Site icon Vistara News

Money Guide: ಎಚ್‌ಡಿಎಫ್‌ಸಿಯಿಂದ ಎಸ್‌ಬಿಐವರೆಗೆ; ಫಿಕ್ಸೆಡ್‌ ಡೆಪಾಸಿಟ್‌ಗೆ ಶೇ. 7ಕ್ಕಿಂತ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳಿವು

Money Guide

Money Guide

ಬೆಂಗಳೂರು: ಸ್ಥಿರ ಠೇವಣಿ (Fixed Deposits)ಯನ್ನು ಅಪಾಯ ಇಷ್ಟಪಡದ ಹೂಡಿಕೆದಾರರ ಮೊದಲ ಆಯ್ಕೆ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಎಫ್‌ಡಿ ಮೇಲಿನ ಬಡ್ಡಿದರ ಸಹ ಉತ್ತಮವಾಗಿವೆ. ಉತ್ತಮ ಆದಾಯ ಮತ್ತು ಕಡಿಮೆ ಅಪಾಯ ಹೊಂದಿರುವುದರಿಂದಲೇ ಇದು ಹಲವರ ನೆಚ್ಚಿನ ಆಯ್ಕೆಯಾಗಿದೆ. ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. ಇದೀಗ ಎಚ್‌ಡಿಎಫ್‌ಸಿ ಬ್ಯಾಂಕ್‌ ಸೇರಿ ಸುಮಾರು 5 ಬ್ಯಾಂಕ್‌ಗಳು ನಿಶ್ಚಿತ ಠೇವಣಿ ಮೇಲೆ ಶೇ. 7ರಷ್ಟು ಬಡ್ಡಿ ನೀಡುವುದಾಗಿ ಘೋಷಿಸಿವೆ. ಈ ಬಗೆಗಿನ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌

ಎಚ್‌ಡಿಎಫ್‌ಸಿ ಬ್ಯಾಂಕ್ 18ರಿಂದ 21 ತಿಂಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 7.25ರಷ್ಟು ಗರಿಷ್ಠ ಬಡ್ಡಿದರವನ್ನು ನೀಡುತ್ತಿದೆ. ಜತೆಗೆ 2 ವರ್ಷ 11 ತಿಂಗಳಿನಿಂದ 35 ತಿಂಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 7.15ರಷ್ಟು ಬಡ್ಡಿಯನ್ನು ಒದಗಿಸುತ್ತದೆ. ಅವಧಿ ಒಂದು ವರ್ಷದಿಂದ 15 ತಿಂಗಳವರೆಗೆ ಇದ್ದರೆ ಬಡ್ಡಿ ಶೇ. 6.60. ಅವಧಿ 2 ವರ್ಷದಿಂದ 2 ವರ್ಷದ 11 ತಿಂಗಳ ನಡುವೆ ಇದ್ದಾಗ ಬಡ್ಡಿ ಶೇ. 7ರಷ್ಟಿರುತ್ತದೆ. ಅಲ್ಪಾವಧಿಯ ಸ್ಥಿರ ಠೇವಣಿಗಳಿಗೆ ಬಡ್ಡಿದರಗಳು ಶೇ. 3ರಿಂದ 6ರ ನಡುವೆ ಇರುತ್ತವೆ.

ಐಸಿಐಸಿಐ ಬ್ಯಾಂಕ್‌

ಐಸಿಐಸಿಐ ಬ್ಯಾಂಕ್ ಒಂದು ವರ್ಷದಿಂದ 15 ತಿಂಗಳ ಅವಧಿಯ ಎಫ್‌ಡಿಗಳಿಗೆ ಶೇ. 6.7, 15 ತಿಂಗಳಿನಿಂದ 2 ವರ್ಷಗಳವರೆಗಿನ ಅವಧಿಗೆ ಶೇ. 7.20 ಮತ್ತು 2-5 ವರ್ಷಗಳ ಅವಧಿಗೆ ಶೇ. 7ರಷ್ಟು ಬಡ್ಡಿ ನೀಡುತ್ತದೆ. ಅಲ್ಪಾವಧಿಯ ಸ್ಥಿರ ಠೇವಣಿಗಳಿಗೆ ಬಡ್ಡಿದರವು ಶೇಕ. 3ರಿಂದ 6ರ ನಡುವೆ ಇರುತ್ತದೆ.

