Site icon Vistara News

Motivational story | ಅವನು ಕೊನೇ ಗೂಳಿಯ ಬಾಲ ಹಿಡಿಯೋಕೆಂದು ಕಾದು ಕುಳಿತಿದ್ದ, ಆದರೆ ಅದಕ್ಕೆ ಬಾಲವೇ ಇರಲಿಲ್ಲ!

young man with oxe

ಕೃಷ್ಣ ಭಟ್‌ ಅಳದಂಗಡಿ-motivational story
ಒಂದೂರಿನಲ್ಲಿ ಒಬ್ಬ ಶ್ರೀಮಂತ ರೈತನಿದ್ದ. ಅವನಿಗೆ ಒಬ್ಬಳೇ ಮಗಳು. ಪರಮ ಸೌಂದರ್ಯವತಿ. ಸಾಕಷ್ಟು ವಿದ್ಯಾವಂತೆಯೂ ಹೌದು. ಒಂದು ಸಾರಿ ಪಟ್ಟಣದಲ್ಲಿ ಆಕೆಯ ಜತೆ ಓದಿದ ಒಬ್ಬ ಹುಡುಗ ಬಂದು ಮಗಳನ್ನು ಮದುವೆ ಮಾಡಿಕೊಡುವಂತೆ ನೇರವಾಗಿಯೇ ವಿನಂತಿಸಿದ. ತಾನೂ ಕೃಷಿ ಕುಟುಂಬದಿಂದ ಬಂದಿದ್ದಾಗಿ ಹೇಳಿಕೊಂಡ. ತನ್ನ ಸಾಹಸದ ಕಥೆಗಳನ್ನೂ ವಿವರಿಸಿದ.

ರೈತನಿಗೆ ತನ್ನ ಕೃಷಿ ಬದುಕಿನ ಬಗ್ಗೆ ತುಂಬ ಅಭಿಮಾನ. ಮಗಳಿಗೆ ಗಂಡನಾಗಿ ಬರುವವನೂ ಕೃಷಿ ಬಗ್ಗೆ ತಿಳಿದಿರಬೇಕು, ಕೃಷಿಯಲ್ಲೇ ತುಂಬ ಎತ್ತರಕ್ಕೇರುವ ಸಾಹಸಿ ಆಗಿರಬೇಕು ಅಂತ ಆಸೆ ಇತ್ತು.

ಅವನು ಹೇಳಿದ: ನಿನಗೆ ನನ್ನ ಮಗಳನ್ನು ಕೊಡುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಮದುವೆ ಆಗಬೇಕು ಎಂದರೆ ಒಂದು ಸಣ್ಣ ಷರತ್ತನ್ನು ಈಡೇರಿಸಬೇಕು.

ಹುಡುಗ ಒಪ್ಪಿಕೊಂಡ: ಯಾವ ಷರತ್ತಾದರೂ ಸರಿ. ಪೂರೈಸುತ್ತೇನೆ ಎಂದ.

ರೈತ ವಿವರಿಸಿದ: ಹುಡುಗಾ ನೀನು ಹೋಗಿ ಆ ಬಯಲಲ್ಲಿ ನಿಂತುಕೋ. ನಾನು ಇಲ್ಲಿಂದ ಮೂರು ಗೂಳಿಗಳನ್ನು ಬಿಡುತ್ತೇನೆ. ಒಮ್ಮೆಗೆ ಒಂದೇ ಗೂಳಿ ಬಿಡುತ್ತೇನೆ. ನೀನು ಅವುಗಳಲ್ಲಿ ಯಾವುದಾದರೂ ಒಂದು ಗೂಳಿಯ ಬಾಲವನ್ನು ಹಿಡಿದರೆ ಸಾಕು…ಮಗಳನ್ನು ಮದುವೆ ಮಾಡಿಕೊಡುತ್ತೇನೆ ಎಂದ.

ಹುಡುಗ ತುಂಬ ಉತ್ಸಾಹದಿಂದ ಬಯಲಿಗೆ ಹೋದ. ಗೂಳಿಗಳನ್ನು ಹೊರಗೆ ಬಿಡುವುದನ್ನೇ ಕಾದು ನಿಂತ. ಆಗ ಕೊಟ್ಟಿಗೆಯಿಂದ ಒಂದು ಗೂಳಿ ಹೊರಬಂತು.`ʻಅಬ್ಬಾ ಎಷ್ಟು ದೊಡ್ಡ ಗೂಳಿ ಇದು. ಇದುವರೆಗೂ ಇಷ್ಟು ದೊಡ್ಡದು ನೋಡೇ ಇಲ್ಲ’ ಎಂದುಕೊಂಡ ಯುವಕ ಈ ಗೂಳಿಯ ಹತ್ತಿರ ಹೋಗುವುದೇ ಕಷ್ಟ, ನೋಡೋಣ ಎರಡನೇ ಗೂಳಿ ಬರಲಿ ಎಂದು ಮೊದಲನೆಯದನ್ನು ಬಿಟ್ಟ. ತುಂಬ ಉದ್ದನೆಯ ಬಾಲದ ಗೂಳಿ ಜಿಗಿಯುತ್ತಾ ಜಿಗಿಯುತ್ತಾ ಯುವಕನ ಬಳಿಯಿಂದಲೇ ಮುಂದಕ್ಕೆ ಹೋಯಿತು.

