Site icon Vistara News

Charges on payment | ಪೇಟಿಎಂ, ಫೋನ್‌ಪೇ, ಪೇಮೆಂಟ್ ಮೇಲೆ ಶುಲ್ಕ ವಿಧಿಸಲು ಹೊರಟ ಆರ್‌ಬಿಐ

upi

ಮುಂಬಯಿ: ಪೇಟಿಎಂ, ಜಿ-ಪೇ, ಫೋನ್‌ಪೇ ಇತ್ಯಾದಿ ಯುಪಿಐ ಆಧಾರಿತ ಹಣಕಾಸು ವರ್ಗಾವಣೆಗಳ (Charges on payment) ಮೇಲೆ ಶುಲ್ಕ ವಿಧಿಸಲು ಮೊದಲ ಬಾರಿಗೆ ಆರ್‌ಬಿಐ ಚಿಂತನೆ ನಡೆಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯವನ್ನು ನಿರೀಕ್ಷಿಸಿದೆ.‌ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ನಡೆಸುವ ಹಣ ವರ್ಗಾವಣೆಗಳ ಮೇಲೆಯೂ ನಿಯಮಿತ ಶುಲ್ಕ ವಿಧಿಸಲು ಉದ್ದೇಶಿಸಿದೆ.

ನೀವು ಈಗ ಜೇಬಿನಲ್ಲಿ ನಗದು ಇಲ್ಲದಿದ್ದರೂ, ಕೇವಲ ಪೇಟಿಎಂ, ಜಿ-ಪೇ, ಫೋನ್‌ ಪೇ ಇತ್ಯಾದಿಗಳ ಮೂಲಕ ಹಣವನ್ನು ಪಾವತಿಸಿ ನಿಮಗೆ ಬೇಕಾದ ವಸ್ತುಗಳನ್ನು ಮತ್ತು ಸೇವೆಗಳನ್ನು ಪಡೆಯಬಹುದು. ಪೇಟಿಎಂ, ಜಿ-ಪೇ, ಫೋನ್‌ಪೇ ಇತ್ಯಾದಿಗಳು ಈಗ ಅತ್ಯಂತ ಸಾಮಾನ್ಯವಾಗಿದೆ. ಎಳನೀರು, ಬೊಂಡಾ ಬಜ್ಜಿ ಮಾರಾಟ ಮಾಡುವವರು, ಕಿರಾಣಿ ಅಂಗಡಿ, ಮೆಡಿಕಲ್‌ ಶಾಪ್‌ ಹೀಗೆ ಎಲ್ಲ ಕಡೆಗಳಲ್ಲಿಯೂ ಈಗ ಈ ಆನ್‌ಲೈನ್‌ ಹಣಕಾಸು ಪಾವತಿ ಜನಪ್ರಿಯವಾಗಿದೆ. ಆದರೆ ಇಂಥ ಹಣಕಾಸು ವರ್ಗಾವಣೆಗಳ ಮೇಲೆಯೂ ಶುಲ್ಕವನ್ನು ವಿಧಿಸಲು ಇದೀಗ ಆರ್‌ಬಿಐ ಮುಂದಾಗಿದೆ. ಇಂಥ ಪ್ರಸ್ತಾಪವನ್ನು ಬುಧವಾರ ಆರ್‌ಬಿಐ ಮಂಡಿಸಿದ್ದು, ಜನರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಕ್ಟೋಬರ್‌ ೩ರೊಳಗೆ ಸಾರ್ವಜನಿಕರು ತಮ್ಮ ಸಲಹೆಗಳನ್ನು ಆರ್‌ಬಿಐಗೆ ಇ-ಮೇಲ್‌ ಮೂಲಕ ಸಲ್ಲಿಸಬಹುದು.