ಕೋಟಕ್‌ ಮಹೀಂದ್ರಾ ಬ್ಯಾಂಕ್‌

ಕೋಟಕ್‌ ಮಹೀಂದ್ರಾ ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿಯ ಅವಧಿ 390 ದಿನಗಳಿಂದ 391 ದಿನಗಳವರೆಗೆ ಇದ್ದರೆ ಶೇ. 7.4ರಷ್ಟು ಬಡ್ಡಿದರ ಲಭಿಸುತ್ತದೆ. 23 ತಿಂಗಳಿನಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಬಡ್ಡಿ ಶೇ. 7.3. ಇನ್ನು 2-3 ವರ್ಷಗಳ ಅವಧಿಗೆ ಶೇ. 7.15, 3-5 ವರ್ಷಗಳ ನಡುವಿನ ಅವಧಿಗೆ ಶೇ. 7 ಮತ್ತು ಅಲ್ಪಾವಧಿಯ ಸ್ಥಿರ ಠೇವಣಿಗಳಿಗೆ . 2.75ರಿಂದ 6.50ರವರೆಗೆ ಬಡ್ಡಿ ಲಭ್ಯ.

ಪಂಜಾಬ್ ನ್ಯಾಷನಲ್ ಬ್ಯಾಂಕ್

ಎಫ್‌ಡಿಗೆ ಉತ್ತಮ ಬಡ್ಡಿ ದರ ನೀಡಿವ ಬ್ಯಾಂಕ್‌ಗಳ ಪೈಕಿ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ಕೂಡ ಒಂದು ಎನಿಸಿಕೊಂಡಿದೆ. ತನ್ನ ಠೇವಣಿದಾರರಿಗೆ 400 ದಿನಗಳ ಠೇವಣಿಗಳ ಮೇಲೆ ಶೇ. 7.30, 300 ದಿನಗಳಿಗೆ ಶೇ. 7.10, ಒಂದು ವರ್ಷಕ್ಕೆ ಶೇ. 6.8 ಮತ್ತು ಎರಡು ವರ್ಷದ ಅವಧಿಗೆ ಶೇ. 6.85ರಷ್ಟು ಬಡ್ಡಿ ನೀಡುತ್ತದೆ. ಇನ್ನು 2-3 ವರ್ಷಗಳ ಅವಧಿಗೆ ಶೇ. 7.05, ಅಲ್ಪಾವಧಿಗೆ ಶೇ. 4.55ರಿಂದ 6.80 ಬಡ್ಡಿದರ ಲಭ್ಯ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಥಿರ ಠೇವಣಿ 2ರಿಂದ 3 ವರ್ಷಗಳ ನಡುವೆ ಇದ್ದರೆ ಗರಿಷ್ಠ ಬಡ್ಡಿದರವಾದ ಶೇ. 7 ರಷ್ಟು ನೀಡುತ್ತದೆ. 3-5 ವರ್ಷಗಳ ಅವಧಿಯ ಠೇವಣಿಗಳಿಗೆ ಶೇ. 6.75, 5 ವರ್ಷಗಳಿಗಿಂತ ಹೆಚ್ಚಿದ್ದರೆ ಶೇ. 6.5, ಒಂದು ವರ್ಷಕ್ಕಿಂತ ಕಡಿಮೆಯಿದ್ದಾಗ ಶೇ. 3.5ರಿಂದ 6.80ರ ನಡುವೆ ಇರುತ್ತದೆ.

ಇದನ್ನೂ ಓದಿ: Money Guide: ಸುರಕ್ಷತೆಗೆ ಆದ್ಯತೆ; ಪಾವತಿ ವಿಧಾನ ಸರಳಗೊಳಿಸಿದೆ ಮೊಬಿಕ್ವಿಕ್ ಪಾಕೆಟ್ ಯುಪಿಐ

Exit mobile version