ನಿತ್ಯದ ಬದುಕಿನಲ್ಲಿ ಧುತ್ತೆಂದು ಬರುವ ಆರ್ಥಿಕ ಸಮಸ್ಯೆಗಳಿಗೆ ಹಣ ಬೇಕಾಗಬಹುದು ಎನ್ನುವ ಕಾರಣಕ್ಕೆ ಅನೇಕರು
ಉಳಿತಾಯದ ಮೊತ್ತವನ್ನ ಫಿಕ್ಸೆಡ್ ಡಿಪಾಸಿಟ್ ನಲ್ಲಿ(ನಿಶ್ಚಿತ ಠೇವಣಿ) ಇಡುವುದಿಲ್ಲ. ತುರ್ತು ಅಗತ್ಯಗಳಿಗೆ ಬೇಕಿರುವ
ಬಹುಪಾಲು ಹಣವನ್ನ ಸೇವಿಂಗ್ಸ್ ಬ್ಯಾಂಕ್ (ಉಳಿತಾಯ ಖಾತೆಯಲ್ಲಿ) ಅಕೌಂಟ್ ನಲ್ಲೇ ಇಟ್ಟುಕೊಂಡಿರುತ್ತಾರೆ. ಫಿಕ್ಸೆಡ್ ಡಿಪಾಸಿಟ್ ಇಟ್ಟ ಬಳಿಕ ಹಣದ ಅವಶ್ಯಕತೆ ಬಿದ್ದರೆ ಎಫ್ ಡಿ ಬ್ರೇಕ್ ಮಾಡಿ ಹಣ ಹಿಂಪಡೆಯುವಾಗ ಬ್ಯಾಂಕ್ ನವರಿಗೆ ದಂಡ ತೆರಬೇಕಾಗುತ್ತದೆ ಎನ್ನುವುದೇ ಈ ರೀತಿಯ ನಿರ್ಧಾರಕ್ಕೆ ಕಾರಣ. ಆದರೆ ಇದಕ್ಕೆ ಪರಿಹಾರ ರೂಪದಲ್ಲಿ ಈಗ ಸ್ವೀಪ್ ಇನ್ ಎಫ್ ಡಿ ಬಂದಿದೆ. ಎಫ್ ಡಿ ಮತ್ತು ಉಳಿತಾಯ ಖಾತೆ, ಎರಡರ ಪ್ರಯೋಜನವನ್ನೂ ನೀಡುವ ಈ ಹೊಸ ಮಾದರಿಯ ಫಿಕ್ಸೆಡ್ ಡಿಪಾಸಿಟ್ ಬಗ್ಗೆ ಹೆಚ್ಚು ತಿಳಿಯೋಣ ಬನ್ನಿ.
ಏನಿದು ಸ್ವೀಪ್ ಇನ್- ಎಫ್ ಡಿ?
ನಿಮಗೆ ಬೇಕಾದಾಗ ದುಡ್ಡು ತೆಗೆಯುವ ಸೌಲಭ್ಯ ಕೊಡುವ ಜೊತೆಗೆ ಹೆಚ್ಚಿನ ಬಡ್ಡಿ ಲಾಭವನ್ನೂ ತಂದುಕೊಡುವ ಫಿಕ್ಸೆಡ್ ಡೆಪಾಸಿಟ್ ಮಾದರಿಯೇ ಸ್ವೀಪ್ ಇನ್- ಎಫ್ ಡಿ. ಸೇವಿಂಗ್ಸ್ ಅಕೌಂಟ್ ಮತ್ತು ಫಿಕ್ಸೆಡ್ ಡಿಪಾಸಿಟ್ ಎರಡರ ವಿಶೇಷತೆಗಳನ್ನೂ ಇದು ಒಳಗೊಂಡಿದೆ. ಬಹುಪಾಲು ಬ್ಯಾಂಕ್ ಗಳು ಈಗ ಸ್ವೀಪ್ ಇನ್ – ಎಫ್ ಡಿಯನ್ನು ಪರಿಚಯಿಸಿದ್ದು ಅದು ಜನಪ್ರಿಯವಾಗುತ್ತಿದೆ. ಈ ಸ್ವೀಪ್ ಇನ್-ಎಫ್ಡಿ ಯೋಜನೆಯಡಿಯಲ್ಲಿ, ಗ್ರಾಹಕರು ಬ್ಯಾಂಕ್ಗಳ ಉಳಿತಾಯ ಖಾತೆಯಲ್ಲಿ ಕಡಿಮೆ ಬಡ್ಡಿ ದರಕ್ಕೆ ಜಮೆಯಾಗಿರುವ ಹೆಚ್ಚುವರಿ ಹಣವನ್ನು ಹೆಚ್ಚಿನ ಬಡ್ಡಿ ಆದಾಯ ತರುವ ಫಿಕ್ಸೆಡ್ ಡಿಪಾಸಿಟ್ (ನಿಶ್ಚಿತ ಠೇವಣಿ) ಆಗಿ ಪರಿವರ್ತಿಸಬಹುದು. ಒಂದು ಕಡೆ ಹೆಚ್ಚುವರಿ ಬಡ್ಡಿ ಆದಾಯದ ಜತೆಗೆ, ಅಗತ್ಯ ಬಿದ್ದಾಗ ಅದನ್ನು ಮುರಿದು ತುರ್ತು ಅಗತ್ಯಗಳಿಗೆ ಕೂಡ ಬಳಸಿಕೊಳ್ಳಲು ಅವಕಾಶ ಇರುವುದು ಇದರ ವಿಶೇಷತೆ.
ಸ್ವೀಪ್ ಇನ್ ಎಫ್ ಡಿ ಹೇಗೆ ಕೆಲಸ ಮಾಡುತ್ತದೆ?
ಉದಾಹರಣೆಗೆ ಆದರ್ಶ್ ಎನ್ನುವ ಐಟಿ ಉದ್ಯೋಗಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಉಳಿತಾಯ ಖಾತೆ ಹೊಂದಿದ್ದು ಅದನ್ನು 1 ವರ್ಷದ ಅವಧಿಗೆ ಸ್ವೀಪ್ ಇನ್- ಎಫ್ಡಿಗೆ ಲಿಂಕ್ ಮಾಡಿದ್ದಾರೆ ಎಂದುಕೊಳ್ಳಿ. ತಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ ಇರಬೇಕಾದ ಕನಿಷ್ಠ ಮೊತ್ತದ ಮಿತಿಯನ್ನು ರೂ. 30 ಸಾವಿರಕ್ಕೆ ನಿಗದಿಪಡಿಸಿದ್ದಾರೆ ಎಂದು ಭಾವಿಸಿ. ಆದರ್ಶ್ ಅಕೌಂಟ್ ಗೆ ಬೋನಸ್ ರೂಪದಲ್ಲಿ ರೂ. 30 ಸಾವಿರ ಸಂದಾಯವಾಗುತ್ತದೆ ಎಂದುಕೊಳ್ಳಿ. ಈಗ ಆದರ್ಶ್ ಖಾತೆಯಲ್ಲಿರುವ ಒಟ್ಟು ಮೊತ್ತ ರೂ. 60 ಸಾವಿರವಾಗಿದ್ದು ನಿಗದಿಪಡಿಸಿದ್ದ ಮಿತಿಗಿಂತ ರೂ. 30 ಸಾವಿರ ಇದೆ. ಇಂತಹ ಸಂದರ್ಭದಲ್ಲಿ ರೂ. 30 ಸಾವಿರ ಸ್ವಯಂಚಾಲಿತವಾಗಿ ಸ್ವೀಪ್ ಇನ್- ಎಫ್ ಡಿ ಅಕೌಂಟ್ ಗೆ ವರ್ಗಾವಣೆಗೊಳ್ಳುತ್ತದೆ. ಹಾಗೆ ವರ್ಗಾವಣೆಗೊಂಡ ಮೊತ್ತಕ್ಕೆ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿ ಲಭಿಸುತ್ತದೆ.
ಸ್ಪೀಪ್ ಇನ್- ಎಫ್ ಡಿಯಲ್ಲಿ ಬಡ್ಡಿ ಲಾಭ ಜಾಸ್ತಿ!
ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನ ಸದ್ಯದ ಬಡ್ಡಿ ದರ ಶೇ 2.5 ರಿಂದ ಶೇ 3 ರ ವರೆಗೆ ಇದೆ. ಆದರೆ ಸ್ವೀಪ್ ಇನ್ – ಎಫ್ಡಿಯ ಬಡ್ಡಿ ದರ ಶೇ 6 ರ ವರೆಗೂ ಇದೆ. ಬಹುತೇಕ ಬ್ಯಾಂಕ್ ಗಳಲ್ಲಿ ಸ್ವೀಪ್ ಇನ್ -–ಎಫ್ ಡಿಯ ಬಡ್ಡಿದರ ಸಾಮಾನ್ಯ ಎಫ್ ಡಿ ಬಡ್ಡಿ ದರದಷ್ಟೇ ಇರುತ್ತದೆ. ಆದರೆ ನೆನಪಿಡಿ, ಸ್ವೀಪ್ ಇನ್ -–ಎಫ್ ಡಿಯಲ್ಲಿ ಎಷ್ಟು ದಿನ ಎಷ್ಟು ಮೊತ್ತ ಇಟ್ಟಿದ್ದೀರಿ ಎನ್ನುವುದರ ಆಧಾರದ ಮೇಲೆ ಬಡ್ಡಿ ದರ ನಿಗದಿಯಾಗುತ್ತದೆ. ಹಾಗಾಗಿ ಈ ಬಗ್ಗೆ ನಿರ್ದಿಷ್ಟ ಬ್ಯಾಂಕ್ ಗಳಿಂದ ಸ್ಪಷ್ಟ ಮಾಹಿತಿ ಪಡೆಯುವುದು ಅಗತ್ಯ.
ಇತರೆ ಪ್ರಯೋಜನಗಳು
ನಿಮ್ಮ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ಎಷ್ಟೇ ಮೊತ್ತದ ದುಡ್ಡಿದ್ದರೂ, ಬಡ್ಡಿ ಅತ್ಯಲ್ಪ. ಆದರೆ ಉಳಿತಾಯ
ಬ್ಯಾಂಕ್ ಖಾತೆಯಲ್ಲಿರುವ ಸೌಲಭ್ಯಗಳನ್ನು ಪಡೆದುಕೊಂಡು, ಜತೆಗೆ ಹೆಚ್ಚಿನ ಬಡ್ಡಿ ಆದಾಯ ಪಡೆಯಲು ಸ್ವೀಪ್ ಇನ್-ಎಫ್ಡಿ ಸೌಲಭ್ಯ ಪಡೆಯಬಹುದು. ಸ್ವೀಪ್ ಇನ್-ಎಫ್ಡಿ ಅಡಿಯಲ್ಲಿ ನಿಶ್ಚಿತ ಠೇವಣಿಗೆ ಹೆಚ್ಚಿನ ಬಡ್ಡಿ ದರ
ಪಡೆಯಬಹುದು. ಅಗತ್ಯ ಇದ್ದಾಗ ಉಳಿತಾಯ ಖಾತೆಯಲ್ಲಿನ ಹಣದಂತೆ ಸುಲಭವಾಗಿ ಹಿಂಪಡೆಯಬಹುದು. ಇನ್ನೊಂದು ಅನುಕೂಲ ಏನೆಂದರೆ ನಿಮ್ಮ ಸಾಲದ ಇಎಂಐ ದಿನ ಉಳಿತಾಯ ಖಾತೆಯಲ್ಲಿ ಅಕಸ್ಮಾತ್ ಆಗಿ ಬ್ಯಾಲೆನ್ಸ್ ಇರದಿದ್ದರೆ, ಸ್ವೀಪ್ ಇನ್- ಎಫ್ಡಿ ಅಡಿಯಲ್ಲಿ ಇರುವ ಹಣವನ್ನು ಬ್ಯಾಂಕ್ ಸುಲಭವಾಗಿ ವರ್ಗಾಯಿಸುತ್ತದೆ. ಇದರಿಂದಾಗಿ ಇಎಂಐ ಮಿಸ್ ಆಗಿ ಉಂಟಾಗುವ ಮುಜುಗರ, ತಾಪತ್ರಯ ತಪ್ಪುತ್ತದೆ. ಚೆಕ್ ಬೌನ್ಸ್ ಆಗುವ ರಗಳೆಯೂ ಇನ್ನಿಲ್ಲವಾಗುತ್ತದೆ.
