ಬೆಂಗಳೂರು: ಬದಲಾದ ಜೀವನ ಶೈಲಿ, ಬೆಲೆ ಏರಿಕೆಯಿಂದಾಗಿ ಪ್ರಸ್ತುತ ಪರ್ಸನಲ್ ಲೋನ್ (Personal loan) ಎನ್ನುವುದು ಅನಿವಾರ್ಯ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ದೇಶದಲ್ಲಿ ಗೃಹ ಸಾಲಗಳ ನಂತರ ಪರ್ಸನಲ್ ಲೋನ್ ಪಡೆಯುವವರ ಸಂಖ್ಯೆ ಹೆಚ್ಚಿದೆ. ಬೇಕಾಬಿಟ್ಟಿ ಸಾಲ ಪಡೆಯುವವರ ಸಂಖ್ಯೆ ಹೆಚ್ಚಿರುವುದರಿಂದ ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ತನ್ನ ನಿಯಗಳನ್ನು ತುಸು ಬಿಗಿಗೊಳಿಸಿದೆ. ಹೀಗಾಗಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿ(ಎನ್‌ಬಿಎಫ್‌ಸಿ) ಹೆಚ್ಚಿನ ಬಡ್ಡಿದರದಲ್ಲಿ ವೈಯಕ್ತಿಕ ಸಾಲ (Personal loan) ನೀಡಲು ಆರಂಭಿಸಿವೆ. ಹೀಗಾಗಿ ನೀವು ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಮುನ್ನ ಕೆಲವೊಂದು ವಿಚಾರಗಳತ್ತ ಗಮನ ಹರಿಸಬೇಕಾಗುತ್ತದೆ. ಆ ಕುರಿತಾದ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಬಾಕಿ ಇರುವ ಸಾಲವನ್ನು ಸರಿಯಾಗಿ ಪಾವತಿಸಿ
ನೀವು ಮೊದಲೇ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರತ್ತ ಗಮನ ಹರಿಸಿ. ಯಾಕೆಂದರೆ ಬ್ಯಾಂಕ್‌ಗಳು ಸಿಬಿಲ್ ಸ್ಕೋರ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಆಧಾರದಲ್ಲಿ ಪರ್ಸನಲ್ ಲೋನ್ ಒದಗಿಸುತ್ತವೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಅದರಲ್ಲೂ ಸ್ಕೋರ್ 700ಕ್ಕಿಂತ ಅಧಿಕ ಇರುವುದು ಮುಖ್ಯ. ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ಬಾಕಿ ಇರುವ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ಸಿಬಿಲ್ ಸ್ಕೋರ್ ಹೆಚ್ಚಿಸಬಹುದು. ಒಂದು ವೇಳೆ ನೀವು ಹಿಂದಿನ ಸಾಲವನ್ನು ಸಮರ್ಪಕವಾಗಿ ಪಾವತಿಸದಿದ್ದರೆ ಸಿಬಿಲ್ ಸ್ಕೋರ್ ಕಡಿಮೆಯಾಗಿ ಪರ್ಸನಲ್ ಲೋನ್ ಮಂಜೂರಾಗುವುದು ಕಷ್ಟವಾಗಬಹುದು.
ಮಾಸಿಕ ಆದಾಯದ ಪಾತ್ರವೂ ಮುಖ್ಯ
ಕ್ರೆಡಿಟ್ ಸ್ಕೋರ್ ಹೊರತಾಗಿ ಸಾಲ ಒದಗಿಸುವ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಅರ್ಜಿದಾರರ ಮಾಸಿಕ ಆದಾಯ, ಉದ್ಯೋಗ ಪ್ರೊಫೈಲ್ ಇತ್ಯಾದಿಗಳನ್ನೂ ಪರಿಗಣಿಸುತ್ತವೆ. ಸಾಲ ಒದಗಿಸುವವರು ಸ್ಥಿರ ಆದಾಯ ಹೊಂದಿರುವ ಸಾಲಗಾರರಿಗೆ ಆದ್ಯತೆ ನೀಡುತ್ತಾರೆ. ಸ್ಥಿರವಾದ ಉದ್ಯೋಗದ ಇತಿಹಾಸ ಆರ್ಥಿಕ ಸ್ಥಿರತೆಯನ್ನು ಸೂಚಿಸುತ್ತದೆ ಮತ್ತು ನಿಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.
