Raja Marga Column : ‘ಯಾರು ದುಡ್ಡನ್ನು ಪ್ರೀತಿ ಮಾಡುತ್ತಾರೋ ಅವರು ಮಾತ್ರ ದುಡ್ಡು ಮಾಡುತ್ತಾರೆ’ ಅನ್ನುತ್ತಾರೆ ವಾರನ್ ಬಫೆಟ್! (Warren Buffett) ಅವರಿಗೆ ಈಗ 93 ವರ್ಷ! ಈಗಲೂ ಸ್ವಾವಲಂಬಿ ಆಗಿರುವ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಜಗತ್ತು ಓಡಾಡುವ ಅವರ ಜೀವನೋತ್ಸಾಹ ನಮ್ಮೆಲ್ಲರಿಗೂ ಮಾದರಿ!
ಅವರ ಹಣಕಾಸು ನಿರ್ವಹಣೆಯ (Finance Management) ಕೆಲವು ಸೂತ್ರಗಳು ಅದ್ಭುತವಾಗಿವೆ. ಆ ಸೂತ್ರಗಳ ಸಹಾಯದಿಂದ ಅವರು ಇವತ್ತಿಗೂ ಕೋಟಿ ಕೋಟಿ ದುಡಿಯುತ್ತಿದ್ದಾರೆ! ಅವರ ಆರ್ಥಿಕ ಶಿಸ್ತು, ಹಣಕಾಸು ನಿರ್ವಹಣೆ, ಸರಳ ಜೀವನ, ರಿಸ್ಕ್ ತೆಗೆದುಕೊಳ್ಳುವ ಶಕ್ತಿ ಇವುಗಳನ್ನು ಗಮನಿಸಿದಾಗ ಭಾರಿ ಅಚ್ಚರಿ ಮೂಡುತ್ತದೆ!
15ನೇ ವಯಸ್ಸಿಗೇ ಮೊದಲ ಶೇರ್ ತೆಗೆದುಕೊಂಡಿದ್ದ ಬಫೆಟ್!
ತನ್ನ 15ನೇ ವಯಸ್ಸಿಗೆ 25 ಡಾಲರ್ ಖರ್ಚು ಮಾಡಿ ತನ್ನ ಜೀವನದ ಮೊದಲ ಶೇರ್ ಖರೀದಿ ಮಾಡಿದ್ದರು ಬಫೆಟ್! ತನ್ನ 14ನೇ ವಯಸ್ಸಿಗೇ ಮೊದಲ ಆದಾಯ ತೆರಿಗೆ ರಿಟರ್ನ್ಸ್ ಕಟ್ಟಿದ್ದರು! ಅವರು ಹೇಳುವ ಪ್ರಕಾರ ಅವರು ಶೇರ್ ಬಿಸಿನೆಸ್ ಮಾಡಲು ಇನ್ನೂ ಮೊದಲು ಆರಂಭ ಮಾಡಬೇಕಿತ್ತಂತೆ!
ಬ್ಯುಸಿನೆಸ್ ಮಾಡಲು ತುಂಬಾ ಬುದ್ಧಿವಂತಿಕೆ ಬೇಕಾಗಿಲ್ಲ!
ಅವರ ಪ್ರಕಾರ ಬ್ಯುಸಿನೆಸ್ ಮಾಡಲು ತುಂಬಾ ಬುದ್ಧಿವಂತಿಕೆ ಬೇಕಾಗಿಲ್ಲ! ಅದಕ್ಕೆ ಬೇಕಾದದ್ದು ಐದೇ ಐದು ಸೂತ್ರಗಳು!
1. ಅದಮ್ಯ ಉತ್ಸಾಹ
2. ಉತ್ತಮ ಹಣಕಾಸು ನಿರ್ವಹಣೆ
3. ಕಾಮನ್ ಸೆನ್ಸ್
4. ರಿಸ್ಕ್ ತೆಗೆದುಕೊಳ್ಳುವ ಶಕ್ತಿ.
5. ಜೀವನ ಮೌಲ್ಯಗಳು.
