Site icon Vistara News

Money Guide: ಇಂದಿನ ಉಳಿತಾಯವೇ ನಾಳೆಯ ಆದಾಯ; ಮಕ್ಕಳಿಗೆ ಈ ಸೇವಿಂಗ್ಸ್‌ ಮಂತ್ರ ಹೀಗೆ ಕಲಿಸಿಕೊಡಿ

baby piggybank

baby piggybank

ಬೆಂಗಳೂರು: ಹಣಕಾಸು ವಿಚಾರದಲ್ಲಿ ಸ್ವಾವಲಂಬಿಗಳಾಗುವ ಜತೆಗೆ ಆರ್ಥಿಕ ಶಿಸ್ತು ರೂಢಿಸಿಕೊಳ್ಳುವುದು ಕೂಡ ಮುಖ್ಯ. ಆದಾಯದಲ್ಲಿ ಒಂದಷ್ಟು ಮೊತ್ತವನ್ನು ಕಡ್ಡಾಯವಾಗಿ ಉಳಿತಾಯ ಮಾಡುವುದು, ಸಾಮಾನ್ಯ, ಆರೋಗ್ಯ ವಿಮೆ ಮಾಡಿಸುವುದು, ಕೆಲವೊಂದಿಷ್ಟು ಕಡೆ ಹೂಡಿಕೆ ಮಾಡುವುದು, ಅನಗತ್ಯವಾಗಿ ಖರ್ಚು ಮಾಡದಿರುವುದು ಇತ್ಯಾದಿ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಇಂದಿನ ಅನಿವಾರ್ಯತೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಇಂತಹ ಶಿಸ್ತು ಇದ್ದಕ್ಕಿದ್ದಂತೆ ಮೈಗೂಡುವುದಿಲ್ಲ. ಆದ್ದರಿಂದ ಮಕ್ಕಳಿಗೆ ಆರಂಭದಲ್ಲೇ ಇದರ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಇಂತಹ ಉತ್ತಮ ಜೀವನ ಪಾಠ ಹೇಳಿ ಕೊಡುವುದರಿಂದ ಅವರು ಅದನ್ನು ಜೀವನದುದ್ದಕ್ಕೂ ಪಾಲಿಸುತ್ತಾರೆ. ಹೀಗಾಗಿ ಮಕ್ಕಳಿಗೆ, ಹದಿ ಹರೆಯದವರದಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಪಾಲಕರು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಮನಿಗೈಡ್‌ (Money Guide) ತಿಳಿಸಿ ಕೊಡುತ್ತದೆ.

ಭತ್ಯೆ ನೀಡಿ

ಮಕ್ಕಳಿಗೆ ನಿಯಮಿತವಾಗಿ (ತಿಂಗಳಿಗೆ ಅಥವಾ ವಾರಕ್ಕೆ) ಒಂದಷ್ಟು ಹಣ ನೀಡಿ ಅದನ್ನು ಉಳಿತಾಯ ಮಾಡುವಂತೆ ತಿಳಿಸಿ. ಅಗತ್ಯ ಬಿದ್ದಾಗ ನೀವು ಹಣ ನೀಡುವುದಕ್ಕಿಂತ ಅವರೇ ಉಳಿತಾಯ ಮಾಡಿದ ಮೊತ್ತದಿಂದ ಖರೀದಿಸುವಂತೆ ತಿಳಿಸಿ. ಇದರಿಂದ ಅವರಿಗೆ ತಾವು ಪಡೆಯಲು ಬಯಸುವ ಯಾವ ವಸ್ತುವಿಗಾದರೂ ಹಣವನ್ನು ಉಳಿತಾಯ ಮಾಡಬೇಕು ಎನ್ನುವುದು ಮನದಟ್ಟಾಗುತ್ತದೆ. ಇದು ಉಳಿತಾಯದ ಮಹತ್ವವನ್ನು ತಿಳಿಸುವುದಷ್ಟೇ ಅಲ್ಲ ಅನಗತ್ಯವಾಗಿ ಖರ್ಚು ಮಾಡುವುದಕ್ಕೆ ತಡೆ ಒಡ್ಡುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ನೀವು ನೀಡುವ ಹಣವನ್ನು ಅವರು ಉಳಿತಾಯ ಮಾಡುತ್ತಾರೆ ಮತ್ತು ಕೆಟ್ಟ ಉದ್ದೇಶಗಳಿಗೆ ಖರ್ಚು ಮಾಡುತ್ತಿಲ್ಲ ಎನ್ನುವುದನ್ನು ಆಗಾಗ ಗಮನಿಸುತ್ತಿರಬೇಕು. ಪದೇ ಪದೆ ಈ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿರಬೇಕು.

