Site icon Vistara News

ವಿಸ್ತಾರ Money Guide| ITR- 1ರಿಂದ ITR- 7 ತನಕ ಏಳು ಬಗೆ, ಯಾರಿಗೆ ಯಾವುದು?

ITR

೨೦೨೧-೨೨ರ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ( Filing Income tax return) ಕೊನೆಯ ದಿನಾಂಕ ಜುಲೈ ೩೧ ಆಗಿದೆ. ಐಟಿಆರ್‌ ಅರ್ಜಿಗಳಲ್ಲಿ ಹಲವು ವಿಧಗಳಿವೆ. ಬೇರೆ ಬೇರೆ ಆದಾಯ ಮೂಲಗಳನ್ನು ಹೊಂದಿರುವವರಿಗೆ ಐಟಿ ರಿಟರ್ನ್‌ ಅರ್ಜಿಯೂ (Form) ಭಿನ್ನವಾಗಿರುತ್ತದೆ. ಹೀಗಾಗಿ ಅರ್ಜಿಯನ್ನು ಆಯ್ಕೆ ಮಾಡುವ ಸಂದರ್ಭ ಗೊಂದಲಕ್ಕೀಡಾಗದಿರಿ.

ITR ೧ ಅಥವಾ ಸಹಜ್: ಐಟಿಆರ್‌- ೧ ಅಥವಾ ಸಹಜ್‌ ಅರ್ಜಿಯು ವೇತನದಾರರಿಗೆ ( salaried individuals) ಅನ್ವಯಿಸುತ್ತದೆ. ೨೦೨೧-೨೨ರಲ್ಲಿ ವಾರ್ಷಿಕ ಒಟ್ಟು ಆದಾಯ ೫೦ ಲಕ್ಷ ರೂ. ತನಕ ಆದಾಯ ಗಳಿಸಿರುವ ವೇತನದಾರರಿಗೆ ಇದು ಅನ್ವಯ. ವೇತನದಲ್ಲಿ ಪಿಂಚಣಿಯೂ ಸೇರುತ್ತದೆ. ಬ್ಯಾಂಕ್‌ ಠೇವಣಿಗಳಿಂದ ಅಥವಾ ಮನೆಯ ಆಸ್ತಿಯಿಂದ ಬರುವ ಆದಾಯ ಇದ್ದರೆ ಐಟಿಆರ್-‌೧ನಲ್ಲಿ ಉಲ್ಲೇಖಿಸಬಹುದು.

ಯಾರು ಐಟಿಆರ್‌- ೧ ಅಥವಾ ಸಹಜ್‌ ಅರ್ಜಿಯನ್ನು ಬಳಸಬಾರದು?

ITR – ೨

ಈ ಅರ್ಜಿಯನ್ನು ೨೦೨೧-೨೨ರಲ್ಲಿ ವಾರ್ಷಿಕ ೫೦ ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವ ವೇತನದಾರರು ಬಳಸಬೇಕು. ಕ್ಯಾಪಿಟಲ್‌ ಗೇನ್ಸ್‌ (ಅಲ್ಪಾವಧಿ ಮತ್ತು ದೀರ್ಘಾವಧಿ) ಆದಾಯ ಹೊಂದಿರುವವರೂ ಈ ಅರ್ಜಿ ಬಳಸಬೇಕು. ಒಂದಕ್ಕಿಂತ ಹೆಚ್ಚು ಮನೆಯ ಆಸ್ತಿಯಿಂದ ಆದಾಯ ಗಳಿಸಿದವರೂ ಈ ಅರ್ಜಿ ಉಪಯೋಗಿಸಬೇಕು. ಬಡ್ಡಿ, ಕೌಟುಂಬಿಕ ಪಿಂಚಣಿ (Family pensioņ) ಡಿವಿಡೆಂಡ್‌, ಲಾಟರಿಯಿಂದ ಗೆದ್ದ ಹಣ ಇದ್ದರೆ ಐಟಿಆರ್-‌೨ ಬಳಸಬೇಕು. ನೋಂದಾಯಿತವಲ್ಲದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿರುವವರು, ಕಂಪನಿಯ ನಿರ್ದೇಶಕರು, ಭಾರತದ ಹೊರಗಿನ ಮೂಲಗಳಿಂದ ಆದಾಯ ಇರುವವರು ಕೂಡ ಇದೇ ಅರ್ಜಿ ಬಳಸಬೇಕು. ಬಿಸಿನೆಸ್‌ ಮೂಲಕ ಅಥವಾ ಇತರ ಪ್ರೊಫೆಷನ್‌ಗಳ ಮೂಲಕ ಆದಾಯ ಇರುವವರು ಐಟಿಆರ್‌ ೨ ಬಳಸಬಾರದು.

ITR- 3: ಬಿಸಿನೆಸ್‌ ಅಥವಾ ಯಾವುದಾದರೂ ವೃತ್ತಿ ಅಥವಾ ಪ್ರೊಫೆಷನ್‌ ಮೂಲಕ (ವೇತನದಾರ ಅಲ್ಲ) ಆದಾಯ ಹೊಂದಿದವರು ಐಟಿಆರ್-‌೩ ಬಳಸಬೇಕು. ಆದರೆ ಕಂಪನಿಗಳನ್ನು ನಡೆಸುವ ಮೂಲಕ ಆದಾಯ ಪಡೆಯುವವವರಿಗೆ ಈ ಅರ್ಜಿ ಆಗುವುದಿಲ್ಲ.

