Site icon Vistara News

Share Market : ದುಡ್ಡು ಗಳಿಸಲು ಉತ್ತಮ ಲಾರ್ಜ್‌ ಕ್ಯಾಪ್‌ ಷೇರುಗಳು ಯಾವುದು? ಅವುಗಳ ಸಾಧಕ-ಬಾಧಕ ಏನು?

bse

ನೀವು ಷೇರು ಪೇಟೆಯಲ್ಲಿ ಹೂಡಿಕೆ ಮಾಡುವವರಾಗಿದ್ದರೆ ಲಾರ್ಜ್‌ ಕ್ಯಾಪ್‌ ಸ್ಟಾಕ್ಸ್‌ಗಳ ಬಗ್ಗೆ (Share Market) ಕೇಳಿರುತ್ತೀರಿ. ಹೂಡಿಕೆಯನ್ನೂ ಈಗಾಗಲೇ ಮಾಡಿರಬಹುದು. ಏಕೆಂದರೆ ಲಾರ್ಜ್‌ ಕ್ಯಾಪ್‌ ಷೇರುಗಳು ಎಂದರೆ ಅತ್ಯಂತ ಸುರಕ್ಷಿತ ಹಾಗೂ ದೀರ್ಘಕಾಲೀನ ಹೂಡಿಕೆಗೆ ಉತ್ತಮ ಆಯ್ಕೆ ಎಂಬ ಅಭಿಪ್ರಾಯ ಜನಪ್ರಿಯವಾಗಿದೆ.

ರಿಲಯನ್ಸ್‌, ಟಿಸಿಎಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೋಸಿಸ್‌, ಹಿಂದುಸ್ತಾನ್‌ ಯುನಿಲಿವರ್‌ ಇತ್ಯಾದಿ ಕಂಪನಿಗಳದ್ದು ಲಾರ್ಜ್‌ ಕ್ಯಾಪ್‌ ಷೇರುಗಳು ಎಂದು ಹೆಸರುವಾಸಿಯಾಗಿವೆ.

ಏನಿದು ಲಾರ್ಜ್‌ ಕ್ಯಾಪ್‌ ಷೇರುಗಳು?

ಲಾರ್ಜ್‌ ಕ್ಯಾಪ್‌ ಸ್ಟಾಕ್ಸ್‌ (large cap stocks) ಅಥವಾ ಷೇರು ಎಂದರೆ ದೊಡ್ಡ ಕಂಪನಿಗಳ ಷೇರುಗಳು. ಇವುಗಳನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿರುತ್ತಾರೆ. ಇವುಗಳ ಮಾರುಕಟ್ಟೆ ಮೌಲ್ಯ ಅಧಿಕವಾಗಿರುತ್ತವೆ. ಸೆಬಿಯು 100 ಲಾರ್ಜ್-ಕ್ಯಾಪ್‌ ಕಂಪನಿಗಳನ್ನು ಅವುಗಳ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಆಧರಿಸಿ ಗುರುತಿಸಿದೆ.

20,000 ಕೋಟಿ ರೂ.ಗೂ ಅಧಿಕ ಮಾರುಕಟ್ಟೆ ಬಂಡವಾಳ

20,000 ಕೋಟಿ ರೂ.ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಕಂಪನಿಗಳ ಷೇರುಗಳನ್ನು ಲಾರ್ಜ್‌ ಕ್ಯಾಪ್‌ ಸ್ಟಾಕ್ಸ್‌ ಎನ್ನುತ್ತಾರೆ. 5,000-20,000 ಕೋಟಿ ರೂ. ಇದ್ದರೆ ಮಿಡ್‌ ಕ್ಯಾಪ್‌ ಹಾಗೂ 5,000 ಕೋಟಿ ರೂ.ಗಿಂತ ಕೆಳಗಿದ್ದರೆ ಅಂಥ ಕಂಪನಿಗಳ ಷೇರುಗಳನ್ನು ಸ್ಮಾಲ್‌ ಕ್ಯಾಪ್‌ ಷೇರುಗಳು ಎಂದು ಕರೆಯುತ್ತಾರೆ.

