Site icon Vistara News

Raja Marga Column : ಪೋಷಕರೇ, ಮಕ್ಕಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ

Raja Marga Column Children mistake

Raja Marga Column : ಪ್ರತಿಯೊಂದು ಮಗುವು ಕೂಡ ಮುಗ್ಧವಾಗಿ ಈ ಜಗತ್ತಿಗೆ ಬರುತ್ತದೆ. ಅದರ ಮನಸಿನಲ್ಲಿ ಇರುವುದು ಪಾಸಿಟಿವ್ ಎನರ್ಜಿ ಮಾತ್ರ! (Positive Energy) ಅದೊಂದು ಆವೆ ಮಣ್ಣಿನ ಮುದ್ದೆ ಇದ್ದ ಹಾಗೆ. ಅದನ್ನು ಯಾವ ಆಕಾರಕ್ಕೂ ಎರಕ ಹಾಕಬಹುದು.

ಆದರೆ ಹೆಚ್ಚಿನ ಹೆತ್ತವರು (ಮತ್ತು ಹಲವು ಅಧ್ಯಾಪಕರು) ತಮ್ಮ ಅರಿವಿಗೆ ಬಾರದಂತೆ ಅದರ ಸುಪ್ತ ಮನಸ್ಸಿನೊಳಗೆ (Subconcious Mind) ಹಂತ ಹಂತವಾಗಿ ನೆಗೆಟಿವ್ ಎನರ್ಜಿಯನ್ನು ತುಂಬಿಸಿ ಆ ಮಗುವಿನ ಮುಗ್ಧತೆಯನ್ನು ಕಸಿಯುವ (Snatching innocence) ಕೆಲಸವನ್ನು ಮಾಡುತ್ತಾ ಇರುತ್ತಾರೆ! ಕೆಲವೊಮ್ಮೆ ತಿಳಿದು ಮಾಡುತ್ತಾರೆ, ಕೆಲವೊಮ್ಮೆ ತಿಳಿಯದೆ ಮಾಡುತ್ತಾರೆ!

ನಮ್ಮ ಸುಪ್ತ ಮನಸ್ಸಿಗೆ ಇರುವ ಒಂದು ಎದ್ದು ಕಾಣುವ ದೌರ್ಬಲ್ಯ ಎಂದರೆ ತನ್ನ ಒಳಗೆ ಬರುವ ಸಂದೇಶಗಳಲ್ಲಿ ಯಾವುದು ರಿಯಲ್, ಯಾವುದು ಫೇಕ್? ಎಂದು ನಿರ್ಧಾರಕ್ಕೆ ಬರಲು ಆಗದೇ ಇರುವುದು! ಎಷ್ಟೋ ಬಾರಿ ನಾವು ಹೆತ್ತವರು (ಮತ್ತು ಶಿಕ್ಷಕರು) ಮಗುವಿನ ಸುಪ್ತ ಮನಸ್ಸಿನ ಒಳಗೆ ತಲುಪಿಸುವ ಸಂದೇಶಗಳು ನೆಗೆಟಿವ್ ಎನರ್ಜಿ ಉಂಟುಮಾಡುತ್ತವೆ!

Raja Marga Column Children

Raja Marga column :ಪೆಟ್ಟುಗಳಿಗಿಂತ ಈ ಮಾತುಗಳು ಮಕ್ಕಳಿಗೆ ಹೆಚ್ಚು ನೋವು ಕೊಡುತ್ತವೆ!

ನಮ್ಮ ಮಾತು ಮತ್ತು ವರ್ತನೆಗಳ ಮೂಲಕ ರವಾನಿಸುವ ತಪ್ಪು ಸಂದೇಶಗಳನ್ನು ನಮ್ಮ ಮಗುವಿನ ಸುಪ್ತ ಮನಸ್ಸು ನಿಜ ಎಂದೇ ಭಾವಿಸುತ್ತದೆ! ಮತ್ತು ಅವುಗಳು ಮಗುವಿನ ವ್ಯಕ್ತಿತ್ವದ ಮೇಲೆ ದೀರ್ಘ ಕಾಲದಲ್ಲಿ ಬಹಳಷ್ಟು ಕೆಟ್ಟದಾದ ಪರಿಣಾಮಗಳನ್ನು ಉಂಟು ಮಾಡುತ್ತವೆ.

