Site icon Vistara News

ವಿಸ್ತಾರ Money Guide: ಶೇ.3 ವೇತನದಾರರಿಗೆ ತೆರಿಗೆ ಹೆಚ್ಚಳದ ಗದಾ ಪ್ರಹಾರ, ಅವರ ಗೋಳನ್ನು ಕೇಳುವವರೇ ಇಲ್ಲ..!

tax

ಬೆಂಗಳೂರು: ಭಾರತದ 138 ಕೋಟಿ ಜನಸಂಖ್ಯೆಯಲ್ಲಿ ವೈಯಕ್ತಿಕ ಆದಾಯ ತೆರಿಗೆ ಅಥವಾ ನೇರ ತೆರಿಗೆಯನ್ನು ಪಾವತಿಸುವ ನಾಗರಿಕರ ಸಂಖ್ಯೆ ಕೇವಲ ಶೇ.3 ಮಂದಿ ಮಾತ್ರ. ಇವರಲ್ಲಿ ಹೆಚ್ಚಿನವರು ಜೀವನೋಪಾಯಕ್ಕೆ ವೇತನವನ್ನೇ ನಂಬಿಕೊಂಡಿರುವ ಮಧ್ಯಮ ವರ್ಗದ ಆದಾಯವನ್ನು ಹೊಂದಿರುವ ಜನತೆ. ದುರದೃಷ್ಟವಶಾತ್‌ ಇವರ ಮೇಲೆಯೇ ವರ್ಷದಿಂದ ವರ್ಷಕ್ಕೆ ಅತ್ಯಧಿಕ ತೆರಿಗೆಯ ಹೊರೆ ಬೀಳುತ್ತಿದೆ.

ಏಕೆಂದರೆ ಈ ನೇರ ತೆರಿಗೆಯನ್ನು ನೀಡುವವರು ಇದರ ಜತೆಗೆ ಪ್ರತಿಯೊಂದು ವಸ್ತುವಿನ ಖರೀದಿಯಲ್ಲಿ, ಯಾವುದಾದರೂ ಸೇವೆಗಳನ್ನು ಪಡೆಯುವಾಗ, ಎಲ್ಲ ಬಗೆಯ ಜಿಎಸ್‌ಟಿ, ಅಬಕಾರಿ ಸುಂಕ, ಆಮದು ಸುಂಕ, ವ್ಯಾಟ್‌ ಮುಂತಾದ ಪರೋಕ್ಷ ತೆರಿಗೆಗಳನ್ನೂ ಕಟ್ಟಲೇಬೇಕು. ಇವರು ನೇರ ತೆರಿಗೆ ಪಾವತಿಸುತ್ತಾರೆ ಎಂಬ ಯಾವುದೇ ಸಣ್ಣ ವಿನಾಯಿತಿಯೂ ಅವರ ಪಾಲಿಗೆ ಇಲ್ಲ. ಹೀಗಾಗಿ ಅವರ ಮೇಲೆ ವರ್ಷದಿಂದ ವರ್ಷಕ್ಕೆ ತೆರಿಗೆಗಳ ಹೊರೆ ಹೆಚ್ಚುತ್ತಲೇ ಇದೆ. ಅವರ ಗೋಳನ್ನು ಕೇಳುವವರೇ ಇಲ್ಲವಾಗಿದೆ. ಒಂದು ಕಡೆ ನೇರ ತೆರಿಗೆದಾರರ ಸಂಖ್ಯೆ ಕಡಿಮೆ, ಮತ್ತೊಂದು ಕಡೆ ಜನಸಂಖ್ಯಾ ಹೆಚ್ಚಳದ ಜತೆಗೆ ಖರ್ಚು ವೆಚ್ಚಗಳೂ ಹೆಚ್ಚುತ್ತಿವೆ. ಇದರ ಪರಿಣಾಮ ಈ ವೇತನದಾರ ಮತ್ತು ನೇರ ತೆರಿಗೆದಾರರ ಮೇಲೆ ಹೊರೆಯೂ ಏರುತ್ತಿದೆ.