ಲಾರ್ಜ್‌ ಕ್ಯಾಪ್‌ ಕಂಪನಿಗಳನ್ನು ಬ್ಲೂಚಿಪ್‌ ಕಂಪನಿಗಳೆಂದೂ ಕರೆಯುತ್ತಾರೆ. ದೀರ್ಘಕಾಲೀನ ಹೂಡಿಕೆ ದೃಷ್ಟಿಯಿಂದ ಇವುಗಳು ಉಪಯುಕ್ತ ಎನ್ನುತ್ತಾರೆ ನೈಲಾ ಬಿಸಿನೆಸ್‌ ವೆಂಚರ್ಸ್‌ನ ಪಾಲುದಾರರಾದ ನಟರಾಜ್‌ ಕಂಚಿ.

ಆನ್‌ಲೈನ್‌ ಷೇರು ಬ್ರೋಕರೇಜ್‌ ವಲಯದ ಗ್ರೋವ್‌ ಕಂಪನಿಯ ಪ್ರಕಾರ 2023ರಲ್ಲಿ ಹೂಡಿಕೆಗೆ ಪರಿಶೀಲಿಸಬಹುದಾದ ಲಾರ್ಜ್‌ ಕ್ಯಾಪ್‌ ಷೇರುಗಳ ಪಟ್ಟಿ ಇಂತಿದೆ:

  1. ರಿಲಯನ್ಸ್‌ ಇಂಡಸ್ಟ್ರೀಸ್-‌ ವೈವಿಧ್ಯಮಯ ಉದ್ದಿಮೆಗಳ ಸಮೂಹ
  2. ಟಿಸಿಎಸ್-ಮಾಹಿತಿ ತಂತ್ರಜ್ಞಾನ
  3. ಎಚ್‌ಡಿಎಫ್‌ಸಿ ಬ್ಯಾಂಕ್-ಬ್ಯಾಂಕಿಂಗ್‌
  4. ಇನ್ಫೋಸಿಸ್-‌ ಮಾಹಿತಿ ತಂತ್ರಜ್ಞಾನ
  5. ಹಿಂದುಸ್ತಾನ್‌ ಯುನಿಲಿವರ್- ಎಫ್‌ಎಂಸಿಜಿ
  6. ಹೌಸಿಂಗ್‌ ಡೆವಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪೊರೇಷನ್‌ (ಹೌಸಿಂಗ್‌ ಫೈನಾನ್ಸ್)

ಲಾರ್ಜ್‌ ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ ಹೂಡಿಕೆಯ ಅನುಕೂಲಗಳು:

ಸ್ಥಿರತೆ: ಸ್ಥಿರತೆಯೇ ಲಾರ್ಜ್‌ ಕ್ಯಾಪ್‌ ಕಂಪನಿಗಳ ಲಕ್ಷಣ. ಮಾರುಕಟ್ಟೆಯಲ್ಲಿ ಸ್ಥಿರವಾಗಿ ಬೇರೂರಿರುವ ಈ ಕಂಪನಿಗಳು ಷೇರುದಾರರಿಗೆ ಡಿವಿಡೆಂಡ್‌ ನೀಡುತ್ತವೆ. ನಿರ್ದಿಷ್ಟ ಕ್ಷೇತ್ರಗಳಲ್ಲಿ ಅವುಗಳಿಗೆ ನಾಯಕತ್ವದ ಸ್ಥಾನ ಇರುತ್ತದೆ. ಆರ್ಥಿಕ ಪಲ್ಲಟಗಳು ಅವುಗಳ ಲಾಭಾಂಶದ ಮೇಲೆ ತೀರ ಪ್ರತಿಕೂಲ ಪರಿಣಾಮವನ್ನು ಬೀರುವುದಿಲ್ಲ. ಆದ್ದರಿಂದ ಇಂಥ ಷೇರುಗಳ ಗುಣಮಟ್ಟ ಚೆನ್ನಾಗಿರುತ್ತದೆ. ಲಾರ್ಜ್‌ ಕ್ಯಾಪ್‌ ಷೇರುಗಳು ನಿಮ್ಮ ಖಾತೆಯನ್ನು ಪ್ರಬುದ್ಧಗೊಳಿಸುತ್ತವೆ. ಸುರಕ್ಷಿತ ಹೂಡಿಕೆಗೆ ಇದು ಸೂಕ್ತ.

