Site icon Vistara News

Money Guide: ಹೋಮ್‌ ಲೋನ್‌ ಇಎಂಐ ಕಡಿಮೆ ಮಾಡಬೇಕೆ? ಚಿಂತೆ ಬಿಟ್ಟು ಈ ಟಿಪ್ಸ್‌ ಫಾಲೋ ಮಾಡಿ

Money Guide

Money Guide

ಬೆಂಗಳೂರು: ಸ್ವಂತದ್ದೊಂದು ಸೂರು ಹೊಂದಿರಬೇಕು ಎನ್ನುವುದು ಬಹುತೇಕ ಕನಸು. ಸದ್ಯಕ್ಕಂತೂ ಈ ಕನಸು ನನಸು ಮಾಡಬೇಕಾದರೆ ಗೃಹ ಸಾಲ (Home Loan)ದ ಮೊರೆ ಹೋಗುವುದು ಮಧ್ಯಮ ವರ್ಗದವರಿಗೆ ಅನಿವಾರ್ಯ ಎನಿಸಿಕೊಂಡಿದೆ. ಈ ಹೋಮ್‌ ಲೋನ್‌ ಮೇಲೆ ಪರಿಣಾಮ ಬೀರುವ ರೆಪೋ ದರದಲ್ಲಿ (Repo Rate) ಆರ್‌ಬಿಐ (Reserve Bank of India) ಇತ್ತೀಚೆಗೆ ಯಾವುದೇ ಬದಲಾವಣೆ ಘೋಷಿಸಿಲ್ಲ. ಅಂದರೆ ನಿಮ್ಮ ಗೃಹ ಸಾಲದ ಇಎಂಐ ಶೀಘ್ರದಲ್ಲೇ ಕಡಿಮೆಯಾಗುವ ನಿರೀಕ್ಷೆಯಿಲ್ಲ ಎಂದರ್ಥ. ಹಾಗಂತ ಚಿಂತಿಸಬೇಕಾಗಿಲ್ಲ. ಆರ್‌ಬಿಐ ರೆಪೋ ದರ ಇಳಿಕೆ ಮಾಡದಿದ್ದರೂ ನಾವು ಕೆಲವೊಂದು ಅಂಶಗಳತ್ತ ಗಮನ ಹರಿಸಿದರೆ ಪಡೆದುಕೊಂಡಿರುವ ಸಾಲದ ಮೇಲಿನ ಇಎಂಐ ಅನ್ನು ಕಡಿಮೆ ಮಾಡಲು ಸಾಧ್ಯವಿದೆ. ಅದು ಹೇಗೆ ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ.

ರೆಪೋ ದರ ಎಂದರೇನು?

ಇಎಂಐಯತ್ತ ಗಮನ ಹರಿಸುವ ಮುನ್ನ ರೆಪೋ ದರ ಎಂದರೇನು? ಅದು ಹೇಗೆ ನಮ್ಮ ಸಾಲದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಗಮನಿಸೋಣ. ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿಯನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದನ್ನೇ ರೆಪೋ ರೇಟ್‌ ಎನ್ನುತ್ತಾರೆ. ಕೆಲವೊಮ್ಮೆ, ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್‌ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ ಬ್ಯಾಂಕ್‌ಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.

ಇಎಂಐ ಕಡಿಮೆ ಮಾಡಲು ಈ ಕ್ರಮ ಅನುಸರಿಸಿ

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫಾರ್‌ ಆಯ್ಕೆ: ಇತರ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ನೀವು ಸಾಲ ಪಡೆದುಕೊಂಡಿರುವ ಬ್ಯಾಂಕ್‌ನಿಂದ ಕಡಿಮೆ ಬಡ್ಡಿದರಗಳನ್ನು ನೀಡುತ್ತಿದ್ದರೆ ತಡಮಾಡಬೇಡಿ. ಕಡಿಮೆ ಬಡ್ಡಿದರ ಒದಗಿಸುವ ಬ್ಯಾಂಕ್‌ಗೆ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ವರ್ಗಾಯಿಸಿ (Home Loan Balance Transfer). ಆದಾಗ್ಯೂ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದಕ್ಕೆ ತಗುಲುವ ಶುಲ್ಕಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ.

ಮಾತುಕತೆ ನಡೆಸಿ: ಕೆಲವೊಮ್ಮೆ ಸಾಲ ನೀಡಿದ ಸಂಸ್ಥೆ ಬಡ್ಡಿದರದ ಬಗ್ಗೆ ಮಾತುಕತೆ ನಡೆಸಲು ಸಿದ್ಧವಾಗಿರುತ್ತದೆ. ಜತೆಗೆ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಉಳಿಸಿಕೊಳ್ಳಲು ವಿಶೇಷ ಯೋಜನೆಗಳನ್ನು ನೀಡಲು ತಯಾರಿರುತ್ತದೆ. ಅಂತಹ ಯಾವುದೇ ಆಯ್ಕೆ ಲಭ್ಯವಿದೆಯೇ ಎಂಬುದನ್ನು ಮಾತುಕತೆಯ ಮೂಲಕ ಕಂಡುಕೊಳ್ಳಿ.

