ಬೆಂಗಳೂರು: ದಿನ ಕಳೆದಂತೆ ಜೀವನ ವೆಚ್ಚ ಅಧಿಕವಾಗುತ್ತಲೇ ಹೋಗುತ್ತದೆ. ಜೀವನ ವೆಚ್ಚಗಳನ್ನು ಸರಿದೂಗಿಸಲು ಮಾಸಿಕ ಸಂಬಳವನ್ನು ಅವಲಂಬಿಸಿರುವ ಮಧ್ಯಮ ವರ್ಗದ ವ್ಯಕ್ತಿಗಳಿಗೆ ತಿಂಗಳ ವೆಚ್ಚಗಳಲ್ಲಿನ ಹೆಚ್ಚಳ, ಅನಾರೋಗ್ಯದಂತಹ ಅನಿರೀಕ್ಷಿತವಾಗಿ ಎದುರಾಗುವ ಖರ್ಚು ಆರ್ಥಿಕ ಒತ್ತಡಕ್ಕೆ ಕಾರಣವಾಗಬಹುದು. ಇದು ಮುಂದೆ ಸಾಲಕ್ಕೂ ದಾರಿ ಮಾಡಿಕೊಡುತ್ತದೆ. ಇಂತಹ ಸಂದರ್ಭದಲ್ಲೇ ಕೆಲವರು ಅನಿವಾರ್ಯತೆಗೆ ಸಿಲುಕಿ ಅಧಿಕ ಬಡ್ಡಿ ದರಕ್ಕೆ ಸಾಲ ಪಡೆದು ಅದನ್ನು ತೀರಿಸಲು ಅನೇಕ ವರ್ಷಗಳ ಕಾಲ ಒದ್ದಾಡುತ್ತಾರೆ. ಹೀಗಾಗಬಾರದು ಎಂದರೆ ಮಾಸಿಕ ಸಂಬಳದ ಜತೆಗೆ ಇನ್ನೊಂದಷ್ಟು ಆದಾಯ ಇರಬೇಕಾಗುತ್ತದೆ. ಅದನ್ನು ಹೇಗೆ ಹೊಂದಿಸಬಹುದು ಎನ್ನುವುದನ್ನು ಇಂದಿನ ಮನಿಗೈಡ್ (Money Guide) ವಿವರಿಸಲಿದೆ.
ಅಂಚೆ ಕಚೇರಿಗಳಲ್ಲಿ ಹೂಡಿಕೆ
ಹೌದು, ಅಂಚೆ ಕಚೇರಿಗಳಲ್ಲಿ ಮಾಸಿಕ ಆದಾಯ ನೀಡುವ ಯೋಜನೆ ಲಭ್ಯ. ಇದುವೇ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme). ಇದರಲ್ಲಿ ಏಕಾಂಗಿಯಾಗಿ ಅಥವಾ ತಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಗಳನ್ನು ತೆರೆಯಬಹುದು. ದೊಡ್ಡ ಮೊತ್ತವನ್ನು ಠೇವಣಿ ಮಾಡುವ ಮೂಲಕ, ಹೂಡಿಕೆದಾರರು ಮಾಸಿಕವಾಗಿ ನಿಗದಿತ ಪಾವತಿಯನ್ನು ನಿರೀಕ್ಷಿಸಬಹುದು.
ಎಷ್ಟು ಹೂಡಿಕೆ ಮಾಡಬೇಕು?
ವೈಯಕ್ತಿಕ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ. ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಕನಿಷ್ಠ ಠೇವಣಿ ಅವಧಿ ಐದು ವರ್ಷ. ಈ ಠೇವಣಿಯ ಮೇಲೆ ಗಳಿಸಿದ ಬಡ್ಡಿಯು ಮಾಸಿಕ ಆದಾಯದ ರೂಪದಲ್ಲಿ ನಿಮಗೆ ಲಭಿಸುತ್ತದೆ. ಜಂಟಿ ಖಾತೆದಾರರು 15 ಲಕ್ಷ ರೂ.ಗಳನ್ನು ಠೇವಣಿ ಮಾಡುವ ಮೂಲಕ ಮಾಸಿಕ 9,250 ರೂ.ಗಳವರೆಗೆ ಗಳಿಸಬಹುದು. ಇನ್ನು 9 ಲಕ್ಷ ರೂ.ಗಳ ಠೇವಣಿ ಹೂಡುವವರು ಮಾಸಿಕ 5,500 ರೂ. ಪಡೆದುಕೊಳ್ಳಲಿದ್ದಾರೆ.