ಸ್ವೀಪ್ ಇನ್-ಎಫ್ಡಿ ಸೌಲಭ್ಯದ ಮಿತಿ ಏನು?
ಕೆಲವು ಬ್ಯಾಂಕ್ಗಳು ಸ್ವೀಪ್ ಇನ್- ಎಫ್ಡಿಗಳ ಸಂಖ್ಯೆಗೆ ಕನಿಷ್ಠ ಮತ್ತು ಗರಿಷ್ಠದ ಮಿತಿಯನ್ನು ವಿಧಿಸುತ್ತವೆ. ಆದ್ದರಿಂದ ಅದನ್ನು ಅರಿತುಕೊಳ್ಳಬೇಕು. ದೊಡ್ಡ ಮೊತ್ತದ ಸ್ವೀಪ್ ಇನ್ -ಎಫ್ಡಿಯನ್ನು ಆನ್ಲೈನ್ ಮೂಲಕ ಮಾಡಲು ಕಷ್ಟ ಸಾಧ್ಯ. ಸಮೀಪದ ಬ್ಯಾಂಕ್ ಕಚೇರಿಗೆ ತೆರಳಬೇಕಾಗಬಹುದು.
ಸೌಲಭ್ಯ ಪಡೆಯುವುದು ಹೇಗೆ?
ನೆಟ್ ಬ್ಯಾಂಕಿಂಗ್ ಮೂಲಕ ಸರಳವಾಗಿ ಈ ಸ್ವೀಪ್ ಇನ್-ಎಫ್ಡಿ ಸೌಲಭ್ಯ ಪಡೆಯಬಹುದು. ಬ್ಯಾಂಕ್ಗಳ ವೆಬ್ ಸೈಟ್ನಲ್ಲಿ ಸಾಮಾನ್ಯವಾಗಿ ಇದರ ಪ್ರಯೋಜನ ಹೇಗೆ ಪಡೆಯುವುದು ಎಂದು ವಿವರಿಸುತ್ತಾರೆ. ಉದಾಹರಣೆಗೆ ಎಚ್ಡಿಎಫ್ಸಿ ಬ್ಯಾಂಕ್ ವೆಬ್ಸೈಟ್ನಲ್ಲಿ ಈ ಬ್ಗಗೆ ಸ್ಟೆಪ್-ಬೈ-ಸ್ಟೆಪ್ ವಿವರಣೆ ಇದೆ. ಈ ಬ್ಯಾಂಕಿನ ವೆಬ್ಸೈಟ್ನಲ್ಲಿ ಸೌಲಭ್ಯ ಪಡೆಯುವ ಹಂತಗಳು ಹೀಗಿವೆ-
೧. ನೆಟ್ ಬ್ಯಾಂಕಿಂಗ್ ಅಕೌಂಟ್ ತೆರೆಯಿರಿ.
೨. Fixed Deposit Sweep-in ಆಯ್ಕೆ ಮಾಡಿರಿ.
೩. ಎಸ್ಬಿ ಖಾತೆ ಸಂಖ್ಯೆ ಅಗತ್ಯ. ಅದನ್ನು ಸಿಲೆಕ್ಟ್ ಮಾಡಿ
೪. ಎಫ್ಡಿ ನಂಬರ್ ಅನ್ನು ಲಿಂಕ್ ಮಾಡಿರಿ.
ಇದನ್ನೂ ಓದಿ ವಿಸ್ತಾರ Money Guide: 2022ರಲ್ಲಿ ಹೂಡಿಕೆಗೆ ಉತ್ತಮ ಬ್ಯಾಂಕಿಂಗ್, ಪಿಎಸ್ಯು ಮ್ಯೂಚುವಲ್ ಫಂಡ್ಸ್