ಒಂದು ವೇಳೆ ಆರ್‌ಬಿಐನ ಪ್ರಸ್ತಾಪವನ್ನು ಸರ್ಕಾರ ಒಪ್ಪಿದರೆ ಜಿ-ಪೇ, ಫೋನ್‌ಪೇ ಇತ್ಯಾದಿಗಳ ಮೂಲಕ ನಡೆಸುವ ಹಣಕಾಸು ವರ್ಗಾವಣೆಗಳಿಗೆ ಶುಲ್ಕವನ್ನು ಬಳಕೆದಾರರು ನೀಡಬೇಕಾಗುತ್ತದೆ. ಆರ್‌ಬಿಐ, ಇಮೀಡಿಯೇಟ್‌ ಪೇಮೆಂಟ್‌ ಸರ್ವೀಸ್ (IMPS), ನ್ಯಾಶನಲ್‌ ಎಲೆಕ್ಟ್ರಾನಿಕ್‌ ಫಂಡ್ಸ್‌ ಟ್ರಾನ್ಸ್‌ಫರ್‌ ಸಿಸ್ಟಮ್ (NEFT)‌, ರಿಯಲ್‌ ಟೈಮ್‌ ಗ್ರೋಸ್‌ ಸೆಟ್ಲ್‌ಮೆಂಟ್‌ (RTGS) ಮತ್ತು UPI ಆಧಾರಿತ ಹಣಕಾಸು ವರ್ಗಾವಣೆಗಳ ಮೇಲೆ ಶುಲ್ಕ ವಿಧಿಸಲು ಚಿಂತನೆ ನಡೆಸಿದೆ. ಅಂದರೆ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಪ್ರಿಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರಕ್ಷನ್ಸ್‌ (PPIs) ಮೂಲಕ ನಡೆಸುವ ಹಣಕಾಸು ವರ್ಗಾವಣೆಯ ಮೇಲೆಯೂ ಶುಲ್ಕಗಳನ್ನು ವಿಧಿಸಲು ಆರ್‌ಬಿಐ ಪ್ರಸ್ತಾಪಿಸಿದೆ.

ಆರ್‌ಬಿಐ ಈ ಸಂಬಂಧ ಚರ್ಚಾಪತ್ರವನ್ನು ಬಿಡುಗಡೆಗೊಳಿಸಿದ್ದು, ಪ್ರಸ್ತುತ ಪೇಮೆಂಟ್‌ ಸಿಸ್ಟಮ್‌ಗಳಲ್ಲಿ ಇರುವ ಶುಲ್ಕಗಳ ಪದ್ಧತಿಗಳನ್ನು ವಿವರಿಸಿದೆ. ಸಾರ್ವಜನಿಕರ ಅಭಿಪ್ರಾಯ, ಸಲಹೆಗಳನ್ನು ಆಧರಿಸಿ ಆರ್‌ಬಿಐ ಶುಲ್ಕ ನೀತಿಯನ್ನು ರಚಿಸುವ ನಿರೀಕ್ಷೆ ಇದೆ. ಯುಪಿಐ ಆಧಾರಿಯ ಹಣಕಾಸು ವರ್ಗಾವಣೆಗಳಿಗೆ ಎಂಡಿಆರ್‌ ಶುಲ್ಕ ವಿಧಿಸಬೇಕೇ? ಶುಲ್ಕವನ್ನು ನಿಗದಿತ ಮೊತ್ತದಲ್ಲಿ ವಿಧಿಸಬಹುದೇ ಅಥವಾ ಶೇಕಡಾವಾರು ಲೆಕ್ಕದಲ್ಲಿ ಸಂಗ್ರಹಿಸಬಹುದೇ ಎಂದು ಪ್ರಶ್ನಿಸಿದೆ.

