ಸರ್ಕಾರದ ಬಾಂಡ್ಗಳ (ಸಾಲಪತ್ರ) ಉತ್ಪತ್ತಿಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಮೊದಲಾದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಅಕ್ಟೋಬರ್ನಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. (ವಿಸ್ತಾರ Money Guide) ಈ ತಿಂಗಳಿನ ಅಂತ್ಯಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪರಿಷ್ಕರಣೆಯಾಗಲಿದೆ.
ಪಿಪಿಎಫ್, ಸುಕನ್ಯಾ ಸಮೃದ್ಧಿ ಬಡ್ಡಿ ದರ ಏಕೆ ಏರಿಕೆಯಾಗಲಿದೆ?
ಸರಕಾರಿ ಬಾಂಡ್ಗಳ (G-sec- ಸಾಲಪತ್ರ) 10 ವರ್ಷ ಅವಧಿಯ ಆದಾಯ 7% ಇದೆ. 2022ರ ಜೂನ್- ಆಗಸ್ಟ್ ಅವಧಿಯಲ್ಲಿ 7.31% ಇತ್ತು. ಹಣಕಾಸು ಸಚಿವಾಲಯದ ಸೂತ್ರಗಳ ಪ್ರಕಾರ ಪಿಪಿಎಫ್ ಬಡ್ಡಿ ದರ ಮುಂಬರುವ ತ್ರೈಮಾಸಿಕಲ್ಲಿ, (ಅಕ್ಟೋಬರ್-ಡಿಸೆಂಬರ್) 7.56%ಕ್ಕೆ ಏರಿಕೆಯಾಗಬೇಕು. ಪ್ರಸ್ತುತ ಪಿಪಿಎಫ್ 7.1% ಬಡ್ಡಿ ದರವನ್ನು ಹೊಂದಿದೆ. ಇದೇ ರೀತಿ ಸುಕನ್ಯಾ ಸಮೃದ್ಧಿ ಯೋಜನೆ ಈಗಿನ 7.6%ರಿಂದ 8.3%ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಸಾಮಾನ್ಯವಾಗಿ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸೂತ್ರದ ಅನ್ವಯ ತಕ್ಷಣ ಬದಲಿಸುವುದಿಲ್ಲ. ಶ್ಯಾಮಲಾ ಗೋಪಿನಾಥ್ ಸಮಿತಿಯು ಈ ಕುರಿತ ಸೂತ್ರವನ್ನು ರೂಪಿಸಿದೆ.
ಸೆಪ್ಟೆಂಬರ್ 30ಕ್ಕೆ ಬಡ್ಡಿ ದರ ಪ್ರಕಟ ನಿರೀಕ್ಷೆ: 2020ರ ಏಪ್ರಿಲ್-ಜೂನ್ ಬಳಿಕ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿ ಇವೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಸಣ್ಣ ಉಳಿತಾಯ ಬಡ್ಡಿಗಳನ್ನು ಪರಿಷ್ಕರಿಸುತ್ತದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಪರಿಷ್ಕರಣೆ ಸೆಪ್ಟೆಂಬರ್ 30ಕ್ಕೆ ನಡೆಯಬೇಕಾಗಿದೆ. ಅಕ್ಟೋಬರ್-ಡಿಸೆಂಬರ್ ಅವಧಿಗೆ ಪರಿಷ್ಕೃತ ದರಗಳು ಅನ್ವಯಿಸಲಿದೆ.
ಪ್ರಸ್ತುತ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಂತಿದೆ:
- ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್): 7.1%
- ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್ಸಿ) : 6.8%
- ಹಿರಿಯ ನಾಗರಿಕರ 5 ವರ್ಷಗಳ ಉಳಿತಾಯ ಯೋಜನೆ: 7.4%
- ಸುಕನ್ಯಾ ಸಮೃದ್ಧಿ ಯೋಜನೆ: 7.6%
- ಅಂಚೆ ಇಲಾಖೆಯ 5 ವರ್ಷಗಳ ಆರ್ಡಿ ಯೋಜನೆ: 5.8%
- ಕಿಸಾನ್ ವಿಕಾಸ ಪತ್ರ: 6.9%
ಕೋವಿಡ್ ಬಿಕ್ಕಟ್ಟಿನ ಸಂದರ್ಭ ಬ್ಯಾಂಕ್ ಠೇವಣಿಗಳ ಬಡ್ಡಿ ದರ ಇಳಿಕೆಯಾಗಿದ್ದರೂ, ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಿರಲಿಲ್ಲ.