Site icon Vistara News

Money Guide: ಎಲ್ಐಸಿಯ ಈ ಪಾಲಿಸಿಯಿಂದ ಜೀವನ ಪರ್ಯಂತ ಆದಾಯ; ಏನಿದರ ವೈಶಿಷ್ಟ್ಯ?

insurence

insurence

ಬೆಂಗಳೂರು: ಜೀವನದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಹೀಗಾಗಿ ವಿಮೆ ಮಾಡಿಸುವುದು ಪ್ರಸ್ತುತ ಆಯ್ಕೆಯಲ್ಲ, ಅನಿವಾರ್ಯ ಎಂದು ತಜ್ಞರು ಹೇಳುತ್ತಾರೆ. ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ಇನ್ಶೂರೆನ್ಸ್‌ ಮಾಡಿಸುವುದುನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ. ದೇಶದಲ್ಲಿ ಇಂದು ಬೇರೆ ಬೇರೆ ಕಂಪನಿಗಳು ಆಕರ್ಷಕ ಕೊಡುಗೆಗಳೊಂದಿಗೆ ಇನ್ಶೂರೆನ್ಸ್‌ ನೀಡುತ್ತವೆ. ಅದರಲ್ಲೂ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (LIC) ಕಾಲ ಕಾಲಕ್ಕೆ ಉತ್ತಮ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಅಂತಹ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೊಸ ಯೋಜನೆಗೆ ಜೀವನ್ ಉತ್ಸವ್ ಪ್ಲಾನ್ (LIC Jeevan Utsav) ಎಂಬ ಹೆಸರಿಡಲಾಗಿದ್ದು, ಅದರಲ್ಲಿನ ವೈಶಿಷ್ಟ್ಯಗಳ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಜೀವನ್ ಉತ್ಸವ್ ಪ್ಲಾನ್ ಅನ್ನು ನವೆಂಬರ್ 29ರಂದು ಬಿಡುಗಡೆ ಮಾಡಲಾಗಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಯೋಜನೆ. ಆಯ್ದ ಪ್ರೀಮಿಯಂ ಪಾವತಿಸುವ ಅವಧಿಯ ಆಧಾರದ ಮೇಲೆ, ನಿರ್ದಿಷ್ಟ ವರ್ಷಗಳ ನಂತರ ವಾರ್ಷಿಕವಾಗಿ ವಿಮಾ ಮೊತ್ತದ 10% ಅನ್ನು ಮರುಪಾವತಿಸಲಾಗುತ್ತದೆ. ಈ ಯೋಜನೆಯು ಪಾಲಿಸಿದಾರರ ಜೀವಿತಾವಧಿಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ ಎಂಬುದು ಪ್ಲಸ್ ಪಾಯಿಂಟ್.

2 ಆಯ್ಕೆಗಳಿವೆ

ರೆಗ್ಯುಲರ್ ಇನ್‌ಕಮ್‌ ಬೆನಿಫಿಟ್‌ (Regular Income Benefit) ಮತ್ತು ಫ್ಲೆಕ್ಸಿ ಇನ್‌ಕಮ್‌ ಬೆನಿಫಿಟ್‌ (Flexi Income Benefit) ಎಂಬ ಎರಡು ಆಯ್ಕೆಗಳಲ್ಲಿ ಈ ಪಾಲಿಸಿ ಲಭ್ಯ. ಈ ಎರಡೂ ಆಯ್ಕೆಗಳಲ್ಲಿ ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ನಿಮಗೆ ಲಭಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಕನಿಷ್ಠ, ಗರಿಷ್ಠ ಮೊತ್ತ

ಕನಿಷ್ಠ ಮೂಲ ವಿಮಾ ಮೊತ್ತ 5,00,000 ರೂ. ಗರಿಷ್ಠ ಮೂಲ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ ಎಂದು ಎಲ್‌ಐಸಿ ತಿಳಿಸಿದೆ. ಈ ಪಾಲಿಸಿಯು 5ರಿಂದ 16 ವರ್ಷಗಳ ಸೀಮಿತ ಪ್ರೀಮಿಯಂ ಪಾವತಿಸುವ ಅವಧಿಯನ್ನು ಹೊಂದಿದ್ದು, ಜೀವಿತಾವಧಿಯ ಆದಾಯವನ್ನು ನೀಡುತ್ತದೆ.

