Money Guide: ಇಂದಿನ ಉಳಿತಾಯವೇ ನಾಳೆಯ ಆದಾಯ; ಮಕ್ಕಳಿಗೆ ಈ ಸೇವಿಂಗ್ಸ್‌ ಮಂತ್ರ ಹೀಗೆ ಕಲಿಸಿಕೊಡಿ - Vistara News

ಮನಿ-ಗೈಡ್

Money Guide: ಇಂದಿನ ಉಳಿತಾಯವೇ ನಾಳೆಯ ಆದಾಯ; ಮಕ್ಕಳಿಗೆ ಈ ಸೇವಿಂಗ್ಸ್‌ ಮಂತ್ರ ಹೀಗೆ ಕಲಿಸಿಕೊಡಿ

Money Guide: ಉಳಿತಾಯ ಮಾಡುವುದು ಸೇರಿದಂತೆ ಆರ್ಥಿಕ ಶಿಸ್ತನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಇದನ್ನು ಮಕ್ಕಳಿಗೆ ತಿಳಿಸಿಕೊಡುವುದು ಮುಖ್ಯ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

baby piggybank
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಣಕಾಸು ವಿಚಾರದಲ್ಲಿ ಸ್ವಾವಲಂಬಿಗಳಾಗುವ ಜತೆಗೆ ಆರ್ಥಿಕ ಶಿಸ್ತು ರೂಢಿಸಿಕೊಳ್ಳುವುದು ಕೂಡ ಮುಖ್ಯ. ಆದಾಯದಲ್ಲಿ ಒಂದಷ್ಟು ಮೊತ್ತವನ್ನು ಕಡ್ಡಾಯವಾಗಿ ಉಳಿತಾಯ ಮಾಡುವುದು, ಸಾಮಾನ್ಯ, ಆರೋಗ್ಯ ವಿಮೆ ಮಾಡಿಸುವುದು, ಕೆಲವೊಂದಿಷ್ಟು ಕಡೆ ಹೂಡಿಕೆ ಮಾಡುವುದು, ಅನಗತ್ಯವಾಗಿ ಖರ್ಚು ಮಾಡದಿರುವುದು ಇತ್ಯಾದಿ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಇಂದಿನ ಅನಿವಾರ್ಯತೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಇಂತಹ ಶಿಸ್ತು ಇದ್ದಕ್ಕಿದ್ದಂತೆ ಮೈಗೂಡುವುದಿಲ್ಲ. ಆದ್ದರಿಂದ ಮಕ್ಕಳಿಗೆ ಆರಂಭದಲ್ಲೇ ಇದರ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಇಂತಹ ಉತ್ತಮ ಜೀವನ ಪಾಠ ಹೇಳಿ ಕೊಡುವುದರಿಂದ ಅವರು ಅದನ್ನು ಜೀವನದುದ್ದಕ್ಕೂ ಪಾಲಿಸುತ್ತಾರೆ. ಹೀಗಾಗಿ ಮಕ್ಕಳಿಗೆ, ಹದಿ ಹರೆಯದವರದಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಪಾಲಕರು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಮನಿಗೈಡ್‌ (Money Guide) ತಿಳಿಸಿ ಕೊಡುತ್ತದೆ.

ಭತ್ಯೆ ನೀಡಿ

ಮಕ್ಕಳಿಗೆ ನಿಯಮಿತವಾಗಿ (ತಿಂಗಳಿಗೆ ಅಥವಾ ವಾರಕ್ಕೆ) ಒಂದಷ್ಟು ಹಣ ನೀಡಿ ಅದನ್ನು ಉಳಿತಾಯ ಮಾಡುವಂತೆ ತಿಳಿಸಿ. ಅಗತ್ಯ ಬಿದ್ದಾಗ ನೀವು ಹಣ ನೀಡುವುದಕ್ಕಿಂತ ಅವರೇ ಉಳಿತಾಯ ಮಾಡಿದ ಮೊತ್ತದಿಂದ ಖರೀದಿಸುವಂತೆ ತಿಳಿಸಿ. ಇದರಿಂದ ಅವರಿಗೆ ತಾವು ಪಡೆಯಲು ಬಯಸುವ ಯಾವ ವಸ್ತುವಿಗಾದರೂ ಹಣವನ್ನು ಉಳಿತಾಯ ಮಾಡಬೇಕು ಎನ್ನುವುದು ಮನದಟ್ಟಾಗುತ್ತದೆ. ಇದು ಉಳಿತಾಯದ ಮಹತ್ವವನ್ನು ತಿಳಿಸುವುದಷ್ಟೇ ಅಲ್ಲ ಅನಗತ್ಯವಾಗಿ ಖರ್ಚು ಮಾಡುವುದಕ್ಕೆ ತಡೆ ಒಡ್ಡುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ನೀವು ನೀಡುವ ಹಣವನ್ನು ಅವರು ಉಳಿತಾಯ ಮಾಡುತ್ತಾರೆ ಮತ್ತು ಕೆಟ್ಟ ಉದ್ದೇಶಗಳಿಗೆ ಖರ್ಚು ಮಾಡುತ್ತಿಲ್ಲ ಎನ್ನುವುದನ್ನು ಆಗಾಗ ಗಮನಿಸುತ್ತಿರಬೇಕು. ಪದೇ ಪದೆ ಈ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿರಬೇಕು.

