ನವ ದೆಹಲಿ: ಆದಾಯ ತೆರಿಗೆ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಸೋಮವಾರ ಟ್ಯಾಕ್ಸ್ ಕ್ಯಾಲ್ಕ್ಯುಲೇಟರ್ (Tax calculator) ಅನ್ನು ಬಿಡುಗಡೆಗೊಳಿಸಿದೆ. ಇದರ ಮೂಲಕ ನೀವು ನಿಮಗೆ ಆದಾಯ ತೆರಿಗೆ ಲೆಕ್ಕಾಚಾರದ ಹೊಸ ಮತ್ತು ಹಳೆಯ ಪದ್ಧತಿಗಳಲ್ಲಿನ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು. ಹೀಗಾಗಿ ಹೊಸ ವ್ಯವಸ್ಥೆ ಒಳ್ಳೆಯದೇ, ಹಳೆಯ ವ್ಯವಸ್ಥೆ ಸೂಕ್ತವೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು. ಆದಾಯ ತೆರಿಗೆ ಇಲಾಖೆ ಈ ಸಂಬಂಧ ಟ್ವೀಟ್ ಮಾಡಿದೆ.
ತೆರಿಗೆ ಕ್ಯಾಲ್ಕ್ಯುಲೇಟರ್‌ನ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆದಾಯ ತೆರಿಗೆ ಕ್ಯಾಲ್ಕ್ಯುಲೇಟರ್ ಆನ್‌ಲೈನ್ ಟೂಲ್ ಆಗಿದ್ದು, ವ್ಯಕ್ತಿಯೊಬ್ಬನ ಆದಾಯವನ್ನು ಆಧರಿಸಿ ತೆರಿಗೆ ಲೆಕ್ಕವನ್ನು ಪಡೆಯಲು ಸಹಕಾರಿಯಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ 7 ಲಕ್ಷ ರೂ. ತನಕದ ಆದಾಯಕ್ಕೆ ರಿಬೇಟ್ ಇರುವುದರಿಂದ ಯಾವುದೇ ಆದಾಯ ಪಾವತಿಸಬೇಕಿಲ್ಲ. ಹಳೆಯ ಮತ್ತು ಹೊಸ ಪದ್ಧತಿ ಎರಡರಲ್ಲೂ 50,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಲಭ್ಯವಿದೆ. ಹೊಸ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸಲಾಗಿದೆ. ಹಳೆ ಪದ್ಧತಿಯಲ್ಲಿ 2.5 ಲಕ್ಷ ರೂ. ಇರುತ್ತದೆ. ಹೀಗಾಗಿ 7 ಲಕ್ಷ ರೂ. ತನಕ ಆದಾಯ ಇರುವವರು ಹೊಸ ಪದ್ಧತಿಯಲ್ಲಿ 33,800 ರೂ. ಉಳಿತಾಯ ಮಾಡಬಹುದು. 10 ಲಕ್ಷ ರೂ. ಆದಾಯ ಇರುವವರು 23,400 ರೂ. ಮತ್ತು 15 ಲಕ್ಷ ರೂ. ಆದಾಯ ಇರುವವರು ೪೯,೪೦೦ ರೂ. ತೆರಿಗೆ ಉಳಿಸಬಹುದು.