Site icon Vistara News

Raja Marga Column : ತುಂಬ Tension ಆಗ್ತಿದ್ಯಾ? ಒತ್ತಡ ಕಡಿಮೆ ಮಾಡಲು ಇಲ್ಲಿದೆ 20 ಟಿಪ್ಸ್‌

Raja Marga Column Mental health Tips Main

Raja Marga Column : ಇತ್ತೀಚಿನ ದಿನಗಳಲ್ಲಿ ಬದುಕು ಹೆಚ್ಚು ಸ್ಪರ್ಧಾತ್ಮಕ ಆಗುತ್ತಾ (Competitive World) ಇದೆ. ಯುವಜನತೆ ಹೆಚ್ಚು ಹೆಚ್ಚು ದುಡ್ಡು, ಅಧಿಕಾರ, ಕೀರ್ತಿ, ಯಶಸ್ಸುಗಳ ಹಿಂದೆ ಓಡುತ್ತಾ ಇದ್ದಾರೆ. ಅದರ ಪರಿಣಾಮವಾಗಿ ಸಣ್ಣ ಪ್ರಾಯದಲ್ಲಿಯೇ ಹತಾಶೆ, ನಿರಾಸೆ, ಒತ್ತಡಗಳ ಮೂಟೆಯನ್ನು ತಮ್ಮ ಭಾವಕೋಶದ ಒಳಗೆ ತಮಗೆ ಅರಿವಿಲ್ಲದಂತೆ ಸೇರಿಸಿಕೊಳ್ಳುತ್ತಿದ್ದಾರೆ. ಇಂದಿನ ಯುವಜನತೆ ತಮ್ಮ ವೃತ್ತಿ, ಕುಟುಂಬ ಮತ್ತು ಇತರ ಹೊಣೆ ನಿಭಾಯಿಸಲು ವಿಪರೀತವಾಗಿ ಹೆಣಗುತ್ತಿದ್ದಾರೆ. ಪರಿಣಾಮವಾಗಿ ಹೆಚ್ಚಿನವರು ಇಂದು ಒಂದು ಕಾಮನ್ ಆದ ಮಾನಸಿಕ ಒತ್ತಡಕ್ಕೆ (Mental Stress) ಒಳಗಾಗುತ್ತಿದ್ದಾರೆ. ಆ ಮಾನಸಿಕ ಒತ್ತಡ ಮುಂದುವರಿದು ನಮ್ಮನ್ನು ಖಿನ್ನತೆಗೆ ದೂಡಬಹುದು ಎನ್ನುವುದು ನನ್ನ ಆತಂಕ.

Raja marga Column : ಒತ್ತಡವು ನಮ್ಮನ್ನು ಇಂಚಿಂಚೂ ಕೊಲ್ಲುತ್ತಿದೆ!

ಯಾವುದೇ ವ್ಯಕ್ತಿಯು ಖಿನ್ನತೆಯ ಮಟ್ಟಕ್ಕೆ ಹೋಗುವ ಮೊದಲೇ ಈ ಕೆಳಗಿನ ಕೆಲವು ಅಂಶಗಳನ್ನು ಪಾಲಿಸಿದರೆ ಅದನ್ನು ಖಂಡಿತವಾಗಿಯೂ ತಡೆಯಬಹುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಇಲ್ಲಿವೆ ಕೆಲವು ಸರಳವಾದ ಸಲಹೆಗಳು.

1. ಹೆಚ್ಚು ಟಾರ್ಗೆಟ್ ಮತ್ತು ಒತ್ತಡ ಇರುವ ವೃತ್ತಿಗಳಿಂದ ತಕ್ಷಣವೇ ಹೊರಬನ್ನಿ.

2. ದಿನಕ್ಕೆ ಸ್ವಲ್ಪ ಹೊತ್ತು ಸಂಗೀತವನ್ನು ಕೇಳುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಸಂಗೀತಕ್ಕೆ ಒತ್ತಡ ಶಮನ ಮಾಡುವ ಸಾಮರ್ಥ್ಯ ಇದೆ.

3. ಇಡೀ ದಿನದ ಎಲ್ಲ ಹೊತ್ತು ವರ್ಕ್‌ಹಾಲಿಕ್‌ ಆಗಬೇಡಿ. ಕೆಲಸ, ಕೆಲಸ, ಕೆಲಸ ಎಂಬ ಮಂತ್ರ ಬೇಡ.