ಪ್ರಾಕ್ಟಿಕಲ್‌ ನಾಲೆಡ್ಜ್‌ ಒದಗಿಸಿ

ಮಕ್ಕಳಿಗೆ ಉಳಿತಾಯ ಖಾತೆ ಎಂದರೇನು, ಸ್ಥಿರ ಠೇವಣಿ ಎಂದರೇನು, ಮ್ಯೂಚುವಲ್ ಫಂಡ್ ಎಂದರೇನು, ಸಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಮುಂತಾದ ಮೂಲಭೂತ ಅಂಶಗಳನ್ನು ಕಲಿಸಿ. ನೀವು ಅವರಿಗಾಗಿ ಬ್ಯಾಂಕ್ ಖಾತೆಯನ್ನು ಸಹ ತೆರೆಯಬಹುದು. ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ಚಟುವಟಿಕೆಯ ಪರಿಚಯ ಮಾಡಿಸಿ. ಇದರಿಂದ ಅವರ ‘ಲಾಭ ಮತ್ತು ನಷ್ಟ’ದ ಲೆಕ್ಕಾಚಾರಗಳು ಪಠ್ಯಪುಸ್ತಕದ ಜ್ಞಾನವನ್ನು ಮೀರಿ ಬೆಳೆಯುತ್ತದೆ. ಇದು ಸಂಪತ್ತನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎನ್ನುವುದನ್ನು ತಿಳಿಸಿಕೊಡುತ್ತದೆ. ಮನೆ ಸಾಮಗ್ರಿ ಖರೀದಿಗೆ ಹೋದಾಗ ಅವರನ್ನೂ ಕರೆದುಕೊಂಡು ಹೋಗಿ. ಕೈಯಲ್ಲಿ ಇರುವ ಹಣದಿಂದ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವುದು ಅವರ ಗಮನಕ್ಕೆ ಬರಲಿ. 

ಖರ್ಚು ಮಾಡಿದ ಲೆಕ್ಕಾಚಾರವಿರಲಿ

ತಮ್ಮ ಉಳಿತಾಯದಿಂದ ಖರ್ಚು ಮಾಡಿದ್ದರೆ ಅದರ ಲೆಕ್ಕಾಚಾರ ಮಾಡುವುದನ್ನು ಮಕ್ಕಳಿಗೆ ಕಲಿಸಿ. ಮಕ್ಕಳು ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎನ್ನುವುದನ್ನು ನಿಯಮಿತವಾಗಿ ದಾಖಲಿಸಲಿ. ಸಾಧ್ಯವಾದರೆ ಬಿಡುವಿನ ವೇಳೆ ನೀವೆಲ್ಲರೂ ಒಟ್ಟಿಗೆ ಕುಳಿತು ಇದರ ಬಗ್ಗೆ ಚರ್ಚೆ ನಡೆಸಿ. ಇದರಿಂದ ಅನಗತ್ಯ ವಸ್ತುಗಳನ್ನು ಖರೀದಿಸುವ ಮನೋಭಾವವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಮನೆಯ ಬಜೆಟ್‌ ತಯಾರಿಯಲ್ಲಿ ಮಕ್ಕಳನ್ನೂ ಸೇರಿಸಿ

ಬಜೆಟ್‌ ಯಾಕೆ ಮುಖ್ಯ ಎನ್ನುವದರ ಕುರಿತು ಮಾಹಿತಿ ನೀಡಿ. ಇದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮಂಡಿಸುವ ಬಜೆಟ್‌ನ ಉದಾಹರಣೆ ಕೊಡಬಹುದು. ಬಳಿಕ ಅವರೇ ಬಜೆಟ್‌ ತಯಾರಿಸಲಿ. ಅವರ ಬಳಿ ಇರುವ ಪಾಕೆಟ್‌ ಮನಿ, ಉಡುಗೊರೆ ಸಿಕ್ಕ ಹಣವನ್ನು ಆಟದ ವಸ್ತು ಖರೀದಿ, ತಿಂಡಿ ಖರೀದಿ ಮತ್ತು ಉಳಿತಾಯಕ್ಕೆ ಹೇಗೆ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೇ ತಿಳಿಸಲಿ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ. ಜತೆಗೆ ಮನೆಯ ಬಜೆಟ್‌ ತಯಾರಿಸುವಾಗ ಅವರನ್ನೂ ಸೇರಿಸಿಕೊಳ್ಳಿ. ಯಾವ ಕಡೆಗಳಲ್ಲಿ ಉಳಿತಾಯ ಮಾಡಬಹುದು ಎನ್ನುವುದರ ಬಗ್ಗೆ ಅವರಿಂದಲೇ ಸಲಹೆ ಪಡೆಯಿರಿ.

ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳು ನಿಮ್ಮನ್ನೇ ನೋಡಿ ಕಲಿಯುವುದರಿಂದ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ತತ್ವವನ್ನು ರೂಢಿಸಿಕೊಳ್ಳಿ. ಅಂದರೆ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ವಸ್ತುಗಳ ಖರೀದಿಗೆ ಮುಂದಾಗಬೇಡಿ. ಜತೆಗೆ ಹಣದುಬ್ಬರದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ.

