ಬೆಂಗಳೂರು: ಮನೆ ನಿರ್ಮಾಣಕ್ಕೆ ಸಾಲ ಪಡೆದುಕೊಂಡಿದ್ದೀರಿ ಅಥವಾ ತುರ್ತು ಅಗತ್ಯಕ್ಕಾಗಿ ಪರ್ನನಲ್ ಲೋನ್‌ಗೆ ಅಪ್ಲೈ ಮಾಡಿ ಅದು ಮಂಜೂರಾಗಿದೆ. ಆದರೆ ನೀವು ಉದ್ದೇಶಿಸಿದ ಕಾರ್ಯ ಪೂರ್ಣಗೊಳ್ಳುವ ಮೊದಲೇ ಹಣ ಖಾಲಿಯಾಗಿದೆ. ಇನ್ನೂ ಸ್ವಲ್ಪ ದುಡ್ಡಿನ ಅಗತ್ಯ ಇದೆ. ಈ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತದೆ. ಅರ್ಧದಲ್ಲೇ ಮುಗಿದ ಕಾರ್ಯವನ್ನೂ ಹೇಗೆಪ್ಪ ಪೂರ್ತಿಗೊಳಿಸವುದು ಎನ್ನುವ ಚಿಂತೆ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುವುದೇ ಟಾಪ್ ಅಪ್ ಲೋನ್ (Top-Up Loan). ಜನ ಸಾಮಾನ್ಯರ ಆಪತ್ಬಾಂಧವ ಎನಿಸಿಕೊಂಡಿರುವ ಟಾಪ್ ಅಪ್ ಲೋನ್ ಎಂದರೇನು? ಇದನ್ನು ಪಡೆಯುವುದು ಹೇಗೆ? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಂದಿನ ಮನಿಗೈಡ್ (Money Guide) ಉತ್ತರಿಸಲಿದೆ.
ಟಾಪ್ ಅಪ್ ಲೋನ್ ಎಂದರೇನು?
ಮೊದಲಿಗೆ ಟಾಪ್ ಅಪ್ ಲೋನ್ ಎಂದರೇನು ಎನ್ನುವುದನ್ನು ನೋಡೋಣ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅಸ್ತಿತ್ವದಲ್ಲಿರುವ ಸಾಲದ ಮೇಲೆ ನಿಮಗೆ ಹೆಚ್ಚುವರಿ ಮೊತ್ತವನ್ನು ನೀಡುವುದನ್ನು ಟಾಪ್ ಅಪ್ ಲೋನ್ ಎಂದು ಕರೆಯಲಾಗುತ್ತದೆ. ಈ ಆಯ್ಕೆಯು ಸಾಮಾನ್ಯವಾಗಿ ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಕಾರು ಸಾಲಗಳಂತಹ ವಿವಿಧ ರೀತಿಯ ಸಾಲಗಳಿಗೆ ಲಭ್ಯ. ಉದಾಹರಣೆಗೆ ನೀವು ಮನೆ ನಿರ್ಮಾಣಕ್ಕೆ ಸಾಲ ಪಡೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ಮನೆ ಅರ್ಧವಾಗುವಷ್ಟರಲ್ಲಿ ಸಾಲದ ಮೊತ್ತ ಖಾಲಿಯಾಯಿತು. ಪೂರ್ಣಗೊಳಿಸಲು ಇನ್ನೊಂದಿಷ್ಟು ಹಣ ಬೇಕು. ಆಗ ಟಾಪ್ ಅಪ್ ಲೋನ್ ಸೌಲಭ್ಯದ ಮೂಲಕ ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಯಮಿತವಾಗಿ ಇಎಂಐ ಕಟ್ಟುವವರಿಗೆ ಟಾಪ್ ಅಪ್ ಲೋನ್ ಸುಲಭವಾಗಿ ಲಭಿಸುತ್ತದೆ.
ವೈಶಿಷ್ಟ್ಯ
- ಉದ್ದೇಶ: ಟಾಪ್ ಅಪ್ ಲೋನ್ಗಳನ್ನು ಮನೆ ನವೀಕರಣಕ್ಕೆ, ಉನ್ನತ ಶಿಕ್ಷಣ ಹೊಂದಲು, ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ಅಥವಾ ಇತರ ಯಾವುದೇ ಹಣಕಾಸಿನ ಅಗತ್ಯಗಳಿಗೆ ಬಳಸಬಹುದು.