4. ಪೂರ್ವಾಹ್ನ ಅಥವಾ ಸಂಜೆ ಸೂರ್ಯನಿಗೆ ಮುಖ ಮಾಡಿ ಒಂದರ್ಧ ಘಂಟೆ ನಡೆದರೆ ಮನಸ್ಸು ಆಹ್ಲಾದವನ್ನು ಪಡೆಯುತ್ತದೆ. ಹಸಿರು ಹುಲ್ಲಿನ ಮೇಲೆ ನಡೆದರೆ ಇನ್ನೂ ಹೆಚ್ಚು ಪರಿಣಾಮ ಆಗುತ್ತದೆ.

5. ದಿನಕ್ಕೆ ಸ್ವಲ್ಪ ಹೊತ್ತು ಮೆಡಿಟೇಶನ್ (ಧ್ಯಾನ) ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಪ್ರಾಣಾಯಾಮ ಇನ್ನೂ ಹೆಚ್ಚು ಪರಿಣಾಮಕಾರಿ.

6. ನಮ್ಮ ವರ್ಕಿಂಗ್ ಸ್ಥಳದಲ್ಲಿ ಉತ್ತಮವಾದ ಸಂಬಂಧ, ಹೊಂದಾಣಿಕೆ ಇದ್ದರೆ ತುಂಬಾ ಖುಷಿಯಿಂದ ಕೆಲಸವನ್ನು ಮಾಡಬಹುದು. ಕೆಲಸಗಳನ್ನು ಪರಸ್ಪರ ಹಂಚಿಕೊಂಡು ಮಾಡುವುದರಿಂದ ಒತ್ತಡವು ಕಡಿಮೆ ಆಗುತ್ತದೆ.

7. ಪ್ರೀತಿಪಾತ್ರ ಗೆಳೆಯ, ಗೆಳತಿಯರ ಜೊತೆ ಮನಸ್ಸು ಬಿಚ್ಚಿ ಮಾತಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಆದರೆ ಯಾರ ಜೊತೆ ಎಷ್ಟನ್ನು ಹೇಳಬೇಕು, ಏನೇನು ಹೇಳಬೇಕು, ಎಷ್ಟು ಮಾತ್ರ ಹೇಳಬೇಕು? ಅನ್ನುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.

8. ಯಾವುದಾದರೊಂದು ಹವ್ಯಾಸವನ್ನು ರೂಡಿ ಮಾಡುತ್ತ ಹೋದರೆ ಒಳ್ಳೆಯದು. ಗಾರ್ಡನಿಂಗ್, ಕ್ಲಾಸಿಕಲ್ ಸಂಗೀತ ಆಲಿಸುವುದು, ಪೇಂಟಿಂಗ್, ಜಿಮ್ ಚಟುವಟಿಕೆಗಳು….. ಹೀಗೆ ಯಾವುದಾದರೊಂದು ಹವ್ಯಾಸ ನಿಮ್ಮ ಖುಷಿಯನ್ನು ಹೆಚ್ಚು ಮಾಡುತ್ತದೆ.

9. ದಿನಕ್ಕೆ ಅರ್ಧ ಘಂಟೆ ರಾತ್ರಿ ಮಲಗುವ ಮೊದಲು ನಿಮ್ಮ ಆಸಕ್ತಿಗೆ ಅನುಗುಣವಾದ ಒಳ್ಳೆಯ ಪುಸ್ತಕವನ್ನು ಓದುವ ಅಭ್ಯಾಸವು ನಮ್ಮನ್ನು ಜೀವಂತವಾಗಿ ಇಡುತ್ತದೆ.

10. ತುಂಬಾನೇ ಗಂಭೀರವಾಗಿ ಇರುವವರು, ಹೆಚ್ಚು ಅಂತರ್ಮುಖಿ ಆಗಿರುವವರು ಹೆಚ್ಚು ಒತ್ತಡವನ್ನು ಎರವಲು ಪಡೆಯುತ್ತಾರೆ. ಆ ಮೈಂಡ್ ಸೆಟ್‌ಗಳಿಂದ ಆದಷ್ಟು ಬೇಗನೇ ಹೊರಬನ್ನಿ.

