ಕೃಷ್ಣ ಭಟ್ ಅಳದಂಗಡಿ- motivational story
ನಾನೊಬ್ಬ ಟ್ಯಾಕ್ಸಿ ಡ್ರೈವರ್. ರಾತ್ರಿ ಎಷ್ಟು ಹೊತ್ತಿಗೆ ಕರೆ ಬಂದರೂ ಹೊರಡುವ ಅಭ್ಯಾಸ ಇಟ್ಟುಕೊಂಡಿದ್ದೇನೆ.
ಕೆಲವು ದಿನಗಳ ಹಿಂದೆ ರಾತ್ರಿ 2 ಗಂಟೆಗೆ ಒಂದು ಕಾಲ್ ಬುಕ್ ಆಯ್ತು. ನಾನು ಬೇಗಬೇಗನೆ ಹೊರಟು ಆ ವಿಳಾಸವನ್ನು ತಲುಪಿದೆ. ಆದರೆ, ಅಲ್ಲಿ ಯಾರೂ ಇರಲಿಲ್ಲ. ಬುಕ್ ಆದ ನಂಬರಿಗೆ ಕರೆ ಮಾಡಿದೆ. ಆದರೆ, ಯಾರೂ ರಿಸೀವ್ ಮಾಡಲಿಲ್ಲ. ಸಾಮಾನ್ಯವಾಗಿ ಎಲ್ಲ ಚಾಲಕರೂ ಒಂದೆರಡು ನಿಮಿಷ ಕಾದು ಮುಂದೆ ಹೋಗುತ್ತಾರೆ. ನನಗೆ ಆವತ್ತು ಹಾಗೆ ಹೋಗಲು ಮನಸಾಗಲಿಲ್ಲ.
ಅದೊಂದು ಸಾಧಾರಣ ಅಪಾರ್ಟ್‍ಮೆಂಟ್. ಗ್ರೌಂಡ್ ಫ್ಲೋರ್ ನ ಒಂದು ಮನೆಯಲ್ಲಿ ಸಣ್ಣದೊಂದು ಮಿಣುಕು ಬೆಳಕು ಬಿಟ್ಟರೆ ಉಳಿದಂತೆ ಕತ್ತಲೆ ಇತ್ತು. ನಾನು ಮೆಲ್ಲನೆ ಹೋಗಿ ಬಾಗಿಲು ಬಡಿದೆ. ಒಳಗಿನಿಂದ ಕ್ಷೀಣ ಸ್ವರ. `ಒಂದೇ ನಿಮಿಷ’ ಎಂಬ ಧ್ವನಿ ಬಂತು. ಬಾಗಿಲು ತೆರೆಯಿತು. ಸುಮಾರು 90 ವರ್ಷದ, ಕುಳ್ಳಗಿನ ದೇಹದ, ಬಡಕಲು ಮಹಿಳೆಯೊಬ್ಬರು ಹೊರಬಂದರು. ಕೈಯಲ್ಲೊಂದು ಸೂಟ್‍ಕೇಸ್.
ನಾನು ಅವರ ಕೈಯಿಂದ ಸೂಟ್ ಕೇಸ್ ತೆಗೆದುಕೊಂಡು ಅವರ ಕೈ ಹಿಡಿದು ಕಾರಿನ ಬಳಿ ಕರೆದುಕೊಂಡುಬಂದೆ. ಮಹಿಳೆ `ತ್ಯಾಂಕ್ಯೂ ನಿಮ್ಮ ಒಳ್ಳೆಯತನಕ್ಕೆ’ ಎಂದರು. `ನಾನು ನನ್ನ ಎಲ್ಲ ಪ್ರಯಾಣಿಕರನ್ನು ಇಷ್ಟೇ ಗೌರವದಿಂದ ನೋಡುತ್ತೇನೆ. ಅದರಲ್ಲೂ ನೀವಂತೂ ಅಮ್ಮನ ಹಾಗೆ ಇದ್ದೀರಿ’ ಎಂದೆ. ಖುಷಿಯಾದರು.