ವೈಯಕ್ತಿಕ ಸಾಲವನ್ನು ಪಡೆಯಲು ಸ್ಥಿರವಾದ ಆದಾಯದ ಮೂಲವು ನಿರ್ಣಾಯಕ ಘಟಕ. ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡಲು ಬ್ಯಾಂಕ್‌ಗಳು ಅರ್ಜಿದಾರರು ಕನಿಷ್ಠ 30,000 ರೂ.ಗಳ ಮಾಸಿಕ ವೇತನ ಹೊಂದಿದ್ದಾರೆಯೇ ಎನ್ನುವುದನ್ನು ಗಮನಿಸುತ್ತದೆ. ಇದೊಂದೇ ಅಲ್ಲ ನಿಮ್ಮಿಂದ ಸಾಲ ಮರುಪಾವತಿಸಲು ಸಾಧ್ಯವೇ ಎನ್ನುವುದನ್ನು ಸಾಕಷ್ಟು ಬಾರಿ ಲೆಕ್ಕಾಚಾರ ಹಾಕಿಯೇ ಮುಂದುವರಿಯಿರಿ. ಇಲ್ಲದಿದ್ದರೆ ಇದು ದೊಡ್ಡ ತಲೆನೋವಾಗಿ ಬದಲಾಗಬಹುದು.
ಅವಧಿ ಬಗ್ಗೆ ಮಾಹಿತಿ ಇರಲಿ
ವೈಯಕ್ತಿಕ ಸಾಲದ ಬಗ್ಗೆ ಯೋಚಿಸುವಾಗ ಸಾಲದ ಅವಧಿಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಸಾಮಾನ್ಯವಾಗಿ ಈ ಸಾಲದ ಅವಧಿ 12ರಿಂದ 60 ತಿಂಗಳವರೆಗೆ ಇರುತ್ತದೆ. ಕೆಲವೊಮ್ಮೆ 96 ತಿಂಗಳವರೆಗೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಮರುಪಾವತಿ ಸಾಮರ್ಥ್ಯ ನೋಡಿಕೊಂಡು ಸೂಕ್ತ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ. ಇನ್ನೊಂದು ಮುಖ್ಯ ವಿಚಾರ ಎಂದರೆ ಸಾಲ ನಿಜವಾಗಿಯೂ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ? ಅನಿವಾರ್ಯವೇ? ಎನ್ನುವುದನ್ನು ಪರಿಶೀಲಿಸಿಯೇ ಲೋನ್‌ಗೆ ಅಪ್ಲೈ ಮಾಡಿ.
ವಿವಿಧ ಕಡೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಡಿ
ಏಕಕಾಲಕ್ಕೆ ವಿವಿಧ ಕಡೆಗಳಲ್ಲಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಕೂಡ ನಿಮ್ಮ ಸಿಬಿಲ್ ಸ್ಕೋರ್‌ಗೆ ಹೊಡೆತ ನೀಡುತ್ತದೆ. ಆದ್ದರಿಂದ ಅಲ್ಪಾವಧಿಯಲ್ಲಿ ಅನೇಕ ಸಾಲದಾತರೊಂದಿಗೆ ನೇರ ಸಾಲದ ಅರ್ಜಿಗಳನ್ನು ಸಲ್ಲಿಸುವುದನ್ನು ತಪ್ಪಿಸಿ.
ಇದನ್ನೂ ಓದಿ: Money Guide: ಪರ್ಸನಲ್ ಲೋನ್ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!