ವೇತನದಾರರು ಮತ್ತು ವೈಯಕ್ತಿಕ ತೆರಿಗೆದಾರರಿಗೆ ಈ ೨೦೨೨-೨೩ ಸಾಲಿನ ಆದಾಯ ತೆರಿಗೆ ರಿಟರ್ನ್ (Income tax return) ಸಲ್ಲಿಸಲು ಇದೇ ಜುಲೈ ೩೧ ಕೊನೆಯ ದಿನವಾಗಿದೆ. ತಪ್ಪಿದರೆ ದಂಡ ಕೂಡ ಕಟ್ಟಬೇಕಾಗಿ ಬರಬಹುದು. ಆದ್ದರಿಂದ ತಪ್ಪದಿರಿ. ನೀವು ವೇತನದಾರರಾಗಿದ್ದು, ಕಚೇರಿಯಿಂದ Form-16 ಪಡೆದಿದ್ದರೆ ಸಾಧ್ಯವಾದಷ್ಟು ಬೇಗ ಐಟಿಆರ್ ಸಲ್ಲಿಸಿ.
ವೇತನದಾರರು ಮಾತ್ರವಲ್ಲದೆ ಹಿಂದೂ ಅವಿಭಜಿತ ಕುಟುಂಬಗಳಿಗೆ (ಎಚ್‌ಯುಎಫ್) ಕೂಡ ಇದೇ ಕೊನೆ ದಿನವಾಗಿದೆ. ಭಿನ್ನ ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆಗೆ ಕೊನೆ ದಿನ ಕೂಡ ಭಿನ್ನವಾಗಿದೆ. ಇದನ್ನು ತಿಳಿಯುವುದು ಅವಶ್ಯಕ.
ವೇತನದಾರರು ಮತ್ತು ವೈಯಕ್ತಿಕ ತೆರಿಗೆದಾರರಿಗೆ : ವೇತನದಾರರು ಮತ್ತು ವೈಯಕ್ತಿಕ ತೆರಿಗೆದಾರರಿಗೆ ಇದೇ ಜುಲೈ ೩೧ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಲೆಕ್ಕ ಪರಿಶೋಧನೆಯ (Audit) ಅಗತ್ಯ ಇಲ್ಲದಿರುವ ಹಿಂದೂ ಅವಿಭಜಿತ ಕುಟುಂಬಗಳಿಗೆ ( Hindu Undivided Families- HUF) ಕೂಡ ಜುಲೈ ೩೧ ಕೊನೆ ದಿನವಾಗಿದೆ.
ಲೆಕ್ಕ ಪರಿಶೋಧನೆ ಅಗತ್ಯ ಇರುವವರಿಗೆ : ಲೆಕ್ಕಪರಿಶೋಧನೆಯ ಅಗತ್ಯ ಇರುವ ತೆರಿಗೆದಾರರಿಗೆ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ೨೦೨೨ ಅಕ್ಟೋಬರ್ ೩೧ ಆಗಿದೆ. ಈ ವರ್ಗದ ತೆರಿಗೆದಾರರಲ್ಲಿ ಕಂಪನಿ ನಡೆಸುವವರು, ಕಂಪನಿಯಲ್ಲಿ ಪಾಲುದಾರಿಕೆ ಇರುವವರು, ಕಂಪನಿಗಳು ಬರುತ್ತವೆ. ಇಂಥವರ ಅಕೌಂಟ್‌ಗಳ ಲೆಕ್ಕ ಪರಿಶೋಧನೆಯ ಅಗತ್ಯ ಇರುತ್ತದೆ.
ದಂಡದ ವಿವರ : ೨೦೨೨ರ ಜುಲೈ ೩೧ರ ಬಳಿಕ ಐಟಿಆರ್ ಸಲ್ಲಿಸುವ ವೈಯಕ್ತಿಕ ತೆರಿಗೆದಾರರು ವಿಳಂಬ ಶುಲ್ಕ ೫,೦೦೦ ರೂ. ಪಾವತಿಸಬೇಕಾಗುತ್ತದೆ. ಹೀಗಿದ್ದರೂ, ವಾರ್ಷಿಕ ಆದಾಯ ೫ ಲಕ್ಷ ರೂ.ಗಿಂತ ಕೆಳಗಿದ್ದರೆ ವಿಳಂಬ ಶುಲ್ಕ ೧,೦೦೦ ರೂ. ಆಗಿರುತ್ತದೆ.
ಸೆಕ್ಷನ್ ೯೨ ಇ : ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗಳನ್ನು ನಡೆಸಿರುವ ತೆರಿಗೆದಾರರು ವರದಿಯನ್ನು ಸೆಕ್ಷನ್ ೯೨ಇ ಅಡಿಯಲ್ಲಿ ನೀಡಬೇಕು. ಇಂಥವರಿಗೆ ೨೦೨೨ ನವೆಮಬರ್ ೩೦ ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಐಟಿಆರ್ ಸಲ್ಲಿಕೆ ಎಲ್ಲಿ? ತೆರಿಗೆದಾರರು ೨೦೨೨-೨೩ರ ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಪೋರ್ಟಲ್ ಮೂಲಕ ಐಟಿ ರಿಟರ್ನ್ ಸಲ್ಲಿಸಬಹುದು. (https://incometaxindia.gov.in)