ಬೆಂಗಳೂರು: ಬದಲಾದ ಜೀವನ ಶೈಲಿ, ಒತ್ತಡ ಬದುಕು ಇತ್ಯಾದಿ ಕಾರಣಗಳಿಂದ ದಿನ ಕಳೆದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಹಿರಿಯ ನಾಗರಿಕರಿಂದ ಹಿಡಿದು ಮಕ್ಕಳಿಂದ ಹಿಡಿದು ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಅದರಲ್ಲಿಯೂ ಕೆಲವೊಮ್ಮೆ ಆದಾಯದ ಬಹುಪಾಲು ಚಿಕಿತ್ಸೆಗಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದೇ ಕಾರಣಕ್ಕೆ ಹಲವರು ಸೋತು ಹೈರಾಣಾಗುತ್ತಾರೆ. ಆದರೆ ನೆನಪಿರಲಿ ಕೆಲವೊಂದು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಬಹುದು. ಆ ಪೈಕಿ ಆರೋಗ್ಯ ವಿಮೆ (Health Insurance) ಮಾಡಿಸುವುದು ಮುಖ್ಯವಾದುದು. ಈಗ ಕಿರಿಯರು ಮಾತ್ರವಲ್ಲ ಹಿರಿಯರಿಗೂ ಹೆಲ್ತ್ ಇನ್ಶೂರೆನ್ಸ್ ಲಭ್ಯ (Senior Health Insurance). ಈ ಬಗೆಗಿನ ಮಾಹಿತಿ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಯಾಕಾಗಿ ಅಗತ್ಯ?
ವಯಸ್ಸಾದವರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಭಾರತದಲ್ಲಿನ ಬಹುಪಾಲು ಹಿರಿಯ ನಾಗರಿಕರು ಆರೋಗ್ಯ ವಿಮೆ ಹೊಂದಿಲ್ಲ. ಆರೋಗ್ಯ ಸೇವೆಗಳ ವೆಚ್ಚಗಳು ಏರುತ್ತಲೇ ಇದ್ದರೂ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಹೆಲ್ತ್ ಇನ್ಶೂರೆನ್ಸ್ ಮಾಡಿಸಿಲ್ಲ ಎನ್ನುವ ಕಳವಳಕಾರಿ ಅಂಶ ಬಹಿರಂಗಗೊಂಡಿದೆ. ಜನಗಣತಿ ವರದಿಗಳ ಪ್ರಕಾರ ಭಾರತದಲ್ಲಿ ಪ್ರಸ್ತುತ 13.8 ಕೋಟಿಗೂ ಹೆಚ್ಚು ವೃದ್ಧರಿದ್ದಾರೆ. 2031ರ ವೇಳೆಗೆ ಈ ಸಂಖ್ಯೆ ಸುಮಾರು 19 ಕೋಟಿಗೆ ತಲುಪಲಿದೆ. ಹೀಗಾಗಿ ಹಿರಿಯ ನಾಗರಿಕರ ಆರೋಗ್ಯಕ್ಕಾಗಿ ಈಗಿನಿಂದಲೇ ಯೋಜನೆ ರೂಪಿಸುವುದು ಅಗತ್ಯ. ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮಾತ್ರವಲ್ಲ ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಲು ಆರೋಗ್ಯ ವಿಮೆ ಮಾಡಿಸಬೇಕಾಗಿದೆ.
ಹಿರಿಯ ನಾಗರಿಕರ ಆರೋಗ್ಯ ವಿಮೆಯಲ್ಲಿನ ವಿಧಗಳು
ಫ್ಯಾಮಿಲಿ ಫ್ಲೋಟರ್ ಯೋಜನೆ: ಹಿರಿಯರು ಸೇರಿದಂತೆ ಇಡೀ ಕುಟುಂಬವನ್ನು ಒಳಗೊಂಡಿರುವ ಒಂದೇ ಪಾಲಿಸಿ.
ವೈಯಕ್ತಿಕ ಯೋಜನೆ: ಹಿರಿಯರ ಆರೋಗ್ಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವರ ಹೆಸರಿನಲ್ಲಿ ಮಾಡಿಸುವ ಪಾಲಿಸಿ.
ಹಿರಿಯ ನಾಗರಿಕರ ಆರೋಗ್ಯ ಯೋಜನೆ: ವೃದ್ಧರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗಾಗಿ ಜಾರಿಯಲ್ಲಿರುವ ಪಾಲಿಸಿ. ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನು ಇದು ಒಳಗೊಂಡಿರುತ್ತದೆ.