ಬಫೆಟ್ ಈ ಅಂಶಗಳನ್ನು ತನ್ನ ಜೀವನದಲ್ಲಿ ನೂರಕ್ಕೆ ನೂರು ಪಾಲಿಸುತ್ತಾರೆ. ಅವರು ಸಿಇಒ ಆಗಿರುವ ‘ಬರ್ಕ್ ಶೈರ್ ಹ್ಯಾತ್ ವೇ’ ಕಂಪೆನಿಯು ಇಂದು ಜಗತ್ತಿನ ಅತಿ ದೊಡ್ಡ ವಿಮಾ ಮತ್ತು ಹಣಕಾಸು ಸಂಸ್ಥೆಯಾಗಿ ರೂಪುಗೊಳ್ಳಲು ಮುಖ್ಯವಾದ ಕಾರಣಗಳು ಮೇಲ್ಕಾಣಿಸಿದ ಐದು ಅಂಶಗಳೇ ಆಗಿವೆ.
Raja Marga Column: ಅಗಾಧ ಸಂಪತ್ತಿನ ಒಡೆಯ!
ಕೊರೊನಾ ಹೊತ್ತಿನಲ್ಲಿ ಜಗತ್ತಿನ ಬಹುತೇಕ ಕುಬೇರರು ತಮ್ಮ ಸಂಪತ್ತಿನ ಬಹುಭಾಗ ಕಳೆದುಕೊಂಡರು. ಎಲಾನ್ ಮಸ್ಕ್, ಜೆಫ್ ಬೇಜೋಸ್, ಬಿಲ್ ಗೇಟ್ಸ್ ಮೊದಲಾದವರು ಕೂಡ ಒಂದಿಷ್ಟು ನಷ್ಟ ಅನುಭವಿಸಿದರು. ಆದರೆ ವಾರನ್ ಬಫೆಟ್ ತನ್ನ ಜಾಣ್ಮೆಯನ್ನು ಉಪಯೋಗಿಸಿ ಎರಡು ವರ್ಷಗಳ ಅವಧಿಯಲ್ಲಿ 2.4 ಬಿಲಿಯನ್ ಡಾಲರ್ ಹೆಚ್ಚುವರಿ ಸಂಪಾದನೆ ಮಾಡಿದ್ದರು! ಈಗ ಅವರ ಕಂಪೆನಿಯ ಒಂದು ಶೇರ್ ಬೆಲೆ 4,20,890 ಡಾಲರ್ ಆಸುಪಾಸು ಇದೆ! ಅವರ ಸಂಪತ್ತಿನ ಒಟ್ಟು ಮೌಲ್ಯವು ಹೆಚ್ಚು ಕಡಿಮೆ 97.50 ಬಿಲಿಯನ್ ಡಾಲರ್! ಪ್ರತೀ ಸೆಕೆಂಡಿಗೆ ಅವರ ಆದಾಯವು 78,576 ರೂಪಾಯಿ ಏರಿಕೆ ಆಗ್ತಾ ಇದೆ!
ಅವರು ತನ್ನ ಸಂಪತ್ತಿನ 99% ಭಾಗ ದಾನ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ! ಮತ್ತು ಆ ಪ್ರಕ್ರಿಯೆ ಆರಂಭವನ್ನು ಕೂಡ ಮಾಡಿದ್ದಾರೆ! ಇದುವರೆಗೂ ಅವರು 45 ಬಿಲಿಯನ್ ಡಾಲರ್ ಸಂಪತ್ತು ದಾನ ಮಾಡಿ ಆಗಿದೆ.
“ದಾನ ಮಾಡಲು ನಾನು ಯಾರನ್ನೂ ಕೇಳುವ ಅಗತ್ಯ ಇಲ್ಲ. ಏಕೆಂದರೆ ನನ್ನ ಸಂಪತ್ತು ನಾನೇ ಸಂಪಾದನೆ ಮಾಡಿದ್ದು. ನನ್ನ ಅಪ್ಪ ಕೂಡ ನನಗೆ ಒಂದು ಡಾಲರ್ ಬಿಟ್ಟು ಹೋಗಿಲ್ಲ!” ಎಂದು ಅವರು ಹೇಳಿದ್ದಾರೆ!
ಸರಳವಾಗಿ ಬದುಕುವುದನ್ನು ನಾವು ಅವರಿಂದ ಕಲಿಯಬೇಕು!
