ವೇತನದಾರರಿಗೆ ೨೦೨೧-೨೨ ಸಾಲಿನ ಆದಾಯ ತೆರಿಗೆ ವಿವರ ಸಲ್ಲಿಕೆಗೆ ( ITR Filing) ಈ ವಾರ ಗಡುವು ಮುಕ್ತಾಯವಾಗುತ್ತಿದೆ. ಅನೇಕ ಮಂದಿ ಈಗ ಐಟಿ ರಿಟರ್ನ್ ಸಲ್ಲಿಕೆಗೆ ಅಗತ್ಯ ಇರುವ ದಾಖಲೆಗಳನ್ನು ಒಟ್ಟುಗೂಡಿಸುತ್ತಿರಬಹುದು. ಮತ್ತೆ ಹಲವರಿಗೆ ಯಾವೆಲ್ಲ ದಾಖಲೆಗಳು ಬೇಕು ಎಂಬ ಪ್ರಶ್ನೆ ಇರಬಹುದು. ಹಾಗಾದರೆ ಇಲ್ಲಿದೆ ಉಪಯುಕ್ತ ಮಾಹಿತಿ.
ವೇತನದಾರರಿಗೆ ITR-೧ ಅಥವಾ ಸಹಜ್
ವೇತನದಾರರು, ಸಂಬಳ ಪಡೆಯುವವರು (Salaried class) ಆದಾಯ ತೆರಿಗೆ ವಿವರ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆಯ ಐಟಿಆರ್-೧ ಅಥವಾ ಸಹಜ್ ಎಂಬ ಅರ್ಜಿಯನ್ನು ಬಳಸಬೇಕು. ಹಾಗಾದರೆ ಬೇಕಾಗುವ ದಾಖಲೆಗಳು ಯಾವುದು ಎಂಬುದನ್ನು ನೋಡೋಣ.
ಐಟಿ ರಿಟರ್ನ್ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
೧. ಸಾಮಾನ್ಯ ಮಾಹಿತಿ, ಪ್ಯಾನ್, ಆಧಾರ್ ಕಾರ್ಡ್ ಸಂಖ್ಯೆ.
೨. ವೇತನ/ಪಿಂಚಣಿ: ಫಾರ್ಮ್ ೧೬ (ಕಂಪನಿ ಅಥವಾ ಉದ್ಯೋಗದಾತರಿಂದ)
೩. ಮನೆಯ ಆಸ್ತಿಯಿಂದ ಆದಾಯ ಕುರಿತ ದಾಖಲೆ, ಗೃಹ ಸಾಲ ಖಾತೆಯ ಸ್ಟೇಟ್‌ಮೆಂಟ್
೪.ಇತರ ಮೂಲಗಳ ಆದಾಯ ಕುರಿತ ದಾಖಲೆಗಳು. ಬ್ಯಾಂಕ್ ಸ್ಟೇಟ್‌ಮೆಂಟ್/ ಬಡ್ಡಿ ಆದಾಯ ಕುರಿತ ದಾಖಲೆಗೆ ಪಾಸ್‌ಬುಕ್
೫. ಆದಾಯ ತೆರಿಗೆ ಕಾಯಿದೆಯ VI-A ವಿಭಾಗದಲ್ಲಿರುವ ಸೆಕ್ಷನ್ ೮೦ ಸಿ ಅಡಿಯಲ್ಲಿ ತೆರಿಗೆ ಕಡಿತ ಕ್ಲೇಮ್ ಸಲುವಾಗಿ ಬೇಕಾಗುವ ದಾಖಲೆಗಳು: ಶಾಲಾ ಮಕ್ಕಳ ಬೋಧನಾ ಶುಲ್ಕ, ಜೀವ ವಿಮೆ ಪ್ರೀಮಿಯಂ, ಮುದ್ರಾಂಕ ಶುಲ್ಕ, ಗೃಹ ಸಾಲದ ಅಸಲು ಮೊತ್ತದ ಮರು ಪಾವತಿ, ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್, ಮ್ಯೂಚುವಲ್ ಫಂಡ್ಸ್ ಹೂಡಿಕೆ, ೮೦ ಜಿ ಅಡಿಯಲ್ಲಿ ನೀಡಿದ ಡೊನೇಷನ್‌ಗಳ ರಿಸಿಪ್ಟ್.