ಗಂಭೀರ ಆರೋಗ್ಯ ಸಮಸ್ಯೆಯಿಂದ ರಕ್ಷಣೆ: ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ನಿರ್ದಿಷ್ಟ ಗಂಭೀರ ಕಾಯಿಲೆಗಳಿಗೆ ಮಾಡಿಬಹುದಾದ ವಿಮೆ.
ವೈಯಕ್ತಿಕ ಅಪಘಾತ(ಪಿಎ)ದಿಂದ ರಕ್ಷಣೆ: ಆಕಸ್ಮಿಕವಾಗಿ ಉಂಟಾಗುವ ಗಾಯಗಳು, ಸಾವು, ಅಂಗವೈಕಲ್ಯ ಮತ್ತು ಅನಾರೋಗ್ಯದ ವೈದ್ಯಕೀಯ ವೆಚ್ಚಗಳಿಗೆ ಮಾಡಿಸಬಹುದಾದ ಪಾಲಿಸಿ.
ಆರೈಕೆ ಯೋಜನೆ: ಒಟ್ಟಾರೆ ಆರೋಗ್ಯ, ನಿಯಮಿತ ತಪಾಸಣೆ, ಲಸಿಕೆಗಳ ಅಗತ್ಯಕ್ಕಾಗಿ ಮಾಡಿಸಬಹುದಾದ ವಿಮಾ ಯೋಜನೆ.
ಆರೋಗ್ಯ ಸಂಜೀವಿನಿ ಯೋಜನೆ: ಹಿರಿಯರು ಮಾತ್ರವಲ್ಲ ಎಲ್ಲ ವಯಸ್ಸಿನವರಿಗೆ ಸರಳೀಕೃತ ಆಯ್ಕೆ.
ಹೊಸ ನಿಯಮ ಏನು ಹೇಳುತ್ತದೆ?
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇತ್ತೀಚೆಗೆ ಹಿರಿಯರ ಆರೋಗ್ಯ ವಿಮೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಯಿಸಿದೆ. ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸಲು ಒಬ್ಬ ವ್ಯಕ್ತಿಗೆ ಇದ್ದ 65 ವರ್ಷಗಳ ಮಿತಿಯನ್ನು ತೆಗೆದುಹಾಕಿದೆ. ಆರೋಗ್ಯ ವಿಮೆಯ ಕಾಯುವ ಅವಧಿಯನ್ನು (Waiting period) 48 ತಿಂಗಳಿಂದ 36ಕ್ಕೆ ಇಳಿಸಲಾಗಿದೆ. ನಿರ್ಧಿಷ್ಟ ಕಾಯಿಲೆಗಳಿಗೆ ಕಾಯುವ ಅವಧಿಯನ್ನು 8ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ.
ಭವಿಷ್ಯದ ಭರವಸೆ
ಒಟ್ಟಿನಲ್ಲಿ ಹಲವು ಸುಧಾರಣೆಗಳ ಮೂಲಕ ಹಿರಿಯರ ಆರೋಗ್ಯ ವಿಮೆಯ ಭವಿಷ್ಯದ ಭರವಸೆಯಾಗಿ ಗೋಚರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ಯಮವು ವಿಕಸನಗೊಳ್ಳುತ್ತಲೇ ಇರುವುದರಿಂದ ಮುಂದೆ ನಾವು ಹೆಚ್ಚು ಸೂಕ್ತವಾದ ಯೋಜನೆ, ವರ್ಧಿತ ವ್ಯಾಪ್ತಿಯ ಆಯ್ಕೆಗಳನ್ನು ನಿರೀಕ್ಷಿಸಬಹುದು. ಜತೆಗೆ ವಿಮಾ ಪೂರೈಕೆದಾರರು ಹಿರಿಯರ ವೈವಿಧ್ಯಮಯ ಆರೋಗ್ಯ ಅಗತ್ಯಗಳನ್ನು ಪೂರೈಸುವ ಹೊಸ ಪಾಲಿಸಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: Health Insurance: ಆರೋಗ್ಯ ವಿಮೆ ಖರೀದಿಗೆ ಇನ್ನು ವಯಸ್ಸಿನ ನಿರ್ಬಂಧ ಇಲ್ಲ; ಹೊಸ ಬದಲಾವಣೆ ಏನೇನು?