ತೆರಿಗೆದಾರರ ನೆಲೆ ವಿಸ್ತರಣೆ ಹೇಗೆ?
ಹೀಗಾಗಿ ದೇಶದಲ್ಲಿ ವಾರ್ಷಿಕ 5ರಿಂದ 10 ಲಕ್ಷ ರೂ. ಅಥವಾ 10ರಿಂದ 15 ಲಕ್ಷ ರೂ. ತನಕ ಆದಾಯ ಗಳಿಸುವ ಮತ್ತು ನೇರ ತೆರಿಗೆ ಪಾವತಿಸುವ ಶೇ.೩ರಷ್ಟು ಭಾರತೀಯರ ಮೇಲೆ ತೆರಿಗೆ ಹೆಚ್ಚಳದ ಬಹುಪಾಲು ಭಾರ ಬಿದ್ದಿದೆ ಎನ್ನುತ್ತಾರೆ ತೆರಿಗೆ ತಜ್ಞರಾದ ಅಕ್ಷತ್‌ ಶ್ರೀವಾಸ್ತವ. ಕಳೆದ 1986ರಿಂದಲೂ ಇದೇ ಪರಿಸ್ಥಿತಿ ಇದೆ. ಆದರೆ ಕಳೆದ 36 ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಈಗ ಶೇ.3 ಎಂದರೆ ದೊಡ್ಡ ಸಂಖ್ಯೆಯೂ ಹೌದು. ನೇರ ತೆರಿಗೆದಾರರ ನೆಲೆ ವಿಸ್ತರಿಸಿರುವುದು ಹೀಗೆ. ಆದರೆ ಅವರ ಮೇಲೆ ಬೀಳುತ್ತಿರುವ ತೆರಿಗೆಯ ಹೊಡೆತ ಮಾತ್ರ ಅತಾರ್ಕಿಕ ಎಂದು ವಿವರಿಸುತ್ತಾರೆ ಅವರು. ಅಕ್ಷತ್‌ ಶ್ರೀವಾಸ್ತವ ಅವರ ಲೆಕ್ಕಾಚಾರದ ಪ್ರಕಾರ ಈ ಶೇ.3ರಷ್ಟು ಭಾರತೀಯರು ಕಟ್ಟುವ ನೇರ ಮತ್ತು ಪರೋಕ್ಷ ತೆರಿಗೆಗಳ ಒಟ್ಟು ಪ್ರಮಾಣ ಶೇ.43! ಹಾಗೂ ಈ ಹೊರೆ ಮತ್ತಷ್ಟು ಹೆಚ್ಚಲಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡುತ್ತಾರೆ.

ಭಾರತದಲ್ಲಿ ತೆರಿಗೆದಾರರ ಸಂಖ್ಯೆ ಕಡಿಮೆ ಏಕೆ?
ಮೊದಲನೆಯದಾಗಿ ಭಾರತದಲ್ಲಿ ತೆರಿಗೆದಾರರ ಸಂಖ್ಯೆ ಏಕೆ ಕಡಿಮೆ ಹಾಗೂ ಶೇ.3ರಷ್ಟು ವೈಯಕ್ತಿಕ ವರಮಾನ ತೆರಿಗೆ ಪಾವತಿದಾರರ ಮೇಲೆ ಎಷ್ಟರ ಮಟ್ಟಿನ ತೆರಿಗೆ ಹೊರೆಯನ್ನು ಹೇರಲಾಗಿದೆ ಎಂಬುದನ್ನುಅರಿತುಕೊಳ್ಳಬೇಕು. ಮೂರನೆಯದಾಗಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಇಂದಿರಾಗಾಂಧಿ ಅವರ ಅಧಿಕಾರಾವಧಿಯಲ್ಲಿ ನೇರ ಮತ್ತು ಪರೋಕ್ಷ ರೀತಿಯಲ್ಲಿ ಒಟ್ಟು ತೆರಿಗೆಯ ಗರಿಷ್ಠ ದರ 97.5 ಇತ್ತು. ಈಗ ಶೇ.3 ಭಾರತೀಯರ ಮೇಲೆ ಬೀಳುತ್ತಿರುವ ಒಟ್ಟಾರೆ ತೆರಿಗೆ ಹೊರೆ ಕಡಿಮೆಯೇನಲ್ಲ. ಎರಡನೆಯದಾಗಿ ನೇರ ಮತ್ತು ಪರೋಕ್ಷ ತೆರಿಗೆಯ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಪರೋಕ್ಷ ತೆರಿಗೆ (Indirect tax) ಅನ್ನು ಎಲ್ಲರೂ ಪಾವತಿಸುತ್ತಾರೆ. ಏನನ್ನಾದರೂ ಖರೀದಿಸುವಾಗ ಅದನ್ನು ಸಂಗ್ರಹಿಸಲಾಗುತ್ತದೆ. ನೇರ ತೆರಿಗೆ ವೇತನದಾರರಿಗೆ ಬರುವಂಥದ್ದು. ಅಲ್ಲಿ ನಿಗದಿತ ಆದಾಯದ ಮಿತಿಯ ಬಳಿಕ ಇದನ್ನು ಕಟ್ಟಲೇಬೇಕು. ಇಲ್ಲಿ ಮಹತ್ವದ ಸಂಗತಿ ಏನೆಂದರೆ ನೇರ ತೆರಿಗೆ ಪಾವತಿಸುವ ಈ ಜನತೆ ಪರೋಕ್ಷ ತೆರಿಗೆಯನ್ನೂ ನೀಡಬೇಕು.

