್ತಿಕ್ಕುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಮೇ ತಿಂಗಳಿನಿಂದ ರೆಪೊ ದರವನ್ನು ೧.೪೦%ರಷ್ಟು ಏರಿಸಿತ್ತು. ಇದರ ಪರಿಣಾಮ ಬ್ಯಾಂಕ್‌ಗಳು ಸಾಲದ ಬಡ್ಡಿ ದರದಲ್ಲಿ ೦.೨೯% ಏರಿಸಿದ್ದರೂ, ಠೇವಣಿಗಳ ಬಡ್ಡಿ ದರದಲ್ಲಿ ಕೇವಲ ೦.೧೯% ಮಾತ್ರ ಏರಿಕೆ ಮಾಡಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ವರದಿಗಳು ತಿಳಿಸಿವೆ. ಮುಖ್ಯವಾಗಿ ಬ್ಯಾಂಕ್‌ಗಳ ( ವಿಸ್ತಾರ Money Guide) ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುವವರು ಇದನ್ನು ಗಮನಿಸಲೇಬೇಕು. ದೇಶದಲ್ಲಿ ಮಧ್ಯಮ ವರ್ಗದ ಆದಾಯ ಇರುವ ಜನತೆ ಸಾಮಾನ್ಯವಾಗಿ, ಪರಂಪರಾನುಗತವಾಗಿ ನೆಚ್ಚಿಕೊಂಡಿರುವ ಫಿಕ್ಸೆಡ್ ಡೆಪಾಸಿಟ್‌ಗಳ ಬಡ್ಡಿ ಆದಾಯ ನಿರೀಕ್ಷೆಯಂತೆ ಏರಿಕೆ ಆಗದಿದ್ದರೆ ಏನು ಮಾಡಬಹುದು? ಇಲ್ಲಿದೆ ಪರಿಹಾರ.
ಠೇವಣಿ ಬಡ್ಡಿ ದರ ಏರಿಕೆಯ ಮಂದಗತಿ
ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು, ಅಂದರೆ ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿ ದರವನ್ನು ಏರಿಸಿದ ತಕ್ಷಣವೇ ಬ್ಯಾಂಕ್‌ಗಳು ಆ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತವೆ. ಆದರೆ ಅದೇ ವೇಳೆ ಬ್ಯಾಂಕ್‌ಗಳು ಗ್ರಾಹಕರು ಇಡುವ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಸಲು ಮೀನಾಮೇಷ ಎಣಿಸುತ್ತವೆ. ಬ್ಯಾಂಕ್‌ಗಳು ಈ ಅಂತರವನ್ನು ಸಾಧ್ಯವಿರುವಷ್ಟು ಕಡಿಮೆ ಮಾಡಿದರೆ, ಹಣದುಬ್ಬರವನ್ನು ಎದುರಿಸಲು ಜನತೆಗೆ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವುದರಿಂದ ಸಹಾಯವಾಗುತ್ತದೆ. ಇಲ್ಲದಿದ್ದರೆ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಇಡುವುದರಿಂದ ಬ್ಯಾಂಕ್‌ಗೆ ಲಾಭವಾಗಬಹುದೇ ಹೊರತು ಠೇವಣಿದಾರರಿಗೆ ನಯಾಪೈಸೆ ಪ್ರಯೋಜನ ಸಿಗುವುದಿಲ್ಲ. ಬದಲಿಗೆ ಹಣದ ಮೌಲ್ಯವೇ ಸವಕಳಿಯಾಗುತ್ತದೆ.