ಆದ್ದರಿಂದ ನಾವು ಮಕ್ಕಳ ಜೊತೆ ಆಡುವ ಮಾತುಗಳು, ತೋರಿಸುವ ಅತೀ ಅತಿರೇಕದ ವರ್ತನೆಗಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು ಎನ್ನುವುದು ನನ್ನ ಕಾಳಜಿ. ಮಕ್ಕಳಿಗೆ ನಾವು ಎರಡು ಪೆಟ್ಟು ಹೊಡೆಯುವುದಕ್ಕಿಂತ ಈ ರೀತಿಯ ಮಾತುಗಳು ಹೆಚ್ಚು ಕೆಡುಕನ್ನು ಉಂಟುಮಾಡುತ್ತವೆ!

ಇದನ್ನೂ ಓದಿ : Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

Raja Marga Column Children

Raja Marga Column : ನಾವು ಹೆತ್ತವರು ಮಾಡುವ ಪ್ರಮಾದಗಳು!

ಅದಕ್ಕೆ ನೂರಾರು ಉದಾಹರಣೆಗಳು ನನ್ನ ಹತ್ತಿರ ಇವೆ. ಇಲ್ಲಿವೆ ಅವುಗಳ ಕೆಲವು ಸ್ಯಾಂಪಲ್‌ಗಳು!

1. ಮಗುವು ಮೊದಲ ಬಾರಿಗೆ ನಡೆಯಲು ಪ್ರಯತ್ನ ಮಾಡಿ ಬಿದ್ದಾಗ ಅಮ್ಮ ಓಡೋಡಿ ಬಂದು ನೆಲಕ್ಕೆ ಪೆಟ್ಟು ಕೊಟ್ಟು ಹೇಳುವ ಮಾತು – ತಪ್ಪು ನಿಂದಲ್ಲ ಕಂದಾ! ಎಲ್ಲವೂ ಈ ನೆಲದ್ದು!
ಸಂದೇಶ: ಇದರಿಂದ ಮಗುವಿನ ಮನಸ್ಸಿಗೆ ರವಾನೆ ಆಗುವ ಸಂದೇಶ ಅಂದರೆ ನಾನು ತಪ್ಪು ಮಾಡುವವನೇ ಅಲ್ಲ! ಬೇರೆ ಯಾರೋ ತಪ್ಪುಗಳನ್ನು ಮಾಡುವವರು!

Raja Marga Column Children

2. ಮಗು ಯಾವುದೋ ತಪ್ಪು ಮಾಡಿ ಸಿಕ್ಕಿಬಿದ್ದಾಗ ಅಮ್ಮ ಪದೇ ಪದೇ ಹೇಳುವ ಮಾತು – ತಡಿ, ನಿಮ್ಮ ಅಪ್ಪ ಬರ್ಲಿ, ಎಲ್ಲವನ್ನೂ ಹೇಳುತ್ತೇನೆ!
ಸಂದೇಶ: ಮಗುವಿನ ಮನಸಿಗೆ ಹೋಗುವ ತಪ್ಪು ಸಂದೇಶ – ಇನ್ನು ಮುಂದೆ ಅಮ್ಮನಿಗೆ ಹೆದರುವ ಅಗತ್ಯವೇ ಇಲ್ಲ! ಅಪ್ಪ ಭಯೋತ್ಪಾದಕ. ಅಪ್ಪನಿಗೆ ಹೆದರಿದರೆ ಸಾಕು!

3. ಮಗುವಿನ ಪ್ರಗತಿ ಪತ್ರ ಹಿಡಿದು ಅಪ್ಪ ವಿಚಾರಣೆ ಮಾಡುವಾಗ ಹೇಳುವ ಮಾತು – ಏನು ಗಣಿತದಲ್ಲಿ 99! ಯಾಕೆ ನೂರು ಬಂದಿಲ್ಲ?
ಸಂದೇಶ: ಮಗುವಿನ ಮನಸಿಗೆ ಹೋಗುವ ಸಂದೇಶ – ನಾನೆಷ್ಟು ಸಾಧನೆ ಮಾಡಿದರೂ ಅದಕ್ಕೆ ಬೆಲೆ ಇಲ್ಲ! ಅಪ್ಪ ಯಾಕೆ ಹೀಗೆ ಹೇಳುತ್ತಾರೆ? ಅಪ್ಪನಿಗೆ ನೂರು ಬಂದಿತ್ತ?

4. ಮಗು ತಪ್ಪು ಕೆಲಸ ಮಾಡಿದಾಗ ಅಮ್ಮ ಛೇಡಿಸುವ ಮಾತು – ಎಲ್ಲ ಅಪ್ಪನ ಗುಣಗಳನ್ನು ಕಿತ್ತುಕೊಂಡು ಬಂದಿದ್ದಾನೆ/ಳೆ?
ಸಂದೇಶ: ಮಗುವಿನ ಮನಸಿಗೆ ಹೋಗುವ ತಪ್ಪು ಸಂದೇಶ – ನನ್ನ ಅಪ್ಪ ಒಳ್ಳೆಯವರಲ್ಲ!