ಬಡ್ಡಿದರ ಎಷ್ಟು?
ಪ್ರಸ್ತುತ ಪೋಸ್ಟ್ ಆಫೀಸ್‌ನ ಮಾಸಿಕ ಆದಾಯ ಯೋಜನೆ ಶೇಕಡಾ 7.4ರಷ್ಟು ಬಡ್ಡಿದರವನ್ನು ನೀಡುತ್ತದೆ. ವಿಶೇಷ ಎಂದರೆ ನೀವು ಮಗುವಿನ ಹೆಸರಿನಲ್ಲಿಯೂ ಖಾತೆಗಳನ್ನು ತೆರೆಯಬಹುದು ಮತ್ತು ಗರಿಷ್ಠ ಮೂರು ವ್ಯಕ್ತಿಗಳೊಂದಿಗೆ ಜಂಟಿಯಾಗಿ ಖಾತೆ ಹೊಂದಬಹುದಾದ ಅವಕಾಶ ಇದೆ.
ಯಾವೆಲ್ಲ ದಾಖಲೆಗಳು ಬೇಕು?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ನೋಂದಾಯಿಸಲು ವಿಳಾಸದ ಪುರಾವೆ, ಫೋಟೊ ಇರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೊಗಳೊಂದಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.
ಠೇವಣಿಯ ಅವಧಿ ಐದು ವರ್ಷಗಳಾದರೂ ಖಾತೆ ತೆರೆದ ಒಂದು ವರ್ಷದ ನಂತರ ತುರ್ತು ಸಂದರ್ಭಗಳಲ್ಲಿ ಹಣವನ್ನು ಹಿಂಪಡೆಯಬಹುದು. ಆದಾಗ್ಯೂ ನೀವು ಒಂದರಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂತೆಗೆದುಕೊಂಡರೆ ಠೇವಣಿ ಮಾಡಿದ ಮೊತ್ತದ ಮೇಲೆ ನೀವು ಶೇ. 2ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಮೂರು ವರ್ಷಗಳ ನಂತರ ನೀವು ಶೇ. 1ರಷ್ಟು ಕಡಿತದೊಂದಿಗೆ ಹಣ ಸ್ವೀಕರಿಸಬಹುದು. ಐದು ವರ್ಷಗಳ ನಂತರ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಪರ್ಯಾಯವಾಗಿ, ಹೂಡಿಕೆದಾರರು ತಮ್ಮ ಹಣವನ್ನು ಮತ್ತೊಂದು ಐದು ವರ್ಷಗಳ ಅವಧಿಗೆ ಮರುಹೂಡಿಕೆ ಮಾಡಲೂ ಆಯ್ಕೆ ಲಭ್ಯ.
ಒಟ್ಟಿನಲ್ಲಿ ಪೋಸ್ಟ್ ಆಫೀಸ್‌ನ ಈ ಮಾಸಿಕ ಆದಾಯ ಯೋಜನೆಯನ್ನು ಆರ್ಥಿಕ ಒತ್ತಡವನ್ನು ನಿವಾರಿಸಲು ಬಯಸುವ ವ್ಯಕ್ತಿಗಳಿಗೆ ವಿಶ್ವಾಸಾರ್ಹ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Money Guide: ಎಟಿಎಂ ಬಳಸುತ್ತೀರಾ? ಹಾಗಾದರೆ ಈ ಅಂಶ ನಿಮಗೆ ತಿಳಿದಿರಲೇ ಬೇಕು