ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಸಲು (ITR Filing) ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಆದರೆ ಗಡಿಬಿಡಿಯಲ್ಲಿ ಐಟಿಆರ್ ಸಲ್ಲಿಸಿ ತೊಂದರೆ ಪಡುವವರೂ ಇದ್ದಾರೆ. 2024- 25ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಗಡುವು ಮುಗಿದರೂ ದಂಡ ಸಹಿತ ರಿಟರ್ನ್ (ITR Filing With penalty) ಸಲ್ಲಿಕೆಗೆ ಅವಕಾಶವಿದೆ.
ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಇಮೇಲ್ ಮತ್ತು ಎಸ್‌ಎಂಎಸ್‌ಗಳ ಮೂಲಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೆನಪಿಸುತ್ತಿದೆ. ಹೀಗಾಗಿ ಹೆಚ್ಚಿನವರು ಕೂಡಲೇ ಐಟಿಆರ್ ಸಲ್ಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುತ್ತಾರೆ.
ಪ್ರತಿ ಜುಲೈನಲ್ಲಿ ತೆರಿಗೆ ಇಲಾಖೆಯು ಗಡುವು ಮುಗಿಯುವವರೆಗೆ ತೆರಿಗೆದಾರರಿಗೆ ನಿಗದಿತ ದಿನಾಂಕವನ್ನು ನಿರಂತರವಾಗಿ ನೆನಪಿಸುತ್ತಿರುತ್ತದೆ. ಐಟಿಆರ್ ಸಲ್ಲಿಕೆಗೆ ಈ ವರ್ಷದ ಗಡುವನ್ನು ವಿಸ್ತರಿಸುವ ಸಾಧ್ಯತೆಯ ಬಗ್ಗೆ ಆದಾಯ ತೆರಿಗೆ ಇಲಾಖೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಅಂತಿಮ ಗಡುವು ಯಾವಾಗ?
ತೆರಿಗೆ ಲೆಕ್ಕಪರಿಶೋಧನೆಯ ಅಗತ್ಯವಿರುವ ತೆರಿಗೆದಾರರಿಗೆ ಐಟಿಆರ್ ಫೈಲ್ ಮಾಡಲು 2024ರ ಅಕ್ಟೋಬರ್ 31ರವರೆಗೆ ಅವಕಾಶವಿದೆ. ಆರ್ಥಿಕ ವರ್ಷ 2024-25ಗಾಗಿ ಪರಿಷ್ಕೃತ ಮತ್ತು ತಡವಾದ ರಿಟರ್ನ್‌ಗಳನ್ನು ಸಲ್ಲಿಸಲು ಅಂತಿಮ ಗಡುವು 2024ರ ಡಿಸೆಂಬರ್ 31 ಆಗಿದೆ.
ತೆರಿಗೆ ಸಲ್ಲಿಸುವಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆಯು ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಿವಿಧ ಐಟಿಆರ್ ಫಾರ್ಮ್‌ಗಳು ಮತ್ತು ಎಕ್ಸೆಲ್ ಮಾಹಿತಿಗಳನ್ನು ನಿರ್ಧಿಷ್ಟ ವೆಬ್‌ಸೈಟ್ ಮೂಲಕ ಪ್ರಕಟಿಸುತ್ತದೆ. ಆದರೂ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಫಾರ್ಮ್ 16 ಅನ್ನು ಉದ್ಯೋಗದಾತರಿಂದ ಸ್ವೀಕರಿಸಲು ಕಾಯುತ್ತಾರೆ. ಸಾಮಾನ್ಯವಾಗಿ ಇದನ್ನು ಜೂನ್ ಕೊನೆಯಲ್ಲಿ ಅಥವಾ ಜುಲೈ ಆರಂಭದಲ್ಲಿ ವಿತರಿಸಲಾಗುತ್ತದೆ.
ಐಟಿಆರ್ ಫೈಲಿಂಗ್‌ಗೆ ಜುಲೈ 31 ಅಂತಿಮ ದಿನಾಂಕದೊಂದಿಗೆ ತೆರಿಗೆದಾರರು ಹಿಂದಿನ ಹಣಕಾಸು ವರ್ಷದ ಎಲ್ಲಾ ಆದಾಯ ಮತ್ತು ಹೂಡಿಕೆ ವಿವರಗಳನ್ನು ಕ್ರೋಡೀಕರಿಸಲು ಮತ್ತು ತಮ್ಮ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಏಪ್ರಿಲ್ 1ರಿಂದ ಜುಲೈ 31 ರವರೆಗೆ ನಾಲ್ಕು ತಿಂಗಳ ಅವಧಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ
ಎಷ್ಟು ದಂಡ?
ಜುಲೈ 31ರ ಗಡುವಿನ ನಂತರ ಐಟಿಆರ್ ಸಲ್ಲಿಸುವುದರಿಂದ ದಂಡ ಪಾವತಿಸಬೇಕಾಗುತ್ತದೆ. ನಿವ್ವಳ ತೆರಿಗೆಯ ಆದಾಯವು 5 ಲಕ್ಷ ರೂ. ವರೆಗೆ ಇದ್ದರೆ ತಡವಾಗಿ ತೆರಿಗೆ ರಿಟರ್ನ್‌ಗೆ ಗರಿಷ್ಠ ದಂಡ 1,000 ರೂ ಆಗಿದೆ.
5 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಾದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.