ಬೆಂಗಳೂರು: ನಾವು ದುಡಿಯುವ ಜತೆಗೆ ದುಡ್ಡನ್ನೂ ದುಡಿಸಬೇಕು ಎಂಬುದು ಸರಿಯಾದ ನಿರ್ಧಾರ. ಆದರೆ, ಹೂಡಿಕೆಯ ಯೋಜನೆಗಳನ್ನು (Investment Plans) ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚು ಬಡ್ಡಿ ತಂದುಕೊಡುವ, ಕಡಿಮೆ ಅವಧಿಯಲ್ಲಿಯೇ ನಮ್ಮ ಹೂಡಿಕೆಯ ದುಡ್ಡಿನ ಮೊತ್ತ ಹೆಚ್ಚಾಗುವ, ಸುದೀರ್ಘ ಅವಧಿಗೆ ಹೂಡಿಕೆ ಮಾಡಿದರೂ ಕೊನೆಯಲ್ಲಿ ಹೆಚ್ಚು ಹಣ ಪಡೆದ ಖುಷಿ ನಮ್ಮದಾಗಬೇಕು. ಅದಕ್ಕಾಗಿ ಹೆಚ್ಚು ಬಡ್ಡಿದರ ಇರುವ ಹೂಡಿಕೆ ಯೋಜನೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಹೂಡಿಕೆ ಮಾಡುವುದು ದೊಡ್ಡದಲ್ಲ, ಹೂಡಿಕೆ ಮಾಡುವಾಗ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣ್ಮೆ. ಸಣ್ಣ ಹೂಡಿಕೆದಾರರಿಗಂತೂ ಈ ನಿಯಮ ಕಡ್ಡಾಯ. ಹೀಗೆ ಹೆಚ್ಚು ಬಡ್ಡಿದರ ಇರುವ ಹೂಡಿಕೆ ಯೋಜನೆಗಳ ಕುರಿತ ಸಂಕ್ಷಿಪ್ತ ವಿವರಣೆ ಇಂದಿನ ವಿಸ್ತಾರ (Money Guide) ಮನಿ ಗೈಡ್‌ನಲ್ಲಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್ ಆಗಿದೆ. ಹಾಗಾಗಿ, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ. ಪಿಪಿಎಫ್ ಖಾತೆ ತೆರೆಯುವವರಿಗೆ ವಾರ್ಷಿಕ ಶೇ.7.1ರಷ್ಟು ಬಡ್ಡಿ ದೊರೆಯಲಿದೆ. ಆದರೆ, ಈ ಯೋಜನೆಯು 15 ವರ್ಷ ಇರಲಿದೆ. ಮಗಳ ಮದುವೆ, ಮಕ್ಕಳ ಶಿಕ್ಷಣ ಸೇರಿ ಹಲವು ಮುಂದಾಲೋಚನೆ ಇರುವವರು 15 ವರ್ಷದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಮ್ಯೂಚುವಲ್ ಫಂಡ್ಸ್
ಪಿಪಿಎಫ್‌ಗಿಂತ ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಬಡ್ಡಿ ಸಿಗುತ್ತದೆ. ಆದರೆ, ಇಲ್ಲಿ ಷೇರು ಮಾರುಕಟ್ಟೆಯ ನಿತ್ಯ ಹೂಡಿಕೆಗಿಂತ ಕಡಿಮೆ ಹಾಗೂ ಪಿಪಿಎಫ್‌ಗಿಂತ ಹೆಚ್ಚು ರಿಸ್ಕ್ ಇರುತ್ತದೆ. ಆದರೆ, ಮ್ಯೂಚುವಲ್ ಫಂಡ್ಸ್ ಹೂಡಿಕೆ ಪ್ಲಾನ್‌ಗಳನ್ನು ಒಂದು ವರ್ಷ, ಎರಡು ವರ್ಷ ಹಾಗೂ ಐದು ವರ್ಷದವರೆಗೆ ಆಯ್ಕೆ ಮಾಡಿಕೊಳ್ಳಬಹುದು. ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಒಳಿತು. ಅದರಲ್ಲೂ, ಅಪಾಯಕಾರಿ ಸನ್ನಿವೇಶದಲ್ಲಿ (ಷೇರು ಮಾರುಕಟ್ಟೆ ಕುಸಿತ, ಆರ್ಥಿಕ ದಿವಾಳಿ ಇತ್ಯಾದಿ) ನಿಮ್ಮ ಹೂಡಿಕೆಗಳನ್ನು ಮಾರಾಟ ಮಾಡುವ ಮೂಲಕ ಹೂಡಿಕೆಯ ಹಣವನ್ನು ಪಡೆಯಬಹುದು. ಎಸ್‌ಬಿಐ ಸೇರಿ ಯಾವುದೇ ಪರಿಚಿತ ಅಥವಾ ಹೆಚ್ಚು ಲಾಭ ತರುವಲ್ಲಿ ಹೂಡಿಕೆ ಮಾಡುವುದು ಜಾಣತನ ಎಂಬುದು ಹೂಡಿಕೆ ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Money Guide: ಎಫ್‌ಡಿಗಳಿಂದ ಹೆಚ್ಚಿನ ಆದಾಯ ಬೇಕೇ? ಲ್ಯಾಡರಿಂಗ್ ತಂತ್ರದಂತೆ ಹೂಡಿಕೆ ಮಾಡಿ ನೋಡಿ!