ಠೇವಣಿ ದರ ೫.೬೫%, ಹಣದುಬ್ಬರ ೬.೭೧%
ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವವರು ಬಡ್ಡಿ ಎಷ್ಟು ಸಿಗುತ್ತದೆ ಎಂಬುದನ್ನು ನೋಡುವುದರ ಜತೆಗೆ, ಅದು ಹಣದುಬ್ಬರಕ್ಕಿಂತ ಹೆಚು ಇದೆಯೇ ಎಂಬುದನ್ನು ನೋಡಲೇಬೇಕು. ಇಲ್ಲದಿದ್ದರೆ ಪ್ರಯೋಜನ ಇಲ. ಉದಾಹರಣೆಗೆ ದೇಶದ ಅತಿ ದೊಡ್ಡ ಬ್ಯಾಂಕ್ ಇತ್ತೀಚೆಗೆ ನಿಶ್ಚಿತ ಠೇವಣಿ ದರವನ್ನು ೫.೬೫%ಕ್ಕೆ ಏರಿಸಿತ್ತು. ಆದರೆ ಕಳೆದ ಜುಲೈನಲ್ಲಿ ಹಣದುಬ್ಬರ ೬.೭೧% ರಷ್ಟಿದೆ. ಕಳೆದ ಹಲವು ತಿಂಗಳುಗಳಿಂದ ಹಣದುಬ್ಬರ ೬%ಕ್ಕಿಂತ ಮೇಲಿದೆ. ಇನ್ನೂ ಕೆಲ ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಿರುವಗ ೫.೬೫% ಬಡ್ಡಿಗೆ ಎಫ್.ಡಿಯಲ್ಲಿ ಹಣ ಇಡುವುದರಿಂದ ಲಾಭವಿಲ್ಲ. ಬ್ಯಾಂಕ್‌ಗೆ ಮಾತ್ರ ಲಾಭ. ಠೇವಣಿದಾರನಿಗೆ ವಾಸ್ತವವಾಗಿ ೧.೦೬% ನಷ್ಟವಾಗುತ್ತದೆ.
ಸಣ್ಣ ಉಳಿತಾಯಗಾರರು ಏನು ಮಾಡಬಹುದು?
- ಯಾವುದೇ ಸಾರ್ವಜನಿಕ, ಖಾಸಗಿ ಅಥವಾ ಸಹಕಾರಿ ಬ್ಯಾಂಕ್‌ಗಳ ಉಳಿತಾಯ ಠೇವಣಿಗಳಲ್ಲಿ ಹೂಡಿಕೆ ಮಾಡುವ ಸಂದರ್ಭ, ಹಣದುಬ್ಬರ ಮತ್ತು ಠೇವಣಿಗಳ ಬಡ್ಡಿ ದರವನ್ನು ಹೋಲಿಸಬೇಕು. ಠೇವಣಿಗಳಿಗೆ ಸಿಗುವ ಬಡ್ಡಿ ದರವು ಹಣದುಬ್ಬರಕ್ಕಿಂತ ಹೆಚ್ಚು ಇದ್ದರೆ ಮಾತ್ರ ನಿಮಗೆ ಲಾಭ ಎನ್ನುವುದನ್ನು ಮರೆಯಲೇಕೂಡದು. ಒಂದು ವೇಳೆ ಹಣದುಬ್ಬರಕ್ಕಿಂತಲೂ ಕಡಿಮೆ ಬಡ್ಡಿ ದರವನ್ನು ಠೇವಣಿಗೆ ಬ್ಯಾಂಕ್ ನಿಗದಿಪಡಿಸಿದರೆ, ಯಾವುದೇ ಪ್ರಯೋಜನ ಇಲ್ಲ. ಬದಲಿಗೆ ನಿಮ್ಮ ಹಣದ ಮೌಲ್ಯವೇ ನಷ್ಟವಾಗುವುದು ಎಂಬುದನ್ನು ಮರೆಯಕೂಡದು.
- ಹಣದುಬ್ಬರದ ಪ್ರಮಾಣಕ್ಕಿಂತ ಠೇವಣಿ ಬಡ್ಡಿ ದರ ಕಡಿಮೆಯಾಗಿದ್ದಾಗ, ಅವುಗಳ ಬದಲಿಗೆ ಪರ್ಯಾಯ ಹೂಡಿಕೆಯ ಸಾಧನಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.
- ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ ಇದುವರೆಗಿನ ಇತಿಹಾಸವನ್ನು ಗಮನಿಸಿದರೆ ಮ್ಯೂಚುವಲ್ ಫಂಡ್ಗಳಲ್ಲಿ ನಿಶ್ಚಿತ ಠೇವಣಿಗಿಂತ ಹೆಚ್ಚು ಆದಾಯ ಹೂಡಿಕೆದಾರರಿಗೆ ಲಭಿಸಿದೆ.
- ವೃತ್ತಿಪರ ಹಣಕಾಸು ಸಲಹೆಗಾರರನ್ನು ಭೇಟಿಯಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಸಲಹೆ ಪಡೆಯಬೇಕು.