ಪಾರದರ್ಶಕತೆ: ಲಾರ್ಜ್‌ ಕ್ಯಾಪ್‌ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ ಹಣಕಾಸು ಫಲಿತಾಂಶದ ವಿವರ ಸಿಗುತ್ತವೆ. ಅವುಗಳ ವಿವರಗಳು ಪಾರದರ್ಶಕ. ಲಾಭ, ನಷ್ಟ, ಆದಾಯದ ಮುನ್ನೋಟ ಇತ್ಯಾದಿ ನಿರ್ಣಾಯಕ ಮತ್ತು ನಿಖರ ಮಾಹಿತಿಗಳು ಸಿಗುತ್ತವೆ. ಈ ಕಂಪನಿಗಳ ಫಲಿತಾಂಶಗಳು ಹೆಚ್ಚಾಗಿ ಸುದ್ದಿಯಲ್ಲೂ ಇರುತ್ತವೆ. ಹೀಗಾಗಿ ಗಮನಿಸುವುದು ಸುಲಭ. ನಿಜವಾಗಿಯೂ ಉತ್ತಮ ವಹಿವಾಟು ನಡೆಸುವ ಕಂಪನಿಗಳು ಮಾತ್ರ ಈ ರೀತಿ ಪಾರದರ್ಶಕವಾಗಿರಲು ಸಾಧ್ಯ.

ಡಿವಿಡೆಂಡ್‌ ಆದಾಯ

ಡಿವಿಡೆಂಡ್‌ ವಿತರಿಸುವ ಕಂಪನಿಗಳು ತಮ್ಮ ಲಾಭಾಂಶದಲ್ಲಿ ಒಂದು ಪಾಲನ್ನು ಷೇರು ಹೂಡಿಕೆದಾರರಿಗೆ ನಿಯಮಿತವಾಗಿ ವಿತರಿಸುತ್ತವೆ. ಕೆಲವು ಕಂಪನಿಗಳ ಡಿವಿಡೆಂಡ್‌, ಬ್ಯಾಂಕ್‌ಗಳಲ್ಲಿ ನಿಶ್ಚಿತ ಅವಧಿಯ ಠೇವಣಿಗೆ (ಫಿಕ್ಸೆಡ್‌ ಡಿಪಾಸಿಟ್)‌ ಸಿಗುವ ಬಡ್ಡಿಗಿಂತಲೂ ಹೆಚ್ಚು ಇರುತ್ತವೆ. ಷೇರುಗಳ ಮೌಲ್ಯ ಏರಿಳಿತಗಳ ಹೊರತಾಗಿಯೂ, ಹೂಡಿಕೆದಾರರಿಗೆ ಡಿವಿಡೆಂಡ್‌ ಮೂಲಕ ಆದಾಯ ಸಿಗುತ್ತದೆ. ನಿಮಗೆ ನಿಯಮಿತವಾಗಿ ಆದಾಯದ ಮೂಲವನ್ನು ಕಂಡುಕೊಳ್ಳಲು ಲಾರ್ಜ್-ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿನ ಹೂಡಿಕೆ ಅತ್ಯಂತ ಸುರಕ್ಷಿತ.

ದೀರ್ಘಕಾಲೀನ ಹೂಡಿಕೆಗೆ ಸೂಕ್ತ: ನೀವು ಷೇರು ಮಾರುಕಟ್ಟೆಯಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ಹೂಡಿಕೆ ಮಾಡಲು ಬಯಸುವುದಿದ್ದರೆ ಲಾರ್ಜ್‌ ಕ್ಯಾಪ್‌ ಸೂಕ್ತ. ಇಟಿಎಫ್‌ ಮತ್ತು ಮ್ಯೂಚುವಲ್‌ ಫಂಡ್‌ಗಳ ಮೂಲಕವೂ ಲಾರ್ಜ್‌ ಕ್ಯಾಪ್‌ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದು.

ರಿಸ್ಕ್‌ ಕಡಿಮೆ: ಹೆಚ್ಚು ರಿಸ್ಕ್‌ ತೆಗೆದುಕೊಳ್ಳಲು ಬಯಸದವರಿಗೆ ಹೇಳಿ ಮಾಡಿಸಿದ ಷೇರುಗಳಿವು. ಲಾರ್ಜ್‌ ಕ್ಯಾಪ್‌ ಕಂಪನಿಗಳ ವ್ಯವಸ್ಥೆ ಮತ್ತು ಮಾರುಕಟ್ಟೆ ದೊಡ್ಡದಾಗಿರುವುದರಿಂದ ಇವುಗಳಲ್ಲಿನ ಹೂಡಿಕೆಗೆ ರಿಸ್ಕ್‌ ಕಡಿಮೆ. ಇವುಗಳ ಲಿಕ್ವಿಡಿಟಿ ಕೂಡ ಹೆಚ್ಚು. ಇವುಗಳನ್ನು ಖರೀದಿಸುವವರೂ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಾರಾಟ ಸುಲಭ.

