Site icon Vistara News

Money Guide: ಪಾರ್ಟ್‌ ಟೈಮ್‌ ಜಾಬ್‌ ಹುಡುಕುತ್ತಿದ್ದೀರಾ? ಇಲ್ಲಿದೆ ವಿಫುಲ ಅವಕಾಶ

work from home

work from home

ಬೆಂಗಳೂರು: ಪ್ರಸ್ತುತ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ದುಬಾರಿಯಾಗಿದೆ. ಉತ್ತಮ ಜೀವನ ಸಾಗಿಸಲು ಆರ್ಥಿಕವಾಗಿ ಸದೃಢವಾಗುವುದು ಅನಿವಾರ್ಯ ಎನಿಸಿಕೊಂಡಿದೆ. ಅದಕ್ಕಾಗಿ ಬಹುತೇಕರು ಉದ್ಯೋಗದ ಜತೆಗೆ ಪಾರ್ಟ್‌ ಟೈಂ ಜಾಬ್‌ನತ್ತ ಗಮನ ಹರಿಸುತ್ತಾರೆ. ಇಂದಿನ ಮನಿಗೈಡ್‌ (Money Guide) ಮನೆಯಲ್ಲೇ ಕೂತು ಮಾಡಬಹುದಾದ ಉದ್ಯೋಗಾವಕಾಶಗಳ ಬಗ್ಗೆ ವಿವರಿಸಲಿದೆ.

ಫ್ರೀಲಾನ್ಸಿಂಗ್: ಕೌಶಲ್ಯಗಳನ್ನು ಆದಾಯವಾಗಿ ಪರಿವರ್ತಿಸಿ

ಮನೆಯಿಂದಲೇ ಹಣವನ್ನು ಗಳಿಸುವ ಅತ್ಯಂತ ಜನಪ್ರಿಯ ಮಾರ್ಗಗಳಲ್ಲಿ ಫ್ರೀಲಾನ್ಸಿಂಗ್ ಪ್ರಮುಖವಾದುದು. ಅಪ್‌ವರ್ಕ್‌, ಫ್ರೀಲಾನ್ಸರ್ ಮತ್ತು ಫೈವರ್‌ (Upwork, Freelancer, and Fiverr)ನಂತಹ ಪ್ಲಾಟ್‌ಫಾರ್ಮ್‌ಗಳು ನುರಿತ ವೃತ್ತಿಪರರನ್ನು ಪ್ರಪಂಚದಾದ್ಯಂತದ ಗ್ರಾಹಕರೊಂದಿಗೆ ಸಂಪರ್ಕಿಸುತ್ತವೆ. ಬರವಣಿಗೆ, ಗ್ರಾಫಿಕ್ ವಿನ್ಯಾಸ, ಪ್ರೋಗ್ರಾಮಿಂಗ್ ಅಥವಾ ಡಿಜಿಟಲ್ ಮಾರ್ಕೆಟಿಂಗ್ ಹೀಗೆ ನಿಮ್ಮ ಕೌಶಲ್ಯ ಯಾವುದೇ ಆಗಿರಲಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ.

ಆನ್‌ಲೈನ್‌ ಟ್ಯೂಷನ್‌: ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಿ

ಶಿಕ್ಷಣವು ಡಿಜಿಟಲ್‌ನತ್ತ ಹೊರಳಿರುವುದರಿಂದ ಆನ್‌ಲೈನ್‌ ಬೋಧನೆಗೆ ಬೇಡಿಕೆ ಹೆಚ್ಚಾಗಿದೆ. ನೀವು ನಿರ್ದಿಷ್ಟ ವಿಷಯ ಅಥವಾ ಕೌಶಲ್ಯದಲ್ಲಿ ಪರಿಣತಿಯನ್ನು ಹೊಂದಿದ್ದರೆ ಆನ್‌ಲೈನ್‌ ಬೋಧಕರಾಗಬಹುದು. ಉದಾಹರಣೆಗೆ ನೀವು ಯೋಗದಲ್ಲಿ ಪರಿಣಿತಿ ಹೊಂದಿದ್ದರೆ ಆನ್‌ಲೈನ್‌ ಮೂಲಕ ತರಗತಿ ನಡೆಸಬಹುದು. ಚೆಗ್ ಟ್ಯೂಟರ್ಸ್, ಟ್ಯೂಟರ್‌.ಕಾಮ್‌ ಮತ್ತು ವೇದಾಂತು(Chegg Tutors, Tutor.com, Vedantu)ನಂತಹ ವೆಬ್‌ಸೈಟ್‌ಗಳು ವಿವಿಧ ವಯಸ್ಸಿನ ಮತ್ತು ವಿವಿಧ ಕಡೆಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿ ಪಡಿಸಬಹುದು ಮತ್ತು ದರವನ್ನು ನೀವೇ ನಿರ್ಧರಿಸಬಹುದು.