ಇದನ್ನೂ ಓದಿ: Money Guide: ತೆರಿಗೆ ವಿನಾಯಿತಿ ಪಡೆಯಬೇಕೆ? ಮಾ. 31ರೊಳಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ

Money Guide: ಈ ಅಮ್ಮಂದಿರ ದಿನ ನಿಮ್ಮ ತಾಯಿಗೆ ಉಡುಗೊರೆ ಕೊಡಬೇಕೆಂಬ ಯೋಜನೆಯಲ್ಲಿದ್ದೀರಾ? ಹಾಗಾದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ. ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ನಾಳೆ (ಮೇ 12) ವಿಶ್ವ ಅಮ್ಮಂದಿರ ದಿನ (Mother’s Day 2024). ಜೀವನಪೂರ್ತಿ ನಮಗಾಗಿ ನಿಸ್ವಾರ್ಥವಾಗಿ ಮಿಡಿಯುವ ಜೀವಕ್ಕೆ ಚಿಕ್ಕದೊಂದು ಧನ್ಯವಾದ ಹೇಳುವ ದಿನ ಇದು. ಅಮ್ಮಂದಿರ ಋಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಒಂದು ಚಿಕ್ಕ ಉಡುಗೊರೆ ಕೊಡುವ ಮೂಲಕ ಅವರ ಮೊಗದಲ್ಲಿ ನಗು ಅರಳಿಸಬಹುದು. ಈ ಅಮ್ಮಂದಿರ ದಿನದಲ್ಲಿ ನಿಮ್ಮ ಅಮ್ಮನಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯ ಪೈಕಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Saving Certificate Scheme)ವೂ ಒಂದು. ಏನಿದು ಯೋಜನೆ? ಈ ಯೋಜನೆ ಮಹಿಳೆಯರಿಗೆ ಹೇಗೆ ಪ್ರಯೋಜಕಾರಿ? ಮುಂತಾದ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ (Money Guide).

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಎಂದರೇನು?

ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ವಿಶೇಷ ಉಳಿತಾಯ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿದ್ದು, ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸುತ್ತದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಕೇಂದ್ರ ಬಜೆಟ್ ತನ್ನ 2023ರ ಬಜೆಟ್‌ನಲ್ಲಿ ಘೋಷಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ಮಾರ್ಚ್ 2025ರವರೆಗೆ ಲಭ್ಯವಿದೆ. ಇದು 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ.ವರೆಗೆ ಠೇವಣಿ ಇಡುವ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಕೇವಲ ಮಹಿಳೆಯರು ಹಾಗೂ ಯುವತಿಯರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಮಹಿಳೆಯರು ಸ್ವತಃ ತಾವೇ ಹಾಗೂ ಅಪ್ರಾಪ್ತ ಬಾಲಕಿಯರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ನಿರ್ವಹಿಸಬಹುದಾಗಿದೆ. ಹೀಗಾಗಿ ಈ ಬಾರಿ ನೀವು ತಾಯಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಿ.

ಅರ್ಹತೆ

  • ಯಾವುದೇ ಭಾರತೀಯ ಮಹಿಳೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ.
  • ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ವಾಭಾವಿಕ ಅಥವಾ ಕಾನೂನುಬದ್ಧ ಪೋಷಕರು ಖಾತೆ ತೆರೆಯಬಹುದು.
  • ಗಮನಿಸಿ ವೈಯಕ್ತಿಕ ಖಾತೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
  • ಹೂಡಿಕೆಯ ಕನಿಷ್ಠ ಮೊತ್ತ 1,000 ರೂ. ಮತ್ತು ಗರಿಷ್ಠ ಮೊತ್ತ 2,00,000.

ಬಡ್ಡಿ ದರ

ಈ ಖಾತೆಯನ್ನು ಹೊಂದಿರುವವರಿಗೆ ವಾರ್ಷಿಕ 7.5 ಪ್ರತಿಶತ ನಿಶ್ಚಿತ ಬಡ್ಡಿ ದರವನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಸ್ಥಿರ ಠೇವಣಿ ಹಾಗೂ ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಬಡ್ಡಿದರ ಸಿಗಲಿದೆ.

ಅವಧಿ

ಈ ಯೋಜನೆಯ ಮೆಚ್ಯೂರಿಟಿ ಅವಧಿ 2 ವರ್ಷ. ಈ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಖಾತೆದಾರರಿಗೆ ಮೆಚ್ಯೂರಿಟಿ ಮೊತ್ತ ಪಾವತಿಯಾಗುತ್ತದೆ. ಒಂದು ವೇಳೆ ಅವಧಿ ಮೀರುವ ಮುನ್ನ ಹಿಂಪಡೆಯಬೇಕೆಂದರೆ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ. 40ರಷ್ಟು ಹಿಂಪಡೆಯಬಹುದು. ಆದರೆ ಖಾತೆಯನ್ನು ತೆರೆದು ಒಂದು ವರ್ಷ ಆಗಿರಬೇಕು. ಜತೆಗೆ ಆಯ್ದ ಸಂದರ್ಭಗಳಲ್ಲಿ ಖಾತೆಗಳನ್ನು ಅಕಾಲಿಕವಾಗಿ ಬಂದ್ ಮಾಡಬಹುದು.

ಖಾತೆ ತೆರೆಯುವುದು ಹೇಗೆ?

ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕ್‌ಗಳಲ್ಲಿ ತೆರೆಯಬಹುದು. ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಿ, ಕೆವೈಸಿ ದಾಖಲೆಗಳನ್ನು ಒದಗಿಸಿ ಆರಂಭಿಕ ಠೇವಣಿ ಮೊತ್ತವನ್ನು ಇಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Money Guide: ಭಾರತದಲ್ಲಿ ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲ ಕಡೆ ಏಕೀಕೃತ ಪಾವತಿ ಇಂಟರ್ಫೇಸ್ ಜಾರಿಯಲ್ಲಿದೆ. ಹೀಗಾಗಿ ಗೂಗಲ್‌ ಪೇ ಜನಪ್ರಿಯವಾಗಿದೆ. ಇದೀಗ ಗೂಗಲ್‌ ಕಂಪೆನಿ ಭಾರತದಲ್ಲಿ ತನ್ನ ವ್ಯಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಗೂಗಲ್ ವ್ಯಾಲೆಟ್‌ ಎಂದರೇನು? ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಗೂಗಲ್‌ ಪೇ (Google Pay) ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದಲ್ಲಿ ಸದ್ಯ ಡಿಜಿಟಲ್‌ ಪೇಮೆಂಟ್‌ ಜನಪ್ರಿಯಾಗಿದ್ದು, ಗೂಗಲ್‌ ಪೇ ಬಳಕೆದಾರರ ಸಂಖ್ಯೆ ಹೆಚ್ಚಿದೆ. ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲ ಕಡೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಗ್ರಾಹಕ ಸ್ನೇಹಿಯಾಗಿರುವ ಗೂಗಲ್‌ ಪೇಯ ಬಳಕೆಯೂ ವ್ಯಾಪಕವಾಗಿದೆ. ಈ ಮಧ್ಯೆ ಇದೀಗ ಗೂಗಲ್‌ ಭಾರತದಲ್ಲಿ ತನ್ನ ವ್ಯಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಗೂಗಲ್ ವ್ಯಾಲೆಟ್‌ (Google Wallet) ಎಂದರೇನು? ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಗೂಗಲ್‌ ಪೇ ಆ್ಯಪ್‌ಗಿಂತ ಗೂಗಲ್‌ ವ್ಯಾಲೆಟ್‌ನ ಕಾರ್ಯ ವೈಖರಿ ಭಿನ್ನ. ಗೂಗಲ್ ವಾಲೆಟ್ ಹೆಸರಿಗೆ ತಕ್ಕಂತೆ ನಮ್ಮ ವ್ಯಾಲೆಟ್‌ (ಪರ್ಸ್‌)ನಂತೆಯೇ ಕಾರ್ಯ ನಿರ್ವಹಿಸಲಿದೆ. ಈ ಆ್ಯಪ್‌ನ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿಲ್ಲ. ಬದಲಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್, ಬಸ್‌, ಮೆಟ್ರೋ ಟಿಕೆಟ್‌ ಸೇರಿದಂತೆ ಇತರ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಸರಳವಾಗಿ ಹೇಳುವುದಾದರೆ ಗೂಗಲ್ ವ್ಯಾಲೆಟ್‌ ಭಾರತದಲ್ಲಿ ಈಗಾಗಲೇ ಲಭ್ಯವಿರುವ ಡಿಜಿಲಾಕರ್‌ನಂತೆಯೇ ಕಾರ್ಯ ನಿರ್ವಹಿಸಲಿದೆ.

ಸುರಕ್ಷಿತ ವಿಧಾನ

ಇದು ಅತ್ಯಂತ ಸುರಕ್ಷಿತ ಖಾಸಗಿ ಡಿಜಿಟಲ್ ವ್ಯಾಲೆಟ್ ಎಂದು ಕಂಪನಿ ಹೇಳಿದೆ. ಗೂಗಲ್‌ 2022ರಲ್ಲಿ ಅಮೇರಿಕಾದಲ್ಲಿ ಈ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಆರಂಭಿಸಿತ್ತು. ಇದಾಗಿ ಸುಮಾರು 2 ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಾಚರಿಸುತ್ತಿದೆ. ಗೂಗಲ್‌ ವ್ಯಾಲೆಟ್‌ ಇದೀಗ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಸದ್ಯಕ್ಕೆ ಗೂಗಲ್ ತನ್ನ ವ್ಯಾಲೆಟ್ ಅನ್ನು ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಿದೆ.

ನೀವು ಗೂಗಲ್‌ ವ್ಯಾಲೆಟ್‌ನಲ್ಲಿ ಹಣಕಾಸಿನ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಉದಾಹರಣೆಗೆ ನಿಮ್ಮ ಚಲನಚಿತ್ರ ಟಿಕೆಟ್‌ಗಳು ಮತ್ತು ಈವೆಂಟ್ ಟಿಕೆಟ್‌ಗಳನ್ನು ಭೌತಿಕವಾಗಿ ಇಟ್ಟುಕೊಳ್ಳುವ ಬದಲು ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ದೇಶದ ದೊಡ್ಡ ಕಂಪನಿಗಳಾದ ಪಿವಿಪಿ ಮತ್ತು ಐನಾಕ್ಸ್‌ಗಳು ಈಗಾಗಲೇ ಗೂಗಲ್ ವ್ಯಾಲೆಟ್‌ನಲ್ಲಿ ಲಭ್ಯ.

ಬಳಸುವುದು ಹೇಗೆ?