ಕೊಟ್ಟಿಗೆಯ ಬಾಗಿಲು ಮತ್ತೆ ತೆರೆಯಿತು. ಇನ್ನೊಂದು ಗೂಳಿ ಹೊರಬಂತು. ಎರಡನೇ ಗೂಳಿ ಹಿಂದಿನದಕ್ಕಿಂತ ಸಣ್ಣದಿತ್ತು. ಆದರೆ, ಭಯಂಕರ ಆಕ್ರೋಶದಲ್ಲಿದ್ದಂತೆ ಕಂಡುಬಂತು. ಯುವಕ ಇದನ್ನು ಮುಟ್ಟಿದರೆ ಕಷ್ಟ.. ಮೂರನೆಯದು ಇನ್ನೂ ಸಣ್ಣದಿರಬಹುದು ಎಂದು ಯೋಚಿಸಿದ. ಎರಡನೇ ಗೂಳಿಯೂ ಅವನ ಹತ್ತಿರದಿಂದಲೇ ನಿಧಾನವಾಗಿ ನಡೆದುಹೋಯಿತು.

ಈಗ ಮೂರನೇ ಗೂಳಿಯ ಸರದಿ. ಅದು ಹೊರಬರುತ್ತಿದ್ದಂತೆಯೇ ಹುಡುಗನಿಗೆ ಖುಷಿಯೋ ಖುಷಿ. ಯಾಕೆಂದರೆ ಅದು ತುಂಬಾ ದುರ್ಬಲವಾಗಿತ್ತು. ಹಿಂದಿನ ಗೂಳಿಗಳಂತೆ ರಭಸವಿರಲಿಲ್ಲ. ಆದರೂ ಜಿಗಿಯುತ್ತಾ ಮುಂದೆ ಬಂತು.

ಗೂಳಿ ತನ್ನ ನೇರಕ್ಕೆ ಬರುವುದನ್ನೇ ಕಾದು ಕುಳಿತ ಯುವಕ ಯಾವ ಹೆಚ್ಚಿನ ಪ್ರಯತ್ನವೇ ಇಲ್ಲದೆ ಅದರತ್ತ ಧಾವಿಸಿ ಬಾಲದ ಜಾಗಕ್ಕೆ ಕೈ ಹಾಕಿದ. ಆದರೆ, ಅಲ್ಲಿ ಬಾಲವೇ ಇರಲಿಲ್ಲ!

ಹುಡುಗನಿಗೆ ಸಿಕ್ಕಾಪಟ್ಟೆ ನಿರಾಸೆಯಾಯಿತು. ಅಯ್ಯೋ ಸ್ವಲ್ಪ ಪ್ರಯತ್ನ ಮಾಡಿದ್ದರೆ ಮೊದಲನೇ ಗೂಳಿಯ ಬಾಲವನ್ನೇ ಹಿಡಿಯಬಹುದಿತ್ತು. ಬೇಡ, ಎರಡನೆಯದಾದರೂ ಸಿಗುತ್ತಿತ್ತು. ಛೆ. ಕೈಗೆ ಬಂದ ತುತ್ತನ್ನೇ ಬಿಟ್ಟನೆಲ್ಲ. ಹುಡುಗಿಯನ್ನು ಮದುವೆಯಾಗುವ ಅವಕಾಶವೂ ಕೈತಪ್ಪಿತಲ್ಲ ಎಂದು ಬೇಸರಿಸಿದ.

ಆಗ ಹುಡುಗಿಯ ತಂದೆ ಬಂದು ಹೇಳಿದ: ಬದುಕಿನಲ್ಲಿ ಅವಕಾಶ ಸಿಕ್ಕಿದಾಗ ಬಳಸಿಕೊಳ್ಳಬೇಕು. ನಾವು ರೈತರು ಬೆಳೆ ಬೆಳೆಯಬೇಕಾದರೆ ಇದೇ ಸರಿಯಾದ ಮಾರ್ಗ. ನಾಳೆ ಒಳ್ಳೆಯ ಅವಕಾಶ ಬಂದೀತು ಅಂತ ಕಾಯ್ದುಕುಳಿತವರು ಉದ್ಧಾರ ಆಗಿದ್ದು ಕಡಿಮೆ.

ಇದನ್ನೂ ಓದಿ | Motivational story| ಯಾರದೋ ಮಗನನ್ನು ಉಳಿಸಲು ಓಡಿ ಬಂದ ಆ ವೈದ್ಯರ ಮಗು ಸ್ಮಶಾನದಲ್ಲಿತ್ತು!

Exit mobile version