ಪೋಸ್ಟ್ ಆಫೀಸ್ ಹೂಡಿಕೆ ಯೋಜನೆಗಳು
ಪೋಸ್ಟ್ ಆಫೀಸ್ ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವುದರಿಂದ ಹೂಡಿಕೆಗೆ ಯಾವುದೇ ಅಪಾಯವಿಲ್ಲ. ಅದರಲ್ಲೂ, ಬದಲಾದ ಕಾಲಘಟ್ಟದಲ್ಲಿ ಪೋಸ್ಟ್ ಆಫೀಸ್ ಬ್ಯಾಂಕ್‌ಗಳು ಹೂಡಿಕೆಗೆ ಹೆಚ್ಚಿನ ಬಡ್ಡಿ ನೀಡುತ್ತವೆ. ಹಾಗಾದರೆ, ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಬಹುದಾದ ಪ್ಲಾನ್‌ಗಳು ಯಾವವು? ಅವುಗಳ ಇಂಟರೆಸ್ಟ್ ರೇಟ್ ಎಷ್ಟಿದೆ ಎಂಬುದರ ಮಾಹಿತಿ ಹೀಗಿದೆ…
- ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ (RD) ಪ್ಲಾನ್ ಅನ್ವಯ ಹೂಡಿಕೆ ಮಾಡಿದರೆ ಅಕ್ಟೋಬರ್ 1ರಿಂದ ಶೇ.6.7ರಷ್ಟು ಬಡ್ಡಿ ನೀಡಲಾಗುತ್ತಿದೆ. ಮೂರರಿಂದ ಐದು ವರ್ಷ ಮಾಸಿಕ ಇಂತಿಷ್ಟು ಹಣ ಠೇವಣಿ ಮಾಡಿದರೆ ಬಡ್ಡಿಯ ಲಾಭ ಸಿಗಲಿದೆ.
- ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಅಕೌಂಟ್ (TD) ತೆರೆದರೆ ಒಳ್ಳೆಯ ಬಡ್ಡಿ ಸಿಗಲಿದೆ. ಒಂದು ವರ್ಷದ ಅವಧಿಯ ಹೂಡಿಕೆಗೆ ಶೇ.6.9, 2 ವರ್ಷಕ್ಕೆ ಶೇ.7 ಹಾಗೂ 5 ವರ್ಷಕ್ಕೆ ಶೇ.7.5ರಷ್ಟು ಬಡ್ಡಿ ದೊರೆಯಲಿದೆ.
- ಹೆಣ್ಣುಮಕ್ಕಳ ತಂದೆಯರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಒಳ್ಳೆಯ ಪ್ಲಾನ್ ಆಗಿದೆ. 10 ವರ್ಷದೊಳಗಿನ ಹೆಣ್ಣುಮಕ್ಕಳಿದ್ದರೆ ಅವರ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ವರ್ಷಕ್ಕೆ 250 ರೂ.ನಿಂದ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಮಗಳು 18 ವರ್ಷ ತುಂಬಿದ ಬಳಿಕ ಶೇ.8ರಷ್ಟು ಬಡ್ಡಿಯೊಂದಿಗೆ ಹಣ ಪಡೆಯಬಹುದು. ಇದೇ ಹಣವನ್ನು ಮಗಳು 21 ವರ್ಷದ ದಾಟಿದ ಬಳಿಕ ಪಡೆದರೆ ಹೆಚ್ಚಿನ ಮೊತ್ತ ಸಿಗಲಿದೆ. ಆಕೆಯ ಉನ್ನತ ಶಿಕ್ಷಣ ಸೇರಿ ಹಲವು ಕಾರಣಗಳಿಗೆ ಇದು ಹೇಳಿ ಮಾಡಿಸಿದ ಯೋಜನೆ.
- ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ ಅಕೌಂಟ್ ಕೂಡ ಸಣ್ಣ ಉಳಿತಾಯದಾರರಿಗೆ ಒಳ್ಳೆಯ ಯೋಜನೆ ಆಗಿದೆ. ಒಂದು, ಮೂರು, ಐದು ವರ್ಷದ ಯೋಜನೆ ಇದಾಗಿದ್ದು, ಒಬ್ಬ ವ್ಯಕ್ತಿಯು ಒಂದು ಖಾತೆಯಲ್ಲಿ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಬಡ್ಡಿದರವು ಶೇ.7.4ರಷ್ಟು ಇದೆ. ಈ ಯೋಜನೆಯಲ್ಲಿ ಜಂಟಿ ಖಾತೆ ತೆರೆಯುವುದು ತುಂಬ ಒಳಿತು. ಜಂಟಿಯಾಗಿ ತೆರೆದ ಖಾತೆ (Joint Account)ಯಲ್ಲಿ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದರಿಂದ ಹೆಚ್ಚಿನ ಲಾಭವಾಗಲಿದೆ.