ಅವರು ಹೋಗಬೇಕಾದ ಜಾಗ ಸುಮಾರು ಐದು ಕಿ.ಮೀ. ದೂರದಲ್ಲಿತ್ತು. ನಾನು ಆ ಕಡೆಗೆ ಹೋಗೋಣ ಎಂದು ತಿರುಗಿಸಿದರೆ `ಮಗಾ.. ಈ ದಾರಿ ಬೇಡ.. ನಾನು ದಾರಿ ಹೇಳುತ್ತೇನೆ. ಹಾಗೇ ಹೋಗ್ತೀಯಾ’ ಎಂದು ಕೇಳಿದರು. ಅವರು ಸೂಚ್ಯವಾಗಿ ಹೇಳಿದ ದಾರಿ ತುಂಬ ದೂರವಾಗಿತ್ತು. ಹಾಗೆ ಹೋದರೆ ತುಂಬ ದೂರ ಆಗುತ್ತಮ್ಮಾ ಅಂದೆ.
`ಪರವಾಗಿಲ್ಲ.. ನನಗೇನೂ ಅವಸರವಿಲ್ಲ. ನಿಧಾನಕ್ಕೆ ಹೋಗೋಣ. ಎಷ್ಟು ದುಡ್ಡಾದರೂ, ಸಮಯವಾದರೂ ಪರವಾಗಿಲ್ಲ’ ಎಂದರು.
ನನ್ನ ಕಾರು ನಿಧಾನವಾಗಿ ಸಾಗುತ್ತಿತ್ತು. ಮುಂದೆ ಹೋಗುತ್ತಿದ್ದಂತೆಯೇ ಅವರು ತನ್ನ ಬದುಕಿನ ಭಾಗವಾದ ಒಂದೊಂದೇ ಸ್ಥಳಗಳನ್ನು ತೋರಿಸುತ್ತಾ ಹೋದರು. `ನೋಡು ನೋಡು ಅದು ನಾನು ಕಲಿತ ಶಾಲೆ’ ಎನ್ನುತ್ತಾ ಮಗುವಾದರು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಮ್ಮೆ ನಿಲ್ಲಿಸು ಅಂದರು. `ಅಗೋ ಆ ಆಸ್ಪತ್ರೆ ಇದೆಯಲ್ವಾ.. ಅಲ್ಲೇ ನಾನು ನರ್ಸಿಂಗ್ ಮಾಡಿದ್ದು.. ಅಲ್ಲೇ ನರ್ಸ್ ಕೂಡಾ ಆಗಿದ್ದೆ. ಅಲ್ಲಿ ಎಲ್ಲರೂ ನನ್ನನ್ನು ಅಕ್ಕಾ ಅಕ್ಕಾ ಅನ್ನುತ್ತಿದ್ದರು’ ಎನ್ನುತ್ತಾ ನಕ್ಕರು.
ಅದು ನೋಡು ನಂಗೂ ಅವರಿಗೂ ಅವರಿಗೂ ಮದುವೆಯಾಗಿ ಮೊದಲು ವಾಸವಾಗಿದ್ದ ಬಾಡಿಗೆ ಮನೆ ಇದ್ದ ಜಾಗ. ಈಗ ಅದಿಲ್ಲ. ಅಪಾರ್ಟ್‍ಮೆಂಟ್ ಆಗಿದೆ.
`ಒಂದ್ನಿಮಿಷ ನಿಲ್ಲಿಸ್ತೀಯಾ.. ಆ ಕನ್ನಡ ಭವನ ಇದೆಯಲ್ವಾ? ಅಲ್ಲಿ ನಾನು ಭರತನಾಟ್ಯ ರಂಗ ಪ್ರವೇಶ ಮಾಡಿದ್ದು. ಎಷ್ಟು ನಾಟಕ ಮಾಡಿದ್ದೆ ಗೊತ್ತಾ ನಾನು ಅಲ್ಲಿ. ಆಗೆಲ್ಲ ನಾನು ಹೀರೋಯಿನ್’ ಎಂದು ಖುಷಿಯಾದರು. ನಾನು ಅವರ ಮುಖ ನೋಡಿದೆ. ಸುಕ್ಕುಗಟ್ಟಿದ ಮುಖದಲ್ಲೂ ಅದೆಂಥ ಕಳೆ ಅಂತ ಆಶ್ಚರ್ಯವಾಯಿತು.
ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಂದು ದೊಡ್ಡ ಮನೆಯನ್ನು ತೋರಿಸಿದರು. ಒಮ್ಮೆ ನಿಲ್ಲಿಸು, ಅದು ನನ್ನ ಮಗನ ಮನೆ. ಅವನು ದೊಡ್ಡ ಎಂಜಿನಿಯರ್. ಸೊಸೆಯೂ ಆಫೀಸರ್. ಇಬ್ಬರು ಮಕ್ಕಳಿದ್ದಾರೆ. ಅವರಿಗೆ ನನ್ನ ಮೇಲೆ ತುಂಬ ಪ್ರೀತಿ ಅಂದರು.
