Site icon Vistara News

ವಿಸ್ತಾರ Money Guide| ದ್ವಿಚಕ್ರ ವಾಹನಕ್ಕೆ ಸೂಕ್ತ ಬಡ್ಡಿ ದರದ ಸಾಲ ಪಡೆಯೋದು ಹೇಗೆ?

bike

ನೀವು ಬೈಕ್‌ ಅಥವಾ ಸ್ಕೂಟರ್‌ ಅನ್ನು ಸಾಲದ ಮೂಲಕ ಖರೀದಿಸಿದರೆ ಒಂದೇ ಸಲ ಹೆಚ್ಚು ಹಣ ಹೊಂದಿಸಬೇಕಾಗುವುದಿಲ್ಲ. ಎರಡನೆಯದಾಗಿ ಹಣದ ಕೊರತೆ ಇದ್ದರೂ ಸಾಲ ಪಡೆಯಬಹುದು. ಆದರೆ ಸೂಕ್ತ ಬಡ್ಡಿ ದರದ ಸಾಲ ಪಡೆಯುವುದು ಹೇಗೆ ಎಂಬುದನ್ನು ನೋಡೋಣ.

ತೈಲ ದರಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾರಿಗೆ ವೆಚ್ಚವನ್ನು ಉಳಿತಾಯ ಮಾಡಲು ದ್ವಿಚಕ್ರ ವಾಹನಗಳು ಸೂಕ್ತ. ಒಬ್ಬರೋ-ಇಬ್ಬರೋ ಸಂಚರಿಸುವಾಗ ಕಾರಿನ ಬದಲು ದ್ವಿಚಕ್ರ ವಾಹನ ಬಳಸಿದರೆ ಇಂಧನ ವೆಚ್ಚ ಉಳಿತಾಯವಾಗುತ್ತದೆ. ಯಾವುದೇ ಬೈಕ್‌ ಅಥವಾ ಸ್ಕೂಟರ್‌ ಅನ್ನು ಸಾಲದ ಮೂಲಕ ಖರೀದಿಸುವಾಗ ಕೆಳಕಂಡ ಅಂಶಗಳನ್ನು ಪಾಲಿಸಿದರೆ ಅತ್ಯುತ್ತಮ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.

ನಿಮ್ಮ ಕ್ರೆಡಿಟ್‌ ಸ್ಕೋರ್‌ ಗಮನಿಸಿ

ದ್ವಿಚಕ್ರ ವಾಹನ ಸಾಲ ಪಡೆಯುವುದಕ್ಕೆ ಮೊದಲು ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಗಮನಿಸಿ ಎನ್ನುತ್ತಾರೆ ಬ್ಯಾಂಕ್‌ ಬಾಜಾರ್‌ ಡಾಟ್‌ಕಾಮ್‌ನ ಸಿಇಒ ಅದಿಲ್‌ ಶೆಟ್ಟಿ. ದ್ವಿಚಕ್ರ ವಾಹನ ಸಾಲ ಪಡೆಯಲು ಉತ್ತಮ ಕ್ರೆಡಿಟ್‌ ಸ್ಕೋರ್‌ ಅವಶ್ಯಕ. ನಿಮಗೆ ಸಾಲ ಕೊಡುವುದು ಸುರಕ್ಷಿತ ಎಂಬುದನ್ನು ಉತ್ತಮ ಸ್ಕೋರ್‌ ಖಾತರಿಪಡಿಸುತ್ತದೆ.

ಮತ್ತೊಂದು ಕಡೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಳಪೆಯಾಗಿದ್ದರೆ ಅಥವಾ ಕಡಿಮೆ ಆಗಿದ್ದರೆ ಬ್ಯಾಂಕ್‌ ಹೆಚ್ಚಿನ ಬಡ್ಡಿ ದರ ವಿಧಿಸುವ ಸಾಧ್ಯತೆ ಇದೆ. ನಿಮ್ಮ ಕ್ರೆಡಿಟ್‌ ಸ್ಕೋರ್‌ ೭೫೦ ಮತ್ತು ಅದಕ್ಕಿಂತ ಮೇಲಿದ್ದರೆ ಸುಲಭವಾಗಿ ದ್ವಿಚಕ್ರ ವಾಹನ ಸಾಲ ಪಡೆಯಬಹುದು. ಯಾವುದೇ ರಿಸ್ಕ್‌ ಪ್ರೀಮಿಯಂ ಇಲ್ಲದೆ, ನಿಯಮಿತ ಬಡ್ಡಿ ದರದಲ್ಲಿ ಬ್ಯಾಂಕ್‌ ಸಾಲ ಕೊಡಬಹುದು. ಆದ್ದರಿಂದ ಒಂದುವೇಳೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆ ಆಗಿದ್ದರೆ, ಅದಕ್ಕೆ ಕಾರಣವನ್ನು ಕಂಡುಕೊಂಡು ಪರಿಹರಿಸಿ. ನಿಮ್ಮ ಕ್ರೆಡಿಟ್‌ ಸ್ಕೋರ್‌ ಹೆಚ್ಚಿದ ಬಳಿಕ ಸಾಲಕ್ಕೆ ಅರ್ಜಿ ಸಲ್ಲಿಸಿ.

