ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್ (Mahila Samman Savings Scheme) ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಯಾಗಿದ್ದು, ಭಾರತದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಲಭ್ಯವಿದೆ. ಯಾವುದೇ ವಯಸ್ಸಿನ ಮಹಿಳೆ ಅಥವಾ ಬಾಲಕಿಯ ಹೆಸರಿನಲ್ಲಿ ಈ ಯೋಜನೆಯ ಲಾಭ ಪಡೆಯಬಹುದು.
ಆದಾಯದ ಲೆಕ್ಕಾಚಾರ ಹೇಗೆ ನಡೆಯುತ್ತದೆ? ಮಹಿಳಾ ಸೇವಿಂಗ್ಸ್ ಸ್ಕೀಮ್‌ನಲ್ಲಿ ಬಡ್ಡಿಯನ್ನು ಮೆಚ್ಯೂರಿಟಿ ವೇಳೆ ನೀಡುತ್ತಾರೆ. ಮೂರು ತಿಂಗಳೊಗೊಮ್ಮೆ ಬಡ್ಡಿ ಒದಗಿಸುತ್ತಾರೆ. ಸರಳ ಬಡ್ಡಿಯ ಲೆಕ್ಕಾಚಾರದಲ್ಲಿ ಇದು ನಡೆಯುತ್ತದೆ. ಪ್ರತಿ ವಾರ ಇದರ ಲೆಕ್ಕ ನಡೆಯುತ್ತದೆ. ಅಂಚೆ ಕಚೇರಿಯ ಟೈಮ್ ಡಿಪಾಸಿಟ್ ಮಾದರಿಯಲ್ಲಿ ಇದು ಇರುತ್ತದೆ.
ಉದಾಹರಣೆಗೆ ನೀವು ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್‌ನಲ್ಲಿ 2 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಮೊದಲ ಮೂರು ತಿಂಗಳಿನಲ್ಲಿ 3,750 ರೂ. ಬಡ್ಡಿಯನ್ನು ಪಡೆಯುತ್ತೀರಿ. ಎರಡನೇ ತ್ರೈಮಾಸಿಕದಲ್ಲಿ ಈ ಬಡ್ಡಿ ಹಣವನ್ನು ಮರು ಹೂಡಿಕೆ ಮಾಡಿದರೆ 3,820 ರೂ. ಬಡ್ಡಿ ಪಡೆಯುತ್ತೀರಿ. ಹೀಗೆ ಮಾಡುತ್ತಾ .ಹೋದರೆ ಬಾಂಡ್ ಮೆಚ್ಯೂರಿಟಿ ವೇಳೆಗೆ 2,32,044 ರೂ. ಪಡೆಯುತ್ತೀರಿ. 2023ರಿಂದ 2025ರ ನಡುವೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್ ಅಡಿಯಲ್ಲಿ ಎರಡು ವರ್ಷಗಳ ಅವಧಿಗೆ 7.5% ಬಡ್ಡಿ ಸಿಗುತ್ತದೆ. ಇದರಲ್ಲಿ ಸಿಗುವ ಬಡ್ಡಿ ಆದಾಯಕ್ಕೆ ಟಿಡಿಎಸ್ ಅನ್ವಯವಾಗುತ್ತದೆ.
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್ ಅಡಿಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಬಡ್ಡಿ ಆದಾಯ 40,000 ರೂ. ಮೀರಿದರೆ ಟಿಡಿಎಸ್ ಅನ್ವಯವಾಗುತ್ತದೆ. 2023-24ರ ಬಜೆಟ್‌ನಲ್ಲಿ ಇದನ್ನು ಪರಿಚಯಿಸಲಾಗಿತ್ತು. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್‌ನಲ್ಲಿ ಎಲ್ಲ ಮಹಿಳೆಯರೂ ತಮ್ಮ ವಯಸ್ಸು, ಉದ್ಯೋಗದ ಭೇದವಿಲ್ಲದೆ ಹೂಡಿಕೆ ಮಾಡಬಹುದು. ಸರ್ಕಾರದ ಗ್ಯಾರಂಟಿಯೂ ಇರುವುದರಿಂದ ಅತ್ಯಂತ ಸುರಕ್ಷಿತ.
ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್‌ನಲ್ಲಿ ಏನೇನಿದೆ?