  • ಗೂಗಲ್‌ ಪ್ಲೇ ಸ್ಟೋರ್‌ (Play Store)ಗೆ ಹೋಗಿ ಗೂಗಲ್‌ ವ್ಯಾಲೆಟ್‌ (Google Wallet) ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ.
  • ಅಪ್ಲಿಕೇಷನ್‌ ಓಪನ್‌ ಮಾಡಿ ‘Add to Walletʼ ಆಯ್ಕೆನ್ನು ಸೆಲೆಕ್ಟ್‌ ಮಾಡಿ. ಈಗ ನೀವು ಫೋಟೊ, ಲಾಯಲ್ಟಿ, ಗಿಫ್ಟ್‌ ಕಾರ್ಡ್‌ ಮತ್ತು ಟ್ರಾನ್ಸ್‌ಪೋರ್ಟ್‌ ಪಾಸ್‌ ಎನ್ನುವ ನಾಲ್ಕು ಆಯ್ಕೆಯನ್ನು ಪಡೆಯುತ್ತೀರಿ.
  • ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಬಳಸಿ ಪಾಸ್ ರಚಿಸಲು ಫೋಟೊ ಆಯ್ಕೆ ಮಾಡಿ.
  • ವಿವಿಧ ಬ್ರ್ಯಾಂಡ್‌ಗಳಿಂದ ನಿಮ್ಮ ಲಾಯಲ್ಟಿ ಪಾಯಿಂಟ್‌ಗಳನ್ನು ಸೇರಿಸಲು ಲಾಯಲ್ಟಿ ಆಯ್ಕೆ ಬಳಸಿ. ಅದೇ ರೀತಿ ಗಿಫ್ಟ್‌ ಕಾರ್ಡ್ ಮತ್ತು ಟ್ರಾನ್ಸ್‌ಪೋರ್ಟ್‌ ಪಾಸ್‌ ಅನ್ನು ನಿಮ್ಮ ವ್ಯಾಲೆಟ್‌ಗೆ ಸೇರಿಸಿ.

ಗಮನಿಸಿ ಈ ಆ್ಯಪ್‌ನಲ್ಲಿ ಮೊದಲೇ ಹೇಳಿದಂತೆ ನಗದು ಪಾವತಿ ಸಾಧ್ಯವಿಲ್ಲ. ಅದಕ್ಕಾಗಿ ಗೂಗಲ್‌ ಪೇಯನ್ನು ಬಳಸಿ.

ಇದನ್ನೂ ಓದಿ: Money Guide: ಈ ರಜೆಯಲ್ಲಿ ಮಕ್ಕಳಿಗೆ ಆರ್ಥಿಕತೆಯ ಪ್ರಾಕ್ಟಿಕಲ್‌ ಪಾಠ ಮಾಡಿ

Continue Reading

ಮನಿ-ಗೈಡ್

Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Money Guide: ರಾಷ್ಟ್ರೀಯ ಪಿಂಚಣಿ ಯೋಜನೆ (NPS) ದೇಶದಲ್ಲಿರುವ ಅತ್ಯುತ್ತಮ ನಿವೃತ್ತಿ ಯೋಜನೆ ಎನಿಸಿಕೊಂಡಿದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್‌ಪಿಎಸ್‌ ಖಾತೆ ನಿಷ್ಕ್ರೀಯವಾಗುತ್ತದೆ. ಇದನ್ನು ಹೇಗೆ ಸರಿಪಡಿಸಬಹುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಪ್ರತಿಯೊಬ್ಬ ಉದ್ಯೋಗಿಯೂ ಕೆಲಸಕ್ಕೆ ಸೇರಿದಾಗಿನಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವುದು ಅಗತ್ಯ. ಅದಕ್ಕಾಗಿ ಈಗಲೇ ಒಂದಷ್ಟು ಮೊತ್ತವನ್ನು ಕೂಡಿಡಲು ಆರಂಭಿಸಬೇಕು ಎಂದು ಸಲಹೆ ನೀಡುತ್ತಾರೆ ಆರ್ಥಿಕ ತಜ್ಞರು. ಇದಕ್ಕಾಗಿ ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ಕೂಡ ಒಂದು. ಎನ್‌ಪಿಎಸ್‌ ಅನ್ನು ನಿವೃತ್ತಿಗೆ ಉತ್ತಮ ಯೋಜನೆ ಎಂದು ಪರಿಗಣಿಸಲಾಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್‌ಪಿಎಸ್‌ ಖಾತೆ ನಿಷ್ಕ್ರೀಯವಾಗುತ್ತದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ಸರಿಪಡಿಸಬಹುದು? ಮುಂತಾದ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಸ್ಥಗಿತಗೊಂಡ ಎನ್‌ಪಿಎಸ್‌ ಖಾತೆಯನ್ನು ಸಕ್ರಿಯಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಈ ಕುರಿತಾದ ವಿವರ ಇಲ್ಲಿದೆ.

ಯಾಕಾಗಿ ಖಾತೆ ಸ್ಥಗಿತಗೊಳ್ಳುತ್ತದೆ?

ಕನಿಷ್ಠ ಪಾವತಿಯ ಕೊರತೆ: ಟೈರ್ 1 ಎನ್‌ಪಿಎಸ್‌ ಖಾತೆಗಳಿಗೆ ವಾರ್ಷಿಕ ಕನಿಷ್ಠ 1,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಒಂದು ವರ್ಷದೊಳಗೆ ಈ ನಿಯಮ ಪಾಲಿಸದಿದ್ದರೆ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಟೈರ್ 1 ಸ್ಥಗಿತಗೊಂಡರೆ ಟೈರ್ 2 ಖಾತೆಗಳು ಸಹ ನಿಷ್ಕ್ರಿಯವಾಗುತ್ತವೆ.

ಅಪೂರ್ಣ ಕೆವೈಸಿ ಪ್ರಕ್ರಿಯೆ: ಎನ್‌ಪಿಎಸ್‌ ಖಾತೆಗಳಿಗೆ ಕೆವೈಸಿ (Know Your Customer) ಅಪ್‌ಡೇಟ್‌ ಮಾಡುವುದು ಕಡ್ಡಾಯಗೊಳಿಸಲಾಗಿದೆ. ನೋಂದಣಿ ವೇಳೆ ಅಪೂರ್ಣ ಮಾಹಿತಿ ನೀಡಿದ್ದರೆ ಅಥವಾ ಸೂಕ್ತ ದಾಖಲೆ ಒದಗಿಸದಿದ್ದರೆ ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಳ್ಳುತ್ತದೆ.