ವಾರನ್ ಬಫೆಟ್ ಇಂದು ಜಗತ್ತಿನ ಅತೀ ದೊಡ್ಡ ಶ್ರೀಮಂತ ಆಗಿದ್ದರೂ ವಾಸ ಮಾಡುವುದು 1958ರಲ್ಲಿ ಖರೀದಿ ಮಾಡಿದ ಹಳೆಯ ಮನೆಯಲ್ಲಿ! ಅವರ ಪ್ರಕಾರ ಮನೆಯನ್ನು ಮತ್ತು ಬಿಸಿನೆಸ್ ಪಾರ್ಟನರನ್ನು ಬದಲಾವಣೆ ಮಾಡಲೇಬಾರದು ಅಂತೆ! ಅವರ ಬಿಸಿನೆಸ್ ಪಾರ್ಟನರ್ ಚಾರ್ಲಿ ಮಂಗರ್‌ಗೆ ಈಗ 98 ವರ್ಷ! ಅವರಿಬ್ಬರ ವ್ಯಾವಹಾರಿಕ ಪಾಲುದಾರಿಕೆಗೆ ಈಗ 70 ವರ್ಷ ಅನುಭವ!
ಬಫೆಟ್ ಮನೆಯಲ್ಲಿ ದುಬಾರಿ ಪೀಠೋಪಕರಣಗಳು, ಸುಸಜ್ಜಿತ ಕೊಠಡಿಗಳು ಇಲ್ಲ! ಅವರ ಹಳೆಯ ಕಾರ್ ಕ್ಯಾಡಿಲಾಕ್ ಬೆಲೆ 38 ಲಕ್ಷ ರೂಪಾಯಿ ಮಾತ್ರ! ಅದಕ್ಕೆ ಡ್ರೈವರ್ ಇಲ್ಲ! ತೀರಾ ಇತ್ತೀಚಿನವರೆಗೆ ಬಫೆಟ್ ಬಳಿ ಮೊಬೈಲ್ ಫೋನ್ ಇರಲಿಲ್ಲ! ಡೆಸ್ಕ್ ಟಾಪ್ ಇರಲಿಲ್ಲ. ಈಗ ಅವರು ಉಪಯೋಗ ಮಾಡುವ ಮೊಬೈಲ್ ಫೋನ್ ಬೆಲೆಯು ಭಾರತದಲ್ಲಿ 30,000 ರೂ. ಮಾತ್ರ! ಅವರ ಊಟ, ತಿಂಡಿ ಎಲ್ಲವೂ ಸರಳ. ಹೋಟೆಲಿಗೆ ಹೋಗುವುದು ತುಂಬಾ ಕಡಿಮೆ.
ವಾರನ್ ಬಫೆಟ್ ಅವರ ಬೆಳಗ್ಗಿನ ಉಪಾಹಾರ ಒಂದೇ ಒಂದು ಮೊಟ್ಟೆ, ಬಿಸ್ಕೆಟ್ ಮತ್ತು ಒಂದೇ ಒಂದು ತುಂಡು ಮಾಂಸ ಇಷ್ಟರೊಳಗೆ ಮುಗಿದು ಹೋಗುತ್ತದೆ! ದುಬಾರಿ ಡ್ರೆಸ್, ಸೂಟು, ಬೂಟು ಬಫೆಟ್ ಸರಿ ಹೋಗುವುದಿಲ್ಲ!
ವಿಪರೀತ ಓದು ಮತ್ತು ಇತರ ಹವ್ಯಾಸಗಳು!
ಈಗಲೂ ತುಂಬಾ ಓದುವ ಹವ್ಯಾಸ ಹೊಂದಿರುವ ಬಫೆಟ್ ದಿನದ 80% ಸಮಯವನ್ನು ಓದುವುದರಲ್ಲಿ ಕಳೆಯುತ್ತಾರೆ! ತನ್ನ 62 ಕಂಪೆನಿಗಳಿಗೆ ವರ್ಷಕ್ಕೊಮ್ಮೆ ಮಾತ್ರ ಭೇಟಿ ಕೊಡುತ್ತಾರೆ. ಎಲ್ಲರೊಂದಿಗೆ ನಗದು ವ್ಯವಹಾರ ಮಾಡುತ್ತಾರೆ. ಅವರ ಹತ್ತಿರ ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲ. ಸಾಲವಿಲ್ಲದೆ ಬದುಕುವುದು ಪ್ರತಿಯೊಬ್ಬನ ಹಕ್ಕು ಎಂದು ಅವರು ಹೇಳುತ್ತಾರೆ.
ಹಣ ಸಂಪಾದನೆಯ ಅವರ ಮೂರೇ ಮೂರು ಸೂತ್ರಗಳು!
1. ಎಂದಿಗೂ ಒಂದೇ ಆದಾಯದ ಮೇಲೆ ಅವಂಬನೆ ಮಾಡಬೇಡಿ.
2. ನಿಮಗೆ ಅರ್ಥವಾಗದ ಬಿಸಿನೆಸ್ ಎಂದಿಗೂ ಮಾಡಬೇಡಿ.
