ಬೆಂಗಳೂರು: ಈ ಏಪ್ರಿಲ್‌ನಲ್ಲಿ ಉದ್ಯೋಗಿಗಳು ತಮ್ಮ ಉದ್ಯೋಗದಾತರಿಗೆ ಆದಾಯ ತೆರಿಗೆ ಲೆಕ್ಕಾಚಾರಕ್ಕೆ ಸಂಬಂಧಿಸಿ ಯಾವ ಪದ್ಧತಿ ಬೇಕು ಎಂಬ ಆಯ್ಕೆಯನ್ನು ತಿಳಿಸಬೇಕಾಗುತ್ತದೆ. 2023-24ರ ಬಜೆಟ್‌ನಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಲಾಗಿತ್ತು. ಆದ್ದರಿಂದ ಹಳೆಯ (New vs old tax regime) ಮತ್ತು ಹೊಸ ತೆರಿಗೆ ಪದ್ಧತಿಯನ್ನು ತುಲನೆ ಮಾಡಿ, ತಮಗೆ ಸೂಕ್ತವೆನಿಸಿದ್ದನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.
2023ರ ಬಜೆಟ್‌ನಲ್ಲಿ (budget 2023) ಆದಾಯ ತೆರಿಗೆ ಕಾಯಿದೆ 1961ರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಇವುಗಳು 2023ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿವೆ. 2023-24 ಕ್ಕೆ ಇದು ಅನ್ವಯವಾಗಲಿದೆ. ಹೊಸ ಬದಲಾವಣೆಗಳು ಹಳೆಯದ್ದಕ್ಕಿಂತ ಹೊಸ ತೆರಿಗೆ ಪದ್ಧತಿಯನ್ನು ಆಕರ್ಷಕಗೊಳಿಸಿವೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (CBDT) 2023ರ ಏಪ್ರಿಲ್ 6ರಂದು ಹೊರಡಿಸಿದ ಸುತ್ತೋಲೆಯಲ್ಲಿ ಉದ್ಯೋಗದಾತರು ಹೇಗೆ ಟಿಡಿಎಸ್ ಅನ್ನು ಉದ್ಯೋಗಿಗಳ ವೇತನದಲ್ಲಿ ಕಳೆಯಬಹುದು ಎಂಬುದನ್ನು ತಿಳಿಸಿದೆ. (Tax deducted at source) ಈ ಸುತ್ತೋಲೆಯ ಪ್ರಕಾರ ಉದ್ಯೋಗಿಗಳು ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಹೀಗಿದ್ದರೂ, ಒಂದು ವೇಳೆ ಉದ್ಯೋಗಿಗಳು ಉದ್ಯೋಗದಾತರಿಗೆ ತಿಳಿಸದಿದ್ದರೆ, ಹೊಸ ತೆರಿಗೆ ಪದ್ಧತಿ ಅನ್ವಯವಾಗಲಿದೆ.
ವೇತನದ ಟಿಡಿಎಸ್ ಸಂಬಂಧ ನೀವು ಆಯ್ಕೆ ಮಾಡಿಕೊಳ್ಳುವ ತೆರಿಗೆ ಪದ್ಧಯಿಯ ವಿಧಾನದಿಂದ ಐಟಿಆರ್‌ಗೆ ಯಾವುದೇ ಧಕ್ಕೆಯಾಗುವುದಿಲ್ಲ. ಐಟಿಆರ್ ಸಲ್ಲಿಕೆ ವೇಳೆ ತಮಗೆ ಬೇಕಾದ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ನೂತನ ತೆರಿಗೆ ಪದ್ಧತಿ ನಿಯೋಜಿತ
ಈಗಾಗಲೇ ತಿಳಿಸಿರುವಂತೆ ಉದ್ಯೋಗದಾತರಿಗೆ ನಿಮ್ಮ ಆಯ್ಕೆಯ ಪದ್ಧತಿ ಬಗ್ಗೆ ತಿಳಿಸದಿದ್ದರೆ ಹೊಸ ಪದ್ಧತಿ ತನ್ನಿಂತಾನೆ ಅನ್ವಯಿಸುತ್ತದೆ. ನೂತನ ಪದ್ಧತಿಯು ವ್ಯಕ್ತಿಗೆ ಹಲವು ವಿನಾಯಿತಿಗಳು ಮತ್ತು ಕಡಿತಗಳನ್ನು ನೀಡುವುದಿಲ್ಲ. ಕೇವಲ ಎರಡು ಡಿಡಕ್ಷನ್‌ಗಳಿಗೆ ಅನುಮತಿ ನೀಡುತ್ತದೆ.
- ವೇತನ ಆದಾಯದಲ್ಲಿ 50,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್
- ಎನ್‌ಪಿಎಸ್ ಅಕೌಂಟ್‌ಗೆ ನೀಡುವ ಉದ್ಯೋಗದಾತರ ದೇಣಿಗೆಯಲ್ಲಿ ಸೆಕ್ಷನ್ 80ಸಿಸಿಡಿ (2) ಅಡಿಯಲ್ಲಿ ಡಿಡಕ್ಷನ್
ಇತರ ಡಿಡಕ್ಷನ್, ತೆರಿಗೆ ವಿನಾಯಿತಿಯನ್ನು ಹೊಸ ಪದ್ಧತಿಯಲ್ಲಿ ಕ್ಲೇಮ್ ಮಾಡಿಕೊಳ್ಳಲು ಆಗುವುದಿಲ್ಲ.
ನೀವು ವೇತನದ ಟಿಡಿಎಸ್ ಅನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಬಯಸಿದರೆ ಲೀವ್ ಟ್ರಾವೆಲ್ ಅಲೊವೆನ್ಸ್ (ಎಲ್‌ಟಿಎ) ಮೇಲೆ ತೆರಿಗೆ ವಿನಾಯಿತಿಯನ್ನು ಕ್ಲೇಮ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹಳೆಯ ತೆರಿಗೆ ಆಯ್ಕೆ ಸೂಕ್ತವೇ?
ವೇತನ ಕುರಿತ ಟಿಡಿಎಸ್‌ಗೆ ಹಳೆಯ ಪದ್ಧತಿ ಸೂಕ್ತ ಎನ್ನುತ್ತಾರೆ ತಜ್ಞರು. ಏಕೆಂದರೆ ಉದ್ಯೋಗದಾತರು ನಿಮಗೆ ಫಾರ್ಮ್ 16 ರಲ್ಲಿ ತೆರಿಗೆ ವಿನಾಯಿತಿ ಮತ್ತು ಡಿಡಕ್ಷನ್ ಅನ್ನು ಒದಗಿಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ ಐಟಿಆರ್ ಸಲ್ಲಿಸುವಾಗ ತೆರಿಗೆ ಲೆಕ್ಕಾಚಾರ ಸುಲಭವಾಗುತ್ತದೆ. ಆದರೆ ಆರ್ಥಿಕ ವರ್ಷದಲ್ಲಿ ನಿರ್ದಿಷ್ಟ ಹೂಡಿಕೆ ಮಾಡಿರದಿದ್ದರೆ ಹೊಸ ಪದ್ಧತಿ ಸೂಕ್ತವಾಗಬಹುದು.