ಎನ್‌ಪಿಎಸ್ ಎಂದರೇನು? ಇದರಲ್ಲಿ ವಿಧಗಳು ಇವೆಯೇ? ಇದು ಏಕೆ ಬೇಕು? ಇದಕ್ಕೆ ಯಾರು ಸೇರಬಹುದು? ಇದರಲ್ಲಿ ಎಷ್ಟು ಪಿಂಚಣಿ ಸಿಗುತ್ತದೆ? ಜತೆಗೆ ಬೇರೆ ಏನಾದರೂ ಸಿಗುತ್ತದೆಯೇ? ಕೆಲವು ರಾಜ್ಯಗಳಲ್ಲಿ ಇದು ಚುನಾವಣಾ ವಿಷಯವಾಗುವ ಮಟ್ಟಕ್ಕೆ ವಿವಾದ ಆಗಿರುವುದೇಕೆ? ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆ ಬೇಕೆಂದು ಒತ್ತಾಯಿಸುತ್ತಿರುವುದೇಕೆ? ಎಂಬಿತ್ಯಾದಿ ನೂರಾರು ಪ್ರಶ್ನೆಗಳು ಇದೀಗ ಸಾರ್ವಜನಿಕರಲ್ಲಿ ಉಂಟಾಗಿದೆ. ಇದಕ್ಕೆ ಕಾರಣ ಎನ್‌ಪಿಎಸ್ ವಿರುದ್ಧ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಪ್ರತಿಭಟನೆಗಳು. ಹಾಗಾದರೆ ಏನಿದು? ಏಕೆ ಹೀಗಾಗಿದೆ? (NPS ಹಂಗಾಮ ) ನೋಡೋಣ ಬನ್ನಿ.
ಏನಿದು ಎನ್‌ಪಿಎಸ್?
ನ್ಯಾಶನಲ್ ಪೆನ್ಷನ್ ಸಿಸ್ಟಮ್ (National Pension System -NPS) ಎನ್ನುವುದು ಕೇಂದ್ರ ಹಣಕಾಸು ಇಲಾಖೆಯ ವ್ಯಾಪ್ತಿಯಲ್ಲಿರುವ ಪೆನ್ಷನ್ ಫಂಡ್ ರೆಗ್ಯುಲೇಟರಿ & ಡೆವಲಪ್‌ಮೆಂಟ್ ಅಥಾರಿಟಿ ನಿರ್ವಹಿಸುವ ಪಿಂಚಣಿ ನಿಧಿ (Pension fund) ಯೋಜನೆ. ಪಿಪಿಎಫ್ ಮತ್ತು ಇಪಿಎಫ್ ಮಾದರಿಯಲ್ಲಿ ಮೆಚ್ಯೂರಿಟಿಯಾಗುವ ಇಡೀ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ನಿವೃತ್ತಿಯ ಕಾಲದ ಆರ್ಥಿಕ ಭದ್ರತೆಗೆ ಸಹಕರಿಸುವುದು ಇದರ ಉದ್ದೇಶ.
ಎನ್‌ಪಿಎಸ್ ಮಾರುಕಟ್ಟೆ ಆಧರಿತವಾಗಿದ್ದು, ಕಾಂಟ್ರಿಬ್ಯೂಷನ್ ಪ್ರಾಡಕ್ಟ್ ಎಂದು ಪರಿಗಣಿಸುತ್ತಾರೆ. ಅಂದರೆ ಉದ್ಯೋಗಿ ಅಥವಾ ಹೂಡಿಕೆದಾರರು ತಮ್ಮ ಕೊಡುಗೆಯನ್ನು ನೀಡಬೇಕಾಗುತ್ತದೆ. ವೈಯಕ್ತಿಕ ಹೂಡಿಕೆದಾರರಿಗೆ ಯುನೀಕ್ ಪರ್ಮನೆಂಟ್ ರಿಟೈರ್‌ಮೆಂಟ್ ಅಕೌಂಟ್ ನಂಬರ್ (PRAN- ಪ್ರಾನ್) ಅನ್ನು ನೀಡಲಾಗುತ್ತದೆ. ಸೆಂಟ್ರಲ್ ರೆಕಾರ್ಡ್‌ಕೀಪಿಂಗ್ ಏಜೆನ್ಸಿ (CRA) ವೈಯಕ್ತಿಕ ಚಂದಾದಾರರಿಗೆ (subscriber) ಪ್ರಾನ್ ಸಂಖ್ಯೆಯನ್ನು ನೀಡುತ್ತದೆ.
