ಹಲವಾರು ಬ್ಯಾಂಕ್‌ಗಳು ಇತ್ತೀಚೆಗೆ ತಮ್ಮ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇತ್ತೀಚೆಗೆ ಏರಿಸಿವೆ. ಈ ಬೆಳವಣಿಗೆಯ ನಂತರ ಎಫ್‌ಡಿಗಳು ಈಗ ಸ್ವಲ್ಪ ಹೆಚ್ಚು ಆದಾಯ ನೀಡುತ್ತವೆ. ಹೀಗಿದ್ದರೂ, ಸಣ್ಣ ಉಳಿತಾಯ ಖಾತೆಗಳು ಈಗಲೂ ಬಹುತೇಕ ಎಫ್‌ಡಿಗಿಂತಲೂ ಹೆಚ್ಚಿನ ಆದಾಯವನ್ನು ಕೊಡುತ್ತವೆ. ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಈಗ 7.6% ತನಕ ಬಡ್ಡಿ ಆದಾಯವನ್ನು ನೀಡುತ್ತವೆ. (ವಿಸ್ತಾರ Money Guide) ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಸುಮಾರು 6% ಬಡ್ಡಿ ಒದಗಿಸುತ್ತವೆ.
ಏನಿದು ಸಣ್ಣ ಉಳಿತಾಯ ಯೋಜನೆಗಳು?
ಸಣ್ಣ ಉಳಿತಾಯ ಯೋಜನೆಗಳು ಜನತೆಯಲ್ಲಿ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಯೋಜನೆಗಳು. ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು, 1-3 ವರ್ಷಗಳ ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ ಪತ್ರ, ಸುಕನ್ಯಾ ಸಮೃದ್ಧಿ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಇಂಥ ಯೋಜನೆಗಳಾಗಿವೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ: ಸಣ್ಣ ಉಳಿತಾಯ ಯೋಜನೆಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ. ಕಳೆದ ಜೂನ್ 30ರ ಬಳಿಕ ಯಥಾಸ್ಥಿತಿಯಲ್ಲಿದೆ. ಸರ್ಕಾರಿ ಸಾಲಪತ್ರಗಳ (ಬಾಂಡ್) ಉತ್ಪತ್ತಿಯನ್ನು ಆಧರಿಸಿ ಸಣ್ಣ ಉಳಿತಾಯ ಬಡ್ಡಿ ದರಗಳು ನಿರ್ಧಾರವಾಗುತ್ತವೆ.
ಅಂಚೆ ಇಲಾಖೆಯ ಠೇವಣಿಗಳು
ಅಂಚೆ ಇಲಾಖೆಯ ಉಳಿತಾಯ ಠೇವಣಿಗಳು ವಾರ್ಷಿಕ 4% ಬಡ್ಡಿ ನೀಡುತ್ತವೆ. 1-3 ವರ್ಷ ಅವಧಿಯ ಠೇವಣಿಗಳು ಈಗ ವಾರ್ಷಿಕ 5.5% ಬಡ್ಡಿ ಕೊಡುತ್ತವೆ. 5 ವರ್ಷ ಅವಧಿಯ ಠೇವಣಿ 6.7% ಬಡ್ಡಿ ನೀಡುತ್ತವೆ. 5 ವರ್ಷಗಳ ರಿಕರಿಂಗ್ ಡಿಪಾಸಿಟ್‌ಗಳು 5.8% ಬಡ್ಡಿ ಆದಾಯ ವಿತರಿಸುತ್ತವೆ. ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್‌ಗಳು ಮತ್ತು ಕಿಸಾನ್ ವಿಕಾಸ ಪತ್ರಗಳು ವಾರ್ಷಿಕ ಅನುಕ್ರಮವಾಗಿ 6.8% ಮತ್ತು 6.9% ಬಡ್ಡಿ ನೀಡುತ್ತವೆ. ಸಾರ್ವಜನಿಕ ಭವಿಷ್ಯನಿಧಿ 7.1%, ಸುಕನ್ಯಾ ಸಮೃದ್ಧಿ ಖಾತೆ 7.6%, ಹಿರಿಯ ನಾಗರಿಕರ ಉಳಿತಾಯ ಯೋಜನೆ 7.4% ಬಡ್ಡಿ ಆದಾಯ ಕೊಡುತ್ತವೆ. ಮಾಸಿಕ ಆದಾಯ ಖಾತೆಯಲ್ಲಿ 6.6% ಬಡ್ಡಿ ಲಭ್ಯವಿದೆ.
ನಿಶ್ಚಿತ ಠೇವಣಿಗಳಲ್ಲಿ ಬಡ್ಡಿ (ಎಫ್‌ಡಿ): ಹಲವಾರು ಬ್ಯಾಂಕ್‌ಗಳು ತಮ್ಮ ನಿಶ್ಚಿತ ಠೇವಣಿ ( ಎಫ್‌ಡಿ) ಬಡ್ಡಿ ದರಗಳನ್ನು ಇತ್ತೀಚೆಗೆ ಪರಿಷ್ಕರಿಸಿವೆ. ಎಸ್‌ಬಿಐ ಸಾರ್ವಜನಿಕರಿಗೆ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗೆ 2.90%ರಿಂದ 5.65% ತನಕ ಬಡ್ಡಿ ಆದಾಯ ಕೊಡುತ್ತವೆ. ಇದು ಎಫ್‌ಡಿಯ ಅವಧಿಯನ್ನು ಅವಲಂಬಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನಲ್ಲಿ ಎಫ್‌ಡಿಗಳಿಗೆ ೨.೭೫%ರಿಂದ 6.1% ತನಕ ಬಡ್ಡಿ ಆದಾಯ ನೀಡುತ್ತದೆ. ಪಿಎನ್‌ಬಿ 3%ರಿಂದ 5.75% ತನಕ ಬಡ್ಡಿ ಕೊಡುತ್ತದೆ. ಇವುಗಳನ್ನು ಹೋಲಿಸಿದರೆ ಈಗಲೂ ಬ್ಯಾಂಕ್ ಎಫ್‌ಡಿಗಿಂತ ಹೆಚ್ಚು ಬಡ್ಡಿ ದರವನ್ನು ಪಿಪಿಎಫ್, ಎನ್‌ಎಸ್‌ಸಿ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆಗಳು ನೀಡುತ್ತಿರುವುದನ್ನು ಗಮನಿಸಬಹುದು.
ಇದನ್ನೂ ಓದಿ: ವಿಸ್ತಾರ Money Guide| ಅಂಚೆ ಉಳಿತಾಯ ಗ್ರಾಹಕರಿಗೆ ನೂತನ ಸೇವೆ, ಮೊಬೈಲ್‌ನಲ್ಲೇ ಸಕಲ ಮಾಹಿತಿ