ಬೆಂಗಳೂರು: ಸದ್ಯ ಭಾರತದಲ್ಲಿ ಡಿಜಿಟಲ್ ಪೇಮೆಂಟ್ (Digital Payment) ವಿಧಾನ ಜನಪ್ರಿಯಗೊಂಡಿದೆ. ಮಾಲ್ಗಳಿಂದ ಹಿಡಿದು ತಳ್ಳುಗಾಡಿಯವರೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಮೂಲಕ ವ್ಯವಹಾರ ನಡೆಸಲಾಗುತ್ತದೆ. ನಗರ, ಗ್ರಾಮಾಂತರ ಪ್ರದೇಶವೆಂಬ ಬೇಧವಿಲ್ಲದೆ ಬಹುತೇಕರು ಡಿಜಿಟಲ್ ಪೇಮೆಂಟ್ ಬಳಸುತ್ತಿದ್ದಾರೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಬಳಕೆಯನ್ನು ವ್ಯಾಪಕಗೊಳಿಸಿವೆ. ಅದಾಗ್ಯೂ ಕೆಲವೊಂದು ಕಡೆ ನಗದು ಬಳಕೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ನಾವು ಎಟಿಎಂ ಬಳಸುವಾಗ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವುದರ ವಿವರ ಇಲ್ಲಿದೆ (Money Guide).
ಎಟಿಎಂ ವಹಿವಾಟಿನ ಸಮಯದಲ್ಲಿನ ನಮ್ಮ ಅತೀ ಚಿಕ್ಕ ನಿರ್ಲಕ್ಷ್ಯ ಮುಂದೆ ಅತೀ ದೊಡ್ಡ ನಷ್ಟಕ್ಕೆ ಕಾರಣವಾಗಬಲ್ಲದು. ಅದರಲ್ಲೂ ಇತ್ತೀಚೆಗೆ ಸೈಬರ್ ಅಪರಾಧ ಹೆಚ್ಚಿಸುವ ಹಿನ್ನಲೆಯಲ್ಲಿ ಎಟಿಎಂ ಬಳಸುವಾಗ ಸುರಕ್ಷತೆ ಮತ್ತು ಭದ್ರತೆಯತ್ತ ಗಮನ ಹರಿಸುವುದು ಅತೀ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಜತೆಗೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಟಿಪ್ಸ್ ಅನ್ನೂ ನೀಡುತ್ತಾರೆ.
ಭಾರತದಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ನಗದು ವಹಿವಾಟಿಗಾಗಿ ಎಟಿಎಂ ಬಳಸುತ್ತಾರೆ. ಹೀಗಾಗಿ ಈ ಸಂಬಂಧಿತ ವಂಚನೆಯ ಅಪಾಯವು ಗಮನಾರ್ಹವಾಗಿ ಅಧಿಕ. ಕೆಲವು ಬಾರಿ ಹೀಗೆ ಕಳವಾದ ನಗದು ಮರಳಿ ಪಡೆಯಲು ಸಾಧ್ಯವಾಗುತ್ತದೆಯಾದರೂ ಇದರ ಪ್ರಕ್ರಿಯೆ ದೀರ್ಘ ಮತ್ತು ಸವಾಲಿನಿಂದ ಕೂಡಿರುತ್ತದೆ. ಇದು ಮತ್ತಷ್ಟು ಒತ್ತಡ ಮತ್ತು ಅನಾನುಕೂಲತೆಯನ್ನು ಉಂಟು ಮಾಡುತ್ತದೆ.
ಹೀಗೆ ಮಾಡಿ
- ಸುರಕ್ಷಿತ ಪ್ರದೇಶವನ್ನು ಆಯ್ದುಕೊಳ್ಳಿ: ಜನ ಸಂಚಾರ ಅಧಿಕವಿರುವ ಪ್ರದೇಶದಲ್ಲಿನ ಎಟಿಎಂಗಳನ್ನೇ ಆಯ್ದುಕೊಳ್ಳಿ. ಅದರಲ್ಲೂ ಸೆಕ್ಯುರಿಟಿ ಗಾರ್ಡ್ ಇರುವ ಎಟಿಎಂ ನಿಮ್ಮ ಆದ್ಯತೆಯಾಗಿರಲಿ. ಜನ ಸಂಚಾರ ಅಷ್ಟಾಗಿ ಇರದ, ಮಂದ ಬೆಳಕಿರುವ ಪ್ರದೇಶದ ಎಟಿಎಂಗೆ ಅದರಲ್ಲೂ ತಡರಾತ್ರಿಯಲ್ಲಿ ತೆರಳಲೇಬೇಡಿ.
- ಪರಿಶೀಲಿಸಿ: ಎಟಿಎಂ ಯಂತ್ರವನ್ನು ಹ್ಯಾಕ್ ಮಾಡಿರುವ ಸಾಕಷ್ಟು ಉದಾಹರಣೆ ಈ ಹಿಂದೆ ವರದಿಯಾಗಿದೆ. ಹೀಗಾಗಿ ಎಟಿಎಂ ಬಳಸುವ ಮುನ್ನ ಯಂತ್ರದ ಬಳಿ ಅನುಮಾನಾಸ್ಪದ ವಸ್ತುಗಳಿವೆಯೇ ಎನ್ನುವುದು ಪರಿಶೀಲಿಸಿ. ಯಂತ್ರಕ್ಕೆ ಹಾನಿಯಾಗಿದ್ದರೆ ಬಳಸಲೇ ಬೇಡಿ. ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ.