5. ನಿನ್ನನ್ನು ಸಾಲ ಸೋಲ ಮಾಡಿ ಓದಿಸುತ್ತಾ ಇದ್ದೇವೆ!
ಸಂದೇಶ, ಪ್ರಶ್ನೆ: ನನ್ನನ್ನು ಕೇಳಿ ಸಾಲ ಮಾಡಿದ್ರಾ?

6. ಅಮ್ಮ ಪದೇಪದೆ ಮಗುವಿನ ಮುಂದೆ ಕೂತು ಅಳುತ್ತ ಹೇಳುವ ಮಾತು – ನಿನಗೋಸ್ಕರ ಎಷ್ಟೊಂದು ತ್ಯಾಗ ಮಾಡುತ್ತ ಇದ್ದೇನೆ ಗೊತ್ತಿದೆಯಾ?
ಸಂದೇಶ: ಅದನ್ನು ಬಾಯಿ ಬಿಟ್ಟು ಹೇಳುವ ಅಗತ್ಯ ಇಲ್ಲ. ಮಗು ಎಲ್ಲವನ್ನೂ ಗಮನಿಸುತ್ತದೆ!

7. ಒಂದು ಹದಿಹರೆಯದ ಮಗುವಿಗೆ ಮಾರ್ಕ್ ಕಡಿಮೆ ಆದಾಗ ಅಪ್ಪ ಝಾಡಿಸಿ ಹೇಳಿದ ಮಾತು – ನೀನು ನನ್ನ ಮಗ ಹೌದಾ ಅಲ್ಲವಾ ಅಂತ ಡೌಟ್ ಬರ್ತಾ ಇದೆ!
ರಿಯಾಕ್ಷನ್‌: ಆಗ ಮಗ ಸಿಡಿದು ಹೇಳಿದ ಮಾತು -ನನಗೂ ಡೌಟ್ ಇದೆ! (ಅಪ್ಪ ಮುಂದೆ ಒಂದಕ್ಷರ ಮಾತಾಡಿರಲ್ಲ!)

Raja Marga Column Children

8. ಅಪ್ಪ ಹೇಳುವ ಮಾತು – ನಿನ್ನ ಅಮ್ಮ ಕೂಡ ಆಲ್ಜೀಬ್ರಾ ವೀಕ್ ಆಗಿದ್ದಳು! ಹಾಗೆ ಅವಳ ಬ್ರೈನ್ ನಿನಗೆ ಬಂದಿದೆ!
ಸಂದೇಶ: ಅಮ್ಮನ ಬಗ್ಗೆ ಮಗುವಿಗೆ ಇರುವ ಒಳ್ಳೆಯ ಭಾವನೆ ಆ ಕ್ಷಣಕ್ಕೆ ಸತ್ತು ಹೋಗುತ್ತದೆ!)

9. ಅಪ್ಪ ಅಥವಾ ಅಮ್ಮ ಹೇಳುವ ಮಾತು – ನಿಮ್ಮ ಟೀಚರ್‌ಗೆ ಏನೂ ಗೊತ್ತಿಲ್ಲ! ಅವರೆಂಥ ಪಾಠ ಮಾಡೋದು?
ಸಂದೇಶ: ಅಲ್ಲಿಗೆ ಆ ಮಗು ಆ ಟೀಚರ್ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಮತ್ತು ಆ ಸಬ್ಜೆಕ್ಟ್ ಮೇಲೆ ಕೂಡ!

10. ಅಪ್ಪ/ ಅಮ್ಮ ಹೇಳೋದುನನಗೆ ಡಾಕ್ಟರ್ ಆಗಬೇಕು ಅಂತ ಕನಸಿತ್ತು. ನನಗೆ ಆಗಲು ಆಗಲಿಲ್ಲ. ನೀನಾದರೂ ಆಗು!
ಸಂದೇಶ: ಅಪ್ಪ ಅಥವಾ ಅಮ್ಮನ ಅಪೂರ್ಣ ಕನಸುಗಳನ್ನು ಮಗು ಯಾಕೆ ಹೊರಬೇಕು? ಮಗುವು ಅದರ ಕನಸನ್ನು ಬದುಕುವುದು ಬೇಡವಾ?

