Site icon Vistara News

Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

500 notes

500 notes

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಂತದಲ್ಲಿದ್ದೇವೆ. ಹೀಗಾಗಿ ಸರ್ಕಾರ ಕೆಲವೊಂದು ಹಣಕಾಸು ನಿಯಮಗಳಲ್ಲಿ ಭಾರೀ (Financial Rules Change) ಬದಲಾವಣೆಗೆ ಮುಂದಾಗಿದೆ. ಒಂದಷ್ಟು ನಿಯಮಗಳು ಜನರಿಗೆ ಅನುಕೂಲವಾಗಿದ್ದರೆ, ಮತ್ತೊಂದಿಷ್ಟು ನಿಯಮಗಳು ನಾಗರಿಕರ ಜೇಬಿಗೆ ಭಾರವಾಗಲಿವೆ. ಇನ್ನೂ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳದಿದ್ದರೆ ನಮಗೇ ನಷ್ಟವಾಗುತ್ತದೆ. ಜತೆಗೆ ದಂಡವೂ ಬೀಳುತ್ತದೆ. ಹಾಗಾದರೆ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇವು ಹೇಗೆ ನಮ್ಮ ಮೇಲೆ ಬೀಳುತ್ತದೆ? ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಆಧಾರ್‌ ಕಾರ್ಡ್‌ ಉಚಿತ ಅಪ್‌ಡೇಟ್‌: ಮಾರ್ಚ್‌ 14

ಆಧಾರ್‌ ಕಾರ್ಡ್‌ನಲ್ಲಿ ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದಾದ ಅವಕಾಶ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India-UIDAI) ನೀಡಿದ್ದ ಅವಕಾಶ 2024ರ ಮಾರ್ಚ್‌ 14ಕ್ಕೆ ಮುಗಿಯಲಿದ್ದು, ಅದಕ್ಕಿಂತ ಮೊದಲೇ ಮಾಡಿಸಿಕೊಳ್ಳಬೇಕು. https://myaadhaar.uidai.gov.in/ ವೆಬ್‌ಸೈಟ್‌ ಭೇಟಿ ನೀಡಿ ಉಚಿತವಾಗಿ ನವೀಕರಿಸಿ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ: ಮಾರ್ಚ್‌ 31

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ಎಸ್‌ಬಿಐ ವಿಕೇರ್‌ ಸೀನಿಯರ್‌ ಸಿಟಿಜನ್‌ ಎಫ್‌ಡಿ: ಮಾರ್ಚ್‌ 31

ಎಸ್‌ಬಿಐ ವಿಕೇರ್‌ (SBI WeCare) 7.50% ಬಡ್ಡಿ ಒದಗಿಸುತ್ತದೆ. ಹಿರಿಯ ನಾಗರಿಕರು ಹೂಡಿಕೆ ಮಾಡಲು ಮಾರ್ಚ್‌ 31 ಕೊನೆಯ ದಿನ.

ಎಸ್‌ಬಿಐ ಗೃಹ ಸಾಲದ ಬಡ್ಡಿದರ ರಿಯಾಯಿತಿ: ಮಾರ್ಚ್ 31

ಎಸ್‌ಬಿಐ ಗೃಹ ಸಾಲಗಳ ಮೇಲಿನ ವಿಶೇಷ ಅಭಿಯಾನದ ರಿಯಾಯಿತಿ ಮಾರ್ಚ್ 31, 2024ರ ವರೆಗೆ ಅನ್ವಯವಾಗುತ್ತದೆ. ಎಲ್ಲ ಗೃಹ ಸಾಲಗಳಿಗೆ ಈ ರಿಯಾಯಿತಿ ಮಾನ್ಯವಾಗಿರುತ್ತದೆ. ಸಿಬಿಲ್ ಸ್ಕೋರ್ ಅನ್ನು ಅವಲಂಬಿಸಿ ಗೃಹ ಸಾಲದ ಮೇಲಿನ ಬಡ್ಡಿದರವು ಬದಲಾಗುತ್ತದೆ.

