ಅನೇಕ ಮಂದಿ ಸಾವಿರಾರು ಅಥವಾ ಲಕ್ಷಾಂತರ ರೂ.ಗಳನ್ನು ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲೇ ವರ್ಷಗಟ್ಟಲೆ ಇಟ್ಟುಕೊಂಡಿರುತ್ತಾರೆ. ಆದರೆ ಇದರ ಬದಲು ಅಂಚೆ ಇಲಾಖೆಯ ನ್ಯಾಶನಲ್ ಸೇವಿಂಗ್ಸ್ ರಿಕರಿಂಗ್ ಡಿಪಾಸಿಟ್ ಅಕೌಂಟ್‌ನಲ್ಲಿ (RD) ಉಳಿತಾಯ ಮಾಡಿದರೆ, ಬ್ಯಾಂಕ್‌ನ ಎಸ್‌ಬಿ ಖಾತೆಯಲ್ಲಿ ಪಡೆಯುವುದಕ್ಕಿಂತ ಹೆಚ್ಚಿನ ಬಡ್ಡಿ ಆದಾಯ ಪಡೆಯಬಹುದು. ಮಾತ್ರವಲ್ಲದೆ ಇದು ಅತ್ಯಂತ ಸುರಕ್ಷಿತ. ಅಂಚೆ ಇಲಾಖೆಯ ಆರ್‌ಡಿ ಖಾತೆ ಎಂದೇ ಇದು ಜನಪ್ರಿಯವಾಗಿದೆ.
೧೦ ವರ್ಷಕ್ಕಿಂತ ದೊಡ್ಡವರೆಲ್ಲರೂ ಖಾತೆ ತೆರೆಯಬಹುದು!
ಅತ್ಯಂತ ವಿಶೇಷ ಏನೆಂದರೆ ೧೦ ವರ್ಷ ಮೇಲ್ಪಟ್ಟ ಎಲ್ಲರೂ ತಮ್ಮ ಹೆಸರಿನಲ್ಲಿ ಅಂಚೆ ಇಲಾಖೆಯ ಆರ್‌ಡಿ ಖಾತೆಯನ್ನು ತೆರೆಯಬಹುದು. ಜಂಟಿ ಖಾತೆಯಲ್ಲೂ ಮೂವರು ಒಟ್ಟಿಗೆ ತೆರೆಯಬಹುದು. ೧೦ ವರ್ಷಕ್ಕಿಂತ ಕೆಳಗಿನ ಮಕ್ಕಳ ಹೆಸರನಲ್ಲಿ ಪೋಷಕರು ಆರಂಭಿಸಬಹುದು. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಆರ್‌ಡಿ ಖಾತೆಗಳನ್ನು ತೆರೆಯಬಹುದು! ಈ ಯೋಜನೆಯ ಅವಧಿ ೫ ವರ್ಷಗಳಾಗಿರುತ್ತವೆ. ಅಂದರೆ ಒಬ್ಬ ವ್ಯಕ್ತಿ ಒಂದು ಆರ್‌ಡಿ ಅಕೌಂಟ್ ತೆರೆದರೆ, ಅದರ ಅವಧಿ ೫ ವರ್ಷದಲ್ಲಿ ಮುಗಿಯುತ್ತದೆ. ಬಳಿಕ ಖಾತೆಯಲ್ಲಿ ಇರುವ ದುಡ್ಡನ್ನು ಬಡ್ಡಿ ಸಹಿತ ಪಡೆದುಕೊಳ್ಳಬಹುದು. ಮತ್ತೆ ಬೇಕೆಂದರೆ ಮತ್ತೊಂದು ಆರ್‌ಡಿ ಖಾತೆ ಆರಂಭಿಸಬಹುದು.