ಅನಾನುಕೂಲಗಳೇನು?

ಲಾರ್ಜ್‌ ಕ್ಯಾಪ್‌ ಕಂಪನಿಗಳ ಷೇರುಗಳು ಸ್ಥಿರವಾಗಿದ್ದರೂ, ಮಾರುಕಟ್ಟೆಯ ಅಪ್‌ ಟ್ರೆಂಡ್‌ಗಳಿಗೆ ಅವುಗಳ ದರಗಳು ಮಿಡ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌ ಮಾದರಿಯಲ್ಲಿ ತಕ್ಷಣ ಹೈಜಂಪ್‌ ಆಗುವುದಿಲ್ಲ. ಹೀಗಾಗಿ ಸಾಕಷ್ಟು ಜಾಣ್ಮೆಯಿಂದ ಲಾರ್ಜ್‌ ಕ್ಯಾಪ್‌ ಸ್ಟಾಕ್ಸ್‌ಗಳನ್ನು ಆಯ್ಕೆ ಮಾಡಬೇಕು.

ಲಾರ್ಜ್‌ ಕ್ಯಾಪ್‌ ಷೇರುಗಳು ಸಾಮಾನ್ಯವಾಗಿ ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳಿಗಿಂತ ದುಬಾರಿಯಾಗಿರುತ್ತವೆ. ಜತೆಗೆ ಸ್ಮಾಲ್‌ ಕ್ಯಾಪ್‌, ಮಿಡ್‌ ಕ್ಯಾಪ್‌ಗೆ ಹೋಲಿಸಿದರೆ ಲಾರ್ಜ್‌ ಕ್ಯಾಪ್‌ ಷೇರುಗಳು ಹೆಚ್ಚು ವೇಗದ ದರದಲ್ಲಿ ಬೆಳೆಯುವುದಿಲ್ಲ. ಹೀಗಾಗಿ ದುಬಾರಿ ಷೇರುಗಳಿಗೆ ಹಾಕಿದ ದೊಡ್ಡ ಮೊತ್ತದ ಬಂಡವಾಳ ವೇಗವಾಗಿ ಬೆಳೆಯದಿದ್ದರೆ ಹೂಡಿಕೆದಾರರಿಗೆ ನಿರಾಸೆ ಆಗಲೂಬಹುದು.

ಹೂಡಿಕೆದಾರರಿಗೆ ಟಿಪ್ಸ್:

ಲಾರ್ಜ್‌ ಕ್ಯಾಪ್‌ ಕಂಪನಿಗಳ ಷೇರುಗಳಲ್ಲಿ ನಿಶ್ಚಿಂತೆಯಿಂದ ಹೂಡಿರಿ. ಆದರೆ ಹಾಗಂತ ಕಣ್ಮುಚ್ಚಿಕೊಂಡು ಖರೀದಿಸುವುದು ಬೇಡ. ಅದಕ್ಕೂ ಮುನ್ನ ಕಂಪನಿಯ ಇತಿಹಾಸ, ಕಳೆದ ಕನಿಷ್ಠ 5 ವರ್ಷಗಳಲ್ಲಿ ಕಂಪನಿಯ ಆದಾಯ, ಷೇರು ದರಗಳ ಏರಿಳಿತಗಳ ವಿವರಗಳನ್ನು ಅಧ್ಯಯನ ನಡೆಸಿ. ಮುಖ್ಯವಾಗಿ ಷೇರು ದರ ಮತ್ತು ಡಿವಿಡೆಂಡ್‌ ಬಗ್ಗೆ ಗಮನಿಸಿ. ನಿಮ್ಮ ಹೂಡಿಕೆಯ ಎಲ್ಲ ಮೊತ್ತವನ್ನೂ ಲಾರ್ಜ್‌ ಕ್ಯಾಪ್‌ಗಳಿಗೆ ಮೀಸಲಿಡದಿರಿ. ವೈವಿಧ್ಯವಾಗಿರಲಿ.

Exit mobile version