ಪೂರ್ವ ಪಾವತಿಯತ್ತ ಗಮನ ಹರಿಸಿ: ನಿಮ್ಮಲ್ಲಿ ಹೆಚ್ಚುವರಿ ಹಣವಿದ್ದರೆ ನಿಮ್ಮ ಹೋಮ್ ಲೋನ್‌ಗೆ ಭಾಗಶಃ ಪೂರ್ವ ಪಾವತಿ ಮಾಡುವುದರತ್ತ ಗಮನ ಹರಿಸಿ. ಇದು ಬಾಕಿ ಇರುವ ಅಸಲು ಮೊತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆ ಮೂಲಕ ನಿಮ್ಮ ಇಎಂಐ ಮೊತ್ತ ಅಥವಾ ಸಾಲದ ಅವಧಿಯನ್ನು ಕಡಿಮೆ ಮಾಡಬಹುದು.

ಸಾಲದ ಅವಧಿಯನ್ನು ಹೆಚ್ಚಿಸಿ: ಸಾಲದ ಅವಧಿಯನ್ನು ವಿಸ್ತರಿಸುವುದರಿಂದ ನಿಮ್ಮ ಇಎಂಐ ಹೊರೆ ಕಡಿಮೆ ಮಾಡಬಹುದು. ಆದಾಗ್ಯೂ ಇದು ಮಾಸಿಕ ಪಾವತಿಗಳನ್ನು ಕಡಿಮೆ ಮಾಡಬಹುದಾದರೂ ಸಾಲದ ಒಟ್ಟಾರೆ ಬಡ್ಡಿಯನ್ನು ಹೆಚ್ಚಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

ವಿಶೇಷ ಯೋಜನೆಗಳನ್ನು ಪರಿಶೀಲಿಸಿ: ಕೆಲವು ಸಾಲದಾತರು ಕೆಲವು ಸಮಯಗಳಲ್ಲಿ ವಿಶೇಷ ಯೋಜನೆಗಳು ಅಥವಾ ರಿಯಾಯಿತಿಗಳನ್ನು ಪ್ರಕಟಿಸುತ್ತಾರೆ. ಅಂತಹ ಕೊಡುಗೆಗಳ ಮೇಲೆ ಕಣ್ಣಿಡಿ ಮತ್ತು ಯಾವುದಾದರೂ ನಿಮಗೆ ಅನ್ವಯವಾಗುತ್ತದೆಯೇ ಎನ್ನುವುದನ್ನು ಗಮನಿಸಿ.

ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಿ: ಉತ್ತಮ ಕ್ರೆಡಿಟ್ ಸ್ಕೋರ್ ನಿಮಗೆ ಸಾಲದ ಬಡ್ಡಿದರಗಳ ಮೇಲೆ ಉತ್ತಮ ಕೊಡುಗೆ ನೀಡುತ್ತದೆ. ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಮತ್ತು ನಿಮ್ಮ ಸಾಲವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಮೂಲಕ ಉತ್ತಮ ಕ್ರೆಡಿಟ್ ಸ್ಕೋರ್ ಕಾಯ್ದುಕೊಳ್ಳಿ.

ಫ್ಲೋಟಿಂಗ್ ದರಕ್ಕೆ ಬದಲಾಯಿಸಿ: ನೀವು ಪ್ರಸ್ತುತ ಸ್ಥಿರ ಬಡ್ಡಿ ದರದಲ್ಲಿದ್ದರೆ, ಫ್ಲೋಟಿಂಗ್ ದರಕ್ಕೆ ಬದಲಾಯಿಸುವುದನ್ನು ಪರಿಗಣಿಸಿ. ಫ್ಲೋಟಿಂಗ್ ದರಗಳು ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಇದು ಭವಿಷ್ಯದಲ್ಲಿ ರೆಪೋ ದರ ಅಥವಾ ಇತರ ಬೆಂಚ್ ಮಾರ್ಕ್ ದರಗಳು ಕಡಿಮೆಯಾದರೆ ಕಡಿಮೆಯಾಗಬಹುದು.

ಸಾಲದ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಿ: ನಿಮ್ಮ ಸಾಲದ ನಿಯಮಗಳು ಮತ್ತು ಷರತ್ತುಗಳನ್ನು ನಿಯಮಿತವಾಗಿ ಪರಿಶೀಲಿಸಿ. ಇದರಿಂದ ನಿಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ ಸ್ಥಿರ ಬಡ್ಡಿದರಗಳಿಂದ ಫ್ಲೋಟಿಂಗ್ ಬಡ್ಡಿದರಗಳಿಗೆ ಪರಿವರ್ತಿಸುವ ಆಯ್ಕೆ.

ಗಮನಿಸಿ

ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಗಮನ ಹರಿಸುವುದನ್ನು ಮರೆಯಬೇಡಿ. ಇದಕ್ಕಾಗಿ ಹಣಕಾಸು ತಜ್ಞರ ಸಲಹೆ ಪಡೆದುಕೊಳ್ಳಿ.

ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ಇ-ಶ್ರಮ ಯೋಜನೆ; ಹೀಗೆ ಹೆಸರು ನೋಂದಾಯಿಸಿ

Exit mobile version