Site icon Vistara News

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ

Money Guide

Money Guide

ಬೆಂಗಳೂರು: ನಾಳೆ (ಮೇ 12) ವಿಶ್ವ ಅಮ್ಮಂದಿರ ದಿನ (Mother’s Day 2024). ಜೀವನಪೂರ್ತಿ ನಮಗಾಗಿ ನಿಸ್ವಾರ್ಥವಾಗಿ ಮಿಡಿಯುವ ಜೀವಕ್ಕೆ ಚಿಕ್ಕದೊಂದು ಧನ್ಯವಾದ ಹೇಳುವ ದಿನ ಇದು. ಅಮ್ಮಂದಿರ ಋಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಒಂದು ಚಿಕ್ಕ ಉಡುಗೊರೆ ಕೊಡುವ ಮೂಲಕ ಅವರ ಮೊಗದಲ್ಲಿ ನಗು ಅರಳಿಸಬಹುದು. ಈ ಅಮ್ಮಂದಿರ ದಿನದಲ್ಲಿ ನಿಮ್ಮ ಅಮ್ಮನಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯ ಪೈಕಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Saving Certificate Scheme)ವೂ ಒಂದು. ಏನಿದು ಯೋಜನೆ? ಈ ಯೋಜನೆ ಮಹಿಳೆಯರಿಗೆ ಹೇಗೆ ಪ್ರಯೋಜಕಾರಿ? ಮುಂತಾದ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ (Money Guide).

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಎಂದರೇನು?

ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ವಿಶೇಷ ಉಳಿತಾಯ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿದ್ದು, ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸುತ್ತದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಕೇಂದ್ರ ಬಜೆಟ್ ತನ್ನ 2023ರ ಬಜೆಟ್‌ನಲ್ಲಿ ಘೋಷಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ಮಾರ್ಚ್ 2025ರವರೆಗೆ ಲಭ್ಯವಿದೆ. ಇದು 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ.ವರೆಗೆ ಠೇವಣಿ ಇಡುವ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಕೇವಲ ಮಹಿಳೆಯರು ಹಾಗೂ ಯುವತಿಯರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಮಹಿಳೆಯರು ಸ್ವತಃ ತಾವೇ ಹಾಗೂ ಅಪ್ರಾಪ್ತ ಬಾಲಕಿಯರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ನಿರ್ವಹಿಸಬಹುದಾಗಿದೆ. ಹೀಗಾಗಿ ಈ ಬಾರಿ ನೀವು ತಾಯಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಿ.

ಅರ್ಹತೆ

ಬಡ್ಡಿ ದರ

ಈ ಖಾತೆಯನ್ನು ಹೊಂದಿರುವವರಿಗೆ ವಾರ್ಷಿಕ 7.5 ಪ್ರತಿಶತ ನಿಶ್ಚಿತ ಬಡ್ಡಿ ದರವನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಸ್ಥಿರ ಠೇವಣಿ ಹಾಗೂ ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಬಡ್ಡಿದರ ಸಿಗಲಿದೆ.

ಅವಧಿ

ಈ ಯೋಜನೆಯ ಮೆಚ್ಯೂರಿಟಿ ಅವಧಿ 2 ವರ್ಷ. ಈ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಖಾತೆದಾರರಿಗೆ ಮೆಚ್ಯೂರಿಟಿ ಮೊತ್ತ ಪಾವತಿಯಾಗುತ್ತದೆ. ಒಂದು ವೇಳೆ ಅವಧಿ ಮೀರುವ ಮುನ್ನ ಹಿಂಪಡೆಯಬೇಕೆಂದರೆ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ. 40ರಷ್ಟು ಹಿಂಪಡೆಯಬಹುದು. ಆದರೆ ಖಾತೆಯನ್ನು ತೆರೆದು ಒಂದು ವರ್ಷ ಆಗಿರಬೇಕು. ಜತೆಗೆ ಆಯ್ದ ಸಂದರ್ಭಗಳಲ್ಲಿ ಖಾತೆಗಳನ್ನು ಅಕಾಲಿಕವಾಗಿ ಬಂದ್ ಮಾಡಬಹುದು.

ಖಾತೆ ತೆರೆಯುವುದು ಹೇಗೆ?

ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕ್‌ಗಳಲ್ಲಿ ತೆರೆಯಬಹುದು. ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಿ, ಕೆವೈಸಿ ದಾಖಲೆಗಳನ್ನು ಒದಗಿಸಿ ಆರಂಭಿಕ ಠೇವಣಿ ಮೊತ್ತವನ್ನು ಇಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Exit mobile version