Raja Marga Column : ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು ಮಹಿಳಾ ಪ್ರೀಮಿಯರ್ ಲೀಗ್ (WPL 2024) ಗೆದ್ದಾಗ ತಂಡದ ವಿಜಯಶಿಲ್ಪಿ ಯಾರು ಎಂದು ಪ್ರಶ್ನೆ ಬಂದಾಗ ಎಲ್ಲರೂ ಬೆರಳು ತೋರಿದ್ದು ಒಬ್ಬಳೇ ಕ್ರಿಕೆಟರ್ ಕಡೆಗೆ.
ಆಕೆ ಇಡೀ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತನ್ನ ತಂಡವನ್ನು ಗೆಲ್ಲಿಸುತ್ತಾ ಹೋದ ರೀತಿಗೆ ಸಮಗ್ರ RCB ಅಭಿಮಾನಿಗಳು (RCB Fans) ಫಿದಾ ಆಗಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಆಕೆ ಆರು ವಿಕೆಟ್ ಪಡೆದು ಮಿಂಚಿದ್ದು ಅಭಿಮಾನಿಗಳಿಗೆ ಭಾರಿ ರೋಮಾಂಚನ ಉಂಟುಮಾಡಿತ್ತು. ಆಕೆ ಎಲಿಸ್ ಪೆರ‍್ರಿ (Ellyse Perry).
Raja Marga Column : ಆಕೆ ಆಸ್ಟ್ರೇಲಿಯಾದ ಮಹೋನ್ನತ ಕ್ರಿಕೆಟರ್
ಸಿಡ್ನಿ ಮಹಾನಗರದಲ್ಲಿ ಜನಿಸಿದ ಆಕೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಮುಳುಗಿ ಹೋಗಿದ್ದರು. ಒಂಬತ್ತು ವರ್ಷದವರೆಗೆ ಆಕೆ ಅಥ್ಲೆಟಿಕ್ಸ್, ಫುಟ್ಬಾಲ್, ಕ್ರಿಕೆಟ್, ಗಾಲ್ಫ್, ಟೆನ್ನಿಸ್ ಎಲ್ಲವನ್ನೂ ಆಡುತ್ತಾ ಬೆಳೆದವರು. ಮುಂದೆ ಆಕೆಯ ಸಹಪಾಠಿ (ಆಕೆ ಆಸ್ಟ್ರೇಲಿಯಾದ ಇನ್ನೊಬ್ಬ ಸ್ಟಾರ್ ಕ್ರಿಕೆಟರ್) ಎಲಿಸಾ ಹೀಲಿ ಆಕೆಗೆ ಒಂದೆರಡು ಕ್ರೀಡೆಗಳಲ್ಲಿ ಮಾತ್ರ ಫೋಕಸ್ ಮಾಡಲು ಹೇಳುತ್ತಾರೆ. ಅದರಂತೆ ಆಕೆ ಫುಟ್ಬಾಲ್ ಮತ್ತು ಕ್ರಿಕೆಟ್ ಎರಡು ಆಟಗಳಲ್ಲಿ ಮಾತ್ರ ಗಮನ ಕೊಡುತ್ತಾರೆ.
16ನೆಯ ವರ್ಷಕ್ಕೆ ಆಸ್ಟ್ರೇಲಿಯದ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಯ್ಕೆ ಆದವರು ಆಕೆ. ಐಸಿಸಿ
ವಿಶ್ವಕಪ್ ಮತ್ತು ಫಿಫಾ ಟೂರ್ನಿ ಎರಡನ್ನೂ ಆಡುತ್ತಾರೆ. ವಿಶ್ವಕಪ್ ಪಂದ್ಯದಲ್ಲಿ ಕೂಡ ಆಕ್ರಮಣಕಾರಿ ಆಟವನ್ನು ಆಡಿ ಗೋಲ್ ಹೊಡೆಯುತ್ತಾರೆ. ಆದರೆ ಮುಂದೆ ಆಕೆಗೆ ಆದ ದೈಹಿಕ ಗಾಯಗಳು ಫುಟ್ಬಾಲಿಗೆ ವಿದಾಯ ಹೇಳುವಂತೆ ಮಾಡಿ 2014ರಿಂದ ಆಕೆಯನ್ನು ಕ್ರಿಕೆಟ್ ಕಡೆಗೆ ಎಳೆದುಕೊಂಡು ಬರುತ್ತವೆ. ಇದು ವಿಶ್ವ ಕ್ರಿಕೆಟಿನ ಭಾಗ್ಯ ಎಂದೇ ಹೇಳಬಹುದು.