ಎನ್‌ಪಿಎಸ್ ಅಕೌಂಟ್‌ಗಳಲ್ಲಿ ಎರಡು ವಿಧ
ಎನ್‌ಪಿಎಸ್‌ನಲ್ಲಿ ಎರಡು ವಿಧದ ಅಕೌಂಟ್‌ಗಳು ಇರುತ್ತವೆ. ಅವುಗಳೆಂದರೆ ಟೈರ್-೧ (Tier -೧) ಮತ್ತು ಟೈರ್ 2. (Tier-೨). ಟೈರ್-1 ಅಕೌಂಟ್‌ನಲ್ಲಿ ವಿತ್ ಡ್ರಾವಲ್ಸ್‌ಗೆ ನಿರ್ಬಂಧ ಇದೆ. ಟೈರ್-2 ಅಕೌಂಟ್ ಐಚ್ಛಿಕವಾಗಿದೆ. ಇದರಲ್ಲಿ ಹೂಡಿಕೆ ಮತ್ತು ವಿತ್ ಡ್ರಾವಲ್ಸ್‌ಗೆ ಅನುಕೂಲವಿದೆ. ಆದರೆ ಟೈರ್-1 ಅಕೌಂಟ್ ಇದ್ದರೆ ಮಾತ್ರ ಟೈರ್-2 ಅಕೌಂಟ್ ಅನ್ನು ತೆರೆಯಬಹುದು. ಇಲ್ಲಿ ಮಾರುಕಟ್ಟೆ ಆಧರಿತ ಪ್ರತಿಫಲ ಸಿಗುತ್ತದೆ. ಯೋಜನೆಯಿಂದ ಎಕ್ಸಿಟ್ ಆಗುವ ಸಂದರ್ಭ ಕನಿಷ್ಠ 40% ಮೊತ್ತವನ್ನು ಪಿಂಚಣಿ ಪಡೆಯಲು ಬಳಕೆಯಾಗುತ್ತದೆ.
ಎನ್‌ಪಿಎಸ್‌ನಲ್ಲಿ ಮೂರು ಮಾದರಿ
ಎನ್‌ಪಿಎಸ್‌ನಲ್ಲಿ ಭಿನ್ನ ವಲಯಗಳಿಗೆ ಅನುಕೂಲವಾಗುವಂತೆ ಮೂರು ಮಾದರಿಗಳು ಇವೆ. ಅವುಗಳು ಇಂತಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ( ಸಶಸ್ತ್ರ ಪಡೆ ಹೊರತುಪಡಿಸಿ) 2004ರ ಜನವರಿ 1ರಿಂದ ಸೇರಿಕೊಳ್ಳುವವರಿಗೆ ಎನ್‌ಪಿಎಸ್ ಅನ್ನು ಕಡ್ಡಾಯಗೊಳಿಸಲಾಗಿತ್ತು. ಆರಂಭದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ ರಾಜ್ಯಗಳು ಎನ್‌ಪಿಎಸ್ ಅನ್ನು ಜಾರಿಗೊಳಿಸಿತ್ತು. ಇದರಲ್ಲಿ ಸರ್ಕಾರಿ ಉದ್ಯೋಗಿಗಳು ಪ್ರತಿ ತಿಂಗಳು ತಮ್ಮ ವೇತನದ 10% ಪಾಲನ್ನು ಎನ್‌ಪಿಎಸ್ ಖಾತೆಗೆ ಜಮೆ ಮಾಡಬೇಕು. ಸರ್ಕಾರ 2019 ಏಪ್ರಿಲ್‌ನಿಂದ 14% ಪಾಲು ನೀಡುತ್ತದೆ. ಇದು ಕೇಂದ್ರ-ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ನೀಡುವ ಎನ್‌ಪಿಎಸ್ ಮಾದರಿ.
ಕಾರ್ಪೊರೇಟ್ ಮಾದರಿಯ ಎನ್‌ಪಿಎಸ್
ಕಾರ್ಪೊರೇಟ್ ಮಾದರಿಯಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಎನ್‌ಪಿಎಸ್ ಸೌಲಭ್ಯ ನೀಡುತ್ತವೆ.
ಎಲ್ಲ ನಾಗರಿಕರಿಗೂ ಲಭ್ಯವಿರುವ ಎನ್‌ಪಿಎಸ್ ಮಾದರಿ
ದೇಶದಲ್ಲಿ 18-65 ವರ್ಷ ವಯೋಮಿತಿಯ ಎಲ್ಲ ನಾಗರಿಕರೂ ಎನ್‌ಪಿಎಸ್ ಸೌಲಭ್ಯವನ್ನು ಪಡೆಯಬಹುದು. ಸರ್ಕಾರಿ ನೌಕರರು ತಮ್ಮ ಎನ್‌ಪಿಎಸ್ ಹೊರತಾಗಿಯೂ ಈ ಸಾರ್ವತ್ರಿಕ ಮಾದರಿಯ ಎನ್‌ಪಿಎಸ್‌ನಲ್ಲೂ ಹೂಡಿಕೆ ಮಾಡಬಹುದು.
