Site icon Vistara News

Money Guide: ನಿಮ್ಮ ಸಮಸ್ಯೆಗೆ ಬ್ಯಾಂಕ್‌ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆ? ಆರ್‌ಬಿಐಗೆ ಹೀಗೆ ದೂರು ನೀಡಿ

money guide

money guide

ಬೆಂಗಳೂರು: ಬ್ಯಾಂಕ್‌ ವ್ಯವಹಾರ ಈಗ ವ್ಯಾಪಕವಾಗಿದೆ. ಸರ್ಕಾರದ ಕೆಲವೊಂದು ಆರ್ಥಿಕ ನೆರವು, ಸ್ಕಾಲರ್‌ ಶಿಪ್‌, ನರೇಗಾದ ಸಂಬಳ ಇತ್ಯಾದಿ ನಮ್ಮ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸ್ಪಡುತ್ತದೆ. ಆದರೆ ಕೆಲವೊಮ್ಮೆ ಬ್ಯಾಂಕ್‌ನಲ್ಲಿನ ಸಿಬ್ಬಂದಿ ನಮ್ಮ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ. ಸರಿಯಾದ ಮಾಹಿತಿಯಾಗಲೀ, ಮಾರ್ದರ್ಶನವಗಲೀ ನೀಡದೇ ಸತಾಯಿಸುತ್ತಾರೆ. ಎಟಿಎಂ ಹಿಂಪಡೆಯುವಿಕೆಯಲ್ಲಿನ ಸಮಸ್ಯೆ, ಬೌನ್ಸ್ ಚೆಕ್‌, ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯಲ್ಲಿನ ತೊಡಕು, ಬ್ಯಾಂಕ್‌ಗಳು ವಿಧಿಸುವ ಅತಿಯಾದ ಶುಲ್ಕ ಇತ್ಯಾದಿ ಆಗಾಗ ಸಾಮಾನ್ಯವಾಗಿ ಗ್ರಾಹಕರು ಎದುರಿಸುವ ಸಮಸ್ಯೆಗಳು. ಇಂತಹ ಸಂದರ್ಭದಲ್ಲಿ ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದರೆ ತೊಂದರೆಗೆ ಒಳಗಾಗುತ್ತೇವೆ. ಈ ವೇಳೆ ಸಿಬ್ಬಂದಿ ಅಥವಾ ಬ್ಯಾಂಕ್ ವಿರುದ್ಧ ಎಲ್ಲಿ, ಯಾರಿಗೆ ದೂರು ನೀಡಬೇಕು ಎಂಬ ಗೊಂದಲ ನಿಮಗೂ ಕಾಡಿರಬಹುದು. ಈ ಸಂದೇಹಕ್ಕೆ ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಕೆಲವೊಂದು ಬ್ಯಾಂಕ್‌ಗಳು ಶಾಖೆಯಿಂದ ಹಿಡಿದು ಪ್ರಧಾನ ಕಚೇರಿಯವರೆಗೆ ವ್ಯಾಪಿಸಿರುವ ದೂರುಗಳನ್ನು ಪರಿಹರಿಸಲು ಆಂತರಿಕ ಕಾರ್ಯವಿಧಾನಗಳನ್ನು ಹೊಂದಿವೆ. ಶಾಖೆಯ ಮ್ಯಾನೇಜರ್‌ ತಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ ಗ್ರಾಹಕರು ದೂರುಗಳನ್ನು ಬ್ಯಾಂಕ್‌ಗಳ ಸಹಾಯವಾಣಿ ಸಂಖ್ಯೆ ಮತ್ತು ಆನ್‌ಲೈನ್‌ ಪೋರ್ಟಲ್‌ ಮೂಲಕ ಸಲ್ಲಿಸಬಹುದು. ಅಲ್ಲೂ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ನೇರವಾಗಿ ಆರ್‌ಬಿಐ (Reserve Bank of India)ಗೆ ಸಲ್ಲಿಸಬಹುದು.

ದೂರು ಸಲ್ಲಿಸುವುದು ಹೇಗೆ?

ಬ್ಯಾಂಕ್‌ ಅಷ್ಟೇ ಅಲ್ಲ, ಬದಲಿಗೆ ಆರ್‌ಬಿಐ ನಿಯಂತ್ರಣಕ್ಕೊಳಪಡುವ ಯಾವುದೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಸಂಬಂಧಿಸಿದ ದೂರನ್ನೂ ದಾಖಲಿಸಬಹುದು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ಓಂಬುಡಸ್ ಮನ್‌ಗೆ (Reserve Bank of India’s Ombudsman) ದೂರು ನೀಡುವ ಮುನ್ನ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಓಂಬುಡಸ್‌ಮನ್‌ ಸಹಾಯ ಪಡೆಯುವ ಮೊದಲು ಆಯಾ ಬ್ಯಾಂಕ್‌ನಲ್ಲಿ ದೂರು ಸಲ್ಲಿಸುವುದು ಕಡ್ಡಾಯ. ಹೀಗೆ ದೂರು ದಾಖಲಾದ 30 ದಿನಗಳ ಒಳಗೆ ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಅಥವಾ ದೂರನ್ನು ಬ್ಯಾಂಕ್ ಸಂಪೂರ್ಣವಾಗಿ ಅಥವಾ ಭಾಗಶಃ ತಿರಸ್ಕರಿಸಿದರೆ ಮಾತ್ರ ಮುಂದಿನ ಕ್ರಮಕ್ಕಾಗಿ ಅದನ್ನು ಓಂಬುಡಸ್‌ಮನ್‌ನ ಮೊರೆ ಹೋಗಬಹುದು.

ಇದಕ್ಕಾಗಿ ನೀವು ಮಾಡಬೇಕಾಗಿರುವುದೇನು?

ಯಾವುದೇ ಬ್ಯಾಂಕ್, ಬ್ಯಾಂಕೇತರ ಹಣಕಾಸು ಸಂಸ್ಥೆ ಅಥವಾ ಪಾವತಿ ವ್ಯವಸ್ಥೆಯ ಬಗ್ಗೆ ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ ನೀವು ಆರ್‌ಬಿಐಯ ವೆಬ್‌ಸೈಟ್‌ https://cms.rbi.org.inಗೆ ತೆರಳಿ ಅದರಲ್ಲಿನ ದೂರು ನಿರ್ವಹಣಾ ವ್ಯವಸ್ಥೆ (Complaint Management System)ಯ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ. ಇಲ್ಲದಿದ್ದರೆ ಈ ಕೆಳಗಿನ ಮಾರ್ಗ ಅನುಸರಿಸಿ.

ಈ ವೆಬ್‌ಸೈಟ್‌ ಗ್ರಾಹಕ ಸ್ನೇಹಿಯಾಗಿದ್ದು, ದೂರು ಹೇಗೆ ಸಲ್ಲಿಸುವುದು, ಸಲ್ಲಿಸಲು ಅಗತ್ಯವಾದ ವಿವರಗಳು / ದಾಖಲೆಗಳು, ಟ್ರ್ಯಾಕಿಂಗ್ ಕಾರ್ಯವಿಧಾನಗಳು ಮತ್ತು ಓಂಬುಡಸ್‌ಮನ್‌ಗೆ ಮೇಲ್ಮನವಿ ಸಲ್ಲಿಸಲು ಬೇಕಾದ ಸೂಚನೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ ಇದು ಅಗತ್ಯ ವಿಳಾಸಗಳು, ಗ್ರಾಹಕರಿಗೆ ಶಿಕ್ಷಣ ಮತ್ತು ಸಂಪರ್ಕ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Exit mobile version