ಅನುಕೂಲಗಳೇನು?

ರೆಗ್ಯುಲರ್ ಇನ್‌ಕಮ್‌ ಬೆನಿಫಿಟ್‌: ಎಲ್ಲ ಪ್ರೀಮಿಯಂ ಪಾವತಿಸಿದ್ದರೆ ಪ್ರತಿ ಪಾಲಿಸಿ ವರ್ಷದ ಕೊನೆಯಲ್ಲಿ ಮೂಲ ವಿಮಾ ಮೊತ್ತದ ಶೇ. 10ಕ್ಕೆ ಸಮಾನವಾದ ನಿಯಮಿತ ಆದಾಯ ಲಭಿಸಲಿದೆ. ಉದಾಹರಣೆಗೆ 5 ವರ್ಷದ ಪ್ಲಾನ್‌ ಖರೀದಿಸಿದ್ದರೆ 11ನೇ ವರ್ಷದಿಂದ ಜೀವನ ಪರ್ಯಂತ (100 ವರ್ಷದವರೆಗೆ) ನಿಯಮಿತ ಆದಾಯ ಲಭಿಸಲಿದೆ.

ಫ್ಲೆಕ್ಸಿ ಇನ್‌ಕಮ್‌ ಬೆನಿಫಿಟ್‌: ಕನಿಷ್ಠ ಗ್ಯಾರಂಟಿ ಮೊತ್ತದ ಶೇ. 10ರಷ್ಟು ಹಣವನ್ನು ಪ್ರತೀ ಪಾಲಿಸಿ ವರ್ಷದ ಕೊನೆಗೆ ನಿಮಗೆ ಕೊಡಲಾಗುತ್ತದೆ. ಉದಾಹರಣೆಗೆ ನೀವು 30ನೇ ವಯಸ್ಸಿನಲ್ಲಿ 5 ವರ್ಷದ ಪ್ಲಾನ್‌ ಖರೀದಿಸಿದ್ದರೆ 41ನೇ ವಯಸ್ಸಿನಿಂದ ಆದಾಯ ಲಭಿಸಲು ಆರಂಭವಾಗುತ್ತದೆ. ಒಂದು ವೇಳೆ 41ನೇ ವಯಸ್ಸಿನಲ್ಲಿ ಆದಾಯ ಬೇಡ ಎಂದಿದ್ದರೆ ಆ ಮೊತ್ತಕ್ಕೆ ವಾರ್ಷಿಕ ಶೇ. 5.5 ಬಡ್ಡಿ ವಿಧಿಸಲಾಗುತ್ತದೆ. ಬಳಿಕ ಯಾವಾಗ ಬೇಕಾದರೂ ಹಿಂಪಡೆಯಬಹುದು.

ಕ್ರಿಟಿಕಲ್‌ ಇಲ್‌ನೆಸ್‌ ರೈಡರ್‌

ಈ ಆಪ್ಶನ್‌ ಆಯ್ಕೆ ಮಾಡಿಕೊಂಡರೆ ಎಲ್‌ಐಸಿ ಸೂಚಿಸಿದ 15 ಕಾಯಿಲೆಗೆ ಹಣ ಲಭಿಸಲಿದೆ. ಉದಾಹರಣೆಗೆ ಪಾಲಿಸಿದಾತನಿಗೆ ಕಾಯಿಲೆ ಕಾಣಿಸಿಕೊಂಡು 35 ವರ್ಷ ಅಥವಾ ಆತನಿಗೆ 70 ವರ್ಷ ತುಂಬುವವರೆಗೆ ಅನುಕೂಲ ಲಭಿಸಲಿದೆ.

ಇದನ್ನೂ ಓದಿ: Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!

Exit mobile version