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಗಡುವು: ಮಾರ್ಚ್‌ 15

ಮಾರ್ಚ್‌ 15ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ವಿಧಿಸಿದೆ. ಗ್ರಾಹಕರ ಖಾತೆಗಳಲ್ಲಿ ಠೇವಣಿ, ಸಾಲ ವಹಿವಾಟು ಮತ್ತು ಟಾಪ್-ಅಪ್​ಗಳನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನೀಡಿದ್ದ ಗಡುವನ್ನು ಮಾರ್ಚ್‌ 15ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಫೆಬ್ರವರಿ 29ರ ವರೆಗೆ ಗಡುವು ನೀಡಲಾಗಿತ್ತು.

ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿ: ಮಾರ್ಚ್‌ 31

ಐಡಿಬಿಐ ಬ್ಯಾಂಕ್ ಉತ್ಸವ್ ಕ್ಯಾಲಬಲ್ ಎಫ್‌ಡಿ 300 ದಿನಗಳು, 375 ದಿನಗಳು ಮತ್ತು 444 ದಿನಗಳ ವಿಶೇಷ ಅವಧಿಯ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಇದು ಕ್ರಮವಾಗಿ 7.05%, 7.10% ಮತ್ತು 7.25% ಬಡ್ಡಿದರಗಳನ್ನು ನೀಡುತ್ತದೆ. ಇದು ಮಾರ್ಚ್ 31, 2024ರ ವರೆಗೆ ಅನ್ವಯವಾಗುತ್ತದೆ.

ತೆರಿಗೆ ಉಳಿತಾಯ ಯೋಜನೆ: ಮಾರ್ಚ್‌ 31

2023-2024ರ ಹಣಕಾಸು ವರ್ಷದ ತೆರಿಗೆ ಉಳಿತಾಯ ಯೋಜನೆ ಪೂರ್ಣಗೊಳಿಸುವ ಗಡುವು ಮಾರ್ಚ್ 31. ಏಪ್ರಿಲ್ 1, 2023ರಲ್ಲಿ ಹೊಸ ತೆರಿಗೆ ನಿಯಮ ಜಾರಿಯಾಗಿತ್ತು. ಹೊಸ ತೆರಿಗೆ ವ್ಯವಸ್ಥೆಯು ಹಣಕಾಸು ವರ್ಷ 2023-2024ರಿಂದ ಡೀಫಾಲ್ಟ್ ಆಗಿದೆ. ಆದ್ದರಿಂದ ಉದ್ಯೋಗಿಗಳು ಏಪ್ರಿಲ್ 2023ಕ್ಕಿಂತ ಮೊದಲು ತೆರಿಗೆ ಆಡಳಿತವನ್ನು ಆಯ್ಕೆ ಮಾಡಬೇಕು.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ನ ಕನಿಷ್ಠ ಮೊತ್ತದ ನಿಯಮ: ಮಾರ್ಚ್‌ 15

ಎಸ್‌ಬಿಐ ಕ್ರೆಡಿಟ್ ಕಾರ್ಡ್ ದಿನಕ್ಕೆ ಕನಿಷ್ಠ ಬಿಲ್‌ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುತ್ತಿದೆ. ಹೊಸ ನಿಯಮಗಳು ಮಾರ್ಚ್ 15ರಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಕಾರ್ಡ್ ಹೊಂದಿರುವವರಿಗೆ ಮಾಹಿತಿ ನೀಡಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಮುಂಗಡ ತೆರಿಗೆ ಪಾವತಿಯ ನಾಲ್ಕನೇ ಕಂತು ಕೊನೆಯ ದಿನ: ಮಾರ್ಚ್ 15

2023-24ರ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆಯ ನಾಲ್ಕನೇ ಕಂತನ್ನು ಠೇವಣಿ ಮಾಡಲು 2024ರ ಮಾರ್ಚ್ 15 ಕೊನೆಯ ದಿನಾಂಕ. ಮುಂಗಡ ತೆರಿಗೆಯನ್ನು ಜಮಾ ಮಾಡುವಂತೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ನಿರಂತರ ಸಂದೇಶ ಕಳುಹಿಸುತ್ತಿದೆ.

ಇದನ್ನೂ ಓದಿ: Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?

Exit mobile version