ಎನ್‌ಪಿಎಸ್ ಖಾತೆ ತೆರೆಯುವುದು ಹೇಗೆ?
ಎನ್‌ಪಿಎಸ್ ಖಾತೆಯನ್ನು ಆಫ್‌ಲೈನ್ ಹಾಗೂ ಆನ್‌ಲೈನ್ ವಿಧಾನದಲ್ಲಿ ತೆರೆಯಬಹುದು. eNPS ವೆಬ್‌ಸೈಟ್‌ಗೆ ಲಾಗಿನ್ ಆಗಿ ಪ್ಯಾನ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕೊಟ್ಟು ಎನ್‌ಪಿಎಸ್ ಖಾತೆಯನ್ನು ತೆರೆಯಬಹುದು. PFRDA ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿರುವ ನೋಂದಾಯಿತ Point of presence (POPs) ಅನ್ನು ಸಂಪರ್ಕಿಸಿ, ಸಂಬಂಧಿಸಿದ ದಾಖಲೆ ಕೊಟ್ಟು ಎನ್‌ಪಿಎಸ್ ಖಾತೆ ತೆರೆಯಬಹುದು. ಪಿಒಪಿ ಪಟ್ಟಿಯಲ್ಲಿ ಬ್ಯಾಂಕ್‌ಗಳು, ಹಣಕಾಸು ವಲಯದ ಸಂಸ್ಥೆಗಳು ಇದ್ದು, ಅವುಗಳನ್ನು ಸಂಪರ್ಕಿಸಿ ಎನ್‌ಪಿಎಸ್ ಖಾತೆಯನ್ನು ತೆರೆಯಬಹುದು.
ಎನ್‌ಪಿಎಸ್‌ನ ಆರ್ಕಿಟೆಕ್ಚರ್: ಎನ್‌ಪಿಎಸ್ ಅನ್ನು ಪಿಎಫ್‌ಆರ್‌ಡಿಎ ಹಲವು ಇಂಟರ್‌ಮೀಡಿಯರೀಸ್ ಮೂಲಕ ಆಡಳಿತಾತ್ಮಕವಾಗಿ ನಿರ್ವಹಿಸುತ್ತಿದೆ. ಇವುಗಳಲ್ಲಿ ಪಿಂಚಣಿ ನಿಧಿಗಳು, ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ (CRA), ಕಸ್ಟೋಡಿಯನ್, ನ್ಯಾಶನಲ್ ಪೆನ್ಷನ್ ಸಿಸ್ಟಮ್ ಟ್ರಸ್ಟ್, ಟ್ರಸ್ಟೀ ಬ್ಯಾಂಕ್, ಪಾಯಿಂಟ್ಸ್ ಆಫ್ ಪ್ರೆಸೆನ್ಸ್ (PoP) ಮತ್ತು ಆನ್ಯುಯಿಟಿ ಸರ್ವೀಸ್ ಪ್ರೊವೈಡರ್ಸ್ (ASPs) ಇವೆ. ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (Stock Holding corporation of India) ಪ್ರಸ್ತುತ ಎನ್ ಪಿಎಸ್‌ನ ಕಸ್ಟೋಡಿಯನ್ ಆಗಿದೆ. ಎನ್‌ಪಿಎಸ್ ಚಂದಾದಾರರು ವೆಬ್ ಪೋರ್ಟಲ್, ಮೊಬೈಲ್ ಅಪ್ಲಿಕೇಶನ್ ಮೂಲಕ ಕೂಡ ಆನ್‌ಲೈನ್ ಮೂಲಕ ಸೇವೆ ಪಡೆಯಬಹುದು.
ಭಾಗಶಃ ಹಿಂತೆಗೆತ : ಟೈರ್-1 ಅಕೌಂಟ್‌ನಲ್ಲಿ ಚಂದಾದಾರರು ನಿರ್ದಿಷ್ಟ ಉದ್ದೇಶಗಳಿಗೆ ತಮ್ಮ ಕಾಂಟ್ರಿಬ್ಯೂಷನ್‌ನ 25% ಪಾಲನ್ನು ಎಕ್ಸಿಟ್‌ಗೆ ಮುನ್ನ ಹಿಂತೆಗೆದುಕೊಳ್ಳಬಹುದು. 10 ವರ್ಷಗಳ ಹೂಡಿಕೆಯ ಬಳಿಕ ಈ ಅಕೌಂಟ್‌ನಲ್ಲಿ ಭಾಗಶಃ ಹಿಂತೆಗೆತ ಸಾಧ್ಯ. ಹಾಗೆಯೇ ಎರಡು ವಿತ್ ಡ್ರಾವಲ್ಸ್ ನಡುವೆ ಕನಿಷ್ಠ ಐದು ವರ್ಷ ಅಂತರ ಇರಬೇಕು.
(ಮುಂದುವರಿಯಲಿದೆ)