ಅಂಚೆ ಇಲಾಖೆಯ ಆರ್ ಡಿ ಖಾತೆಯ ಮುಖ್ಯಾಂಶಗಳು
ಯೋಜನೆಯ ಹೆಸರು | ನ್ಯಾಶನಲ್ ಸೇವಿಂಗ್ಸ್ ರಿಕರಿಂಗ್ ಡಿಪಾಸಿಟ್ ಅಕೌಂಟ್ (ಆರ್‌ಡಿ) |
ಅವಧಿ | 5 ವರ್ಷಗಳು |
ಕನಿಷ್ಠ ಠೇವಣಿ | ಮಾಸಿಕ 100 ರೂ. |
ಗರಿಷ್ಠ ಠೇವಣಿ | ಗರಿಷ್ಠ ಮಿತಿ ಇಲ್ಲ. ಎಷ್ಟು ಬೇಕಾದರೂ ಹೂಡಬಹುದು. |
ಬಡ್ಡಿ ದರ | 5.8%, ವಾರ್ಷಿಕ |
ಅವಧಿಗೆ ಮುನ್ನ ಹೂಡಿಕೆ ಹಿಂತೆಗೆತ ಸಾಧ್ಯವೇ? | 3 ವರ್ಷ ಹೂಡಿಕೆ ಬಳಿಕ ಹೂಡಿಕೆ ಹಿಂತೆದುಕೊಳ್ಳಬಹುದು. |
ಮಾಸಿಕ ಕನಿಷ್ಠ ಹೂಡಿಕೆ ೧೦೦ ರೂ. ಮಾತ್ರ: ವಿದ್ಯಾರ್ಥಿಗಳು, ಗೃಹಿಣಿಯರು, ನಿರುದ್ಯೋಗಿಗಳು, ಈಗಾಗಲೇ ಉದ್ಯೋಗದಲ್ಲಿ ಇರುವವರು, ವಯೋವೃದ್ಧರು ಹೀಗೆ ಎಲ್ಲರೂ ಅಂಚೆ ಕಚೇರಿಗೆ ತೆರಳಿ ಆರ್ ಡಿ ಖಾತೆ ತೆರೆಯಬಹುದು. ಏಕೆಂದರೆ ಇಲ್ಲಿ ತಿಂಗಳಿಗೆ ಕೇವಲ ೧೦೦ ರೂ. ಹೂಡಿಕೆ ಮಾಡಿದರೂ ಸಾಕು. ಪ್ರತಿ ತಿಂಗಳು ನೀವು ಅಂಚೆ ಕಚೇರಿಗೆ ಹೋಗಲೇಬೇಕೆಂದೇನಿಲ್ಲ. ಆನ್‌ಲೈನ್ ಮೂಲಕ ಜಮೆ ಮಾಡಬಹುದು.
ಆರ್.ಡಿ ಖಾತೆ ತೆರೆಯುವುದು ಹೇಗೆ?
ನಿಮ್ಮ ಸಮೀಪದ ಅಂಚೆ ಕಚೇರಿಗೆ ತೆರಳಿ ಆರ್ ಡಿ ಖಾತೆಯನ್ನು ತೆರೆಯಬಹುದು. ಹಾಗೆ ತೆರಯುವಾಗ ನಗದು ಕೊಡಬೇಕಾಗುತ್ತದೆ. ಬಳಿಕ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ನ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್ ವಿಧಾನದಲ್ಲಿ ಆರ್‌ಡಿ ಖಾತೆಗೆ ಹಣ ವರ್ಗಾಯಿಸಬಹುದು.
ದಿನಕ್ಕೆ ೧೦೦ ರೂ.ಗಳಂತೆ ಹೂಡಿಕೆ ಮಾಡಿ ೫ ವರ್ಷದಲ್ಲಿ ೨ ಲಕ್ಷ ರೂ. ಗಳಿಸಿ!
ನೀವು ಅಂಚೆ ಇಲಾಖೆಯ ಆರ್ ಡಿ ಖಾತೆಯಲ್ಲಿ ದಿನಕ್ಕೆ ೧೦೦ ರೂ.ಗಳಂತೆ ಹೂಡಿಕೆ ಮಾಡಿದರೆ ೫ ವರ್ಷ ಕಳೆದ ಬಳಿಕ ೨,೦೯,೦೮೯ ರೂ.ಗಳ ಮೊತ್ತ ಗಳಿಸಬಹುದು. ಈ ೫ ವರ್ಷಗಳಲ್ಲಿ ನಿಮ್ಮ ಹೂಡಿಕೆ ೧,೮೦,೦೦೦ ರೂ. ಆಗಿರುತ್ತದೆ. ಅದಕ್ಕೆ ಬಡ್ಡಿಯಾಗಿ ೨೯,೦೮೯ ರೂ. ಸೇರುತ್ತದೆ. ಒಟ್ಟು ೨,೦೯,೦೮೯ ರೂ. ನಿಮ್ಮದಾಗುತ್ತದೆ. ಇದು ಖಾತರಿಯ ಆದಾಯ ಎಂಬುದನ್ನು ಮರೆಯದಿರಿ.
