ಕೇಂದ್ರ ಸರ್ಕಾರ ಜನತೆಯ ಉಪಯೋಗಕ್ಕಾಗಿ ನಿರ್ದಿಷ್ಟ ವಯೋಮಾನದವರಿಗೆ ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೊಳಿಸಿದೆ. ಉದಾಹರಣೆಗೆ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ನೆರವಾಗುವ ಯೋಜನೆಗಳು ಇವೆ. ಅದೇ ರೀತಿ ಹೆಣ್ಣು ಮಕ್ಕಳ ಭವಿಷ್ಯಕ್ಕೆ ನೆರವಾಗಲು ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samriddhi Yojana) ಜಾರಿಗೆ ತರಲಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಜುಲೈ-ಸೆಪ್ಟೆಂಬರ್ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಇವುಗಳು ಬ್ಯಾಂಕ್‌ಗಳ ಎಫ್‌ಡಿ ಬಡ್ಡಿ ದರಕ್ಕಿಂತಲೂ ಉತ್ತಮವಾಗಿವೆ. ಅದರಲ್ಲೂ ಸುಕನ್ಯಾ ಸಮೃದ್ಧಿ ಯೋಜನೆ (SSY) ಬಹುತೇಕ ಎಲ್ಲ ಸಣ್ಣ ಉಳಿತಾಯ ಯೋಜನೆಗಿಂತ ಹೆಚ್ಚು ಆದಾಯ ನೀಡುತ್ತದೆ. ಹಾಗೂ ಇದು ಸರ್ಕಾರದ ಬೆಂಬಲ ಹೊಂದಿರುವುದರಿಂದ ಸಂಪೂರ್ಣ ಸುರಕ್ಷಿತ.
ಯಾರು SSY ಖಾತೆ ತೆರೆಯಬಹುದು?
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ೧೦ ವರ್ಷ ವಯೋಮಿತಿಗಿಂತ ಕೆಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ತೆರೆಯಬಹುದು. ಆ ಹೆಣ್ಣು ಮಗುವಿಗೆ ೧೮ ವರ್ಷ ತುಂಬಿದಾಗ ಆಕೆ ಖಾತೆದಾರಳಾಗುತ್ತಾಳೆ. ಒಂದು ಕುಟುಂಬದಲ್ಲಿ ಗರಿಷ್ಠ ಎರಡು ಹೆಣ್ಣು ಮಕ್ಕಳಿಗೆ ಇದನ್ನು ತೆರೆಯಬಹುದು. ಒಂದು ವೇಳೆ ಅವಳಿ/ತ್ರಿವಳಿ ಹೆಣ್ಣು ಮಕ್ಕಳು ಜನಿಸಿದರೆ ಕೂಡ ಎಲ್ಲ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.
ವಿಶೇಷವೆಂದರೆ ಎಸ್‌ಎಸ್‌ವೈ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದು. ಹಾಗೂ ಬ್ಯಾಂಕ್ ಶಾಖೆಗಳ ನಡುವೆ ಸುಲಭವಾಗಿ ವರ್ಗಾಯಿಸಬಹುದು. ಹೂಡಿಕೆಯ ಅವಧಿ ೧೫ ವರ್ಷಗಳು ಹಾಗೂ ಮೆಚ್ಯೂರಿಟಿ ಅವಧಿ ೨೧ ವರ್ಷ.
ಕನಿಷ್ಠ ಠೇವಣಿ ೨೫೦ ರೂ. ಗರಿಷ್ಠ ೧.೫೦ ಲಕ್ಷ ರೂ.
ಎಸ್‌ಎಸ್‌ವೈ ಖಾತೆಯನ್ನು ಕನಿಷ್ಠ ೨೫೦ ರೂ. ಹೂಡಿಕೆಯಿಂದ ತೆರೆಯಬಹುದು. ಬಳಿಕ ಪ್ರತಿ ವರ್ಷ ಕನಿಷ್ಠ ೨೫೦ ರೂ.ಗಳಿಂದ ಗರಿಷ್ಠ ೧.೫೦ ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಒಟ್ಟಿಗೆ ಅಥವಾ ಮಾಸಿಕ ಕಂತುಗಳ ಮೂಲಕವೂ ಹೂಡಿಕೆ ಮಾಡಬಹುದು.
ಬಡ್ಡಿ ದರ ಮತ್ತು ತೆರಿಗೆ ಅನುಕೂಲ
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ೭.೬% ಬಡ್ಡಿ ಸಿಗಲಿದೆ. ಪ್ರತಿ ಆರ್ಥಿಕ ವರ್ಷದ ಕೊನೆಗೆ ಬಡ್ಡಿ ಜಮೆ ಮಾಡುತ್ತಾರೆ. ಈ ಬಡ್ಡಿ ಮತ್ತು ಠೇವಣಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೮೦ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಿಗುತ್ತದೆ.
ಮೆಚ್ಯುರಿಟಿ ವೇಳೆಗೆ ೫ ಲಕ್ಷ ರೂ. ಗಳಿಸುವುದು ಹೇಗೆ?
ನೀವು ೨೫೦ ರೂ.ಗೆ ಸುಕನ್ಯಾ ಸಮೃದ್ಧಿ ಖಾತೆ ತೆರೆದಿದ್ದೀರಿ ಹಾಗೂ ಅದಕ್ಕೆ ಬಡ್ಡಿ ೭.೬% ಎಂದಿಟ್ಟುಕೊಳ್ಳಿ. ಬಳಿಕ ಪ್ರತಿ ತಿಂಗಳು ೧,೦೦೦ ರೂ. ಹೂಡಿಕೆ ಮಾಡಿ. ವಾರ್ಷಿಕ ಒಟ್ಟು ೧೨,೦೦೦ ರೂ. ಆಗುತ್ತದೆ. ನಿಮ್ಮ ಮಗಳು ಜನಿಸಿದಾಗ ಖಾತೆ ತೆರೆದಿದ್ದರೆ, ಮುಂದಿನ ೧೫ ವರ್ಷ ಠೇವಣಿ ಇಡಬೇಕಾಗುತ್ತದೆ. ಅವಳು ೨೧ ವರ್ಷ ಪೂರ್ಣಗೊಳಿಸಿದಾಗ ಖಾತೆಯ ಅವಧಿಯೂ ಪೂರ್ಣವಾಗುತ್ತದೆ. ಆಗ ನಿಮ್ಮ ಹೂಡಿಕೆಗೆ ಬಡ್ಡಿ ಸೇರಿ ನೀವು ಪಡೆಯುವ ಹಣ ೫,೨೭,೪೪೬ ರೂ. ಆಗಿರುತ್ತದೆ.