Site icon Vistara News

Fixed deposit interest rate : ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಗಳ ಬಡ್ಡಿ ದರ ಏರಿಕೆ ಸಂಭವ: ಆರ್‌ಬಿಐ ಸುಳಿವು

cash

ಮುಂಬಯಿ: ಸಣ್ಣ ಉಳಿತಾಯಗಾರರಿಗೆ ಇದು ಸಿಹಿ ಸುದ್ದಿ. ಬ್ಯಾಂಕ್‌ಗಳು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಏರಿಸುತ್ತಿವೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಏರಿಕೆಯಾಗಬಹುದು ಎಂದು ಆರ್‌ಬಿಐ ತನ್ನ (Reserve Bank of India) ಮಾಸಿಕ ಬುಲೆಟಿನ್‌ನಲ್ಲಿ ಸುಳಿವು ನೀಡಿದೆ. ಆರ್‌ಬಿಐ ತನ್ನ ರೆಪೊ ದರವನ್ನು ಏರಿಸಿದ ಬಳಿಕ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ಪಡೆಯುವ ಫಂಡ್‌ ಮೇಲಿನ ವೆಚ್ಚ ಹೆಚ್ಚುತ್ತಿದೆ. ಹೀಗಾಗಿ ಫಿಕ್ಸೆಡ್‌ ಡೆಪಾಸಿಟ್‌ಗಳಿಗೆ ಬಡ್ಡಿ ದರವನ್ನು ಹೆಚ್ಚಿಸಿ ಫಂಡ್‌ ಸಂಗ್ರಹಿಸಲು ಮುಂದಾಗಿವೆ. ಇದರ ಪರಿಣಾನವಾಗಿ ಎಫ್‌ಡಿ ಬಡ್ಡಿ ದರ ವೃದ್ಧಿಸಲು ಬ್ಯಾಂಕ್‌ಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಆರ್‌ಬಿಐ ಕಳೆದ ವರ್ಷ ಮೇ ಬಳಿಕ ಅಲ್ಪಾವಧಿಯ ಸಾಲದ ಮೇಲಿನ ಬಡ್ಡಿ ದರದಲ್ಲಿ ಒಟ್ಟಾರೆಯಾಗಿ 2.25% ಏರಿಕೆ ಮಾಡಿತ್ತು. ಇದರ ಪರಿಣಾಮ ಇತ್ತೀಚಿಗೆ ಎಫ್‌ಡಿ ಬಡ್ಡಿ ದರಗಳೂ ವೃದ್ಧಿಸಿರುವುದನ್ನು ಗಮನಿಸಬಹುದು.

ಸಾಲದ ವಿತರಣೆಯಲ್ಲೂ ಇತ್ತೀಚೆಗೆ ಏರುಗತಿ ಉಂಟಾಗಿದೆ. ಕೋವಿಡ್‌ ಬಿಕ್ಕಟ್ಟಿನ ಬಳಿಕ ಭಾರತದ ಆರ್ಥಿಕತೆ ಚುರುಕಾಗಿರುವುದರಿಂದ ಸಾಲದ ವಿತರಣೆ ಕೂಡ ವೃದ್ಧಿಸಿದೆ ಎಂದು ಆರ್‌ಬಿಐ ತಿಳಿಸಿದೆ. ಹಿರಿಯ ನಾಗರಿಕರಿಗೆ ಈಗ ಬ್ಯಾಂಕ್‌ಗಳಲ್ಲಿ (ಎಸ್‌ಬಿಐ) ಎಫ್‌ಡಿಗೆ 7.50% ಬಡ್ಡಿ ಸಿಗುತ್ತದೆ. ಖಾಸಗಿ ವಲಯದ ಬ್ಯಾಂಕ್‌ಗಳು 8.25% ತನಕ ಬಡ್ಡಿ ದರ ನೀಡುತ್ತಿರುವುದು ಗಮನಾರ್ಹ ಎನ್ನುತ್ತಾರೆ ತಜ್ಞರು.

ಹಣದುಬ್ಬರ ಹೆಚ್ಚಳಕ್ಕೆ ಕಳವಳ:

ದೇಶದಲ್ಲಿ ಚಿಲ್ಲರೆ ಹಣದುಬ್ಬರ ಈಗಲೂ ಉನ್ನತ ಮಟ್ಟದಲ್ಲಿ ಮುಂದುವರಿದಿರುವುದಕ್ಕೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಂಗಳವಾರ ತನ್ನ ಮಾಸಿಕ ಬುಲೆಟಿನ್‌ನಲ್ಲಿ ಕಳವಳ ವ್ಯಕ್ತಪಡಿಸಿದೆ. ( Retail inflation) ಮೂಲ ಹಣದುಬ್ಬರ (core inflation) ಹೆಚ್ಚಳದ ಪರಿಣಾಮ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ ಎಂದು ತಿಳಿಸಿದೆ.

ರಿಟೇಲ್‌ ಹಣದುಬ್ಬರ 2023ರ ಜನವರಿಯಲ್ಲಿ 6.52% ಮತ್ತು ಫೆಬ್ರವರಿಯಲ್ಲಿ 6.44% ರಷ್ಟಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 8% ಅಧಿಕ ಹಣದುಬ್ಬರ ಇತ್ತು. ಛತ್ತೀಸ್‌ಗಢ, ದಿಲ್ಲಿ, ಗೋವಾ, ಹಿಮಾಚಲಪ್ರದೇಶ, ಮಣಿಪುರದಲ್ಲಿ 4% ಕ್ಕಿಂತ ಕಡಿಮೆ ಹಣದುಬ್ಬರ ಇತ್ತು ಎಂದು ಆರ್‌ಬಿಐ ಬುಲೆಟಿನ್‌ ತಿಳಿಸಿದೆ.

ಭಾರತ ಪ್ರಗತಿಪರ ಮಾರುಕಟ್ಟೆಯಾಗಿದ್ದು, ವಿತ್ತೀಯ ಕೊರತೆ ( current account deficit) ಇದೆ. ಉಳಿತಾಯದ ಪ್ರಮಾಣ ಇಳಿಕೆಯಾಗಿದ್ದರೂ, ವಿದೇಶಿ ಸಂಪನ್ಮೂಲದ ಪೂರೈಕೆಯಿಂದ ಭರಿಸಲಾಗುತ್ತಿದೆ. ಹೀಗಾಗಿ ಉದ್ದೇಶಿತ ಹೂಡಿಕೆ ಸಾಧ್ಯವಾಗುತ್ತಿದೆ ಎಂದು ಆರ್‌ಬಿಐ ಬುಲೆಟಿನ್‌ ತಿಳಿಸಿದೆ.

ಜಗತ್ತಿನ ಹಲವಾರು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಆರ್ಥಿಕತೆ 2023ರಲ್ಲಿ ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದರೂ, ಭಾರತವು ಕೋವಿಡ್‌ ಬಿಕ್ಕಟ್ಟಿನ ಬಳಿಕ ಆರ್ಥಿಕವಾಗಿಯೂ ಚೇತರಿಸಿಕೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.

Exit mobile version