ಬೆಂಗಳೂರು: ಭಾರತೀಯರಿಗೆ ಚಿನ್ನಾಭರಣ ಎಂದರೆ ಬಹು ಪ್ರಿಯ. ಪ್ರಪಂಚದಲ್ಲಿ ಅತೀ ಹೆಚ್ಚು ಚಿನ್ನ ಬಳಸುವ ದೇಶಗಳ ಪೈಕಿ ಭಾರತವೂ ಒಂದು. 2,000 ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ನಿಷೇಧಿಸಿದ ಬಳಿಕವಂತೂ ಚಿನ್ನದ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಈ ಮಧ್ಯೆ ನಾವು ಮನೆಯಲ್ಲಿ ದಾಖಲೆ ಇಲ್ಲದೆ ಎಷ್ಟು ಬೇಕಾದರೂ ಚಿನ್ನವನ್ನು ಸಂಗ್ರಹಿಸಿ ಇಡಬಹುದಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾನೂನು ಪ್ರಕಾರ ನಾವು ಇಟ್ಟುಕೊಳ್ಳಬಹುದಾದ ಚಿನ್ನಕ್ಕೆ ಮಿತಿ ಇದೆ. ಮಿತಿಗಿಂತ ಹೆಚ್ಚು ಚಿನ್ನವನ್ನು ಇಟ್ಟುಕೊಳ್ಳುವುದಿದ್ದರೆ ಅದರ ಲೆಕ್ಕವನ್ನು ನಾವು ಆದಾಯ ಇಲಾಖೆಗೆ ನೀಡಬೇಕಾಗುತ್ತದೆ. ಹಾಗಾದರೆ ಚಿನ್ನದ ಕುರಿತಾದ ಕಾನೂನು (Gold Tax) ಏನು ಹೇಳುತ್ತದೆ? ಎಷ್ಟು ಪ್ರಮಾಣದ ಚಿನ್ನ ಸಂಗ್ರಹಿಸಿ ಇಡಬಹುದು? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಮನಿಗೈಡ್ (Money Guide)ನಲ್ಲಿದೆ ಉತ್ತರ.
ನಿಯಮ ಏನು ಹೇಳುತ್ತದೆ?
ಆದಾಯ ತೆರಿಗೆ ಇಲಾಖೆಯ ತನಿಖೆಯ ಸಂದರ್ಭದಲ್ಲಿ ಖರೀದಿಸಲು ಅಥವಾ ಹೂಡಿಕೆ ಮಾಡಲು ನಿಮಗೆ ಅನುಮತಿಸಿದ ಆದಾಯದ ಮೂಲವನ್ನು ನೀವು ಹಾಜರುಪಡಿಸುವುದಾದರೆ ಮನೆಯಲ್ಲಿ ಎಷ್ಟು ಚಿನ್ನದ ಆಭರಣಗಳನ್ನು ಬೇಕಾದರೂ ಇಟ್ಟುಕೊಳ್ಳಬಹುದು. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (CBDT) ನಿಯಮಗಳ ಪ್ರಕಾರ, ಮನೆಯಲ್ಲಿರುವ ಚಿನ್ನವು ನಿಗದಿತ ಮಿತಿಯಲ್ಲಿದ್ದರೆ, ಆದಾಯ ತೆರಿಗೆ ಅಧಿಕಾರಿಗಳು ಹುಡುಕಾಟದ ಸಮಯದಲ್ಲಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಂತಿಲ್ಲ (ಚಿನ್ನದ ಆಭರಣ ಸಂಗ್ರಹ ನಿಯಮ). ಆದರೆ ಮಿತಿಯನ್ನು ಮೀರಿದರೆ ಅದಕ್ಕೆ ದಾಖಲೆ ಒದಗಿಸಬೇಕು. ಹಾಗಾದರೆ ಮಿತಿಯ ಪ್ರಮಾಣವೆಷ್ಟು?
- ಅವಿವಾಹಿತ ಮಹಿಳೆ: 250 ಗ್ರಾಂ. ಚಿನ್ನ.
- ವಿವಾಹಿತ ಮಹಿಳೆ: 500 ಗ್ರಾಂ. ಚಿನ್ನ.
- ವಿವಾಹಿತ / ಅವಿವಾಹಿತ ಪುರುಷ: 100 ಗ್ರಾಂ. ಚಿನ್ನ.