ಪ್ರಾಕ್ಟಿಕಲ್‌ ನಾಲೆಡ್ಜ್‌ ಒದಗಿಸಿ

ಮಕ್ಕಳಿಗೆ ಉಳಿತಾಯ ಖಾತೆ ಎಂದರೇನು, ಸ್ಥಿರ ಠೇವಣಿ ಎಂದರೇನು, ಮ್ಯೂಚುವಲ್ ಫಂಡ್ ಎಂದರೇನು, ಸಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಮುಂತಾದ ಮೂಲಭೂತ ಅಂಶಗಳನ್ನು ಕಲಿಸಿ. ನೀವು ಅವರಿಗಾಗಿ ಬ್ಯಾಂಕ್ ಖಾತೆಯನ್ನು ಸಹ ತೆರೆಯಬಹುದು. ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ಚಟುವಟಿಕೆಯ ಪರಿಚಯ ಮಾಡಿಸಿ. ಇದರಿಂದ ಅವರ ‘ಲಾಭ ಮತ್ತು ನಷ್ಟ’ದ ಲೆಕ್ಕಾಚಾರಗಳು ಪಠ್ಯಪುಸ್ತಕದ ಜ್ಞಾನವನ್ನು ಮೀರಿ ಬೆಳೆಯುತ್ತದೆ. ಇದು ಸಂಪತ್ತನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎನ್ನುವುದನ್ನು ತಿಳಿಸಿಕೊಡುತ್ತದೆ. ಮನೆ ಸಾಮಗ್ರಿ ಖರೀದಿಗೆ ಹೋದಾಗ ಅವರನ್ನೂ ಕರೆದುಕೊಂಡು ಹೋಗಿ. ಕೈಯಲ್ಲಿ ಇರುವ ಹಣದಿಂದ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವುದು ಅವರ ಗಮನಕ್ಕೆ ಬರಲಿ. 

ಖರ್ಚು ಮಾಡಿದ ಲೆಕ್ಕಾಚಾರವಿರಲಿ

ತಮ್ಮ ಉಳಿತಾಯದಿಂದ ಖರ್ಚು ಮಾಡಿದ್ದರೆ ಅದರ ಲೆಕ್ಕಾಚಾರ ಮಾಡುವುದನ್ನು ಮಕ್ಕಳಿಗೆ ಕಲಿಸಿ. ಮಕ್ಕಳು ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎನ್ನುವುದನ್ನು ನಿಯಮಿತವಾಗಿ ದಾಖಲಿಸಲಿ. ಸಾಧ್ಯವಾದರೆ ಬಿಡುವಿನ ವೇಳೆ ನೀವೆಲ್ಲರೂ ಒಟ್ಟಿಗೆ ಕುಳಿತು ಇದರ ಬಗ್ಗೆ ಚರ್ಚೆ ನಡೆಸಿ. ಇದರಿಂದ ಅನಗತ್ಯ ವಸ್ತುಗಳನ್ನು ಖರೀದಿಸುವ ಮನೋಭಾವವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಮನೆಯ ಬಜೆಟ್‌ ತಯಾರಿಯಲ್ಲಿ ಮಕ್ಕಳನ್ನೂ ಸೇರಿಸಿ

ಬಜೆಟ್‌ ಯಾಕೆ ಮುಖ್ಯ ಎನ್ನುವದರ ಕುರಿತು ಮಾಹಿತಿ ನೀಡಿ. ಇದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮಂಡಿಸುವ ಬಜೆಟ್‌ನ ಉದಾಹರಣೆ ಕೊಡಬಹುದು. ಬಳಿಕ ಅವರೇ ಬಜೆಟ್‌ ತಯಾರಿಸಲಿ. ಅವರ ಬಳಿ ಇರುವ ಪಾಕೆಟ್‌ ಮನಿ, ಉಡುಗೊರೆ ಸಿಕ್ಕ ಹಣವನ್ನು ಆಟದ ವಸ್ತು ಖರೀದಿ, ತಿಂಡಿ ಖರೀದಿ ಮತ್ತು ಉಳಿತಾಯಕ್ಕೆ ಹೇಗೆ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೇ ತಿಳಿಸಲಿ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ. ಜತೆಗೆ ಮನೆಯ ಬಜೆಟ್‌ ತಯಾರಿಸುವಾಗ ಅವರನ್ನೂ ಸೇರಿಸಿಕೊಳ್ಳಿ. ಯಾವ ಕಡೆಗಳಲ್ಲಿ ಉಳಿತಾಯ ಮಾಡಬಹುದು ಎನ್ನುವುದರ ಬಗ್ಗೆ ಅವರಿಂದಲೇ ಸಲಹೆ ಪಡೆಯಿರಿ.

ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳು ನಿಮ್ಮನ್ನೇ ನೋಡಿ ಕಲಿಯುವುದರಿಂದ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ತತ್ವವನ್ನು ರೂಢಿಸಿಕೊಳ್ಳಿ. ಅಂದರೆ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ವಸ್ತುಗಳ ಖರೀದಿಗೆ ಮುಂದಾಗಬೇಡಿ. ಜತೆಗೆ ಹಣದುಬ್ಬರದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ.

ಇದನ್ನೂ ಓದಿ: Money Guide: ತೆರಿಗೆ ವಿನಾಯಿತಿ ಪಡೆಯಬೇಕೆ? ಮಾ. 31ರೊಳಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ

Exit mobile version