ಬೆಂಗಳೂರು: ಸಾಮಾನ್ಯವಾಗಿ ಮಾರ್ಚ್ ಎನ್ನುವುದು ಅತ್ಯಂತ ಬ್ಯುಸಿ ತಿಂಗಳು ಎನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಿರತರಾದರೆ ಜನ ಸಾಮಾನ್ಯರು, ತೆರಿಗೆ ಪಾವತಿದಾರರು ತಮ್ಮ ವಿವಿಧ ಹಣಕಾಸು ಬಾಧ್ಯತೆಗಳನ್ನು ಈ ತಿಂಗಳೊಳಗೆ ಮುಗಿಸಬೇಕಾಗುತ್ತದೆ. ಮುಂದಿನ ಆರ್ಥಿಕ ವರ್ಷ ಏಪ್ರಿಲ್ ಆರಂಭವಾಗುವುದಕ್ಕಿಂತ ಮುಂಚಿತವಾಗಿ ಕೆಲವೊಂದಿಷ್ಟು ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಇಂದಿನ ಮನಿಗೈಡ್ (Money Guide) ಮಾರ್ಚ್ 31ರೊಳಗೆ ಮುಗಿಸಲೇ ಬೇಕಾದ ಅಂತಹ ಒಂದಿಷ್ಟು ಕೆಲಸಗಳ ಮಾಹಿತಿ ನೀಡಲಿದೆ. ಗೊಂದಲಗಳನ್ನು ತಪ್ಪಿಸಲು ಕೊನೆಯ ದಿನಾಂಕದವೆರೆಗೆ ಕಾಯದೇ ಕೂಡಲೆ ಇದರತ್ತ ಗಮನ ಹರಿಸಬೇಕು ಎನ್ನುವುದು ತಜ್ಞರ ಸಲಹೆ.
ಮಾರ್ಚ್ 30
- ಫೆಬ್ರವರಿಯಲ್ಲಿ ಸೆಕ್ಷನ್ 194-ಐಎ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್ಮೆಂಟ್ ಸಲ್ಲಿಸಲು ಕೊನೆಯ ದಿನ.
- ಫೆಬ್ರವರಿಯಲ್ಲಿ ಸೆಕ್ಷನ್ 194-ಐಬಿ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್ಮೆಂಟ್ ಸಲ್ಲಿಸಲು ಕೊನೆಯ ದಿನಾಂಕ
- ಫೆಬ್ರವರಿಯಲ್ಲಿ ಸೆಕ್ಷನ್ 194-ಎಂ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್ಮೆಂಟ್ ಸಲ್ಲಿಸಲು ಕೊನೆಯ ದಿನಾಂಕ
- ಫೆಬ್ರವರಿಯಲ್ಲಿ ಸೆಕ್ಷನ್ 194-ಎಸ್ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್ಮೆಂಟ್ ಸಲ್ಲಿಸಲು ಕೊನೆಯ ದಿನಾಂಕ
ಮಾರ್ಚ್ 31
- ತೆರಿಗೆ ಉಳಿತಾಯ ಹೂಡಿಕೆಗಳು: 2023-2024ರ ಹಣಕಾಸು ವರ್ಷಕ್ಕೆ ತೆರಿಗೆ ಉಳಿಸಲು ಸಹಾಯ ಮಾಡುವ ಹೂಡಿಕೆಗಳನ್ನು ಮಾಡಲು ಇದು ಕೊನೆಯ ದಿನಾಂಕ.
- 2021-22ರ ಹಣಕಾಸು ವರ್ಷ ಪರಿಷ್ಕೃತ ಐಟಿಆರ್ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕ. ಆ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ತಮ್ಮ ರಿಟರ್ನ್ಸ್ ಸಲ್ಲಿಸಲು ವಿಫಲವಾದ ಅಥವಾ ಯಾವುದೇ ಆದಾಯವನ್ನು ವರದಿ ಮಾಡುವುದನ್ನು ಕಡೆಗಣಿಸಿದ ತೆರಿಗೆದಾರರು ಪರಿಷ್ಕೃತ ಐಟಿಆರ್ ಅಥವಾ ಐಟಿಆರ್-ಯು (ITR or ITR-U) ಸಲ್ಲಿಸಲು ಅವಕಾಶವಿದೆ.
ಪ್ರಧಾನ ಮಂತ್ರಿ ವ್ಯಯ ವಂದನ ಯೋಜನೆ (Pradhan Mantri Vaya Vandana Yojana)
60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪಿಎಂವಿವಿವೈ ಪಿಂಚಣಿ ಯೋಜನೆ ಆದಾಯದ ಭದ್ರತೆಯನ್ನು ಖಾತರಿಪಡಿಸುತ್ತಿದ್ದು, ಇದರ ನೋಂದಣಿಗೆ ಮಾರ್ಚ್ 31 ಕೊನೆಯ ದಿನ. 7.4% ವಾರ್ಷಿಕ ಬಡ್ಡಿದರದೊಂದಿಗೆ, ಈ ಯೋಜನೆಯು ತನ್ನ ಹತ್ತು ವರ್ಷಗಳ ಅವಧಿಯಲ್ಲಿ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ.
ಫಾಸ್ಟ್‌ಟ್ಯಾಗ್ ಅಪ್‌ಡೇಟ್
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಫಾಸ್ಟ್‌ಟ್ಯಾಗ್ ಬಳಕೆದಾರರು ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ಯೋಜನೆಯ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ.
ಎಸ್‌ಬಿಐ ಅಮೃತ್ ಕಲಶ್ ವಿಶೇಷ ಎಫ್‌ಡಿ
ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್ ಕಲಶ್ ಎಫ್‌ಡಿ ಡೆಪಾಸಿಟ್ ಸ್ಕೀಮ್‌ನ ಅವಧಿ ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ. ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: Money Guide: ಪಾಸ್‌ಪೋರ್ಟ್ ನವೀಕರಣ ಈಗ ಸುಲಭ; ಆನ್‌ಲೈನ್‌ನಲ್ಲಿ ರಿನೀವಲ್ ಮಾಡುವ ವಿಧಾನ ಇಲ್ಲಿದೆ