3. ಪ್ರತಿಷ್ಠೆಗಾಗಿ ಅಥವಾ ಇಗೋ ಉಳಿಸಿಕೊಳ್ಳಲು ಬಿಸಿನೆಸ್ ಮಾಡಬೇಡಿ.
ಇದನ್ನೂ ಓದಿ : Raja Marga Column : ಹಾಸಿಗೆ ಇದ್ದಷ್ಟು ಕಾಲು ಚಾಚೋದಲ್ಲ, ಉದ್ದಕ್ಕೆ ತಕ್ಕ ಹಾಸಿಗೆ ತಗೊಳ್ಳಿ!
ಜಗತ್ತಿನ ಅತೀ ದೊಡ್ಡ ಕುಬೇರ ಹೇಳಿದ ಮುಖ್ಯ ಮಾತು
ಸಂತೋಷ ಅನ್ನುವುದು ಒಳಗಿನಿಂದ ಹುಟ್ಟಬೇಕು. ಬಾಹ್ಯ ವಸ್ತುಗಳ ಆಕರ್ಷಣೆಯಿಂದ ಅಲ್ಲ! ನಮ್ಮ ಸಣ್ಣ ಸಣ್ಣ ಸಾಧನೆಗಳನ್ನು ಸಂಭ್ರಮಿಸಲು ನಾವು ಕಲಿಯಬೇಕು.
10 facts about Buffett that you likely didn't know:
— Warren Buffett Stock Tracker (@BuffetTracker) March 15, 2024
1. At just 6-yrs-old, Buffett bought 6 packs of Coca-Cola bottles and resold them for a 5% profit
2. Buffett bought his very first stock at the age of 11, 6 shares of Cities Service Preferred, which is now known as CITGO
3.…
ಅವರ ಜೀವನದ ಮೂರು ಪಾಲಿಸಿಗಳು!
1. ಯಾರ ಜೊತೆಗೂ ಸ್ಪರ್ಧೆ ಮಾಡುವುದಿಲ್ಲ!: ನನ್ನ ಸ್ಪರ್ಧೆ ಏನಿದ್ದರೂ ನನ್ನ ಜತೆಗೆ ಮಾತ್ರ. ನಾನು ಇವತ್ತು ಏನಾಗಿದ್ದೇನೋ ನಾಳೆ ಅದಕ್ಕಿಂತ ಸ್ವಲ್ಪ ಬೆಟರ್ ಆಗಬೇಕು ಅನ್ನೋದಷ್ಟೇ ನನ್ನ ನಿಲುವು.
2. ಅನಗತ್ಯವಾಗಿ ಒಂದು ಡಾಲರ್ ಕೂಡ ಖರ್ಚು ಮಾಡುವುದಿಲ್ಲ!: ನನ್ನ ಬಳಿ ಹಣ ಇದೆ. ನಾನು ಹೇಗೆ ಬೇಕಾದರೂ ಖರ್ಚು ಮಾಡುತ್ತೇನೆ ಎನ್ನುವುದು ನನ್ನ ನಿಲುವಲ್ಲ. ಯಾವುದಕ್ಕೆ ಬೇಕೋ, ಎಷ್ಟು ಬೇಕೋ ಅಷ್ಟು ಮಾತ್ರ ಖರ್ಚು ಮಾಡುತ್ತೇನೆ.
3. ದುಡ್ಡು ಸಂಪಾದನೆ ಮಾಡುವುದಕ್ಕಿಂತ ಸಂಬಂಧಗಳನ್ನು ಉಳಿಸಿಕೊಳ್ಳುವುದು ಮುಖ್ಯ!: ನನಗೆ ದುಡ್ಡು ಮುಖ್ಯ. ಅದನ್ನು ಗಳಿಸಿಕೊಳ್ಳಲು ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಹಾಗಂತ ನನಗೆ ಸಂಬಂಧಗಳಿಗಿಂತ ಹಣ ಮುಖ್ಯವಲ್ಲ. ನನಗೆ ಸಂಬಂಧ ಮೊದಲು, ಹಣ ನಂತರ.
ಒಟ್ಟಿನಲ್ಲಿ ವಾರನ್ ಬಫೆಟ್ ಅವರ ಬದುಕು ಎಲ್ಲರಿಗೂ ಅತ್ಯುತ್ತಮ ಪ್ರೇರಣೆ ನೀಡುತ್ತದೆ.