- ಅರ್ಹತೆ: ಟಾಪ್ ಅಪ್ ಲೋನ್‌ಗೆ ಅರ್ಹರಾಗಲು ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಸಾಲದ ಮೇಲೆ ಉತ್ತಮ ಮರುಪಾವತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿರಬೇಕು. ಟಾಪ್-ಅಪ್ ಲೋನ್ ಅನುಮೋದಿಸುವ ಮೊದಲು ಬ್ಯಾಂಕ್‌ಗಳು ಸಾಲಗಾರನ ಮರುಪಾವತಿ ಇತಿಹಾಸ, ಕ್ರೆಡಿಟ್ ಸ್ಕೋರ್, ಆದಾಯ ಸ್ಥಿರತೆ ಮತ್ತು ಇತರ ಅಂಶಗಳನ್ನು ಪರಿಶೀಲಿಸುತ್ತದೆ.
- ಸಾಲದ ಮೊತ್ತ: ಟಾಪ್ ಅಪ್ ಲೋನ್‌ಗೆ ಲಭ್ಯವಿರುವ ಗರಿಷ್ಠ ಸಾಲದ ಮೊತ್ತವು ಅಸ್ತಿತ್ವದಲ್ಲಿರುವ ಸಾಲದ ಬಾಕಿ ಮೊತ್ತ, ಸಾಲಗಾರನ ಮರುಪಾವತಿ ಸಾಮರ್ಥ್ಯ ಮತ್ತು ಬ್ಯಾಂಕ್ನ ನೀತಿಯಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ.
- ಬಡ್ಡಿ ದರ: ಈ ಮಾದರಿ ಸಾಲದ ಬಡ್ಡಿದರಗಳು ಸಾಮಾನ್ಯವಾಗಿ ಮೂಲ ಸಾಲದ ಮೇಲಿನ ಬಡ್ಡಿದರಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತವೆ. ಆದಾಗ್ಯೂ ಈ ದರಗಳು ಸಾಮಾನ್ಯವಾಗಿ ಪರ್ಸನಲ್ ಲೋನ್‌ನ ಬಡ್ಡಿದರಗಳಿಗಿಂತ ಕಡಿಮೆಯಿರುತ್ತವೆ.
ಟಾಪ್ ಅಪ್ ಲೋನ್‌ನ ವಿಧಗಳು
- ಹೋಮ್ ಲೋನ್ ಟಾಪ್ ಅಪ್: ಇದು ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಧ. ಅಸ್ತಿತ್ವದಲ್ಲಿರುವ ಗೃಹ ಸಾಲವನ್ನು ಹೊಂದಿರುವವರು ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲದೆ ತಮ್ಮ ಹೆಚ್ಚಿನ ಹಣಕಾಸು ಅಗತ್ಯಗಳನ್ನು ಪೂರೈಸಲು ಟಾಪ್ ಅಪ್ಗೆ ಅರ್ಜಿ ಸಲ್ಲಿಸಬಹುದು.
- ಪರ್ಸನಲ್ ಲೋನ್ ಟಾಪ್ ಅಪ್: ಕೆಲವು ಬ್ಯಾಂಕ್‌ಗಳು ಅಸ್ತಿತ್ವದಲ್ಲಿರುವ ವೈಯಕ್ತಿಕ ಸಾಲಗಳ ಮೇಲೆ ಟಾಪ್ ಅಪ್ಗಳನ್ನು ನೀಡುತ್ತವೆ. ಬ್ಯಾಂಕ್ಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಗ್ರಾಹಕರು ಇದನ್ನು ಪಡೆಯಬಹುದು.
- ಕಾರು ಲೋನ್ ಟಾಪ್ ಅಪ್: ಕಾರು ಸಾಲ ತೆಗೆದುಕೊಂಡ ವ್ಯಕ್ತಿಗಳಿಗೆ ಕೆಲವು ಬ್ಯಾಂಕ್‌ಗಳು ತಮ್ಮ ವಾಹನ ಅಥವಾ ಇತರ ಹಣಕಾಸು ಅಗತ್ಯಗಳಿಗೆ ಹೆಚ್ಚುವರಿ ಲೋನ್ ಹೊಂದುವ ಆಯ್ಕೆ ನೀಡುತ್ತವೆ.
ಬಡ್ಡಿದರ, ನಿಬಂಧನೆಗಳು ಆಯಾ ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಹೀಗಾಗಿ ಅರ್ಜಿ ಸಲ್ಲಿಸಲುವ ಮುನ್ನ ಎಲ್ಲ ವಿವರಗಳಲ್ಲಿ ತಿಳಿದುಕೊಳ್ಳಿ.