ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೊ ದರವನ್ನು 6.25%ಕ್ಕೆ ಏರಿಸಿದೆ. ಅಂದರೆ 0.35% ಏರಿಸಿದೆ. ಇದರೊಂದಿಗೆ ರೆಪೊ ದರ ಆಧಾರಿತ ಗೃಹ ಸಾಲದ ಇಎಂಐ ಕೂಡ ಹೆಚ್ಚಳವಾಗಲಿದೆ. ವಿವರ (ರೆಪೊ ದರ ಏರಿಕೆ ಎಫೆಕ್ಟ್ ) ಇಲ್ಲಿದೆ.
30 ಲಕ್ಷ ರೂ. ಗೃಹ ಸಾಲದ ಇಎಂಐನಲ್ಲಿ 4,129 ರೂ. ಏರಿಕೆ
ಈ ವರ್ಷ ಮೇ ಬಳಿಕ ಇಲ್ಲಿಯವರೆಗೆ ಒಟ್ಟು ಬಡ್ಡಿ ದರ 2.25% ಹೆಚ್ಚಳವಾಗಿದೆ. ಆದ್ದರಿಂದ ಬಡ್ಡಿ ದರ 7% ರಿಂದ 9.25%ಕ್ಕೆ ಏರಿಕೆಯಾಗಿದೆ. ಈಗ ಒಂದು ಉದಾಹರಣೆ ನೋಡೋಣ.
ನೀವು 30 ಲಕ್ಷ ರೂ. ಗೃಹ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. 20 ವರ್ಷಗಳಿಗೆ ಮೊದಲಿದ್ದ ಬಡ್ಡಿ ದರ 7% ಹಾಗೂ 23,258 ರೂ. ಇಎಂಐ ಇರುತ್ತದೆ. ಆದರೆ ರೆಪೊ ದರ ಪರಿಷ್ಕರಣೆಯಿಂದಾಗಿ ಇನ್ನು ಮುಂದೆ ಕಟ್ಟಬೇಕಾಗುವ ಸಾಲದ ಮೇಲಿನ ಬಡ್ಡಿ ದರ 27,387 ರೂ.ಗೆ ಏರಿಕೆಯಾಗುತ್ತದೆ. ಅಂದರೆ ಇಎಂಐ 27,387 ರೂ.ಗೆ ಏರಿಕೆಯಾಗುತ್ತದೆ. 4,129 ರೂ. ಹೆಚ್ಚಳವಾಗುತ್ತದೆ.
ಗೃಹ ಸಾಲ ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರ ಪದ್ಧತಿಯನ್ನು ಹೊಂದಿದ್ದರೂ, ರೆಪೊ ದರ ಹೆಚ್ಚಳ ಅನ್ವಯವಾಗಲಿದೆ. ಬಹುತೇಕ ಬ್ಯಾಂಕ್‌ಗಳು ಕಳೆದ ಮೇ ತಿಂಗಳಿನಿಂದ ಇದುವರೆಗಿನ 1.90% ರೆಪೊ ದರ ಏರಿಕೆಯನ್ನು ಪೂರ್ಣವಾಗಿ ಸಾಲಗಾರರಿಗೆ ವರ್ಗಾಯಿಸಿವೆ.
ಭಾಗಶಃ ಪ್ರಿ-ಪೇಮೆಂಟ್ ಮಾಡಿಕೊಳ್ಳಿ
ನೀವು ಹೂಡಿಕೆ ಅಥವಾ ಉಳಿತಾಯ ಯೋಜನೆಯಲ್ಲಿ ಕಡಿಮೆ ಬಡ್ಡಿ ಗಳಿಸಿದ್ದರೆ, ಆ ಹಣವನ್ನು ನಿಮ್ಮ ಗೃಹ ಸಾಲದ ಭಾಗಶಃ ಅವಧಿಗೆ ಮುನ್ನ ಮರು ಪಾವತಿಗೆ (Pre-payment) ಬಳಸುವ ಮೂಲಕ ಗೃಹ ಸಾಲದ ಒಟ್ಟಾರೆ ವೆಚ್ಚವನ್ನು ಗಣನೀಯವಾಗಿ ಇಳಿಸಬಹುದು.
ನಿಮ್ಮ ಗೃಹ ಸಾಲದಲ್ಲಿ ಉಳಿದಿರುವ ಅವಧಿ ಎಷ್ಟೆಂಬುದರ ಮೇಲೆ, ರೆಪೊ ದರದ ಪರಿಣಾಮವೂ ನಿರ್ಧಾರವಾಗುತ್ತದೆ. ಒಂದು ವೇಳೆ ಮರು ಪಾವತಿಯ ಅವಧಿ ಸುದೀರ್ಘವಾಗಿದ್ದರೆ, ರೆಪೊ ದರ ಏರಿಕೆಯ ಹೊರೆಯೂ ಹೆಚ್ಚುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಅವಧಿಗೆ ಮುನ್ನ ಹೆಚ್ಚುವರಿ ಪಾವತಿಯಿಂದ ಇಎಂಐ ಮೇಲೆ ನಿಯಂತ್ರಣ ಸಾಧಿಸಬಹುದು ಎನ್ನುತ್ತಾರೆ ಬ್ಯಾಂಕ್ ಬಾಜಾರ್ ಡಾಟ್‌ಕಾಮ್‌ನ ಸಿಇಒ ಅದಿಲ್ ಶೆಟ್ಟಿ.
ಒಟ್ಟು ಸಾಲದ ಬ್ಯಾಲೆನ್ಸ್‌ನ 5% ಮೊತ್ತವನ್ನು ಪ್ರತಿ ವರ್ಷ ನೀವು ಮರು ಪಾವತಿಸಿದರೆ, ನಿಮ್ಮ 20 ವರ್ಷ ಅವಧಿಯ ಸಾಲವನ್ನು 12 ವರ್ಷಗಳಲ್ಲಿ ಮರು ಪಾವತಿಸಬಹುದು. ಪ್ರತಿ ವರ್ಷ ಒಂದು ಹೆಚ್ಚುವರಿ ಇಎಂಐ ಅನ್ನು ಕಟ್ಟಿದರೆ ನಿಮ್ಮ 20 ವರ್ಷಗಳ ಸಾಲವನ್ನು 17 ವರ್ಷಗಳಲ್ಲಿ ತೀರಿಸಿ ಸಾಲಮುಕ್ತರಾಗಬಹುದು. ನಿಮ್ಮ ಇಎಂಐನಲ್ಲಿ ಪ್ರತಿ ವರ್ಷ 10% ಏರಿಸಿದರೆ ಸಾಲವನ್ನು 10 ವರ್ಷಗಳಲ್ಲಿ ಪೂರ್ಣಗೊಳಿಸಬಹುದು ಎನ್ನುತ್ತಾರೆ ಅದಿಲ್ ಶೆಟ್ಟಿ.