ನಾನು ಇಲ್ಲಿಗೇ ಹೋಗಲಿಕ್ಕಿರಬೇಕು ಅಂತ ಯೋಚಿಸಿ, ಇಳೀತೀರಾ ಅಂದೆ. “ಇಲ್ಲ ಇಲ್ಲ ಹೋಗೋಣ ಮುಂದೆ’ ಅಂದರು. ಕಾರು ಮುಂದಕ್ಕೆ ಹೋಯಿತು. ಅಜ್ಜಿ ಹೇಳಿದಂತೆ ಒಂದು ಮನೆಯ ಗೇಟಿನ ಮುಂದೆ ನಿಲ್ಲಿಸಿದೆ. ಈ ಅಜ್ಜಿ ಬರ್ತಾರೆ ಅಂತಾನೇ ಕಾದಿದ್ದಂತಿದ್ದ ಇಬ್ಬರು ಯುವತಿಯರು ಹೊರಗೆ ಬಂದರು. ಬಿಳಿ ಬಟ್ಟೆ ಧರಿಸಿದ್ದರು. ಬಹುಶಃ ನರ್ಸ್‍ಗಳಿರಬಹುದು ಅನಿಸಿತು.
ಅವರು ಅಜ್ಜಿಯನ್ನು ಪ್ರೀತಿಯಿಂದ ಕಾರಿನಿಂದ ಇಳಿಸಿದರು. ಅಜ್ಜಿ ನನ್ನನ್ನು ಕರೆದು ಬಾಡಿಗೆ ಕೊಟ್ಟರು. `ನಿನ್ನನ್ನೊಮ್ಮೆ ಗಟ್ಟಿಯಾಗಿ ತಬ್ಕೊಬೇಕು ಅನಿಸ್ತಿದೆ ಮಗಾ’ ಅಂದರು. ನಾನು ಪಾದ ಮುಟ್ಟಿದ ಬಳಿಕ ಬಿಗಿದಪ್ಪಿಕೊಂಡೆ. ಏನೋ ನಿರಾಳ ಅನಿಸಿತು.
ಆ ಹುಡುಗಿಯರು ಅಜ್ಜಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡರು. ನಾನು ಕಾರು ತಿರುಗಿಸಿ ಕೆಲವೇ ಮೀಟರ್ ದೂರ ಬಂದಿದ್ದೆ. ಹಿಂಬದಿ ಸೀಟಿನಲ್ಲಿ ಅಜ್ಜಿ ತಲೆಗೆ ಕಟ್ಟಿಕೊಂಡಿದ್ದ ಬಟ್ಟೆ ಕಂಡಿತು. ಅಯ್ಯೋ ಇಲ್ಲೇ ಉಳೀತಲ್ಲಾ ಅನ್ನಿಸಿ, ಕಾರನ್ನು ಅಲ್ಲೇ ನಿಲ್ಲಿಸಿ ಬಟ್ಟೆಯನ್ನು ಹಿಡಿದುಕೊಂಡು ಆ ಮನೆಯತ್ತ ನಡೆದೆ.
ಆದರೆ, ಅಲ್ಲಿ ಮನೆಯೇ ಇರಲಿಲ್ಲ! ಸುತ್ತಲೂ ಕತ್ತಲೆ ಮಾತ್ರ ಇತ್ತು. ನಾನು ಓಡಿಬಂದು ಕಾರು ಹತ್ತಿ ಸ್ಟಾರ್ಟ್ ಮಾಡಿದೆ. ಒಮ್ಮೆಗೇ ಬೆವರತೊಡಗಿತು. ನಾನು ಅದೇ ಬಟ್ಟೆಯಿಂದ ಒರೆಸಿಕೊಂಡೆ. ಏನೋ ಹಿತವೆನಿಸಿತು.
ಇದನ್ನೂ ಓದಿ| Motivatioal story | ಹಿಮ ಬೆಟ್ಟದ ತುತ್ತತುದಿಯ ಚಹಾ ಅಂಗಡಿಯಲ್ಲಿ ಆ ರಾತ್ರಿ ದೇವರು ಚಹಾ ಕುಡಿದು ಹೋಗಿದ್ದ!