11. ಹೆಣ್ಣು ಮಗುವಿಗೆ – ನೀನು ಹುಡುಗಿ, ಒಬ್ಬಳೇ ಎಲ್ಲಿಗೂ ಹೋಗಬೇಡ. ಅವಳ ಜೊತೆಗೆ ಹೋಗು!
ಸಂದೇಶ: ಪದೇಪದೆ ಈ ಮಾತು ಹೇಳುತ್ತಾ ಹೋದರೆ ಆ ಹೆಣ್ಣು ಮಗುವಿನಲ್ಲಿ ಅಭದ್ರತೆಯ ಭಾವನೆ ತೀವ್ರವಾಗಿ ಕಾಡುತ್ತದೆ.

12. ಅವನನ್ನು ನೋಡಿ ಕಲಿ, ಇವಳನ್ನು ನೋಡಿ ಕಲಿ!
ಸಂದೇಶ: ಹೀಗೆ ಪದೇಪದೆ ಹೇಳುವುದರಿಂದ ಮಗು ತನ್ನ ಅನನ್ಯತೆ (uniqueness) ಕಳೆದುಕೊಳ್ಳುತ್ತದೆ.

Raja Marga Column Children

ಇನ್ನೂ ಕೆಲವು ಪೋಷಕರ ಮುಕ್ತಕಗಳು!

13. ನೀನೇನು ಸತ್ಯ ಹರಿಶ್ಚಂದ್ರನ ವಂಶದವನಾ?
14. ನೀನಿನ್ನೂ ಸಣ್ಣ ಮಗು. ದೊಡ್ಡ ದೊಡ್ಡ ಮಾತು ಹೇಳಬೇಡ!
15. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ದೊಡ್ಡ ದೊಡ್ಡ ಕನಸು ಕಾಣಬಾರದು!
16. ನಾವು ಬಡವರು. ಶ್ರೀಮಂತರ ಮಕ್ಕಳ ಜೊತೆ ಓಡಾಡಬಾರದು.
17. ಯಾರ್ಯಾರ ಮನೆಯ ಅಂಗಳಕ್ಕೆ ಯಾಕೆ ಆಡಲು ಹೋಗೋದು? ನಮ್ಮ ಅಂಗಳದಲ್ಲಿಯೇ ಆಡಬಾರದಾ?

18. ಒಂದಿಷ್ಟು ಮಡಿ, ಮೈಲಿಗೆ ಇಲ್ಲ. ಯಾಕೋ ಅವನ ಮೈ ಮುಟ್ಟಿ ಮಾತಾಡೋದು!
19. ನಿನ್ನ ಹುಟ್ಟಿದ ಗಳಿಗೆಯೇ ಸರಿ ಇಲ್ಲ ಅನ್ಸುತ್ತೆ. ನೀನು ಹುಟ್ಟಿದ ನಂತರ ಅಪ್ಪ ಎಲ್ಲವನ್ನೂ ಕಳೆದುಕೊಂಡರು.
20. ನಿನ್ನ ಅಣ್ಣನ ಮೇಲೆ ನಂಬಿಕೆ ಹೊರಟು ಹೋಗಿದೆ. ನೀನಾದರೂ ನಮ್ಮ ಕುಟುಂಬದ ಮರ್ಯಾದೆ ಉಳಿಸು…!
21. ಈ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ನೀನು ನಮ್ಮ ಮಗನೇ/ ಮಗಳೆ ಅಲ್ಲ!
22. ಎಷ್ಟೊಂದು ತಲೆಹರಟೆ ಪ್ರಶ್ನೆ ಕೇಳುತ್ತೀಯಾ? ನಿಮಗೆ ಬೇರೆ ಕೆಲಸ ಇಲ್ವಾ?
23. ನಮಗೆ ನಿನ್ನಷ್ಟು ಓದಲು ಆಗಲಿಲ್ಲ. ನೀನಾದರೂ ಓದು!
24. ಇತ್ತೀಚೆಗೆ ನೀನು ತುಂಬಾ ಚೇಂಜ್‌ ಆಗಿದ್ದೀಯಾ! ಮೊದಲಿನ ಹಾಗೆ ಇಲ್ಲ!
25. ಯಾಕೋ ನಮ್ಮ ವಂಶದಲ್ಲಿ ಹುಟ್ಟಿದ್ದೀ, ನಮ್ಮ ವಂಶದ ಮರ್ಯಾದೆ ತೆಗೆಯಲು!

ಇನ್ನೂ ನೂರಾರು ಇಂತಹ ಮಾತುಗಳನ್ನು ನಾವು ಮಕ್ಕಳ ಮುಂದೆ, ಮಕ್ಕಳ ಬಗ್ಗೆ ಹೇಳುತ್ತಾ ಇರುತ್ತೇವೆಯಲ್ಲ. ನಾವು ಒಳ್ಳೆಯ ಪೋಷಕರು ಆಗೋದು ಯಾವಾಗ?

Exit mobile version