ದಾಖಲಾತಿ ನಮೂನೆ ಸಲ್ಲಿಕೆಯ ವಿಳಂಬ: ತಾಂತ್ರಿಕ ದೋಷ ಅಥವಾ ಕೇಂದ್ರ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ (CRA) ದಾಖಲಾತಿ ನಮೂನೆಯನ್ನು ಸಲ್ಲಿಸುವಲ್ಲಿನ ವಿಳಂಬವು ಖಾತೆ ಸ್ಥಗಿತಗೊಳಿಸಲು ಕಾರಣವಾಗಬಹುದು.

ಆನ್‌ಲೈನ್‌ ಮೂಲಕ ಹೀಗೆ ಸಕ್ರಿಯಗೊಳಿಸಿ

ಕನಿಷ್ಠ ಕೊಡುಗೆ ಪಾವತಿಸಿ / ದಂಡ ಕಟ್ಟಿ: ಎನ್‌ಪಿಎಸ್‌ ಅಕೌಂಟ್‌ಗೆ ಲಾಗಿನ್‌ ಆಗಿ Contribution ವಿಭಾಗಕ್ಕೆ ತೆರಳಿ. ನಿಮ್ಮ ಖಾತೆ ಸ್ಥಗಿತಗೊಂಡ ಅವಧಿಯಿಂದ ತೊಡಗಿ ಇದುವರೆಗೆ ತಿಂಗಳಿಗೆ ಕನಿಷ್ಠ 500 ರೂ. ಪಾವತಿಸಿ. ಹೆಚ್ಚುವರಿಯಾಗಿ 100 ರೂ. ದಂಡವನ್ನೂ ಕಟ್ಟಿ.

ದೃಢೀಕರಣ ಮತ್ತು ಖಾತೆ ಪುನರುಜ್ಜೀವನ: ಆನ್‌ಲೈನ್‌ ಪಾವತಿಯನ್ನು ಯಶಸ್ವಿಯಾಗಿ ಮಾಡಿದ ನಂತರ ಇಮೇಲ್ ಅಕೌಂಟ್‌ಗೆ ದೃಢೀಕರಣದ ಸಂದೇಶ ಬರುತ್ತದೆ. ಬಳಿಕ ಪಿಎಫ್‌ಆರ್‌ಡಿಎ ನಿಮ್ಮ ಖಾತೆಯನ್ನು ಪರಿಶೀಲಿಸಿ ಕೆಲವೇ ದಿನಗಳಲ್ಲಿ ಅದನ್ನು ಮತ್ತೆ ಸಕ್ರಿಯಗೊಳಿಸುತ್ತದೆ.

ಆಫ್‌ಲೈನ್‌ ಮೂಲಕ ಸಕ್ರಿಯಗೊಳಿಸುವ ವಿಧಾನ

ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ: ದಂಡ ಸಹಿತ ಬಾಕಿ ಇರುವ ಮೊತ್ತವನ್ನು ಪಾವತಿಸಿ. ಬಳಿಕ ಎನ್‌ಪಿಎಸ್‌ ವೆಬ್‌ಸೈಟ್‌ನಿಂದ UOS-S10-A ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿ. ಅದನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಪ್ಯಾನ್‌ ಕಾರ್ಡ್‌ ಪ್ರತಿಯನ್ನು ಲಗತ್ತಿಸಿ. ಇದನ್ನು ನಿಮ್ಮ ಪಿಒಪಿ ಶಾಖೆ (ಬ್ಯಾಂಕ್ ಅಥವಾ ನಿಯೋಜಿತ ಏಜೆನ್ಸಿ)ಗೆ ನೀಡಿ. ಪಿಒಪಿ ನಿಮ್ಮ ಮನವಿಯನ್ನು ಪರಿಶೀಲಿಸಿ ಪಿಎಫ್‌ಆರ್‌ಡಿಎಗೆ ಕಳುಹಿಸುತ್ತದೆ. ಕೆಲವೇ ದಿನಗಳಲ್ಲಿ ಖಾತೆ ಸಕ್ರಿಯಗೊಂಡಿರುವ ಬಗ್ಗೆ ಎಸ್‌ಎಂಎಸ್‌ ಅಥವಾ ಇಮೇಲ್‌ಗೆ ಮಾಹಿತಿ ರವಾನೆಯಾಗುತ್ತದೆ.

ಆಧಾರ್ ದೃಢೀಕರಣ ಕಡ್ಡಾಯ

ದೇಶಾದ್ಯಂತ ಆನ್‌ಲೈನ್‌ ವಂಚನೆ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಖಾತೆಗಳ ಲಾಗಿನ್ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಏಪ್ರಿಲ್ 1ರಿಂದ ಹೊಸ ನಿಯಮ- ಕಡ್ಡಾಯ ಆಧಾರ್ ಅಥೆಂಟಿಕೇಷನ್‌ ಜಾರಿಗೆ ಬಂದಿದೆ.  

ಇದನ್ನೂ ಓದಿ: Money Guide: ಗಮನಿಸಿ; ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ: ಏನಿದು ಹೊಸ ನಿಯಮ ? ಯಾಕಾಗಿ ?

Continue Reading

ಮನಿ ಗೈಡ್

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌ ಮತ್ತು ಸುಕನ್ಯಾ ಸಮೃದ್ಧಿ; ಇವುಗಳ ಪ್ರಯೋಜನ ಏನೇನು?