ಅಫಿಲಿಯೇಟ್‌ ಮಾರ್ಕೆಟಿಂಗ್‌ (Affiliate Marketing)

ಅಫಿಲಿಯೇಟ್‌ ಮಾರ್ಕೆಟಿಂಗ್‌ನಿಂದಲೂ ನೀವು ಆದಾಯ ಗಳಿಸಬಹುದು. ಬ್ಲಾಗ್, ವೆಬ್‌ಸೈಟ್‌ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚುರ ಪಡಿಸಬಹುದು. ನೀವು ಹಂಚಿಕೊಳ್ಳುವ ಲಿಂಕ್ ಮೂಲಕ ಖರೀದಿ ಮಾಡಿದಾಗ, ನೀವು ಕಮಿಷನ್ ಗಳಿಸುತ್ತೀರಿ. ನೀವು ಗಣನೀಯ ಪ್ರಮಾಣದ ಆನ್‌ಲೈನ್‌ ಫಾಲೋವರ್ಸ್‌ ಹೊಂದಿದ್ದರೆ ಮತ್ತು ಆನ್‌ಲೈನ್ ಮಾರ್ಕೆಟಿಂಗ್‌ನಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹಣ ಗಳಿಸಬಹುದು.

ಆನ್‌ಲೈನ್ ಸಮೀಕ್ಷೆ

ಆನ್‌ಲೈನ್ ಸಮೀಕ್ಷೆಗಳಲ್ಲಿ ಭಾಗವಹಿಸುವುದು ಮತ್ತು ಉತ್ಪನ್ನಗಳ ಬಗ್ಗೆ ವಿಮರ್ಶೆಗಳನ್ನು ಬರೆಯುವುದರಿಂದಲೂ ಸ್ವಲ್ಪ ಮಟ್ಟಿನ ದುಡ್ಡು ಸಂಪಾದಿಸಬಹುದು. ಸ್ವಾಗ್ ಬಕ್ಸ್, ಸರ್ವೇ ಜಂಕಿ ಮತ್ತು ಅಮೆಜಾನ್ ಮೆಕ್ಯಾನಿಕಲ್ ಟರ್ಕ್ (Swagbucks, Survey Junkie, Amazon Mechanical Turk)ನಂತಹ ವೆಬ್‌ಸೈಟ್‌ಗಳು ನಿಮ್ಮ ಸಮಯ ಮತ್ತು ಪ್ರತಿಕ್ರಿಯೆಗೆ ಒಂದಷ್ಟು ಹಣವನ್ನು ಪಾವತಿಸುತ್ತವೆ.

ಇ-ಕಾಮರ್ಸ್‌: ಆನ್‌ಲೈನ್‌ ಮಾರಾಟ ಜಾಲ ಆರಂಭಿಸಿ

ನಿಮ್ಮದೇ ಸ್ವಂತ ಆನ್‌ಲೈನ್ ಸ್ಟೋರ್ ಪ್ರಾರಂಭಿಸುವುದು ಕೂಡ ಲಾಭದಾಯಕ ಉದ್ಯಮ. ಶಾಪಿಫೈ, ವೂಕಾಮರ್ಸ್ ಮತ್ತು ಅಮೆಜಾನ್ (Shopify, WooCommerce Amazon)ನಂತಹ ಫ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ನಿಮಗೆ ಅನುಮತಿ ನೀಡುತ್ತದೆ.

ಒಟ್ಟಿನಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶಗಳ ಕ್ಷೇತ್ರ ವಿಶಾಲವಾಗಿದೆ ಮತ್ತು ನಿರಂತರವಾಗಿ ವಿಸ್ತಾರವಾಗುತ್ತಲೇ ಇದೆ. ಅಂತರ್ಜಾಲದ ಶಕ್ತಿ ಮತ್ತು ನಿಮ್ಮ ಪ್ರತಿಭೆಗಳನ್ನು ಬಳಸಿಕೊಳ್ಳುವ ಮೂಲಕ ಆದಾಯವನ್ನು ಗಳಿಸಲು ನೀವು ವೈವಿಧ್ಯಮಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕೌಶಲ್ಯ ಮತ್ತು ಜೀವನಶೈಲಿಗೆ ಯಾವುದು ಸೂಕ್ತ ಎಂಬುದನ್ನು ಮೊದಲೇ ನಿರ್ಧರಿಸುವುದು ಮುಖ್ಯ.

ಇದನ್ನೂ ಓದಿ: Money Guide: ತೆರಿಗೆ ಕಡಿತ ಇಲ್ಲದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Exit mobile version