11. ಯುವಜನತೆಗೆ ಒಬ್ಬಂಟಿತನ ಒಂದು ಶಾಪ. ಆದಷ್ಟು ಹೊತ್ತು ಗೆಳೆಯ, ಗೆಳತಿಯರ ಜೊತೆ ಇರಲು ಪ್ರಯತ್ನವನ್ನು ಮಾಡಿ.

12. ಒತ್ತಡದ ಕೆಲಸಗಳ ನಡುವೆ ಕೂಡ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಕೆಲವು ಕ್ರಿಯೇಟಿವ್ ಕೆಲಸಗಳನ್ನು ಮಾಡಿ. ಉದಾಹರಣೆಗೆ ಕ್ರಾಸ್ ವರ್ಡ್ ಪಝಲ್, ಸುಡೋಕೂ, ಪದಬಂಧ ಬಿಡಿಸುವುದು ಇತ್ಯಾದಿ.

13. ನಿಮ್ಮ ಏಕತಾನತೆಯ ಕೆಲಸಗಳನ್ನು ಹೆಚ್ಚು ಹೆಚ್ಚು ಕ್ರಿಯೇಟಿವ್ ಕೆಲಸವಾಗಿ ಪರಿವರ್ತನೆ ಮಾಡುವ ಮೂಲಕ ಕೆಲಸಗಳನ್ನು ಎಂಜಾಯ್ ಮಾಡುತ್ತಾ ಮಾಡಲು ಕಲಿಯಿರಿ.

14. ಬಿಡುವಿನ ವೇಳೆಯಲ್ಲಿ ಯು ಟ್ಯೂಬ್ ವೇದಿಕೆಗಳ ಮ್ಯೂಸಿಕ್, ಭಾಷಣ, ಟೆಡ್ ಟಾಕ್, ಕಾಮಿಡಿ ಶೋ, ಮನರಂಜನೆಯ ಶೋ… ಮೊದಲಾದ ವಿಡಿಯೊಗಳನ್ನು ನೋಡುವುದರಿಂದ ಒಳಗಿನಿಂದ ಪ್ರೇರಣೆಯು ದೊರೆತು ಕೆಲಸದ ವೇಗವು ಹೆಚ್ಚುತ್ತದೆ. ಮನಸ್ಸು ಹೆಚ್ಚು ಹಗುರವಾಗುತ್ತದೆ.

15. ವೃತ್ತಿ ಆಧಾರಿತ ತರಬೇತು ಪಡೆದರೆ ನಮ್ಮ ಕೆಲಸದ ಕ್ಷಮತೆಯು ಹೆಚ್ಚುತ್ತದೆ. ಆಗ ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಕೆಲಸಗಳನ್ನು ಮಾಡಲು ಸಾಧ್ಯ ಆಗುತ್ತದೆ.

16. ವಾರಾಂತ್ಯದಲ್ಲಿ ದುರಭ್ಯಾಸಗಳು, ಗುಂಡು ಪಾರ್ಟಿ, ರೆಸಾರ್ಟ್ ಜೀವನ ಮಾಡುವುದಕ್ಕಿಂತ ಒಳ್ಳೆಯ ನಾಟಕ, ಒಳ್ಳೆಯ ಸಿನೆಮಾ, ಒಳ್ಳೆಯ ಯಕ್ಷಗಾನ, ಒಳ್ಳೆಯ ಸಂಗೀತ ಕಾರ್ಯಕ್ರಮಗಳನ್ನು ಪ್ರತ್ಯಕ್ಷವಾಗಿ ವೀಕ್ಷಣೆ ಮಾಡಿ.

17. ಯಾವುದೇ ಆಫೀಸ್ ಕೆಲಸಗಳನ್ನು ಮನೆಗೆ ತಂದು ಮನೆಯನ್ನು ಆಫೀಸ್ ಮಾಡಬೇಡಿ. ಆಫೀಸ್ ಕೆಲಸಗಳನ್ನು
ಆಫೀಸಿನಲ್ಲಿಯೇ ಮಾಡಿ.