ಈ ಯೋಜನೆಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಹಣವನ್ನು ಠೇವಣಿ ಇಡಬಹುದು. ಇಡಬಹುದಾದ ಠೇವಣಿಯ ಗರಿಷ್ಠ ಮೊತ್ತ 2 ಲಕ್ಷ ರೂ. ಎರಡು ವರ್ಷಗಳಿಗೆ ಡಿಪಾಸಿಟ್ ಇಡಬಹುದು. ಇದಕ್ಕೆ ಸಿಗುವ ಬಡ್ಡಿ ದರ 7.5%. ಈ ಹೂಡಿಕೆಗೆ ಯಾವುದೇ ತೆರಿಗೆ ಅನುಕೂಲಗಳು ಇಲ್ಲ. ಆದರೆ ಭಾಗಶಃ ಹಿಂತೆಗೆತ ಸಾಧ್ಯ. ಈ ಉಳಿತಾಯ ಠೇವಣಿ ಪತ್ರಗಳು ಎರಡು ವರ್ಷದ ಅವಧಿಗೆ ದೊರೆಯಲಿದೆ. ಅಂದರೆ 2025ರ ಮಾರ್ಚ್ ತನಕದ ಅವಧಿಗೆ ಲಭ್ಯವಿದೆ. ಮಹಿಳೆಯರಿಗೆ ಇದರಲ್ಲಿ ಹೆಚ್ಚು ಬಡ್ಡಿ ದರ ಸಿಗುವುದರಿಂದ ಉಳಿತಾಯ ಮಾಡಲು ಉತ್ತೇಜನ ಸಿಗಲಿದೆ ಎನ್ನುತ್ತಾರೆ ಆರ್ಥಿಕ ಸಲಹೆಗಾರರು.
ಸರ್ಟಿಫಿಕೆಟ್ ಎಲ್ಲಿ, ಯಾವಾಗ ಸಿಗುತ್ತದೆ? ಸುಕನ್ಯಾ ಸಮೃದ್ಧಿಯಂತೆ ಸಮೀಪದ ಪೋಸ್ಟ್ ಆಫೀಸ್‌ಗಳಲ್ಲಿ ಮಹಿಳಾ ಸಮ್ಮಾನ್ ಸರ್ಟಿಫಿಕೆಟ್ ಪಡೆಯಬಹುದಾಗಿದೆ. ಮುಂದೆ ಆಯ್ದ ಕೆಲವು ಬ್ಯಾಂಕ್‌ಗಳಲ್ಲೂ ಈ ಸರ್ಟಿಫಿಕೆಟ್ ಪಡೆಯಬಹುದು.
ಸುಕನ್ಯಾ ಸಮೃದ್ಧಿಗೂ ಎಂಎಸ್‌ಎಸ್‌ಸಿಗೂ ಇರುವ ವ್ಯತ್ಯಾಸ ಏನು?
ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಇರುವಂಥದ್ದು. 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಇದರ ಅವಧಿ 21 ವರ್ಷ. 15ನೇ ವರ್ಷದ ತನಕ ಹೂಡಿಕೆ ಮಾಡಬಹುದು. ಬಾಲಕಿಗೆ 18 ವರ್ಷ ಆಗುವ ತನಕ ಸುಕನ್ಯಾ ಸಮೃದ್ಧಿಯಲ್ಲಿ ಹಣ ಲಾಕ್ ಆಗಿರುತ್ತದೆ. ಬಳಿಕ ಶಿಕ್ಷಣ ಉದ್ದೇಶಕ್ಕೆ ಮಾತ್ರ 50% ಹಿಂಪಡೆಯಬಹುದು. ಎರಡೂ ಯೋಜನೆಗಳು ಉಳಿತಾಯಕ್ಕೆ ಉತ್ತೇಜಿಸುತ್ತದೆ. ಎಂಎಸ್‌ಎಸ್‌ಸಿ ಎರಡು ವರ್ಷಗಳ ಸಂಕ್ಷಿಪ್ತ ಅವಧಿಯ ಠೇವಣಿ ಯೋಜನೆ. ಆದ್ದರಿಂದ ದೀರ್ಘಾವಧಿ ಉಳಿತಾಯ ಯೋಜನೆಯಾಗಿರುವ ಸುಕನ್ಯಾ ಸಮೃದ್ಧಿ ಜತೆ ಹೋಲಿಸಲಾಗದು.
ಬ್ಯಾಂಕ್‌ಗಳಲ್ಲಿ ಮಹಿಳೆಯರಿಗೆ ಠೇವಣಿಗೆ ಸಿಗುವ ಬಡ್ಡಿ ದರಕ್ಕೆ ಹೋಲಿಸಿದರೆ ಮಹಿಳಾ ಸಮ್ಮಾನ್‌ನಲ್ಲಿ ಹೆಚ್ಚು ಸಿಗಲಿದೆ. ಉದಾಹರಣೆಗೆ ಎಸ್‌ಬಿಐನಲ್ಲಿ ಗರಿಷ್ಠ 7.25%, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 7% ಸಿಗುತ್ತದೆ.
ಇದನ್ನೂ ಓದಿ: ವಿಸ್ತಾರ Money Guide : ಪ್ರೀಮಿಯಂ ಕಟ್ಟಿದ ಮೇಲೆ ವಿಮೆ ಪಾಲಿಸಿ ಬೇಡವೆಂದರೆ ನಿಮ್ಮ ಹಣ ವಾಪಸ್