- ಪಿನ್ ಗೌಪ್ಯವಾಗಿರಲಿ: ಯಾವತ್ತೂ ಕೈಯಿಂದ ಮರೆಮಾಡಿ, ಯಾರಿಗೂ ಕಾಣಿಸದಂತೆ ಪಿನ್ ನಂಬರ್ ನಮೂದಿಸಿ. ಯಾವುದೇ ಕಾರಣಕ್ಕೂ, ಯಾರ ಬಳಿಯೂ ಪಿನ್ ನಂಬರ್ ಹಂಚಿಕೊಳ್ಳಬೇಡಿ.
- ಸಮೀಪ ಯಾರೂ ಇರದಂತೆ ನೋಡಿಕೊಳ್ಳಿ: ನೀವು ನಗದು ಪಡೆಯಲು ತೆರೆಳುವಾಗ ನಿಮ್ಮ ತೀರಾ ಸಮೀಪದಲ್ಲಿ ಯಾರೂ ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ.
- ವಹಿವಾಟು ವಿವರ ಗೌಪ್ಯವಾಗಿರಲಿ: ನಿಮ್ಮ ವಹಿವಾಟಿನ ವಿವರಗಳನ್ನು ಚರ್ಚಿಸುವುದನ್ನು ಅಥವಾ ಎಟಿಎಂನಿಂದ ಪಡೆದ ಹಣವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ತಪ್ಪಿಸಿ. ನಿಮ್ಮ ವಹಿವಾಟಿನ ರಸೀದಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿ.
- ಕಾರ್ಡ್ ಮರೆಯದೇ ಕಲೆಕ್ಟ್ ಮಾಡಿ: ನಗದು ಪಡೆದ ಬಳಿಕ ಮರೆಯದೇ ಕಾರ್ಡ್ ಕಲೆಕ್ಟ್ ಮಾಡಿ.
- ಬ್ಯಾಂಕ್ ಮೆಸೇಜ್ ನಿರ್ಲಕ್ಷಿಸಬೇಡಿ: ನಿಮಗೆ ಗೊತ್ತಿಲ್ಲದಂತೆ ನಗದು ವ್ಯವಹಾರ ನಡೆದಿರುವ ಬಗ್ಗೆ ಮೆಸೇಜ್ ಬಂದರೆ ಕೂಡಲೇ ಬ್ಯಾಂಕ್ನ ಗಮನಕ್ಕೆ ತನ್ನಿ.
- ಅಲರ್ಟ್ ಸೌಲಭ್ಯ ಪಡೆದುಕೊಳ್ಳಿ: ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ನೀಡುವ ಎಸ್ಎಂಎಸ್, ಇಮೇಲ್ ಅಲರ್ಟ್ ಸೌಲಭ್ಯ ಪಡೆದುಕೊಳ್ಳಿ.
- ಕಳೆದು ಹೋದರೆ ಬ್ಲಾಕ್ ಮಾಡಿ: ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಕಳೆದು ಹೋದರೆ ಅಥವಾ ಕಳವಾದರೆ ಕೂಡಲೆ ಬ್ಯಾಂಕ್ನವರ ಗಮನಕ್ಕೆ ತಂದು ಬ್ಲಾಕ್ ಮಾಡಿ.
ಇದನ್ನೂ ಮರೆಯಬೇಡಿ
- ನಿಯಮಿತವಾಗಿ ಪಿನ್ ನಂಬರ್ ಬದಲಾಯಿಸಿ.
- ಡೆಬಿಟ್ ಕಾರ್ಡ್ ಅಥವಾ ಬೇರೆಲ್ಲೂ ಯಾವ ಕಾರಣಕ್ಕೂ ಪಿನ್ ನಂಬರ್ ಬರೆದಿಡಬೇಡಿ. ಪಿನ್ ನಂಬರ್ ನಿಮ್ಮ ನೆನಪಿನಲ್ಲಿರಲಿ.
- ನೆನಪಿರಲಿ ಬ್ಯಾಂಕ್ / ಆರ್ಬಿಐ / ಸರ್ಕಾರ ಯಾವತ್ತೂ, ಯಾವ ಕಾರಣಕ್ಕೂ ನಿಮ್ಮ ಪಿನ್ ನಂಬರ್ ಕೇಳುವುದಿಲ್ಲ. ಸೈಬರ್ ವಂಚಕರು ಕರೆ ಮಾಡಿ ಪಿನ್ / ಒಟಿಪಿ ಕೇಳಿದರೆ ಯಾವ ಕಾರಣಕ್ಕೂ ನೀಡಬೇಡಿ.
- ನಗದು ಎನ್ಕ್ಯಾಶ್ ಮಾಡಲು ತೆರಳಿದಾಗ ಅಪರಿಚಿತರು ಸಮೀಪ ಬರದಂತೆ ನೋಡಿಕೊಳ್ಳಿ.
- ಮಾಲ್ / ಹೋಟೆಲ್ / ಅಂಗಡಿಗಳಲ್ಲಿ ನಿಮ್ಮ ಉಪಸ್ಥಿತಿಯಲ್ಲೇ ಕಾರ್ಡ್ ಸ್ಲೈಪ್ ಮಾಡುವಂತಿರಬೇಕು.
ಇದನ್ನೂ ಓದಿ: Money Guide: 436 ರೂ. ಪ್ರೀಮಿಯಂ ಮೊತ್ತಕ್ಕೆ 2 ಲಕ್ಷ ರೂ. ಕವರ್; ಏನಿದು ಪಿಎಂಜೆಜೆಬಿ ಯೋಜನೆ? ಯಾರಿಗೆಲ್ಲ ಅನುಕೂಲ?