18. ರಾತ್ರಿ ಕನಿಷ್ಠ 7-8 ಘಂಟೆ ಆರೋಗ್ಯಪೂರ್ಣವಾದ ನಿದ್ರೆ ಮಾಡಿ. ಸತತವಾಗಿ ನಿದ್ದೆ ಬಿಟ್ಟು ಕೆಲಸ ಮಾಡುವುದರಿಂದ ಕೆಲಸದ ಮೇಲೆ ಏಕಾಗ್ರತೆಯು ಕಡಿಮೆ ಆಗುತ್ತದೆ. ಅದರ ಪರಿಣಾಮವಾಗಿ ಕೆಲಸದ ಕ್ಷಮತೆ ಕೂಡ ಕಡಿಮೆ ಆಗುತ್ತದೆ.

ಇದನ್ನೂ ಓದಿ: Raja Marga Column : ಒಂದು ಟ್ರೆಂಡ್‌‌ ಸೆಟ್ ಮಾಡೋದಷ್ಟೇ ಕಷ್ಟ; ಮುಂದೆ ಮುರಿಯೋದು ಸುಲಭ

19. ನಕಾರಾತ್ಮಕತೆ ಇರುವ ಸ್ಥಳ, ಓರಗೆಯವರು ಮತ್ತು ವ್ಯಕ್ತಿಗಳಿಂದ ದೂರ ಇರಿ.

20. ಬಿಡುವು ದೊರೆತಾಗ ಸಣ್ಣ ಮಕ್ಕಳ ಜೊತೆ, ಅನಾಥ ಮಕ್ಕಳ ಜೊತೆ, ವೃದ್ಧಾಶ್ರಮದ ಮಂದಿಯ ಜೊತೆ ಸ್ವಲ್ಪ ಹೊತ್ತು ಸಮಯ ಕಳೆಯುವುದರಿಂದ ನಮ್ಮ ಇಗೋ ನಾಶವಾಗುತ್ತಾ ಹೋಗುತ್ತದೆ ಮತ್ತು ನಮಗೆ ಹೆಚ್ಚು ಜನರನ್ನು ಪ್ರೀತಿ ಮಾಡಲು ಸಾಧ್ಯ ಆಗುತ್ತದೆ.

ಅದ್ಭುತವಾದ ಒತ್ತಡ ಇಲ್ಲದ ಮಾನಸಿಕ ಆರೋಗ್ಯ ನಿಮ್ಮದಾಗಲಿ ಅನ್ನುವುದು ನಮ್ಮ ಹಾರೈಕೆ. ಯಾಕೆಂದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ನೀವು ಮಾತ್ರ ನೆಮ್ಮದಿಯಾಗಿರುವುದಲ್ಲ. ನಿಮ್ಮ ಕೆಲಸದ ವಾತಾವರಣ, ನಿಮ್ಮ ಕಚೇರಿ, ನಿಮ್ಮ ಮನೆ, ನಿಮ್ಮ ಮನೆ ಮಂದಿ ಎಲ್ಲರೂ ಖುಷಿಯಾಗಿರುತ್ತಾರೆ. ನೀವು ಒಳ್ಳೆಯ ಅಭ್ಯಾಸಗಳನ್ನು, ಹವ್ಯಾಸಗಳನ್ನು ರೂಢಿಸಿಕೊಂಡರೆ ಅದು ನಿಮ್ಮ ಮಕ್ಕಳಲ್ಲೂ ಪ್ರತಿಫಲಿತವಾಗುತ್ತದೆ. ಇಡೀ ಮನೆಯಲ್ಲಿ ಒಂದು ರೀತಿಯ ಆಹ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ. ನೀವು ಪಾಸಿಟೀವ್‌ ವರ್ತನೆಗಳನ್ನು ತೋರಿಸುತ್ತಾ ಖುಷಿ ಖುಷಿಯಾಗಿದ್ದರೆ ಮನೆಯ ಎಲ್ಲರೂ ಅದೇ ರೀತಿ ಇರುತ್ತಾರೆ. ಹೀಗಾಗಿ ನೀವು ಒತ್ತಡದ ಮನಸ್ಥಿತಿಯಿಂದ ಹೊರಬಂದರೆ ಎಲ್ಲರೂ ತಮ್ಮ ಬಿಗು ಮನೋಸ್ಥಿತಿಯಿಂದ ಆಚೆ ಬರುತ್ತಾರೆ. ಇದರಿಂದ ಒಂದು ಕುಟುಂಬ, ಒಂದು ಕಚೇರಿ, ಒಟ್ಟಾರೆ ಪರಿಸರವೇ ಪಾಸಿಟೀವ್‌ ಆಗಿರುತ್ತದೆ.

Exit mobile version