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವರ್ಗಾವಣೆಗೆ ಶುಲ್ಕ: ಆರ್‌ಬಿಐ ಯುಪಿಐ ಆಧಾರಿತ ಹಣಕಾಸು ವರ್ಗಾವಣೆಗಳ ಜತೆಗೆ ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ನಡೆಸುವ ಪೇಮೆಂಟ್‌ಗಳಿಗೂ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ನಿರೀಕ್ಷಿಸಿದೆ. ಪ್ರಸ್ತುತ ಯುಪಿಐ, ಡೆಬಿಟ್‌ ಮತ್ತು ರುಪೇ ಕಾರ್ಡ್‌ಗಳ ಮೂಲಕ ಜನತೆ ನಡೆಸುವ ಹಣಕಾಸು ವರ್ಗಾವಣೆಗಳಿಗೆ ಯಾವುದೇ ಶುಲ್ಕವನ್ನು ಸ್ಕಾರ ಸಂಗ್ರಹಿಸುತ್ತಿಲ್ಲ. ಅವುಗಳು ಸರ್ಕೃದ ಝೀರೊ ಎಂಡಿಆರ್‌ ನೀತಿಯ ಅಡಿಗೆ ಬರುತ್ತವೆ. ಈ ನೀತಿಯಲ್ಲಿ ವ್ಯಾಪಾರಿಗಳು ಇವುಗಳ ಮೂಲಕ ಹಣಕಾಸು ವರ್ಗಾವಣೆಗೆ ಯಾವುದೇ ಶುಲ್ಕವನ್ನು ಬಳಕೆದಾರರಿಂದ ಸ್ವೀಕರಿಸುವಂತಿಲ್ಲ. ಮತ್ತೊಂದು ಕಡೆ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ಕಂಪನಿಗಳು ಶೇ.೦.೪ರಿಂದ ೦.೯% ಶ್ರೇಣಿಯಲ್ಲಿ ಎಂಡಿಆರ್‌ (Merchant discount rate) ಶುಲ್ಕವನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ:RBI repo rate hike| ಬೆಲೆ ಏರಿಕೆಯನ್ನು ಇಳಿಸಲು ಬಡ್ಡಿ ದರ ಹೆಚ್ಚಳದ ಅಸ್ತ್ರ ಪ್ರಯೋಗಿಸಿದ ಆರ್‌ಬಿಐ

ಮತ್ತೆ ನಗದು ಬಳಕೆಗೆ ಜನ ಮೊರೆ ಹೋಗುವ ಆತಂಕ: ಆರ್‌ಬಿಐ ನೀತಿಯ ಆಧಾರದಲ್ಲಿ ಒಂದು ವೇಳೆ ಯುಪಿಐ ಆಧಾರಿತ ಹಣಕಾಸು ವರ್ಗಾವಣೆಗಳು, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಯ ಮೇಲೆ ಶುಲ್ಕ ವಿಧಿಸಿದರೆ, ಜನತೆ ಮತ್ತೆ ನಗದು ಬಳಕೆಗೆ ಮೊರೆ ಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ ಹಣಕಾಸು ವಲಯದ ತಜ್ಞರು. ಸರ್ಕಾರ ನಾನಾ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ಆನ್‌ಲೈನ್‌ ಹಣಕಾಸು ವರ್ಗಾವಣೆಗೆ ಉತ್ತೇಜನ ನೀಡುತ್ತಿದೆ. ಈ ಹಿಂದೆ ಇದಕ್ಕಾಗಿ ಇನ್ಸೆಂಟಿವ್‌ಗಳನ್ನು ಕೂಡ ಘೋಷಿಸಲಾಗಿತ್ತು. ಆದರೆ ಇವುಗಳ ಮೇಲೆ ಶುಲ್ಕ ಸಂಗ್ರಹಿಸಲು ಶುರು ಮಾಡಿದರೆ ಜನತೆ, ಅದನ್ನು ತಪ್ಪಿಸಲು ಮತ್ತು ನಗದು ಬಳಕೆಗೆ ಮೊರೆ ಹೋಗುವ ಸಾಧ್ಯತೆ ಇದೆ. ನಗದು ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ಬಗೆಹರಿಸಲು ಆನ್‌ಲೈನ್‌ ವರ್ಗಾವಣೆಗಳನ್ನು ಉತ್ತೇಜಿಸಲಾಗಿತ್ತು. ಆದರೆ ಶುಲ್ಕ ವಿಧಿಸಿದರೆ ಅವುಗಳ ಬಳಕೆಗೆ ನಿರುತ್ತೇಜನವಾಗಲಿದೆ ಎಂಬ ಆತಂಕ ಉಂಟಾಗಿದೆ.

ಇದನ್ನೂ ಓದಿ:Loan Apps | ಸಾಲದ ಆ್ಯಪ್‌ಗಳಲ್ಲಿ ವಂಚನೆ ತಡೆಯಲು ಆರ್‌ಬಿಐನಿಂದ ಹೊಸ ನಿಯಮಾವಳಿ ಬಿಡುಗಡೆ

Exit mobile version