ಬೆಂಗಳೂರು: ಅಂಚೆ ಇಲಾಖೆಯು ಹಲವಾರು ದೀರ್ಘಕಾಲೀನ ಮತ್ತು ಅಲ್ಪಾವಧಿಯ ಹೂಡಿಕೆ ಯೋಜನೆಗಳನ್ನು ನೀಡುತ್ತದೆ. ಆದರೆ ಎಲ್ಲ ಪ್ಲಾನ್‌ಗಳೂ ತೆರಿಗೆ ಮುಕ್ತವಾಗಿರುವುದಿಲ್ಲ. ಅಂಚೆ ಇಲಾಖೆಯಲ್ಲೂ ( Post office schemes) ಕೆಲ ಯೋಜನೆಗಳಲ್ಲಿ ಸಿಗುವ ಬಡ್ಡಿ ಆದಾಯಕ್ಕೆ ತೆರಿಗೆ ಇರುತ್ತದೆ. ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ ಯಾವುದೇ ಡಿಡಕ್ಷನ್ ಕೂಡ ಸಿಗುವುದಿಲ್ಲ.
ಟಿಡಿಎಸ್ ಯಾವಾಗ ಕಟ್ಟಬೇಕಾಗುತ್ತದೆ? ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಪೇಮೆಂಟ್‌ನ ಮೌಲ್ಯ ನಿಗದಿತ ಮಿತಿಯನ್ನು ದಾಟಿದ ಬಳಿಕ ಟಿಡಿಎಸ್ ( Tax Deducted at Source) ಅನ್ವಯವಾಗುತ್ತದೆ. ಪೂರ್ವ ನಿಗದಿತ ಮಟ್ಟದಲ್ಲಿಯೇ ಇದ್ದರೆ ಟಿಡಿಎಸ್ ಅನ್ವಯವಾಗುವುದಿಲ್ಲ.
ಏನಿದು ಟಿಡಿಎಸ್? ಮೂಲದಲ್ಲಿಯೇ ತೆರಿಗೆ ಕಡಿತವನ್ನು ಟಿಡಿಎಸ್ ಎನ್ನುತ್ತಾರೆ. ಅಂದರೆ ವ್ಯಕ್ತಿಯ ಆದಾಯದಿಂದಲೇ ನೇರವಾಗಿ ತೆರಿಗೆಯನ್ನು ಕಡಿತ ಮಾಡುವುದು. ಪೂರ್ತಿ ಅಥವಾ ಭಾಗಶಃ ರೀತಿಯಲ್ಲಿ ತೆರಿಗೆ ಸಂಗ್ರಹದಲ್ಲಿ ಸೋರಿಕೆ ಆಗದಂತೆ ತಡೆಯಲು ಸರ್ಕಾರ ಟಿಡಿಎಸ್ ಅನ್ನು ಜಾರಿಗೊಳಿಸಿದೆ.
ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಟಿಡಿಎಸ್:
India Post Recurring deposit: ಬ್ಯಾಂಕ್ ಅಥವಾ ಅಂಚೆ ಕಚೇರಿ ನಿಮ್ಮ ರಿಕರಿಂಗ್ ಡಿಪಾಸಿಟ್ ಮೇಲಿನ ಬಡ್ಡಿ ದರದ ಮೇಲೆ ಟಿಡಿಎಸ್ ಅನ್ನು ಕಡಿತಗೊಳಿಸುತ್ತದೆ. ಆದರೆ ಬಡ್ಡಿ ಆದಾಯವು ಸಾಮಾನ್ಯ ನಾಗರಿಕರಿಗೆ 40,000 ರೂ. ಮೀರಿದರೆ ಹಾಗೂ ಹಿರಿಯ ನಾಗರಿಕರಿಗೆ 50,000 ರೂ. ಮೀರಿದರೆ ಟಿಡಿಎಸ್ ಅನ್ವಯವಾಗುತ್ತದೆ.
India Post Time deposit: ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ 5 ವರ್ಷಗಳ ಟೈಮ್ ಡಿಪಾಸಿಟ್‌ನಲ್ಲಿ 1.5 ಲಕ್ಷ ರೂ. ತನಕದ ಠೇವಣಿಗೆ ತೆರಿಗೆ ಉಳಿತಾಯದ ಸೌಲಭ್ಯ ಸಿಗುತ್ತದೆ. ಈ ಸ್ಕೀಮ್‌ನಲ್ಲಿ ಟಿಡಿಎಸ್ ಅನ್ವಯವಾಗುತ್ತದೆ.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಖಾತೆ (MIS): ಈ ಯೋಜನೆಯಡಿಯಲ್ಲಿ ಬಡ್ಡಿಗೆ ತೆರಿಗೆ ಇದೆ. ಸಾಮಾನ್ಯ ನಾಗರಿಕರಿಗೆ 40,000 ರೂ. ಹಾಗೂ ಹಿರಿಯ ನಾಗರಿಕರಿಗೆ 50,000 ರೂ.ಗಿಂತ ಹೆಚ್ಚಿನ ಬಡ್ಡಿ ಇದ್ದರೆ ಟಿಡಿಎಸ್ ಅನ್ವಯಿಸುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS): ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ ಠೇವಣಿಗಳಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ 50,000 ರೂ.ಗಿಂತ ಹೆಚ್ಚಿನ ಬಡ್ಡಿ ಆದಾಯಕ್ಕೆ ಟಿಡಿಎಸ್ ಅನ್ವಯವಾಗುತ್ತದೆ.
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್: ಸಾಮಾನ್ಯ ನಾಗರಿಕರಿಗೆ 40,000 ರೂ, ಹಿರಿಯ ನಾಗರಿಕರಿಗೆ 50,000 ರೂ.ಗಿಂತ ಹೆಚ್ಚಿನ ಬಡ್ಡಿ ಆದಾಯಕ್ಕೆ ಟಿಡಿಎಸ್ ಕಡಿತವಾಗುತ್ತದೆ.
ಸಾರ್ವಜನಿಕ ಭವಿಷ್ಯನಿಧಿ ಖಾತೆ (PPF) : ಪಿಪಿಎಫ್‌ನಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂ. ತನಕದ ಠೇವಣಿಗೆ ತೆರಿಗೆ ರಿಬೇಟ್ ಸಿಗುತ್ತದೆ.
ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC): ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC) ಯೋಜನೆಯಡಿ 1.5 ಲಕ್ಷ ರೂ. ತನಕದ ಠೇವಣಿಗೆ ಟಿಡಿಎಸ್ ಅನ್ವಯಿಸುವುದಿಲ್ಲ.
ಕಿಸಾನ್ ವಿಕಾಸ ಪತ್ರ( KVP): ಕಿಸಾನ್ ವಿಕಾಸ ಪತ್ರದಲ್ಲಿ ದೊರೆಯುವ ಆದಾಯ ಸಂಪೂರ್ಣ ತೆರಿಗೆಗೆ ಅರ್ಹವಾಗಿದೆ. 80ಸಿ ಡಿಡಕ್ಷನ್ ಸಿಗುವುದಿಲ್ಲ. ಹೀಗಿದ್ದರೂ, ಇದಕ್ಕೆ ಟಿಡಿಎಸ್ ಅನ್ವಯವಾಗುವುದಿಲ್ಲ.
ಇದನ್ನೂ ಓದಿ: ವಿಸ್ತಾರ Money Guide : ಹೂಡಿಕೆಯ ರಿಸ್ಕ್ ಕಡಿಮೆ ಮಾಡುವ POWERFULL ಮಾರ್ಗ ಇದು