ITR- ೪ ಅಥವಾ ಸುಗಮ್: ಕಂಪನಿ ಅಥವಾ ಬಿಸಿನೆಸ್‌ನಲ್ಲಿ ಲಿಮಿಟೆಡ್‌ ಲಾಯಬಿಲಿಟಿ ಪಾರ್ಟ್ನರ್‌ಶಿಪ್‌ ‌(LLP) ಮತ್ತು ಪಾರ್ಟ್ನರ್‌ಶಿಪ್ ಎಂಬ ಎರಡು ವಿಧಗಳಿವೆ. ಎಲ್‌ಎಲ್‌ಪಿ ಅಲ್ಲದ ಕಂಪನಿ ಅಥವಾ ಸಂಸ್ಥೆಗಳು ಐಟಿಆರ್‌ ೪ ಅರ್ಜಿ ಬಳಸಬೇಕು. ಎರಡನೆಯದಾಗಿ ಅಂದಾಜು ಆದಾಯ ಯೋಜನೆ ( Presumptive income scheme) ಮೂಲಕ ತೆರಿಗೆ ಲೆಕ್ಕಾಚಾರ ಆಯ್ಕೆ ಬಯಸುವವರಿಗೆ ಸುಗಮ್‌ ಅರ್ಜಿ ಅಗತ್ಯ. ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್‌ ಅಥವಾ ಆರ್ಕಿಟೆಕ್ಟ್‌, ಅಕೌಂಟೆನ್ಸಿ, ಟೆಕ್ನಿಕಲ್‌ ಕನ್ಸಲ್ಟೆನ್ಸಿ, ಒಳಾಂಗಣ ವಿನ್ಯಾಸ ವಲಯದಲ್ಲಿ ಆದಾಯ ಗಳಿಸುವವರು ಸುಗಮ್‌ ಅರ್ಜಿ ಬಳಸಬೇಕು.

ITR- 5 ಮತ್ತು ITR- ೬: ಈ ಎರಡೂ ಫಾರ್ಮ್‌ಗಳು ವೈಯಕ್ತಿಕ ತೆರಿಗೆದಾರರಿಗೆ ಇರುವಂಥದ್ದಲ್ಲ. ಐಟಿಆರ್‌ ೫ ‌ಅರ್ಜಿಯು ಪಾರ್ಟ್ನರ್‌ಶಿಪ್‌ ಕಂಪನಿಗಳು, ಬಿಸಿನೆಸ್‌ ಟ್ರಸ್ಟ್‌, ಇನ್ವೆಸ್ಟ್‌ಮೆಂಟ್‌ ಫಂಡ್ ಕಂಪನಿಗಳಿಗೆ ಅನ್ವಯ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ ೧೧ ಹೊರತುಪಡಿಸಿದಂತೆ ನೋಂದಣಿಯಾಗಿರುವ ಕಂಪನಿಗಳಿಗೆ ಐಟಿಆರ್‌ ೬ ಅನ್ವಯಿಸುತ್ತದೆ. ವೈಯಕ್ತಿಕ ತೆರಿಗೆದಾರರು ಈ ಎರಡೂ ಫಾರ್ಮ್‌ಗಳನ್ನು ಬಳಸಬಾರದು.

ಐಟಿಆರ್‌- ೭: ಚಾರಿಟೆಬಲ್‌ ಸಂಸ್ಥೆಗಳು, ಧಾರ್ಮಿಕ ಟ್ರಸ್ಟ್‌, ರಿಸರ್ಚ್‌ ಅಸೋಸಿಯೇಶನ್‌, ನ್ಯೂಸ್‌ ಏಜೆನ್ಸಿ ಅಥವಾ ಕಾಯಿದೆಯಡಿಯಲ್ಲಿ ನಮೂದಿಸಿರುವ ಸಂಸ್ಥೆಗಳಿಗೆ ಐಟಿಆರ್‌- ೭ ಫಾರ್ಮ್‌ ಅನ್ವಯವಾಗುತ್ತದೆ.

ಆದಾಯ ತೆರಿಗೆ ಬರದಿದ್ದರೂ, ಐಟಿಆರ್‌ ಸಲ್ಲಿಸುವುದರಿಂದ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿ ಅಮೂಲ್ಯ ದಾಖಲೆ ಆಗುವುದರಿಂದ ಐಟಿ ರಿಟರ್ನ್‌ ಸಲ್ಲಿಸುವುದು ಉತ್ತಮ. ನೀವು ವೇತನದಾರರಾಗಿದ್ದು, ಗೃಹ ಸಾಲ ಖರೀದಿಯ ಸಂದರ್ಭದಲ್ಲೂ ಕಳೆದ ಮೂರು ವರ್ಷಗಳ ಐಟಿಆರ್‌ ರಿಟರ್ನ್‌ ದಾಖಲೆಯ ಅವಶ್ಯಕತೆ ಬರುತ್ತದೆ. ಗೊಂದಲವಿದ್ದರೆ ಆರ್ಥಿಕ ತಜ್ಞರ ಸಲಹೆ ಪಡೆಯಬೇಕು ಎನ್ನುತ್ತಾರೆ ಬೆಂಗಳೂರು ಮೂಲದ ಹಣಕಾಸು ಸಲಹೆಗಾರ ದತ್ತಾತ್ರೇಯ ಬಿ.ಕೆ ಅವರು.

Exit mobile version