ಕ್ರಿಕೆಟ್ ಜಗತ್ತಿನಲ್ಲಿ ಆಕೆ ಮಾಡಿದ್ದೆಲ್ಲವೂ ದಾಖಲೆಗಳು!
ಟೀಮ್ ಆಸ್ಟ್ರೇಲಿಯದ ಮೂರೂ ಫಾರ್ಮಾಟ್‌ಗಳ ನಿರ್ಣಾಯಕ ಆಲ್ರೌಂಡರ್ ಆಗಿ ಆಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ನೀಡಿದ ಕೊಡುಗೆ ಅದು ಅದ್ಭುತ. ಈಗ ಅವರಿಗೆ 33 ವರ್ಷ ಪ್ರಾಯ. ಈಗಲೂ ಗಂಟೆಗೆ 120-125 ಕಿಲೋಮೀಟರ್ ವೇಗದಲ್ಲಿ ಆಕೆಯು ಬೌಲಿಂಗ್ ಮಾಡುತ್ತಾರೆ. ಆಕೆಯ ಬ್ಯಾಟಿಂಗಿನಲ್ಲಿ ಒಂದು ಅದ್ಭುತ ನಿಖರತೆ ಮತ್ತು ಪಂಚಿಂಗ್ ಇವೆ. ಆಕೆಯ ಅಕ್ರೊಬ್ಯಾಟಿಕ್ ಫೀಲ್ಡಿಂಗ್ ನೋಡಿದರೆ ನೀವು ಖಂಡಿತ ಆಕೆಯ ಪ್ರಾಯ ಮರೆಯುತ್ತೀರಿ.
ಆಕೆಯ ದಾಖಲೆಗಳು ಮೂರೂ ಫಾರ್ಮಾಟ್‌ಗಳಲ್ಲಿ ಅದ್ಭುತವಾಗಿವೆ. ಟೆಸ್ಟ್ ಕ್ರಿಕೆಟಿನಲ್ಲಿ 13 ಪಂದ್ಯಗಳಲ್ಲಿ ಆಕೆ 928 ಸ್ಕೋರ್ ಮಾಡಿದ್ದಾರೆ. ಅದರಲ್ಲಿ ಒಂದು ಡಬಲ್ ಟನ್ (213) ಕೂಡ ಇದೆ. ಸರಾಸರಿ 61.86! ಅದರ ಜೊತೆಗೆ 39 ವಿಕೆಟ್ ಆಕೆ ಈಗಾಗಲೇ ಪಡೆದಾಗಿದೆ.
144 ಏಕದಿನ ಪಂದ್ಯಗಳಲ್ಲಿ ಆಕೆ ಪೇರಿಸಿದ್ದು 3894 ರನ್ನುಗಳ ಪರ್ವತವನ್ನು. 163 ವಿಕೆಟ್ ಅವರ ಬತ್ತಳಿಕೆಯಲ್ಲಿ ಇವೆ. ಬ್ಯಾಟಿಂಗ್ ಸರಾಸರಿ 50.57! ಆಕೆ ದಿಟ್ಟವಾಗಿ ಹೋರಾಡಿ ಆಸ್ಟ್ರೇಲಿಯಾ ತಂಡಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ !
ಆಕೆ ಗೆದ್ದದ್ದು ಬರೊಬ್ಬರಿ ಆರು T20 ವಿಶ್ವಕಪ್ಪುಗಳನ್ನು!
ಆಕೆಯ T20 ದಾಖಲೆಗಳು ಇನ್ನೂ ಅದ್ಭುತವಾಗಿಯೇ ಇವೆ. 144 ಪಂದ್ಯಗಳಲ್ಲಿ 1841 ಸ್ಕೋರ್ ಮತ್ತು ಸರಾಸರಿ 31.74 ಹೊಂದಿರುವ ಆಕೆ 125 ವಿಕೆಟ್ ಕೂಡ ಪಡೆದಿದ್ದಾರೆ.
ಅದರ ಜೊತೆಗೆ ಆರು ಹೊಳೆಯುವ T20 ವಿಶ್ವಕಪ್‌ಗಳನ್ನು ಟೀಮ್ ಆಸ್ಟ್ರೇಲಿಯಾಕ್ಕೆ ಗೆಲ್ಲಿಸಿಕೊಟ್ಟ ಅಪೂರ್ವ ದಾಖಲೆ ಕೂಡ ಆಕೆಯ ಹೆಸರಿನಲ್ಲಿ ಇದೆ! ಅದರ ಜೊತೆಗೆ 2022ರ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕವೂ ಆಕೆಯ
ಶೋಕೇಸನಲ್ಲಿ ಇದೆ.