6. ಆದಾಯ ತೆರಿಗೆ ಕಾಯಿದೆಯ ಶೆಡ್ಯೂಲ್ ಡಿಐ ಅಡಿಯಲ್ಲಿ ಮಾಡಿರುವ ಹೂಡಿಕೆ, ಠೇವಣಿ, ಪಾವತಿಗೆ ಸಂಬಂಧಿಸಿ ತೆರಿಗೆ ಕಡಿತ ಕ್ಲೇಮ್ ಮಾಡಿಕೊಳ್ಳುವುದಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆ.
೭.ತೆರಿಗೆ ಪಾವತಿಯ ವಿವರ.
೮. ಟಿಡಿಎಸ್ ವಿವರ.
೯. ಇತರ ವಿವರ
ಉದ್ಯೋಗಿಗಳು Form -೧೬ ಇಲ್ಲದೆಯೇ ಐರಿ ರಿಟರ್ನ್ ಸಲ್ಲಿಸಬಹುದೇ?
ನೀವು ಇತ್ತೀಚೆಗೆ ಹೊಸ ಕಂಪನಿ ಅಥವಾ ಉದ್ಯೋಗಕ್ಕೆ ಸೇರಿದ್ದೀರಿ ಎಂದಿಟ್ಟುಕೊಳ್ಳಿ. ಆಗ ಐಟಿ ರಿಟರ್ನ್ ಸಲ್ಲಿಕೆಗೆ Form -೧೬ ಪಡೆಯುವುದು ಹೇಗೆ? ನಿಮ್ಮ ಹಳೆ ಕಂಪನಿಯನ್ನು ಸಂಪರ್ಕಿಸಿ ಇ-ಮೇಲ್ ಮೂಲಕ ಫಾರ್ಮ್-೧೬ ತರಿಸಿಟ್ಟುಕೊಳ್ಳಿ. ಇದು ಉತ್ತಮ ಮಾರ್ಗ. ಒಂದು ವೇಳೆ ನಾನಾ ಕಾರಣಗಳಿಂದಾಗಿ Form -೧೬ ಸಿಗದಿದ್ದರೆ ಕೂಡ ಐಟಿ ರಿಟರ್ನ್ ಸಲ್ಲಿಸಬಹುದು ಎನ್ನುತ್ತಾರೆ ಬೆಂಗಳೂರು ಮೂಲದ ತೆರಿಗೆ ತಜ್ಞ ದತ್ತಾತ್ರೇಯ ಬಿ.ಕೆ ಅವರು.
Form -೧೬ ಇಲ್ಲದೆ ಐಟಿ ರಿಟರ್ನ್ ಸಲ್ಲಿಕೆ ಅಸಾಧ್ಯ ಎಂಬ ತಪ್ಪು ಕಲ್ಪನೆ ಸಾಮಾನ್ಯ. ಆದರೆ ಪೇ ಸ್ಲಿಪ್ ಇಟ್ಟುಕೊಂಡೂ ಐಟಿ ರಿಟರ್ನ್ ಸಲ್ಲಿಸಬಹುದು. ಮಾಸಿಕ ವೇತನದ ಸ್ಲಿಪ್‌ನಲ್ಲಿ ಎಲ್ಲ ಡಿಡಕ್ಷನ್‌ಗಳ ವಿವರ ಕೂಡ ಇರುತ್ತದೆ. ಟಿಡಿಎಸ್, ಪಿಎಫ್ ಕುರಿತ ಕಡಿತ, ಮೂಲ ವೇತನ, ಭತ್ಯೆ ಇತ್ಯಾದಿ ವಿವರಗಳು ಇರುತ್ತವೆ. ೨೬ಎಎಸ್ ಅರ್ಜಿಯ ಮೂಲಕ ವೇತನದ ವಿವರಗಳನ್ನು ಭರ್ತಿ ಮಾಡಬಹುದು.