ವೇತನದಾರರ ಮೇಲೆ ಮಾತ್ರ ತೆರಿಗೆ ಹೊರೆ ಏಕೆ?
ಇದಕ್ಕೆ ಉತ್ತರ ರಾಜಕೀಯ. ತೆರಿಗೆ ನಿಗದಿಯಲ್ಲಿ ರಾಜಕಾರಣ ನಿರ್ಣಾಯಕ ಪಾತ್ರ ವಹಿಸುತ್ತದೆ. ತೆರಿಗೆಯ ಸ್ವರೂಪ, ತೆರಿಗೆ ದರ, ತೆರಿಗೆ ವಿನಾಯಿತಿ ವಿಚಾರದಲ್ಲಿ ರಾಜಕಾರಣಿಗಳು ಹೆಚ್ಚಿನ ಜನತೆ ತೆರಿಗೆಯನ್ನು ಪಾವತಿಸದಿರುವಂತೆಯೇ ನೋಡಿಕೊಳ್ಳಲು ಬಯಸುತ್ತಾರೆ. ಇದನ್ನು ಓಲೈಕೆಯ ರಾಜಕಾರಣ ಎನ್ನಬಹುದು. ಭಾರತದಲ್ಲಿ ಕಳೆದ ಮೂರು ದಶಕಗಳಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 13 ಸಲ ವಿಸ್ತರಿಸಲಾಗಿದೆ. ಇದರ ಪರಿಣಾಮ ತೆರಿಗೆದಾರರ ನೆಲೆ ಶೇ.3ರ ಕೆಳಮಟ್ಟದಲ್ಲಿಯೇ ಇದೆ.

97% ಭಾರತೀಯರಿಗೆ ಯಾವುದೇ ನೇರ ತೆರಿಗೆ ಇಲ್ಲ
ಭಾರತದಲ್ಲಿ ಶೇ.97 ಮಂದಿ ಜನತೆಗೆ ಯಾವುದೇ ನೇರ ತೆರಿಗೆ ಇಲ್ಲ. ಆದರೆ ಕೇವಲ ಶೇ.3 ಮಂದಿ ಭಾರತೀಯರ ಮೇಲೆ ಎಲ್ಲ ತೆರಿಗೆ ಹೊರೆಗಳೂ ಬಿದ್ದಿವೆ. ಒಂದು ಮನೆಯಲ್ಲಿ ದುಡಿಯುವ ಮಂದಿ ಕೇವಲ ಒಬ್ಬರಿದ್ದು, ಹತ್ತು ಜನ ಅವಲಂಬಿತರು ಇದ್ದರೆ ಹೇಗೆ ಕುಟುಂಬ ನಿರ್ವಹಣೆಯ ವೆಚ್ಚದ ಹೊರೆ ಒಬ್ಬರ ಮೇಲೆಯೇ ಬಿದ್ದು ಸಂಕಷ್ಟ ಆಗುವುದೋ, ಹಾಗೆಯೇ ಶೇ.ಮೂರು ಭಾರತೀಯರ ಮೇಲೆ ತೆರಿಗೆಯ ಒತ್ತಡವಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಖರ್ಚು ವೆಚ್ಚಗಳು ಇಮ್ಮಡಿಯಾಗಿದೆ. ಸರಕಾರ ಇದಕ್ಕೆ ತೆರಿಗೆಗಳನ್ನು ಅವಲಂಬಿಸಿದೆ.

ಮುಂದೇನಾಗಬಹುದು?
ಹಣದುಬ್ಬರ ಪರಿಣಾಮ ವೇತನದಾರರ ಸಂಬಳದಲ್ಲಿ ಏರಿಕೆಯಾಗಬಹುದು. ಈಗಾಗಲೇ ವೇತನ ಹೆಚ್ಚಳ ಕಂಡುಬರುತ್ತಿದೆ. ಈಗ ವಾರ್ಷಿಕ 5 ಲಕ್ಷ ರೂ. ತನಕ ವರಮಾನ ಇರುವ ವೇತನದಾರರು ಆದಾಯ ತೆರಿಗೆ ಪಾವತಿಸದೆ ಇರಬಹುದು. ಈ ಮಿತಿ ವಾರ್ಷಿಕ 6 ಲಕ್ಷ ರೂ.ಗೆ ಏರಿಕೆಯಾಗಬಹುದು. ಆದರೆ ಆಗ 6 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವ ವೇತನದಾರರ ಮೇಲಿನ ತೆರಿಗೆಯ ದರ ಗಣನೀಯ ಹೆಚ್ಚುತ್ತದೆ. ಇದು ತಾರ್ಕಿಕವಲ್ಲ ಎನ್ನುತ್ತಾರೆ ತೆರಿಗೆ ತಜ್ಞರು.

Exit mobile version