ಬ್ಯಾಂಕ್ ಎಸ್.ಬಿ ಖಾತೆಗಿಂತ ಹೆಚ್ಚು ಬಡ್ಡಿ ದರ
ಅಂಚೆ ಇಲಾಖೆಯ ಆರ್ ಡಿ ಖಾತೆಯಲ್ಲಿ ನಿಮ್ಮ ಹೂಡಿಕೆಗೆ ಯಾವುದೇ ಬ್ಯಾಂಕ್‌ನ ಉಳಿತಾಯ ಖಾತೆಗಿಂತ(ಎಸ್‌ಬಿ) ಹೆಚ್ಚಿನ ಬಡ್ಡಿ ದರ ಸಿಗುತ್ತದೆ. ಉದಾಹರಣೆಗೆ ಅತಿ ದೊಡ್ಡ ಬ್ಯಾಂಕ್ ಎಂದೇ ಖ್ಯಾತವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ( ಎಸ್‌ಬಿಐ) ೧ ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗೆ ವಾರ್ಷಿಕ ಬಡ್ಡಿ ದರ ಕೇವಲ ೨.೭೫ ಆಗಿದೆ. ಒಂದು ವರ್ಷ ಮೇಲ್ಪಟ್ಟ ಠೇವಣಿಗೆ ೨.೭೦% ಬಡ್ಡಿ ಮಾತ್ರ ಸಿಗುತ್ತದೆ. ಇತರ ಬ್ಯಾಂಕ್‌ಗಳಲ್ಲೂ ೩.೫೦% ಆಸುಪಾಸಿನಲ್ಲಿ ಬಡ್ಡಿ ಸಿಗುತ್ತದೆ. ಆದ್ದರಿಂದ ಇದಕ್ಕಿಂತ ಅಂಚೆ ಇಲಾಖೆಯ ಆರ್ ಡಿ ಖಾತೆಯಲ್ಲಿ ೫.೮% ಬಡ್ಡಿ ಪಡೆಯಬಹುದು. ೧೦೦ ರೂ.ಗಿಂತ ಮೇಲ್ಪಟ್ಟು ೧೧೦, ೧೨೦, ೧೩೦ ರೂ.ಗಳಂತೆ ಹೂಡಿಕೆ ಮಾಡಬಹುದು. ಮಾಸಿಕ ೩,೦೦೦ ರೂ. ಹೂಡಿದರೆ ೫ ವರ್ಷ ಬಳಿಕ ೨ ಲಕ್ಷಕ್ಕೂ ಹೆಚ್ಚು ಗಳಿಸಬಹುದು.
ಬ್ಯಾಂಕ್‌ಗಳಲ್ಲಿ ಎಸ್‌ಬಿ ಖಾತೆಗೆ ಸಾಮಾನ್ಯ ಬಡ್ಡಿ ದರ
ಬ್ಯಾಂಕ್ | ಸಾಮಾನ್ಯ ಬಡ್ಡಿ ದರ | ಹಿರಿಯ ನಾಗರಿಕರಿಗೆ |
ICICI | 3.50% | 4.00%-5.85% |
HDFC | 3.50%-5.50% | 4.00%-6.00% |
ಕೋಟಕ್ ಬ್ಯಾಂಕ್ | 4.40-4.75% | 4.90%-5.25% |
ಎಕ್ಸಿಸ್ ಬ್ಯಾಂಕ್ | 4.40-5.50% | 4.65%-6.05% |
ಇತರ ನಿಯಮಗಳು
ಪ್ರತಿ ತಿಂಗಳು ಕನಿಷ್ಠ ೧೦೦ ರೂ. ಪಾವತಿಸದಿದ್ದರೆ, ೧ ರೂ. ದಂಡವನ್ನು ಕಟ್ಟಬೇಕಾಗುತ್ತದೆ. ಸತತ ೪ ಸಲ ಮಾಸಿಕ ಕಂತು ಜಮೆಯಾಗದಿದ್ದರೆ ಖಾತೆ ನಿಷ್ಕ್ರಿಯವಾಗುತ್ತದೆ. ೧ ವರ್ಷ ಕಂತು ಕಟ್ಟಿದ ಬಳಿಕ ಅದರ ಆಧಾರದಲ್ಲಿ ಮುಂಗಡವನ್ನು ಪಡೆಯಬಹುದು. ಮೂರು ವರ್ಷಗಳ ಬಳಿಕ ಬೇಕಾದರೆ ಖಾತೆಯನ್ನು ಮುಚ್ಚಬಹುದು. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ, ಬ್ಯಾಂಕ್ ಎಸ್.ಬಿಯಲ್ಲಿ ಅತ್ಯಲ್ಪ ಬಡ್ಡಿಗೆ ಇಡುವ ಹೆಚ್ಚುವರಿ ಹಣವನ್ನು ಅಂಚೆ ಇಲಾಖೆಯ ಆರ್ ಡಿ ಖಾತೆಯಲ್ಲಿ ಇಡುವುದು ಅತ್ಯಂತ ಸುರಕ್ಷಿತ ಮತ್ತು ಹೆಚ್ಚು ಆದಾಯ ತರಬಲ್ಲುದು. ಆದರಿಂದ ಅದು ಅತ್ಯಂತ ಜನಪ್ರಿಯತೆ ಗಳಿಸಿದೆ. ಇನ್ನೇಕೆ ತಡ, ಅಂಚೆ ಕಚೇರಿಗೆ ನಡೆಯೋಣ. ಆರ್‌ಡಿ ಅಕೌಂಟ್ ತೆರೆಯೋಣ.