Site icon Vistara News

Penal charges on loans : ಸಾಲಗಾರರಿಗೆ ಬ್ಯಾಂಕ್‌ಗಳು ವಿಧಿಸುವ ದಂಡದ ಬಗ್ಗೆ ಆರ್‌ಬಿಐ ಕರಡು ನಿಯಮ, ಅದರಲ್ಲೇನಿದೆ?

RBI imposed huge fine on ICICI Bank, Kotak Mahindra Bank

ಮುಂಬಯಿ: ಹಲವಾರು ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಸಾಲಗಾರರು ಸಾಲವನ್ನು ಸಮರ್ಪಕವಾಗಿ ಮರು ಪಾವತಿಸದಿದ್ದರೆ ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡವನ್ನು, ಸಾಮಾನ್ಯ ಬಡ್ಡಿ ದರದ ಜತೆಗೆ ಸಮೀಕರಿಸಿ ವಿಧಿಸುವುದನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಸಾಲಗಳಿಗೆ ದಂಡ ವಿಧಿಸುವುದಕ್ಕೆ ಸಂಬಂಧಿಸಿ ಕರಡು ನಿಯಮಾವಳಿಗಳನ್ನು ರಚಿಸಿದೆ. 2023ರ ಏಪ್ರಿಲ್‌ 12ರಂದು ಬಿಡುಗಡೆಗೊಳಿಸಿದೆ. ಹಾಗಾದರೆ ದಂಡಕ್ಕೆ ಸಂಬಂಧಿಸಿ ಆರ್‌ಬಿಐ ಏನು ಹೇಳಿದೆ ಎಂಬುದನ್ನು ನೋಡೋಣ.

ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಶುಲ್ಕ ಎಂದು ಪರಿಗಣಿಸಬೇಕೇ ವಿನಾ, ಒಟ್ಟು ಬಡ್ಡಿ ದರ ಎಂದು ಬಡ್ಡಿಯ ಜತೆಗೆ ಸೇರಿಸಬಾರದು ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ.

ಬ್ಯಾಂಕ್‌ಗಳು ದಂಡವನ್ನು ವಿಧಿಸುವುದೇಕೆ?

ಬ್ಯಾಂಕ್‌ಗಳು ಎಲ್ಲರಿಗೂ ಮುಕ್ತ ಹಾಗೂ ಪಾರದರ್ಶಕವಾಗಿ ಸೇವೆ ನೀಡುತ್ತದೆ ಎಂಬುದನ್ನು ಖಾತರಿಪಡಿಸಲು ದಂಡವನ್ನು ವಿಧಿಸುತ್ತದೆ. ಜತೆಗೆ ಸಾಲಗಾರರಲ್ಲಿ ಸಾಲದ ಶಿಸ್ತು (credit discipline) ಬೆಳೆಸಲು ಕೂಡ ಇದು ಸಹಕಾರಿ. ಸಾಲಗಾರರು ಸಾಲ ಮರು ಪಾವತಿಸುವಲ್ಲಿ ವಿಳಂಬಿಸಿದರೆ ಅಥವಾ ಇಎಂಐ (equated monthly installment) ಅನ್ನು ಸರಿಯಾಗಿ ಕಟ್ಟದಿದ್ದರೆ ದಂಡ ವಿಧಿಸಲಾಗುತ್ತದೆ. ಬೇರೆ ಬೇರೆ ಬ್ಯಾಂಕ್‌ಗಳು ಭಿನ್ನ ದಂಡವನ್ನು ವಿಧಿಸುತ್ತವೆ. ದಂಡ ಅಥವಾ Penal interest ವಾರ್ಷಿಕ 24% ಇದ್ದರೆ ಮಾಸಿಕ ಇಎಂಐ ಪಾವತಿಗೆ ವಿಳಂಬವಾದರೆ 2% ದಂಡ ಅನ್ವಯಿಸುತ್ತದೆ. ಉದಾಹರಣೆಗೆ ನೀವು 50,000 ರೂ. ಇಎಂಐ ಕಟ್ಟುತ್ತಿದ್ದೀರಿ ಎಂದಿಟ್ಟುಕೊಳ್ಳಿ. penal interest ವಾರ್ಷಿಕ 24% ಇದ್ದರೆ ಮಾಸಿಕ 2% ಆಗುತ್ತದೆ. ಅಂದರೆ 1,000 ರೂ. ದಂಡ (50,000 ರೂ.ಗಳ 2%) ಪಾವತಿಸಬೇಕಾಗುತ್ತದೆ.

ದಂಡಕ್ಕೆ ಬಡ್ಡಿ ಇರುತ್ತದೆಯೇ? : ಇದೆ. 2018ರಲ್ಲಿ GST-AAR (GST Authority for Advance Rulings) ಅಡಿಯಲ್ಲಿ ವಿಳಂಬಿತ ಸಾಲ ಮರು ಪಾವತಿಯ ಮೇಲೆ 18% ಜಿಎಸ್‌ಟಿಯನ್ನು ವಿಧಿಸಲಾಯಿತು. ಹೀಗಾಗಿ ಮೇಲ್ಕಂಡ ಉದಾಹರಣೆಯಲ್ಲಿ 1,000 ರೂ.ಗೆ 18% ಜಿಎಸ್‌ಟಿ ಸೇರಿ ಒಟ್ಟು 1,180 ರೂ. ನೀಡಬೇಕಾಗುತ್ತದೆ. ಎಸ್‌ಬಿಐ ವೆಬ್‌ ಸೈಟ್‌ ಪ್ರಕಾರ ಆ ಬ್ಯಾಂಕ್‌ನಲ್ಲಿ 25,000 ರೂ. ತನಕದ ಸಾಲದ ಮೇಲೆ ದಂಡ (penal Interest) ಅನ್ವಯವಾಗುವುದಿಲ್ಲ. 25,000 ರೂ.ಗಿಂತ ಹೆಚಿನ ಸಾಲಕ್ಕೆ 2% ಅನ್ವಯವಾಗುತ್ತದೆ.

ದಂಡಗಳು ಬ್ಯಾಂಕ್‌ಗಳ ಆದಾಯ ಹೆಚ್ಚಿಸುವುದಕ್ಕಲ್ಲ:

ಬ್ಯಾಂಕ್‌ಗಳು ಸಾಲಗಾರರಿಗೆ ದಂಡವನ್ನು ವಿಧಿಸುವ ಮೂಲಕವೇ ತಮ್ಮ ಆದಾಯವನ್ನು ಹೆಚ್ಚಿಸಬಾರದು. ಅದು ದಂಡದ ಪರಿಕಲ್ಪನೆಯ ದುರ್ಬಳಕೆಯಾದಂತಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಈ ಬಗ್ಗೆ 2023ರ ಫೆಬ್ರವರಿ 8ರಂದು ಆರ್‌ಬಿಐ ಪ್ರಕಟಣೆಯೊಂದನ್ನು ಹೊರಡಿಸಿತ್ತು. ದಂಡ ಶುಲ್ಕವನ್ನು (penal charges) ತಾರ್ಕಿಕ ಮತ್ತು ಪಾರದರ್ಶಕ ರೀತಿಯಲ್ಲಿ (reasonable and transparent manner) ನಿಗದಿಪಡಿಸಬೇಕು. ದಂಡ ಬಡ್ಡಿ (penal interest) ಎಂದು ಬಡ್ಡಿಯ ಜತೆಗೆ ಸಮೀಕರಿಸಬಾರದು ಎಂದು ಸ್ಪಷ್ಟಪಡಿಸಿದೆ.

Exit mobile version