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ನಿರ್ದಿಷ್ಟ ಉದ್ದೇಶಗಳೊಂದಿಗೆ ವಿನ್ಯಾಸಗೊಳಿಸಲಾದ (Money Guide) ಎರಡು ಪ್ರಮುಖ ಯೋಜನೆಗಳಾಗಿವೆ. ಮಹಿಳೆಯರಿಗೆ ಈ ಎರಡು ಯೋಜನೆಗಳ ಪ್ರಯೋಜನಗಳು ಏನೇನು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Money Guide
Koo

ಮಹಿಳೆಯರನ್ನು (women) ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು, ಲಿಂಗ ಸಮಾನತೆಯನ್ನು ಉತ್ತೇಜಿಸಲು ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಸಾಮಾನ್ಯವಾಗಿ ಮಹಿಳೆಯರು ಹಣಕಾಸಿನ ಸೇವೆಗಳ (Money Guide) ಸದುಪಯೋಗಪಡಿಸಲು ಮತ್ತು ಉಳಿತಾಯ ಕಾರ್ಯವಿಧಾನಗಳಲ್ಲಿ ಭಾಗವಹಿಸಲು ಅಡೆತಡೆಗಳನ್ನು ಎದುರಿಸುತ್ತಾರೆ. ವಿಶೇಷ ಉಳಿತಾಯ ಯೋಜನೆಗಳು (saving Scheme) ಅವರನ್ನು ಆರ್ಥಿಕ ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿದ್ದು, ಇದರಿಂದ ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸುತ್ತವೆ.

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme) ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು (Mahila Samman Saving Certificate) ನಿರ್ದಿಷ್ಟ ಉದ್ದೇಶಗಳೊಂದಿಗೆ ವಿನ್ಯಾಸಗೊಳಿಸಲಾದ ಎರಡು ಪ್ರಮುಖ ಯೋಜನೆಗಳಾಗಿವೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದು ಪ್ರಮುಖವಾಗಿದೆ. ಉಳಿತಾಯ ಮತ್ತು ಹೂಡಿಕೆಗೆ ಅವಕಾಶಗಳನ್ನು ಒದಗಿಸುವ ಮೂಲಕ ಈ ಯೋಜನೆಗಳು ಮಹಿಳೆಯರು ತಮ್ಮ ಹಣಕಾಸಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಮತ್ತು ಸ್ವತಂತ್ರ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.


ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾದ ಭಾರತ ಸರ್ಕಾರದ ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಮಾರ್ಚ್ 2025ರವರೆಗೆ ಎರಡು ವರ್ಷಗಳವರೆಗೆ ಲಭ್ಯವಿದೆ. ಇದು 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷದವರೆಗೆ ಠೇವಣಿ ಸೌಲಭ್ಯವನ್ನು ನೀಡುತ್ತದೆ.

ಬಡ್ಡಿ ದರ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಮಹಿಳೆಯರು ಅಥವಾ ಬಾಲಕಿಯರ ಹೆಸರಿನಲ್ಲಿ 2 ಲಕ್ಷದವರೆಗೆ ಠೇವಣಿ ಸೌಲಭ್ಯವನ್ನು 2 ವರ್ಷಗಳ ಅವಧಿಗೆ ಶೇ. 7.5ರ ಸ್ಥಿರ ಬಡ್ಡಿ ದರದಲ್ಲಿ ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ ನೀಡುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಅಲ್ಪಾವಧಿಗೆ ಮಹಿಳೆಯ ಹೆಸರಿನಲ್ಲಿ ಹೂಡಿಕೆ ಮಾಡುವ ಸ್ಥಿರ ಠೇವಣಿಗಳಿಗೆ (ಎಫ್‌ಡಿ) ಸೂಕ್ತವಾದ ಪರ್ಯಾಯವಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಅರ್ಹತೆ

ಯಾವುದೇ ಭಾರತೀಯ ನಿವಾಸಿ ಮಹಿಳೆ ಇದನ್ನು ಪಡೆಯಬಹುದು. ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ. ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ವಾಭಾವಿಕ ಅಥವಾ ಕಾನೂನುಬದ್ಧ ಪೋಷಕರಿಂದ ಖಾತೆಯನ್ನು ಮಾಡಬಹುದು.

ಠೇವಣಿ ಮಿತಿಗಳು

ಕನಿಷ್ಠ ಠೇವಣಿ 1000 ರೂ.ನಿಂದ ಗರಿಷ್ಠ 2 ಲಕ್ಷ ರೂ. ಪ್ರತಿ ಠೇವಣಿದಾರರ ಖಾತೆಗಳ ಸಂಖ್ಯೆಯ ಮೇಲೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಡಿಯಲ್ಲಿ ಎಲ್ಲಾ ಖಾತೆಗಳ ಒಟ್ಟು ಮೊತ್ತವು 2 ಲಕ್ಷ ರೂ.ಗಳನ್ನು ಮೀರುವುದಿಲ್ಲ. ಒಂದೇ ಗ್ರಾಹಕನಿಗೆ ಈ ಯೋಜನೆಯಡಿಯಲ್ಲಿ ಎರಡು ಖಾತೆಗಳನ್ನು ತೆರೆಯಬಹುದು. ಆದರೆ ಇದರ ನಡುವೆ 3 ತಿಂಗಳ ಮಧ್ಯಂತರ ಸಮಯವಿದೆ.