ʼʼವೈಯಕ್ತಿಕ ಬಳಕೆಗಾಗಿ ಅಥವಾ ಹೂಡಿಕೆಗಾಗಿ ಚಿನ್ನವು ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಲೋಹವಾಗಿ ಉಳಿದಿದೆ. ಚಿನ್ನ ಖರೀದಿಸುವಾಗ ಬೆಲೆಗಳ ಏರಿಳಿತವನ್ನು ನೋಡುವ ಜತೆಗೆ ತೆರಿಗೆಯನ್ನೂ ಗಮನಿಸಬೇಕು. ಹೂಡಿಕೆಯ ಆಯ್ಕೆಯಾಗಿ ಪರಿಗಣಿಸುವವರು ಚಿನ್ನವನ್ನು ನಾಣ್ಯಗಳು, ಆಭರಣಗಳಂತಹ ಭೌತಿಕ ರೂಪಗಳಲ್ಲಿ, ಚಿನ್ನದ ವಿನಿಮಯ-ವಹಿವಾಟು ನಿಧಿಗಳು (ಗೋಲ್ಡ್ ಇಟಿಎಫ್‌ಗಳು), ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಸವರಿನ್ ಗೋಲ್ಡ್ ಬಾಂಡ್‌ಗಳು (ಎಸ್‌ಜಿಬಿ) ಮತ್ತು ಕಾಗದದ ರೂಪಗಳಲ್ಲಿ ಖರೀದಿಸಬಹುದುʼʼ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
ಚಿನ್ನ ಖರೀದಿಗೆ ಯಾವುದೇ ನೇರ ತೆರಿಗೆ ಇಲ್ಲ. ಆದಾಗ್ಯೂ ಪರೋಕ್ಷ ತೆರಿಗೆ ಪಾವತಿಸಬೇಕಾಗುತ್ತದೆ. ಇದು ಚಿನ್ನದ ಪ್ರಕಾರ ಮತ್ತು ಸಂಬಂಧಿತ ಸೇವೆಯನ್ನು ಅವಲಂಬಿಸಿ ಬದಲಾಗುತ್ತದೆ. ಉದಾಹರಣೆಗೆ ಚಿನ್ನದ ಗಟ್ಟಿಗಳು, ನಾಣ್ಯಗಳು ಮತ್ತು ಆಭರಣಗಳ ಖರೀದಿಯ ಮೇಲೆ ಶೇ. 3ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇನ್ನು ಆಭರಣ ಮತ್ತು ಅಕ್ಕಸಾಲಿಗ ಸೇವೆಗಳ ಜಿಎಸ್‌ಟಿ ದರವು ಶೇ. 5ರಷ್ಟಿರುತ್ತದೆ. ಇದಲ್ಲದೆ ಚಿನ್ನವನ್ನು ಆಮದು ಮಾಡಿಕೊಳ್ಳುವಾಗ ಕಸ್ಟಮ್ಸ್ ಸುಂಕ, ಕೃಷಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.
ʼʼಚಿನ್ನಾಭರಣ ಖರೀದಿಗೆ ಸಂಬಂಧಿಸಿ ನೇರ ತೆರಿಗೆಗಳಿಲ್ಲ. ಆದರೆ ಚಿನ್ನ ಖರೀದಿಯ ವಿವರಗಳನ್ನು ನೀವು ಒದಗಿಸುವ ಪ್ಯಾನ್ ಕಾರ್ಡ್‌ನ ಮೂಲಕ ಅಧಿಕಾರಿಗಳು ಸಂಗ್ರಹಿಸುತ್ತಾರೆ. ಆದ್ದರಿಂದ ಚಿನ್ನವನ್ನು ಭಾರಿ ಪ್ರಮಾಣದಲ್ಲಿ ಖರೀದಿಸುವಾಗ ಅದಕ್ಕೆ ತಕ್ಕದಾದ ಆದಾಯದ ಮೂಲಗಳನ್ನು ಹೊಂದಿರುವುದು ಅಗತ್ಯ. ಇನ್ನು ತೆರಿಗೆದಾರರು ಒಟ್ಟು 50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಹೊಂದಿರುವ ದೇಶೀಯ ಸ್ವತ್ತುಗಳ ಭಾಗವಾಗಿ ಚಿನ್ನದ ಪ್ರಮಾಣವನ್ನು ಬಹಿರಂಗಪಡಿಸಬೇಕಾಗುತ್ತದೆ.
ಮಾರಾಟ ಮಾಡುವಾಗ…
ಒಂದು ವೇಳೆ ಖರೀದಿ ಮಾಡಿದ ಬಳಿಕ ಮೂರು ವರ್ಷದ ಒಳಗೆ ಚಿನ್ನವನ್ನು ಮಾರಾಟ ಮಾಡುವುದಿದ್ದರೆ ಅದರಿಂದ ಪಡೆದ ಆದಾಯವನ್ನು ವೈಯಕ್ತಿಕ ಆದಾಯ ಎಂದು ಪರಿಗಣಿಸಲಾಗುತ್ತಿದೆ. ವೈಯಕ್ತಿಕ ಆದಾಯಕ್ಕೆ ನೀಡಬೇಕಿರುವ ತೆರಿಗೆಯೇ ಇದಕ್ಕೂ ಅನ್ವಯವಾಗುತ್ತದೆ. ಮೂರು ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಿದರೆ, ದೀರ್ಘಾವಧಿಯ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎನ್ನುವುದು ತಿಳಿದಿರಲಿ.
ಇದನ್ನೂ ಓದಿ: Money Guide: ಪ್ಯಾನ್ ಕಾರ್ಡ್ ಕಳೆದುಹೋದರೆ ಚಿಂತೆ ಬೇಡ; ಮನೆಯಲ್ಲೇ ಕೂತು ಡುಪ್ಲಿಕೇಟ್ ಪಡೆಯುವ ವಿಧಾನ ಇಲ್ಲಿದೆ