ವರ್ತಮಾನದ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾವ ಮಹಿಳಾ ಕ್ರಿಕೆಟ್ ಆಟಗಾರರು ಈ ದಾಖಲೆಯ ಹತ್ತಿರದಲ್ಲಿಯೂ ಇಲ್ಲ ಅನ್ನುವುದು ಎಲಿಸ್ ಪೆರ‍್ರಿ ಸಾಧನೆ! ಅದಕ್ಕಾಗಿ ಆಕೆಯನ್ನು ‘ಜಗತ್ತಿನ ಮಹೋನ್ನತ ಮಹಿಳಾ ಕ್ರಿಕೆಟರ್’ ಎಂದು ಕ್ರಿಕೆಟ್ ಪಂಡಿತರು ಕರೆಯುತ್ತಿದ್ದಾರೆ. T20 ಕ್ರಿಕೆಟಿನಲ್ಲಿ 1000 ರನ್ ಮತ್ತು 100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಅಂದರೆ ಅದು ಎಲಿಸ್ ಅನ್ನುವುದು ಇನ್ನೂ ಗ್ರೇಟ್.
ಇದನ್ನೂ ಓದಿ: Raja Marga Column : ಸೌಂದರ್ಯ, ಪ್ರತಿಭೆಗಳ ಸಂಗಮ ಸ್ಮೃತಿ ಮಂಧಾನಾ; ಆರ್‌ಸಿಬಿಗೆ ಕಪ್ ಕೊಡಿಸಿದ ಹುಡುಗಿ!
ಆಕೆಯು ಹುಟ್ಟು ಹೋರಾಟಗಾರ್ತಿ
2013ರ ಏಕದಿನದ ವಿಶ್ವಕಪ್ ಫೈನಲ್ ಪಂದ್ಯ ನೀವು ನೆನಪಿಸಿಕೊಂಡರೆ ನಿಮಗೆ ಆಕೆಯ ಗಟ್ಟಿತನವು ಅರ್ಥ ಆಗುತ್ತದೆ. ಟೀಮ್ ಆಸ್ಟ್ರೇಲಿಯಾ ಅಂದು ಫೈನಲಿಗೆ ಬಂದಿತ್ತು. ಎಲಿಸ್‌ಗೆ ಅಂದು ಮೊಣಕಾಲು ಎಲುಬು ಫ್ರ್ಯಾಕ್ಚರ್ ಆಗಿತ್ತು. ವೈದ್ಯರು ಆಕೆಗೆ ಆಡಲೇಬಾರದು ಎಂದು ಹೇಳಿದ್ದರು. ಆದರೆ ಕುಂಟುತ್ತಾ ಮೈದಾನಕ್ಕೆ ಬಂದು ಎಲಿಸ್ ಅಂದು ವೆಸ್ಟ್ಇಂಡೀಸ್ ವಿರುದ್ಧ ಹತ್ತು ಓವರ್ ಪೂರ್ತಿ ಬೌಲಿಂಗ್ ಮಾಡಿದ್ದರು, ಮಾತ್ರವಲ್ಲ 19 ರನ್ನಿಗೆ ಮೂರು ವಿಕೆಟ್‌ಗಳನ್ನು ಪಡೆದು ತನ್ನ ತಂಡವನ್ನು ಗೆಲ್ಲಿಸಿದ್ದರು.
ಮೊನ್ನೆ ಕೂಡ ಹಾಗೆಯೇ ಆಯಿತು. ಮಹಿಳಾ ಪ್ರೀಮಿಯರ್ ಲೀಗಿನ ಸೆಮಿ ಮತ್ತು ಫೈನಲ್ ಪಂದ್ಯಗಳಲ್ಲಿ ಆಕೆ ಮಾಡಿದ ಹೋರಾಟದ ಇನಿಂಗ್ಸ್‌ಗಳನ್ನು RCB ಹುಚ್ಚು ಅಭಿಮಾನಿಗಳು ಬೆರಗು ಕಣ್ಣುಗಳಿಂದ ನೋಡಿದ್ದಾರೆ.
‘ಇನ್ನೂ ನನ್ನಲ್ಲಿ ಹಲವು ವರ್ಷಗಳ ಕ್ರಿಕೆಟ್ ಜೀವಂತ ಇದೆ’ ಎಂದಿದ್ದಾರೆ ಎಲಿಸ್ ಪೆರ‍್ರಿ. ಏನಿದ್ದರೂ ಆಕೆ ತೋರಿದ ಧೀರೋದಾತ್ತ ಕ್ರಿಕೆಟನ್ನು ಕನ್ನಡಿಗರಂತೂ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ!
Happy Holi to everyone in India! @RCBTweets pic.twitter.com/dPg9Ya2i3g
— Ellyse Perry (@EllysePerry) March 7, 2023