ಕೊನೆಯ ದಿನಾಂಕ

ಯೋಜನೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಸದ್ಯಕ್ಕೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಎರಡು ವರ್ಷಗಳ ಯೋಜನೆಯಾಗಿದ್ದು, ಇದು ಏಪ್ರಿಲ್ 2023ರಲ್ಲಿ ಪ್ರಾರಂಭವಾಯಿತು ಮತ್ತು ಮಾರ್ಚ್ 2025ರವರೆಗೆ ಮುಂದುವರಿಯುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ದೇಶಾದ್ಯಂತ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ (ಯೋಜನೆ) (SSY) ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಪ್ರಕಾರ ಆಕರ್ಷಕ ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳನ್ನು ಒದಗಿಸುವ ಮೂಲಕ ಹೆಣ್ಣುಮಕ್ಕಳಿಗೆ ಸಮೃದ್ಧ ಭವಿಷ್ಯವನ್ನು ಭದ್ರಪಡಿಸುವ ಗುರಿಯನ್ನು ಹೊಂದಿದೆ.


ಮಹಿಳಾ ಸಮ್ಮಾನ್ ಮತ್ತು ಸುಕನ್ಯಾ ಸಮೃದ್ಧಿ ನಡುವಿನ ವ್ಯತ್ಯಾಸ

ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರದ ಒಂದು ಸಣ್ಣ ಠೇವಣಿ ಯೋಜನೆಯಾಗಿದ್ದು, ಇದು ಹೆಣ್ಣು ಮಗುವಿಗೆ ಮಾತ್ರ ಮೀಸಲಾಗಿದೆ. ಈ ಯೋಜನೆಯು ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆ ವೆಚ್ಚವನ್ನು ಭರಿಸಲು ಉದ್ದೇಶಿಸಲಾಗಿದೆ.

ಸುಕನ್ಯಾ ಸಮೃದ್ಧಿ ಎಂಬುದು ಭಾರತದಲ್ಲಿನ ಸರ್ಕಾರಿ ಕಾರ್ಯಕ್ರಮವಾಗಿದ್ದು, ಕುಟುಂಬಗಳು ತಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಉಳಿಸಲು ಸಹಾಯ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಭಾಗವಾಗಿ 2015 ರಲ್ಲಿ ಪ್ರಾರಂಭಿಸಲಾಯಿತು. ಇದು ವಾರ್ಷಿಕವಾಗಿ ಶೇ. 8.2 ಬಡ್ಡಿದರವನ್ನು ನೀಡುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಹೊಂದಿದೆ.

ಅರ್ಹತೆ

10 ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು.

ಕನಿಷ್ಠ ಮತ್ತು ಗರಿಷ್ಠ ಠೇವಣಿ

ಕನಿಷ್ಠ 250 ರೂ. ಮತ್ತು ಗರಿಷ್ಠ ರೂ. ವಾರ್ಷಿಕವಾಗಿ 1.5 ಲಕ್ಷ ರೂ. ಗಳನ್ನು ಠೇವಣಿ ಮಾಡಬಹುದು.

ಹೂಡಿಕೆಯ ಅವಧಿ

ಕನಿಷ್ಠ 15 ವರ್ಷಗಳ ಕೊಡುಗೆಗಳ ಅಗತ್ಯವಿದೆ.

ಇದನ್ನೂ ಓದಿ: Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

ಭಾಗಶಃ ಹಿಂತೆಗೆದುಕೊಳ್ಳುವಿಕೆಗಳು

ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಅನಂತರ ಉನ್ನತ ಶಿಕ್ಷಣದ ವೆಚ್ಚಗಳಿಗಾಗಿ ಭಾಗಶಃ ಹಿಂಪಡೆಯುವಿಕೆಗಳನ್ನು ಅನುಮತಿಸಲಾಗುತ್ತದೆ.

ಖಾತೆ ಮುಚ್ಚುವಿಕೆ

ಖಾತೆಯು 21 ವರ್ಷಗಳಲ್ಲಿ ಪಕ್ವವಾಗುತ್ತದೆ ಅಥವಾ 18 ವರ್ಷ ತುಂಬಿದ ನಂತರ ಹುಡುಗಿಯ ಮದುವೆಯ ಸಂದರ್ಭದಲ್ಲಿ ಅಕಾಲಿಕವಾಗಿ ಖಾತೆಯನ್ನು ಮುಚ್ಚಬಹುದು.

Continue Reading
Advertisement
Maggi Tragedy
ದೇಶ35 mins ago

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Viral News
ವೈರಲ್ ನ್ಯೂಸ್42 mins ago

Viral News: ಲಾರಿಗೆ ಡಿಕ್ಕಿ ಹೊಡೆಯಿತು ಕಂತೆ ಕಂತೆ ನಗದು ಸಾಗಿಸುತ್ತಿದ್ದ ವ್ಯಾನ್‌; ನೋಟಿನ ರಾಶಿ ಹೇಗಿದೆ ನೋಡಿ

Morning Tips
ಲೈಫ್‌ಸ್ಟೈಲ್2 hours ago

Morning Tips: ಬೆಳಗ್ಗೆ 7 ಗಂಟೆಯೊಳಗೆ ನೀವು ಈ 7 ಕೆಲಸಗಳನ್ನು ಮಾಡುತ್ತೀರಾ?

Karnataka Weather Forecast
ಮಳೆ2 hours ago

Karnataka Weather : ಮೇ 13ರ ತನಕ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಯಂಕರ ಮಳೆ; ಬಿರುಗಾಳಿಯು ಸಾಥ್‌

Solar
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

Protein Supplements
ಆರೋಗ್ಯ3 hours ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ4 hours ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

International Nurses’s Day
ಆರೋಗ್ಯ4 hours ago

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

Dina Bhavishya
ಭವಿಷ್ಯ4 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

IPL 2024
ಪ್ರಮುಖ ಸುದ್ದಿ8 hours ago

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು18 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