ಬಡ್ಡಿ ದರಗಳನ್ನು ಹೋಲಿಸಿ

ದ್ವಿಚಕ್ರ ವಾಹಗಳ ಸಾಲಗಳ ಬಡ್ಡಿ ದರಗಳು ಮತ್ತು ಶುಲ್ಕಗಳು ಬ್ಯಾಂಕ್‌ಗಳಿಂದ ಬ್ಯಾಂಕ್‌ಗೆ ವಿಭಿನ್ನವಾಗಿರುತ್ತವೆ. ಆದ್ದರಿಂದ ಅವುಗಳನ್ನು ಹೋಲಿಸಿ ನೋಡಿ. ಬಡ್ಡಿ ದರ, ಸಂಸ್ಕರಣೆ ಶುಲ್ಕ, ಇತರ ಶುಲ್ಕಗಳನ್ನು, ದಂಡ, ಪ್ರೀ-ಪೇಮೆಂಟ್‌ ಶುಲ್ಕ, ಪ್ರಿ-ಕ್ಲೋಸರ್‌ ಶುಲ್ಕ, ವಿಳಂಬ ಪಾವತಿ ಶುಲ್ಕ ಇತ್ಯಾದಿಗಳನ್ನು ಹೋಲಿಸಿ.

ದ್ವಿಚಕ್ರ ವಾಹನ ಸಾಲದ ಬಡ್ಡಿ ದರಗಳು

ಬ್ಯಾಂಕ್‌ಗಳು‌ಬಡ್ಡಿ ದರ (%)
ಬಿಒಐ‌7.75
ಜೆ&ಕೆ ಬ್ಯಾಂಕ್9.35
ಪಿಎನ್‌ಬಿ9.55
ಪಂಜಾಬ್&ಸಿಂಧ್‌ ಬ್ಯಾಂಕ್9.70
ಎಕ್ಸಿಸ್‌ ಬ್ಯಾಂಕ್10.00
ಯೂನಿಯನ್‌ ಬ್ಯಾಂಕ್10.80
ಸೆಂಟ್ರಲ್‌ ಬ್ಯಾಂಕ್7.25
( ಜೂನ್ 20, 2022ಕ್ಕೆ ಅನ್ವಯಿಸುವಂತೆ‌ ಬ್ಯಾಂಕ್‌ ವೆಬ್‌ ಸೈಟ್‌ಗಳಲ್ಲಿ )( ವಾರ್ಷಿಕ ಬಡ್ಡಿ ದರ)

ಒಪ್ಪಂದಗಳನ್ನು ಪರಿಶೀಲಿಸಿ

ದ್ವಿಚಕ್ರ ವಾಹನ ಸಾಲಕ್ಕೆ ಸಂಬಂಧಿಸಿ ಬ್ಯಾಂಕ್‌ ಮತ್ತು ಉತ್ಪಾದಕ ಕಂಪನಿ ನಡುವಣ ಒಪ್ಪಂದ, ಬ್ಯಾಂಕ್‌ ಮತ್ತು ಎನ್‌ಬಿಎಫ್‌ಸಿ ನಡುವಣ ಒಪ್ಪಂದವನ್ನು ಪರಿಶೀಲಿಸಿ. ಏಕೆಂದರೆ ಕಂಪನಿಯು ಒಂದು ವೇಳೆ ನಿರ್ದಿಷ್ಟ ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿ ಜತೆ ಒಪ್ಪಂದ ಮಾಡಿದ್ದರೆ, ಸಂಸ್ಕರಣ ಶುಲ್ಕ, ರಿಯಾಯಿತಿ ಬಡ್ಡಿ ದರ ಇತ್ಯಾದಿ ಅನುಕೂಲ ಸಿಗಬಹುದು.

ಬ್ಯಾಂಕ್‌ಗಳ ಆಫರ್‌ಗಳನ್ನು ಗಮನಿಸಿ

ಬಹುತೇಕ ಬ್ಯಾಂಕ್‌ಗಳು ಕಾಲಕಾಲಕ್ಕೆ ದ್ವಿಚಕ್ರ ವಾಹನ ಸಾಲಗಳಿಗೆ ಸಂಬಂಧಿಸಿ ವಿಶೇಷ ಆಫರ್‌ಗಳನ್ನು ನೀಡುತ್ತವೆ. ಉದಾಹರಣೆಗೆ ದೀಪಾವಳಿ ಮೊದಲಾದ ಹಬ್ಬಗಳು , ಹೊಸ ವರ್ಷ, ಸ್ವಾತಂತ್ರ್ಯ ದಿನಾಚರಣೆ ವೇಳೆ ಸಾಮಾನ್ಯವಾಗಿ ಆಫರ್‌ಗಳನ್ನು ಪ್ರಕಟಿಸುತ್ತವೆ. ಆಗ ರಿಯಾಯಿತಿ ಬಡ್ಡಿ ದರ ಪಡೆಯಬಹುದು. ಸಂಸ್ಕರಣ ಶುಲ್ಕ ಮನ್ನಾ ಸೌಲಭ್ಯ ಪಡೆದರೂ ಅಚ್ಚರಿ ಇಲ್ಲ.

ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ನೀಡುವ ಪ್ರಿ-ಅಪ್ರೂವ್ಡ್‌ ಟು-ವ್ಹೀಲರ್‌ ಸಾಲ ಸೌಲಭ್ಯಗಳನ್ನೂ ಗಮನಿಸಿ. Pre-approved ಸಾಲಗಳ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ. ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಇವುಗಳ ಬಗ್ಗೆ ಇ-ಮೇಲ್‌, ಎಸ್ಸೆಮ್ಮೆಸ್‌ ಮೂಲಕ ಮಾಹಿತಿ ಒದಗಿಸುತ್ತವೆ.

Exit mobile version